Advertisement

ಪಕ್ಷಗಳ ಚಿತ್ತ ಚುನಾವಣೆ ತಯಾರಿಯತ್ತ

09:05 AM Nov 29, 2017 | |

ಬೆಳಗಾವಿ ಚಳಿಗಾಲದ ಅಧಿವೇಶನದ ನಂತರ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಮುಂಬರುವ ವಿಧಾನಸಭಾ ಚುನಾವಣೆಯತ್ತ ಚಿತ್ತ ಹರಿಸಿವೆ. ಮತದಾರರನ್ನು ತಮ್ಮತ್ತ ಸೆಳೆಯಲು ಇನ್ನಿಲ್ಲದ ಕಸರತ್ತು ನಡೆಸುತ್ತಿರುವ ರಾಜಕೀಯ ಮುಖಂಡರು ರ್ಯಾಲಿ, ಯಾತ್ರೆಗಳನ್ನು ಆಯೋಜಿಸುವತ್ತ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ. ಆಡಳಿತಾರೂಢ ಕಾಂಗ್ರೆಸ್‌ ಮಾರ್ಚ್‌ನಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಳ್ಳಲಿದ್ದರೆ, ಪ್ರತಿಪಕ್ಷ ಬಿಜೆಪಿ ಬೂತ್‌ಗೊಂದರಂತೆ ಕಾರ್ಯಕರ್ತರ ತಂಡಗಳನ್ನು ಸಿದ್ಧಪಡಿಸುತ್ತಿದೆ. ಜೆಡಿಎಸ್‌ ಕೂಡ 2ನೇ ಹಂತದ ಕರ್ನಾಟಕ ವಿಕಾಸ ವಾಹಿನಿ “ಕುಮಾರಪರ್ವ’ಯಾತ್ರೆಗೆ ಸಜ್ಜಾಗುತ್ತಿದೆ.

Advertisement

ಡಿಸೆಂಬರ್‌ ಮೊದಲ ವಾರ ಸರಣಿ ಸಭೆ
ಬೆಳಗಾವಿ ಚಳಿಗಾಲದ ಅಧಿವೇಶನದ ನಂತರ ಆಡಳಿತ ಪಕ್ಷ ಸಂಪೂರ್ಣ ಚುನಾವಣೆಯ ಲೆಕ್ಕಾಚಾರ ನಡೆಸುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿರುವಂತೆ ಚುನಾವಣೆಯನ್ನು ದೃಷ್ಟಿ ಯಲ್ಲಿಟ್ಟುಕೊಂಡೇ ಸರ್ಕಾರದ ವತಿಯಿಂದ ಡಿಸೆಂಬರ್‌ ಬದಲು ಮಾರ್ಚ್‌ನಲ್ಲಿ ಜನಾಶೀರ್ವಾದ ಯಾತ್ರೆ ಕೈಗೊಳ್ಳಲಿದ್ದಾರೆ. ಅದರ ಹೊರತಾಗಿ ಪಕ್ಷದ ವತಿಯಿಂದಲೂ ಪ್ರತ್ಯೇಕ ವಿಭಾಗವಾರು ಸಮಾವೇ ಶಗಳನ್ನು ಹಮ್ಮಿಕೊಳ್ಳಲು ಆಡಳಿತ ಪಕ್ಷ ಚಿಂತನೆ ನಡೆಸಿದೆ.

