Advertisement
ಮನೆಯ ಗೋಡೆಯ ಮೇಲೆ, ಮೂರು-ನಾಲ್ಕು ಅಡಿ ಎತ್ತರದ ವರೆಗೆ ಅಡ್ಡಾದಿಡ್ಡಿ ಗೆರೆಗಳು, ಬರಹಗಳು, ವೃತ್ತಗಳು ಹೀಗೆ ಅರ್ಥವಾಗದ ಚಿತ್ತಾರಗಳು ರಾರಾಜಿಸುತ್ತಿವೆಯೆಂದಾದರೆ, ಅದು ಆ ಮನೆಯ ಪುಟ್ಟ ಮಕ್ಕಳ ಗೋಡೆಬರಹವೆಂದು ಖಚಿತವಾಗಿ ಹೇಳಬಹುದು. ಮನೆಗೆ ತರಿಸುವ ವೃತ್ತಪತ್ರಿಕೆ, ಬಂದ ಆಮಂತ್ರಣ ಪತ್ರಿಕೆ, ಕೈಗೆ ಸಿಕ್ಕಿದ ಫೋನ್ ಬಿಲ್, ಅಕ್ಕ/ಆಣ್ಣಂದಿರ ಶಾಲಾಪುಸ್ತಕ, ಗೋಡೆಯಲ್ಲಿರುವ ಕ್ಯಾಲೆಂಡರ್ ಹೀಗೆ ಕೈಗೆ ಸಿಕ್ಕಿದ ಕಾಗದದ ಮೇಲೆ ಪೆನ್, ಪೆನ್ಸಿಲ್ ಅಥವಾ ಕ್ರೇಯಾನ್ ಬಣ್ಣದ ಗೆರೆ ಮೂಡಿಸುವುದರಲ್ಲಿ ಮಕ್ಕಳಿಗೆ ಅಪರಿಮಿತ ಸಂತೋಷ. ಕೆಲವು ಮಕ್ಕಳು, ಚಿತ್ರ ಮಾಡಲೆಂದೇ ಡಿಸೈನ್ ಪುಸ್ತಕಗಳನ್ನು ತಂದರೂ, ಅದರಲ್ಲಿ ತತ್‌ಕ್ಷಣವೇ ಬಣ್ಣ ಹಚ್ಚಿ ಮುಗಿಸಿ ಪುನಃ ಗೋಡೆಬರಹಕ್ಕೆ ತಯಾರಾಗುತ್ತಾರೆ.
ಈ ಕಾರಣಕ್ಕೇ ಮಕ್ಕಳನ್ನು ಗದರಿಸುವವರೂ ಇ¨ªಾರೆ. “ರವಿವರ್ಮನ ಕುಂಚದ ಕಲೆ..ಭಲೇ’ ಅಂತ ಹಗುರಾಗಿ ನಕ್ಕು ಪ್ರೋತ್ಸಾಹಿಸುವುದೂ ಇದೆ. ಏನಾದರೂ ಗೀಚಲಿ, ಸುಮ್ಮನೇ ಹಠ ಮಾಡುತ್ತ, ರಚ್ಚೆ ಹಿಡಿದು ಅಳದಿದ್ದರೆ ಸಾಕು… ಮಗು ಸ್ವಲ್ಪ ದೊಡ್ಡದಾದ ಮೇಲೆ ಮನೆಗೆ ಪೈಂಟ್ ಹೊಡೆಸಿದರಾಯಿತು ಅಂತ ಮಗುವಿಗೆ ಸ್ವಾತಂತ್ರ್ಯ ಕಲ್ಪಿಸುವವರೂ ಇ¨ªಾರೆ. ಬಾಡಿಗೆ ಮನೆಯಲ್ಲಿ ವಾಸವಿರುವವರು, “ಇಷ್ಟು ಭಾಗದ ಗೋಡೆಯಲ್ಲಿ ಮಾತ್ರ ಚಿತ್ರ ಮಾಡು…ಇಡೀ ಮನೆಯ ಗೋಡೆಯಲ್ಲಿ ಬರೆದರೆ ಓನರ್ ಅಂಕಲ್ ನೋಡ್ತಾರೆ’ ಅಂತ ಹೆದರಿಸುವುದು ಒಂದು ತಂತ್ರವಾದರೆ, ಗೋಡೆಗೆ ದೊಡ್ಡದಾಗಿ ಕಪ್ಪು ಕಾನವಾಸ್ ಬಟ್ಟೆಯನ್ನೋ, ಬೈಂಡ್ ಪೇಪರನ್ನೋ ಅಂಟಿಸಿ ಮಗುವಿನ ಗೋಡೆಬರಹಕ್ಕೆ ಪರ್ಯಾಯ ಗೋಡೆ ಸೃಷ್ಟಿಸುವುದು ಇನ್ನೊಂದು