Advertisement

ದಾರು ಶಿಲ್ಪಗಳ ಸೌಂದರ್ಯದ ಖನಿ ಪಲಿಮಾರು ಮಠ

04:34 PM Jan 16, 2018 | Team Udayavani |

ಪಡುಬಿದ್ರಿ/ಉಡುಪಿ: ವಿಶಾಲ ಬಯಲು, ತೆಂಗು, ಕಂಗು, ಬಾಳೆ ತೋಟಗಳ ರಮಣೀಯ ನೋಟ, ಸನಿಹದಲ್ಲಿ ಹರಿವ ಶಾಂಭವಿ ನದಿಯ ಸೊಬಗುಳ್ಳ ಪ್ರಶಾಂತ ವಾತಾವರಣವಿರುವ ಪಡುಬಿದ್ರಿ ಸಮೀಪದ ಪಲಿಮಾರು ಗ್ರಾಮದ ಮಠ ವೈದಿಕ ಪರಂಪರೆಯ ಪಾಠ, ಪ್ರವಚನಗಳಿಗೆ ಹೇಳಿ ಮಾಡಿಸಿದಂತಿದೆ. ಅದಕ್ಕಾಗಿಯೇ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರ ಗುರುಗಳಾದ ಶ್ರೀ ವಿದ್ಯಾಮಾನ್ಯರೂ ಈ ತಾಣವನ್ನು ಪಾಠ ಪ್ರವಚನಗಳಿಗಾಗಿ ನೆಚ್ಚಿಕೊಂಡಿದ್ದರು. ಇದೀಗ ಅದಮಾರು ಕಿರಿಯ ಶ್ರೀಪಾದರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರೂ ಹಿಂದೆ ಶ್ರೀವಿದ್ಯಾಧೀಶತೀರ್ಥರ ಸಂಚಾರದಲ್ಲಿ, ಈಗ ಪಲಿಮಾರು ಮೂಲಮಠದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ.  

Advertisement

ದಾರುಸೌಂದರ್ಯ
ಶ್ರೀ ಮಠದ ವಿಶಾಲ ಪ್ರವೇಶ ದ್ವಾರವು ಮರದ ಸುಂದರ ಕೆತ್ತನೆಗಳಿಂದ ರಚಿತವಾಗಿದ್ದು ದಾರು ಶಿಲ್ಪ ವೈಭವವನ್ನು ಪ್ರತಿಬಿಂಬಿಸುತ್ತಿದೆ. ಇಲ್ಲೊಂದು ಸಣ್ಣ ಚೌಕಿಯ ರಚನೆಯಿದ್ದು ಸಣ್ಣ ಒಳಾಂಗಣವನ್ನೂ ಹೊಂದಿದೆ. ಒಳ ಪ್ರವೇಶಿಸಿದಾಗಲೇ    ಗರ್ಭಗುಡಿ, ಮರದ ದೊಡ್ಡ, ದೊಡ್ಡ ಕೆತ್ತನೆಯ ಕಂಬಗಳ ಸಹಿತವಾಗಿರುವ ವಿಶಾಲ ಚೌಕಿಯ ರಚನೆ ಇಲ್ಲಿದೆ. ಉಡುಪಿ ರಥಬೀದಿಯ ಪಲಿಮಾರು ಮಠದ ಸಂರಚನೆಯೂ ದಾರು ಶಿಲ್ಪಗಳ ಸೌಂದರ್ಯದಿಂದ ಕಂಗೊಳಿಸುತ್ತಿದೆ. 