ವೇಣುಗೋಪಾಲ್‌ ಸಭೆ:  ಪಕ್ಷದ ಮುಂದಿನ ಚುನಾವಣೆ ಕುರಿತು ಸಿದ್ಧತೆ ಬಗ್ಗೆ ರಾಜ್ಯ ಉಸ್ತುವಾರಿ ಹೊತ್ತಿರುವ ವೇಣುಗೋಪಾಲ್‌ ಡಿ. 5
ಮತ್ತು 6 ರಂದು ವಿಶೇಷ ಸಭೆಗಳನ್ನು ನಡೆಸಲಿದ್ದಾರೆ. ಅಲ್ಲದೇ ಡಿ. 7ರಂದು ರಾಜ್ಯ ಕಾಂಗ್ರೆಸ್‌ ಕಾರ್ಯಕಾರಿಣಿ ಸಭೆ ನಡೆಯಲಿದ್ದು, ಆ ಸಭೆಯಲ್ಲಿ ಚುನಾವಣೆ ಎದುರಿಸಲು ಪಕ್ಷದ ಮುಂದಿನ ಹೋರಾಟ ಬಿಜೆಪಿ ಹಾಗೂ ಜೆಡಿಎಸ್‌ ಯಾತ್ರೆಗಳಿಗೆ ಪರ್ಯಾಯವಾಗಿ ಯಾವ ರೀತಿಯ ಹೋರಾಟ ನಡೆಸಬೇಕು ಎನ್ನುವ ಕುರಿತಂತೆ ವೇಣುಗೋಪಾಲ್‌ ಮೂರು ದಿನ ಪಕ್ಷದ ನಾಯಕರೊಂದಿಗೆ ಚರ್ಚೆ
ನಡೆಸಲಿದ್ದಾರೆಂದು ತಿಳಿದು ಬಂದಿದೆ.

ರಾಜ್ಯ ಸರ್ಕಾರದ ಸಾಧನೆಗಳನ್ನು ಬಿಂಬಿಸುವ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ ನಿರೀಕ್ಷಿಸಿದಷ್ಟು ಯಶಸ್ಸು ಕಾಣದ ಹಿನ್ನೆಲೆ
ಯಲ್ಲಿ ವೇಣುಗೋಪಾಲ ಅಸಮಾಧಾನ ಗೊಂಡಿದ್ದಾರೆ ಎನ್ನಲಾಗಿದೆ. ಕೆಲವು ಜಿಲ್ಲೆಗಳಲ್ಲಿ ಮನೆ ಮನೆಗೆ ಕಾಂಗ್ರೆಸ್‌ ಕಾರ್ಯಕ್ರಮ
ಶೇ.25 ಭಾಗವೂ ಪ್ರಗತಿ ಕಂಡಿಲ್ಲ ಎಂದು ಹೇಳಲಾಗುತ್ತಿದೆ. ಹೀಗಾಗಿ ಕೆ.ಸಿ.ವೇಣು ಗೋಪಾಲ ಡಿ. 5, 6 ರಂದು ಪ್ರಗತಿ ಪರಿಶೀಲನೆ ನಡೆಸಲಿದ್ದು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮತ್ತು ಸಹಕಾರ ನೀಡದ ಶಾಸಕರಿಗೆ ಖಡಕ್‌ ಎಚ್ಚರಿಕೆ ನೀಡುವ ಸಾಧ್ಯತೆಯಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಅಭ್ಯರ್ಥಿಗಳ ಆಯ್ಕೆ ಚರ್ಚೆ: ಆಡಳಿತ ಪಕ್ಷ ಮತ್ತೂಂದು ಬಾರಿ ರಾಜ್ಯದಲ್ಲಿ ಶತಾಯ ಗತಾಯ ಅಧಿಕಾರಕ್ಕೇರಲು ಸರ್ವ ಪ್ರಯತ್ನ ನಡೆಸಿದ್ದು, ವಿವಿಧ ಆಯಾಮ ಗಳಿಂದ ಸಮೀಕ್ಷೆ ನಡೆಸುತ್ತಿದೆ. ಹಾಲಿ ಶಾಸಕರ ಗೆಲುವಿನ ವಿಶ್ವಾಸದ ಬಗ್ಗೆ ಒಂದೆಡೆ ಸಮೀಕ್ಷೆ ನಡೆಸುತ್ತಿದ್ದರೆ, ಮತ್ತೂಂದೆಡೆ ಸಿದ್ದರಾಮಯ್ಯ, ಕ್ಷೇತ್ರಗಳಲ್ಲಿ ಟಿಕೆಟ್‌ ಆಕಾಂಕ್ಷಿಗಳಾಗಿರುವ ಯುವಕರ ಗೆಲುವಿನ ವಿಶ್ವಾಸದ ಬಗ್ಗೆಯೂ ಪ್ರತ್ಯೇಕ ಸಮೀಕ್ಷೆ ನಡೆಸುತ್ತಿದ್ದಾರೆಂದು ಹೇಳಲಾಗುತ್ತಿದೆ. ಹೊಸ ಮುಖಗಳಿಗೆ ಗೆಲ್ಲುವ ಸಾಮರ್ಥಯವಿದ್ದರೆ, ಅಂತಹವರಿಗೂ ಟಿಕೆಟ್‌ ಕೊಡುವ ನಿಟ್ಟಿನಲ್ಲಿ ಆಡಳಿತ ಪಕ್ಷ ಗಂಭೀರವಾಗಿ ಆಲೋಚನೆ ನಡೆಸಿದ್ದು, ಜನರ ಅಭಿಪ್ರಾಯದ ಆಧಾರದಲ್ಲಿಯೇ ಅಭ್ಯರ್ಥಿಗಳ ಆಯ್ಕೆ
ಮಾಡಲು ಆಡಳಿತ ಪಕ್ಷ ನಿರ್ಧರಿಸಿದೆ. ಈ ಕುರಿತಂತೆ ಡಿ.7ಕ್ಕೆ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಯಿದೆ.