ತಂತ್ರ. ಏನೇ ಮಾಡಿದರೂ, ಜಾಣ ಮಕ್ಕಳು ಸಾಮಾನ್ಯವಾಗಿ ತಮ್ಮ ಎರಡನೆಯ ವಯಸ್ಸಿನಿಂದ ಸುಮಾರು ಏಳೆಂಟು ವರ್ಷದ ವರೆಗೆ ತಮಗೆ ಇಷ್ಟಬಂದಂತೆ ಗೋಡೆಯಲ್ಲಿ ಬರೆಯುತ್ತಾರೆ. ಮಕ್ಕಳಿಗೆ ಗೋಡೆಯಲ್ಲಿ ಬರೆಯಬೇಕೆನಿಸುವ ತುಡಿತಕ್ಕೆ ಮನಶಾಸ್ತ್ರೀಯ ಕಾರಣಗಳಿವೆಯಂತೆ. ಬಳಪ/ಪೆನ್ಸಿಲ್ ನಂತಹ ವಸ್ತುಗಳನ್ನು ಬೆರಳುಗಳ ಸಹಾಯದಿಂದ ಹಿಡಿದುಕೊಳ್ಳಲು ಕಲಿತೆನೆಂದು ಮಗುವಿಗೆ ಸಂತಸವಾಗುತ್ತದೆ. ಇದಕ್ಕೆ ಪೂರಕವಾಗಿ ಕೈಗಳ ಸ್ನಾಯು ಮತ್ತು ಮಿದುಳಿನ ಆದೇಶಗಳ ಸಂಯೋಜನೆ ಉಂಟಾದಾಗ ಸಂಭ್ರಮಿಸುತ್ತ, ತನ್ನ ಕ್ರಿಯಾಶೀಲತೆಯನ್ನು ಅಭಿವ್ಯಕ್ತಿ ಪಡಿಸಲು ಅಯಾಚಿತವಾಗಿ ಕಾಣಸಿಗುವ ಗೋಡೆಯನ್ನೇ ಕಾನ್ವಾಸ್ ಪರದೆಯಂತೆ ಬಳಸುತ್ತದೆ. ಸಹಜವಾಗಿಯೇ ಆ ವಯಸ್ಸಿನಲ್ಲಿ ಗೋಡೆಯಲ್ಲಿ ಬರೆಯಬಾರದೆಂದೂ, ಅದನ್ನು ಅಳಿಸಲು ಆಗಬಹುದಾದ ಖರ್ಚು , ಪರಿಣಾಮಗಳನ್ನೂ ಮಗು ಅರ್ಥ ಮಾಡಿಕೊಳ್ಳುವುದಿಲ್ಲ. ಮಕ್ಕಳ ಕೋಮಲ ಮನಸ್ಸಿಗೆ ಘಾಸಿಯಾಗದಂತೆ ಇದನ್ನು ನಿಭಾಯಿಸಬೇಕಾದದ್ದು ಪಾಲಕರ ಕರ್ತವ್ಯ.
Related Articles
Advertisement
ತಮಗೆ ತೋಚಿದ್ದನ್ನು ಅಕ್ಷರ ರೂಪಕ್ಕಿಳಿಸಿದಾಗ ಸಿಗುವ ಖುಷಿಗೆ ಬೆಲೆ ಕಟ್ಟಲಾಗದು. ಈಗೀಗ ಕೆಲವು ಬರಹಾಸಕ್ತರು ತಮ್ಮ ನೆನಪುಗಳು, ಅವಿಸ್ಮರಣೀಯ ಘಟನೆಗಳು, ಅಡುಗೆಮನೆಯ ಹೊಸರುಚಿ, ಪ್ರವಾಸಾನುಭವಗಳು, ಪ್ರಚಲಿತ ವಿದ್ಯಮಾನಗಳಿಗೆ ಸ್ಪಂದನೆ, ಅಂದದ ಚಿತ್ರಗಳು….ಹೀಗೆ ವಿವಿಧ ದಿಕ್ಕುಗಳಲ್ಲಿ ಆಲೋಚನೆಯನ್ನು ಹರಿಯ ಬಿಟ್ಟು, ಅವುಗಳಿಗೆ ಅಕ್ಷರ ರೂಪ ಕೊಟ್ಟು ಫೇಸ್ ಬುಕ್ ‘ಗೋಡೆ’ಗೆ ತಗಲಿಸುವುದು ಸಾಮಾನ್ಯ. ಈ ವಯಸ್ಸಿನಲ್ಲೂ ನಾವು “ಗೋಡೆಬರಹ’ದ ಪ್ರಿಯರು’ ಎಂಬುದಕ್ಕೆ ಇದೇ ಸಾಕ್ಷಿ !
– ಹೇಮಮಾಲಾ ಬಿ.