Advertisement
ಯಾಕೆಂದರೆ, ಅನರ್ಹತೆಗೊಂಡಿರುವ ಶಾಸಕರಲ್ಲಿ ಕೆಲವರು ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇವೆ ಎಂದು ಹೇಳುತ್ತಿದ್ದರೆ, ಮತ್ತೆ ಕೆಲವರು ಪಕ್ಷೇತರರಾಗಿ ಸ್ಪರ್ಧೆ ಮಾಡ್ತೇವೆ ಎಂದು ಹೇಳುತ್ತಿರುವುದರಿಂದ ಅವರ ನಡೆ ಕುತೂಹಲಕ್ಕೆ ಕಾರಣವಾಗಿದೆ. ಈ ಮಧ್ಯೆ, ಎಚ್.ವಿಶ್ವನಾಥ್ ಸೇರಿ ಕೆಲವರು ಉಪ ಚುನಾವಣೆಗೆ ಸ್ಪರ್ಧೆ ಮಾಡುವುದಿಲ್ಲ. ವಿಧಾನಪರಿಷತ್ ಸದಸ್ಯರಾಗಿ ಸಚಿವರಾಗಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ. ಜತೆಗೆ, “ನಾನು ಬಿಜೆಪಿ ಸೇರುವುದಿಲ್ಲ. ಹೀಗಾಗಿ, ಅನರ್ಹತೆಗೊಂಡಿರುವವರೆಲ್ಲಾ ಸೇರಿ ಹೊಸ ಪಕ್ಷ ಕಟ್ಟಬಾರದೇಕೆ’ ಎಂದೂ ಹೇಳಿದ್ದಾರೆ. ಹೀಗಾಗಿ, ಸುಪ್ರೀಂಕೋರ್ಟ್ ಮೊರೆ ಹೋಗಿರುವ ಅನರ್ಹತೆಗೊಂಡಿರುವ ಶಾಸಕರ ಮುಂದಿನ ನಡೆ ಹಾಗೂ ರಾಜಕೀಯ ಹೆಜ್ಜೆ ಏನಿರಬಹುದು ಎಂದು ರಾಜಕೀಯ ವಲಯಗಳಲ್ಲಿ ಚರ್ಚೆ ನಡೆದಿದೆ.
Related Articles
Advertisement
ಪ್ರತ್ಯೇಕ ಆಸನದಲ್ಲಿ ಕೂರ್ತಾರಾ?: ಮತ್ತೂಂದು ಮೂಲಗಳ ಪ್ರಕಾರ, ಒಂದೊಮ್ಮೆ ನ್ಯಾಯಾಲಯದಲ್ಲಿ ಅನರ್ಹತೆ ರದ್ದಾಗಿ ರಾಜೀನಾಮೆ ಸ್ವೀಕಾರ ವಿಚಾರ ಮತ್ತೆ ಸ್ಪೀಕರ್ ಅಂಗಳಕ್ಕೆ ಬಂದರೆ ಆಗ ಅವರು ಶಾಸಕರಾಗಿಯೇ ಇರಲಿದ್ದಾರೆ. ಎರಡೂ ಪಕ್ಷಗಳು ಅವರನ್ನು ಉಚ್ಚಾಟನೆ ಮಾಡಿರುವುದರಿಂದ ವಿಧಾನಸಭೆಯಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆಗೂ ಕೋರಬಹುದು ಎಂದು ಹೇಳಲಾಗುತ್ತಿದೆ. ಆದರೆ, ಅವರು ಶಾಸಕರಾಗಿಯೇ ಮುಂದುವರಿದರೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಲು ಸಾಧ್ಯವಿಲ್ಲ. ಹೀಗಾಗಿ, ರಾಜೀನಾಮೆ ಅಂಗೀಕಾರ ಮಾಡಿಸಿಕೊಂಡು ಉಪ ಚುನಾವಣೆಗೆ ಹೋಗಬೇಕಾಗುತ್ತದೆ.