Advertisement

ಬೂತ್‌ಮಟ್ಟದಲ್ಲಿ ಬಿಜೆಪಿ ತಂಡ ರಚನೆ
ಅಧಿವೇಶನ ಮುಗಿಸಿಕೊಂಡು ಸ್ವಕ್ಷೇತ್ರಗಳಿಗೆ ಮರಳಿರುವ ಬಿಜೆಪಿ ಶಾಸಕರು ಇದೀಗ ಪೂರ್ಣ ಪ್ರಮಾಣದಲ್ಲಿ ವಿಧಾನಸಭಾ 
ಚುನಾವಣಾ ಸಿದ್ಧತೆಯಲ್ಲಿ ತೊಡಗಿದ್ದು, ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಬೂತ್‌ಗೊಂದರಂತೆ ಕಾರ್ಯಕರ್ತರ ತಂಡಗಳನ್ನು
ಸಿದ್ಧಪಡಿಸುತ್ತಿದ್ದಾರೆ. ಸಾಮಾನ್ಯವಾಗಿ ಚುನಾವಣಾ ವರ್ಷ ಎಂದರೆ ಶಾಸಕರು ತಮ್ಮ ಕ್ಷೇತ್ರದ ಜನರಿಗೆ ಸುಲಭವಾಗಿ ಲಭ್ಯವಾಗುತ್ತಾರೆ. ಆದರೆ, ಇದೀಗ ನಡೆಯುತ್ತಿರುವ ಪರಿವ ರ್ತನಾ ಯಾತ್ರೆ ಸಮಾವೇಶ,  ಮುಂದೆ ನಡೆಯಲಿರುವ ನವಶಕ್ತಿ ಸಮಾವೇಶಗಳ ನಿರ್ವಹಣೆ ಜವಾಬ್ದಾರಿಯೂ ಶಾಸಕರ ಮೇಲಿದ್ದು, ಪೂರ್ಣ ಪ್ರಮಾಣದಲ್ಲಿ ಕ್ಷೇತ್ರದ ಕೆಲಸಗಳಿಗೆ ಗಮನಹರಿಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಈಗಾಗಲೇ ಇರುವ ಬೂತ್‌ ಕಮಿಟಿಗಳ ಸದಸ್ಯರನ್ನೊಳಗೊಂಡ ಕಾರ್ಯಕರ್ತರ ತಂಡಗಳನ್ನು ಸಿದ್ಧಪಡಿಸಿ ಜನರನ್ನು ತಲುಪುವ ಕಾರ್ಯದಲ್ಲಿ ತೊಡಗಿದ್ದಾರೆ.