ಪಲಿಮಾರು ಮೂಲ ಮಠದ ವೃಂದಾವನ ಸಾನ್ನಿದ್ಧéಗಳಲ್ಲಿ ಉತ್ತರ ಭಾಗದಿಂದ ಮೊತ್ತ ಮೊದಲನೆಯದು ಶ್ರೀ ಪಲಿಮಾರು ಮಠದ ಪರಂಪರೆಯಲ್ಲಿ ಐದನೆಯ ಪೀಠಾಧಿಪತಿಗಳಾಗಿದ್ದ ಶ್ರೀ ವಿದ್ಯಾಮೂರ್ತಿತೀರ್ಥರ ಶಿಷ್ಯರಾಗಿದ್ದ ಶ್ರೀ ರಾಜರಾಜೇಶ್ವರತೀರ್ಥ ಶ್ರೀಪಾದರದ್ದಾಗಿದೆ. ಇವರು ರಚಿಸಿರುವ ಮಂಗಲಾಷ್ಟಕವು ಇಂದಿಗೂ ಸರ್ವ ಮಂಗಲ ಪ್ರದವಾಗಿ ವಿಪ್ರರಿಂದ ಸ್ತುತಿಸಲ್ಪಡುತ್ತಿದೆ. ರಾಮ ಸಂದೇಶ ಎಂಬ ಕಾವ್ಯವನ್ನೂ ಇವರು ರಚಿಸಿದ್ದರು. ಇವರ ಹೆಸರಿರುವ ಶಾಸನವೊಂದು ಶ್ರೀ ಪಲಿಮಾರು ಮಠದ ಶಾಖಾ ಮಠವಾಗಿರುವ ಕಾಂತಾವರ ಮಠದ ಕಲ್ಲುಕಂಬದಲ್ಲಿದೆ. 

ಶ್ರೀ ರಾಜರಾಜೇಶ್ವರ ತೀರ್ಥರ ವೃಂದಾವನದೊಂದಿಗೆ ಶ್ರೀ ವಲ್ಲಭ ತೀರ್ಥರು, ಶ್ರೀ ರಘುನಂದನ ತೀರ್ಥರು, ಶ್ರೀ ರಘುವರ್ಯ ತೀರ್ಥರು, ಶ್ರೀ ರಘುವರ ತೀರ್ಥರು, ಶ್ರೀ ರಘು ಪ್ರಿಯ ತೀರ್ಥರ ವೃಂದಾವನ ಸನ್ನಿಧಾನಗಳಿವೆ. ಪಲಿಮಾರು ಶ್ರೀ ಆಂಜನೇಯ ಸನ್ನಿಧಾನದ ಎಡ ಪಾರ್ಶ್ವದಲ್ಲಿ ಶ್ರೀ ಮಠದ ಪುಷ್ಕರಿಣಿಯಿದೆ. ಪುಷ್ಕರಿಣಿಯ ಎದುರು ಶ್ರೀ ವಿದ್ಯಾನಿಧಿತೀರ್ಥರು, ಶ್ರೀ ಸುರೇಶತೀರ್ಥರು, ಶ್ರೀ ರಘೋತ್ತಮತೀರ್ಥರು, ಶ್ರೀ ರಾಮಭದ್ರತೀರ್ಥರ ವೃಂದಾವನಗಳಿವೆ. ಇಲ್ಲಿಯೇ ಶ್ರೀವಿದ್ಯಾಮಾನ್ಯತೀರ್ಥರ ವೃಂದಾವನ ರಾರಾಜಿಸುತ್ತಿದೆ.

ಹಸಿರು ಪರಿಸರ, ಗೋ ರಕ್ಷಣೆ
ಪರಿಸರವೆಲ್ಲವೂ ಹಸಿರಿಂದ ಕಂಗೊಳಿಸುತ್ತಿದೆ.  ಸುಂದರ ಕೈತೋಟ, ಮಗ್ಗುಲಲ್ಲೇ ತುಳಸೀ ವನ, ಮಠದ್ದೇ ಆದ ಗದ್ದೆಗಳನ್ನೂ ಹಡಿಲು ಬಿಡದೆ ಮಾಡುವ ಬೇಸಾಯ,   ಕುಂಬಳಕಾಯಿ, ಸೌತೆ ಮುಂತಾದ ಕಾಯಿ ಪಲ್ಲೆ, ತರಕಾರಿಗಳ ಕೃಷಿ ಈಗಲೂ ಈ ಪಲಿಮಾರು ಮಠದಲ್ಲಿ ಕಾಣ ಸಿಗುತ್ತದೆ. ಶ್ರೀ ದೇವರ ನಿತ್ಯ ಅಭಿಷೇಕ, ಸಮರ್ಪಣೆಗಳಿಗಾಗಿ ಗೋವುಗಳ ಸಂರಕ್ಷಣೆ, ಸಾಕಣೆಗಳೂ ಪಲಿಮಾರು ಮೂಲ ಮಠದಲ್ಲಿವೆ. 

Advertisement

ಆರಾಮ ಪಡುಬಿದ್ರಿ

Advertisement

Udayavani is now on Telegram. Click here to join our channel and stay updated with the latest news.

Next