ನೂರಾರು ವರ್ಷಗಳಿಂದ ಕಾಡಿನಲ್ಲೇ ನೆಲೆ ಕಂಡುಕೊಂಡಿರುವ ಅಸಂಖ್ಯಾತ ಬುಡಕಟ್ಟು ಸಮುದಾಯಗಳು ಕಾಡಿನ ಮಡಿಲಿನಲ್ಲಿ ತಮ್ಮದೇ ಆದ ಆಚಾರ, ವಿಚಾರ, ಸಂಸ್ಕೃತಿಯನ್ನು ಬೆಳೆಸಿಕೊಂಡಿರುತ್ತವೆ. ಈ ಸಮುದಾಯ ಮಕ್ಕಳಿಗೆ, ಕಾನನವೇ ವಾಸತಾಣ. ಸುಂದರ ಪರಿಸರವೇ ಸರ್ವಸ್ವ, ಕಾಡೇ ಜಗತ್ತು. ಆದರೆ, ಇಂದಿನ ಆಧುನಿಕ ಜಗತ್ತು, ಇಂಥ ಜನರ ಜೀವನವನ್ನೂ ಹಾಳು ಮಾಡಲು ಹೊಂಚು ಹಾಕಿ ಕುಳಿತಿರುತ್ತದೆ. ಅಭಿವೃದ್ಧಿ, ಪರಿಸರ ಸಂರಕ್ಷಣೆ ಹೆಸರಿನಲ್ಲಿ ಕಾಡಿನಿಂದ ಆದಿವಾಸಿಗಳು, ಬುಡಕಟ್ಟು ಸಮುದಾಯಗಳನ್ನು ಒಕ್ಕಲೆಬ್ಬಿಸುವಂಥ, ಕೆಲಸಗಳು ನಡೆಯುತ್ತಲೇ ಇರುತ್ತದೆ. ಹೀಗೆ ಕಾಡಿನಿಂದ ನಾಡಿಗೆ ಬರುವ ಜನರ ಜೊತೆ ಹತ್ತಾರು ಕಥೆಗಳಿರುತ್ತವೆ. ಇದೇ ವಿಷಯವನ್ನು ಇಟ್ಟುಕೊಂಡು ಈಗ “ಕನ್ನೇರಿ’ ಎನ್ನುವ ಚಿತ್ರ ತೆರೆಗೆ ಬರುತ್ತಿದೆ.
ಈ ಹಿಂದೆ “ಮೂಕಹಕ್ಕಿ’ ಚಿತ್ರವನ್ನು ನಿರ್ದೇಶನ ಮಾಡಿರುವ ನೀನಾಸಂ ಮಂಜು, ಈಗ ಕಾಡು-ನಾಡು ನಡುವಿನ ಕಥೆಯನ್ನು ಆರಿಸಿಕೊಂಡು “ಕನ್ನೇರಿ’ ಹೆಸರಿನಲ್ಲಿ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಇನ್ನು “ಕನ್ನೇರಿ’ ಚಿತ್ರದ ಶೀರ್ಷಿಕೆಗೆ “ಕಾಡಿನ ವಸಂತಗಳು’ ಎಂಬ ಅಡಿಬರಹವಿದ್ದು, ನಮ್ಮ ನಡುವೆಯೇ ನಡೆದ ನೈಜ ಘಟನೆಯೊಂದನ್ನು ಈ ಚಿತ್ರದ ಮೂಲಕ ತೆರೆಮೇಲೆ ಹೇಳುತ್ತಿದ್ದಾರಂತೆ.
“ಕನ್ನೇರಿ’ ಚಿತ್ರದಲ್ಲಿ ಕು.ಅರ್ಚನಾ ಮಧುಸೂಧನ್ ಕಾಡಿನ ಪ್ರತಿನಿಧಿಯಾಗಿ ಕಾಣಿಸಿಕೊಂಡರೆ, ಅನಿತಾ ಭಟ್ ಸಿಲಿಕಾನ್ ಸಿಟಿಯ ಹುಡುಗಿಯಾಗಿ, ಸರ್ದಾರ್ ಸತ್ಯ ತನಿಖಾ ಅಧಿಕಾರಿಯಾಗಿ, ಕರಿಸುಬ್ಬು ರೋಡ್ ರಂಗಣ್ಣನಾಗಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಉಳಿದಂತೆ ನೇಹಲ್ ಹಾಲೇಕಾಯ್, ಎಂ.ಕೆ.ಮಠ, ಅರುಣ್ ಸಾಗರ್, ಚಂದ್ರಪ್ರಭಾ, ಮಾ.ಹೇಮಂತ್ ಗೌಡ, ಸೀತಾರಾಮ್, ನಿರಂಜನ್ ಮುಂತಾದವರು ಚಿತ್ರದ ಇತರ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ.