ಆಡಳಿತಾರೂಢ ಕಾಂಗ್ರೆಸ್‌ ಸರ್ಕಾರವು ತನ್ನ ಸಾಧನೆಗಳ ಕುರಿತು ರಾಜ್ಯಾದ್ಯಂತ ಸಮಾವೇಶಗಳನ್ನು ನಡೆಸುತ್ತಾ ಯೋಜನೆಗಳಿಗೆ ಅಡಿಗಲ್ಲು ಹಾಕುವ, ಉದ್ಘಾಟಿಸುವ ಕೆಲಸ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಬಿಜೆಪಿ ಶಾಸಕರು ತಮ್ಮ ಸಾಧನೆಗಳನ್ನು ತೋರಿಸಲು ಅವಕಾಶ ಕಡಿಮೆ. ಜತೆಗೆ ಪಕ್ಷದ ಯಾತ್ರೆ, ಸಮಾವೇಶಗಳನ್ನೂ ನಿರ್ವಹಿಸ ಬೇಕಾಗಿರುವುದರಿಂದ ಸಿಗುವ ಸಮಯದಲ್ಲಿ ಜನರೊಂದಿಗೆ ಬೆರೆತು ತಮ್ಮ ಸಾಧನೆಗಳನ್ನು ಮನವರಿಕೆ ಮಾಡಿಕೊಡ ಬೇಕು. ಆ ನಿಟ್ಟಿನಲ್ಲಿ ಕಾರ್ಯಕರ್ತರ ತಂಡಗಳು ಕೆಲಸ ನಿರ್ವಹಿಸಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ. 

ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಆಗಾಗ್ಗೆ ನಡೆಯುವ ಸಾರ್ವಜನಿಕ ಸಭೆಗಳಿಗೆ ಜನರನ್ನು ಸೇರಿಸುವುದು ಸಾಮಾನ್ಯ. ಆದರೆ, ಈ ಬಾರಿ ಬಿಜೆಪಿ ಹೊಸ ಮಾದರಿಯಲ್ಲಿ ಚುನಾವಣೆಗೆ ಸಿದ್ಧವಾಗುತ್ತಿದೆ. ಪಕ್ಷದ ರಾಜ್ಯಾಧ್ಯಕ್ಷ ಯಡಿಯೂರಪ್ಪ ನೇತೃತ್ವದಲ್ಲಿ
ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ನವ ಕರ್ನಾಟಕ ನಿರ್ಮಾಣದ ಪರಿವರ್ತನಾ ಯಾತ್ರೆ ನಡೆಯುತ್ತಿದೆ. ಈಗಾಗಲೇ ಏಳು ಜಿಲ್ಲೆಗಳಲ್ಲಿ ಯಾತ್ರೆ ಪೂರ್ಣಗೊಂಡಿದ್ದು, ಇನ್ನೂ 23 ಜಿಲ್ಲೆಗಳಲ್ಲಿ ನಡೆಯಬೇಕಾಗಿದೆ. ಆ 23 ಜಿಲ್ಲೆಗಳಲ್ಲಿರುವ ಪಕ್ಷದ ಶಾಸಕರು ಯಾತ್ರೆ ಯಶಸ್ವಿಗೊಳಿಸುವತ್ತ ಗಮನಹರಿಸಿದ್ದಾರೆ. 

ಇನ್ನೊಂದೆಡೆ ಈಗಾಗಲೇ ಪರಿವರ್ತನಾ ಯಾತ್ರೆ ಮುಗಿದಿರುವ ಜಿಲ್ಲೆಗಳಲ್ಲಿ ನವಶಕ್ತಿ ಸಮಾವೇಶಗಳಿಗೆ ವೇದಿಕೆ ಸಿದ್ಧಪಡಿಸಬೇಕಿದೆ. ಜತೆಗೆ ಬೆಂಗಳೂರು ನಗರ ಜಿಲ್ಲೆಯಲ್ಲಿ ಡಿಸೆಂಬರ್‌ ಮತ್ತು ಜನವರಿಯಲ್ಲಿ ಮೂರು ಬೃಹತ್‌ ಸಮಾವೇಶಗಳನ್ನು ಆಯೋಜಿಸಲು
ತೀರ್ಮಾನಿಸಲಾಗಿದೆ. 