12 ಜನರಿಗೆ ಸಚಿವಗಿರಿ ಭರವಸೆ: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ರಚನೆಯಾಗಲು ಕಾರಣವಾಗಿರುವ 17 ಶಾಸಕರ ಪೈಕಿ 12 ಜನರಿಗೆ ಸಚಿವಗಿರಿ ಭರವಸೆ ನೀಡಲಾಗಿದೆ. ಸಂಪುಟ ವಿಸ್ತರಣೆ ಯಾದರೂ ಮೊದಲ ಹಂತದಲ್ಲಿ 22 ಸ್ಥಾನ ಮಾತ್ರ ಭರ್ತಿಯಾಗಲಿದೆ. ಬೆಂಗಳೂರು ನಗರ ಹಾಗೂ ಗ್ರಾಮಾಂತರ ಕೋಟಾದಡಿ ನಾಲ್ಕು ಸ್ಥಾನ ಖಾಲಿ ಇರಲಿದೆ ಎಂದು ತಿಳಿದು ಬಂದಿದೆ. ಇದರ ನಡುವೆ, ಶಾಸಕರ ಅನರ್ಹತೆ ವಿಚಾರ ಇತ್ಯರ್ಥವಾಗುವವರೆಗೆ ಬೆಂಗಳೂರಿನ ಸಚಿವಾಕಾಂಕ್ಷಿಗಳಿಗೆ ಅವಕಾಶ ಕೊಟ್ಟು ಆ ನಂತರ ರಾಜೀನಾಮೆ ಕೊಡಿಸುವ ಬಗ್ಗೆಯೂ ಚಿಂತನೆ ನಡೆದಿದೆ. ನ್ಯಾಯಾಲಯದ ತೀರ್ಮಾನ ಬರುವವರೆಗೆ ಮಾತ್ರ ನಿಮಗೆ ಅವಕಾಶ ಎಂದು ಷರತ್ತು ವಿಧಿಸಿಯೇ ಸಚಿವಗಿರಿ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಬೆಂಗಳೂರಲ್ಲಿ ಯಾರ್ಯಾರಿಗೆ ಸಚಿವ ಸ್ಥಾನ?: ಅನರ್ಹತೆ ವಿಚಾರ ಇತ್ಯರ್ಥಗೊಂಡರೆ ಬಿಜೆಪಿ ಸರ್ಕಾರದಲ್ಲಿ ಬೆಂಗಳೂರು ನಗರದಿಂದ ಎಸ್.ಟಿ. ಸೋಮಶೇಖರ್, ಬೈರತಿ ಬಸವರಾಜ್, ಗೋಪಾಲಯ್ಯ, ಬೆಂಗಳೂರು ಗ್ರಾಮಾಂತರದಿಂದ ಎಂ.ಟಿ.ಬಿ. ನಾಗರಾಜ್ ಸಚಿವರಾಗುವ ಸಾಧ್ಯತೆಯಿದೆ. ಬಿಜೆಪಿಯಲ್ಲಿ ಬೆಂಗಳೂರಿನಿಂದ ಆರ್.ಅಶೋಕ್, ಅರವಿಂದ ಲಿಂಬಾವಳಿ, ಎಸ್.ಆರ್.ವಿಶ್ವನಾಥ್, ಡಾ.ಅಶ್ವಥ್ ನಾರಾಯಣ್, ಸುರೇಶ್‌ಕುಮಾರ್ ಸಚಿವಗಿರಿ ರೇಸ್‌ನಲ್ಲಿದ್ದಾರೆ. ಇವರಲ್ಲಿ ಯಾರ್ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ನೋಡಬೇಕಾಗಿದೆ. ಇನ್ನು, ರೋಷನ್‌ಬೇಗ್ ಅವರು ಬಿಜೆಪಿ ಸಂಪುಟ ಸೇರಲಿದ್ದಾರೆ ಎಂಬ ಮಾತಿದೆಯಾದರೂ ಆರ್‌ಎಸ್‌ಎಸ್ ನಾಯಕರಿಗೆ ಅದು ಇಷ್ಟವಿಲ್ಲ ಎನ್ನಲಾಗಿದೆ. ಹೀಗಾಗಿ, ಅವರು, ರಾಜೀನಾಮೆ ವಿಚಾರ ಇತ್ಯರ್ಥವಾದ ನಂತರ ಕ್ಷೇತ್ರವನ್ನು ತಮ್ಮ ಪುತ್ರನಿಗೆ ಬಿಟ್ಟು ಕೊಟ್ಟು ಬಿಜೆಪಿಯಿಂದ ಕಣಕ್ಕಿಳಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ನಿರ್ಧಾರ ಕೈಗೊಂಡಿಲ್ಲ: ಉಪಚುನಾವಣೆಯಲ್ಲಿ ಜೆಡಿಎಸ್‌ನಿಂದ ನಿಖೀಲ್ ಕುಮಾರಸ್ವಾಮಿ ಸ್ಪರ್ಧೆ ಕುರಿತು ಸುದ್ದಿಗಾರರ ಪ್ರಶ್ನೆಗೆ ರಾಮನಗರದಲ್ಲಿ ಪ್ರತಿಕ್ರಿಯಿಸಿರುವ ಶಾಸಕಿ ಅನಿತಾ ಕುಮಾರಸ್ವಾಮಿ,” ಸದ್ಯ ನಿಖೀಲ್ ಹೊಸ ಪ್ರೊಡಕ್ಷನ್‌ನಲ್ಲಿ ಕೆಲಸ ಮಾಡಲು ಸಹಿ ಹಾಕಿದ್ದಾನೆ. ಉಪಚುನಾವಣೆಯಲ್ಲಿ ಸ್ಪರ್ಧಿಸಲು ನಿರ್ಧಾರ ಕೈಗೊಂಡಿಲ್ಲ’ ಎಂದು ತಿಳಿಸಿದ್ದಾರೆ.
* ಎಸ್. ಲಕ್ಷ್ಮಿನಾರಾಯಣ