“ಕನ್ನೇರಿ’ ಚಿತ್ರದ ಕಥಾಹಂದರದ ಬಗ್ಗೆ ಮಾತನಾಡುವ ನಿರ್ದೇಶಕ ನೀನಾಸಂ ಮಂಜು, “ಈ ಚಿತ್ರದಲ್ಲಿ ಕಾಡಿನ ಜೊತೆ ನಾಡಿನ ಕಥೆಯೂ ತೆರೆಮೇಲೆ ಬರಲಿದೆ. ಉದ್ಯೋಗ ಬಯಸಿ ನಾಡಿಗೆ ಬರುವ ಕಾಡಿನ ಮುಗª ಜನರಿಗೆ ಇಲ್ಲಿನ ಪರಿಸರ, ರೀತಿ-ನೀತಿ ಎಲ್ಲವು ಹೊಸತಾಗಿರುತ್ತದೆ. ಮುಂದೆ ಇವರ ಜೀವನದಲ್ಲಿ ಏನೇನು ಘಟನೆಗಳು ನಡೆಯುತ್ತವೆ ಅನ್ನೋದನ್ನ ಚಿತ್ರದಲ್ಲಿ ಹೇಳಿದ್ದೇವೆ. “ಜೇನು ಆಕಾಶದ ಅರಮನೆಯೊ’ ಕಾದಂಬರಿಯಲ್ಲಿ ಇರುವ ಒಂದಷ್ಟು ವಿಷಯಗಳನ್ನು ಚಿತ್ರದಲ್ಲಿ ತೆಗೆದುಕೊಂಡಿದ್ದೇವೆ. ಚಿತ್ರದ ಕೊನೆಯಲ್ಲಿ ಪ್ರಕೃತಿ ಮನುಷ್ಯನಿಗೆ ಮತ್ತು ಸಮಾಜಕ್ಕೆ ಅಂತಿಮ ಮತ್ತು ಅನಿವಾರ್ಯ ಎಂಬ ಸಂದೇಶ ಕೂಡ ಹೇಳಲಾಗಿದೆ’ ಎಂದು ವಿವರಣೆ ನೀಡುತ್ತಾರೆ.
“ಕನ್ನೇರಿ’ ಚಿತ್ರಕ್ಕೆ ಕೋಟಿಗಾನಹಳ್ಳಿ ರಾಮಯ್ಯ ಸಾಹಿತ್ಯ, ಸಂಭಾಷಣೆ ಬರೆದಿದ್ದಾರೆ. ಚಿತ್ರದ ನಾಲ್ಕು ಹಾಡುಗಳಿಗೆ ಕದ್ರಿ ಮಣಿಕಾಂತ್ ಸಂಗೀತ ಸಂಯೋಜಿಸಿದ್ದಾರೆ. ಚಿತ್ರಕ್ಕೆ ಗಣೇಶ್ ಹೆಗ್ಡೆ ಛಾಯಾಗ್ರಹಣ, ಸುಜಿತ್ ನಾಯಕ್ ಸಂಕಲನ ಕಾರ್ಯವಿದೆ. “ಬುಡ್ಡಿ ದೀಪ ಸಿನಿಮಾ ಹೌಸ್’ ಮುಖಾಂತರ ಪಿ.ಹೆಬ್ಟಾರ್ ಮತ್ತು ಚಂದ್ರಶೇಖರ್.ಕೆ.ಎಸ್. ಜಂಟಿಯಾಗಿ ನಿರ್ಮಿಸಿರುವ “ಕನ್ನೇರಿ’ ಚಿತ್ರಕ್ಕೆ ಕೊಡಗು, ಮೈಸೂರು, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಸಲಾಗಿದೆ. ಸದ್ಯ ನಿಧಾನವಾಗಿ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ “ಕನ್ನೇರಿ’ ಚಿತ್ರ ಮುಂದಿನ ವರ್ಷದ ಪ್ರಾರಂಭದಲ್ಲಿ ತೆರೆಗೆ ಬರುವ ಸಾಧ್ಯತೆ ಇದೆ.