 2ನೇ ಹಂತದ “ಕುಮಾರ ಪರ್ವ’ಕ್ಕೆ ಸಿದ್ಧತೆ 
ಬೆಳಗಾವಿ ಸುವರ್ಣಸೌಧದಲ್ಲಿ ಹತ್ತು ದಿನಗಳ ವಿಧಾನಮಂಡಲ ಅಧಿವೇಶನ ಮುಗಿಯುತ್ತಿದ್ದಂತೆ ಜೆಡಿಎಸ್‌ನಲ್ಲಿ ಮುಂದಿನ ವಿಧಾನಸಭೆ ಚುನಾವಣೆ ತಯಾರಿ ಭರದಿಂದ ಸಾಗಿದೆ. 2ನೇ ಹಂತದ ಕರ್ನಾಟಕ ವಿಕಾಸ ವಾಹಿನಿ “ಕುಮಾರಪರ್ವ’ ಯಾತ್ರೆಗೆ ಸಜ್ಜಾಗುತ್ತಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ, ಅಭ್ಯರ್ಥಿಗಳ ಪಟ್ಟಿ ಸಿದ್ಧತೆಯಲ್ಲೂ ತೊಡಗಿದ್ದಾರೆ.

ಉತ್ತರ ಕರ್ನಾಟಕ ಭಾಗದ 50 ಕ್ಷೇತ್ರಗಳಲ್ಲಿ ಕರ್ನಾಟಕ ವಿಕಾಸ ವಾಹಿನಿ ಯಾತ್ರೆ ಕೈಗೊಂಡ ನಂತರ ಫೆಬ್ರವರಿ ಮೊದಲ ವಾರದ ವೇಳೆಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿಯಿಂದ ಕೆಲವರು ಜೆಡಿಎಸ್‌ನತ್ತ ಬರುವ ಮುನ್ಸೂಚನೆ ನೀಡಿರುವುದರಿಂದ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಲು ಮೀನಾಮೇಷ ಎಣಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಉತ್ತರ ಕರ್ನಾಟಕ ಭಾಗದಲ್ಲಿ ಯಾತ್ರೆ ಕೈಗೊಳ್ಳುವ ಸಂದರ್ಭದಲ್ಲಿ ಗ್ರಾಮ ವಾಸ್ತವ್ಯ ಸಹ ಮುಂದುವರಿಸಲಿದ್ದು, ಯಾವ್ಯಾವ ಗ್ರಾಮಗಳಲ್ಲಿ ವಾಸ್ತವ್ಯ ಹೂಡಬೇಕು ಎಂಬುದರ ಪಟ್ಟಿ ಸಿದ್ಧಪಡಿಸಲಾಗುತ್ತಿದೆ. ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತ ಸಮುದಾಯಗಳ ಮನೆಗಳಲ್ಲಿ ಹೆಚ್ಚಾಗಿ ವಾಸ್ತವ್ಯ ಹೂಡಲು ಚಿಂತನೆ ನಡೆದಿದೆ ಎಂದು ಹೇಳಲಾಗಿದೆ. ಯಾತ್ರೆ ಸಂದರ್ಭದಲ್ಲೇ ಎಚ್‌
.ಡಿ.ದೇವೇಗೌಡರು ಹಳೇ ಮೈಸೂರು ಭಾಗದ ಪಕ್ಷದ ನಾಯಕರ ಸಭೆ ಸಹ ನಡೆಸಲಿದ್ದಾರೆ. ಒದೊಂದು ದಿನ ಒಂದೊಂದು ಜಿಲ್ಲೆಯ
ನಾಯಕರ ಸಭೆ ನಡೆಸಿ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಮಾಹಿತಿ ಪಡೆಯಲಿದ್ದಾರೆ.

ಈಗಾಗಲೇ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ರಾಮನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಮುಖಂಡರ ಜತೆ ಒಂದು ಸುತ್ತು ಮಾತುಕತೆ ನಡೆಸಿರುವ ಅವರು, ಶಾಸಕರು, ಮಾಜಿ ಶಾಸಕರು, ಪಕ್ಷದ ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರನ್ನು ಕರೆದು ಸಮಾಲೋಚನೆ ನಡೆಸಲಿದ್ದಾರೆ. ಡಿಸೆಂಬರ್‌ನಲ್ಲಿ ಪಕ್ಷದ ಕೋರ್‌ ಕಮಿಟಿ ಸಭೆ ನಡೆಸಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗುವುದು. ಜತೆಗೆ ಡಿಸೆಂಬರ್‌ನಲ್ಲಿ ಹಿಂದುಳಿದ ಹಾಗೂ ಅಲ್ಪಸಂಖ್ಯಾತರ ಸಮಾವೇಶ, ಯುವ ಸಮಾವೇಶ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next