ಪಡುಬಿದ್ರಿ: ಯಕ್ಷಗಾನ ಕ್ಷೇತ್ರಕ್ಕೆ ಹೊಸ ಸ್ವರೂಪವೀಯುವ ಕಾರ್ಯಗಳು ಯಕ್ಷಧ್ರುವ ಪಟ್ಲ ಫೌಂಡೇಶನ್ ಮೂಲಕ ನಿರಂತರವಾಗಿ ನಡೆದು ಬಂದಿದೆ. ಯಕ್ಷಗಾನ ರಂಗದಲ್ಲಿ ಕಲಾಸಕ್ತರನ್ನು ನವರಸಗಳಿಂದ ಆಕರ್ಷಿಸುವ ಅನೇಕ ಕಲಾವಿದರನ್ನು ಅವರ ನಿಜ ಜೀವನದ ಕಷ್ಟದ ದಿನಗಳಲ್ಲಿ ಪಟ್ಲ ಫೌಂಡೇಶನ್ ಗುರುತಿಸಿ ಆದರಿಸಿದೆ. ಪಟ್ಲ ಫೌಂಡೇಶನ್ ಮೂಲಕ ಪಟ್ಲ ಸತೀಶ್ ಶೆಟ್ಟಿ ಅವರು ಎಳೆವೆಯಲ್ಲಿಯೇ ದೊಡ್ಡ ಸಾಧನೆಗೈದು ಕೀರ್ತಿಗೆ ಭಾಜನರಾಗಿರುವುದಾಗಿ ಕಾಪು ಶಾಸಕ ವಿನಯಕುಮಾರ್ ಸೊರಕೆ ಹೇಳಿದರು.
ಅವರು ಅ. 14ರಂದು ಪಡುಬಿದ್ರಿಯ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇಗುಲದ ವಠಾರದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ನೂತನ ಪಡುಬಿದ್ರಿ ಘಟಕವನ್ನು ಉದ್ಘಾಟಿಸಿ ಮಾತನಾಡಿದರು. ಬೆಂಗಳೂರಿನ ಉದ್ಯಮಿ, ಎಂಆರ್‌ಜಿ ಗ್ರೂಪ್‌ನ ಆಡಳಿತ ನಿರ್ದೇಶಕ ಕೆ. ಪ್ರಕಾಶ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಾಯಿರಾಧಾ ಗ್ರೂಪ್ಸ್‌ನ ಮನೋಹರ ಶೆಟ್ಟಿ ಅವರು ಅಶಕ್ತ ಕಲಾವಿದರಿಗೆ ನಿರ್ಮಿಸಿಕೊಡಲಿರುವ ಪಟ್ಲಾಶ್ರಯ ಫೌಂಡೇಶನ್‌ನ ಒಂದು ಮನೆಯ ನಿರ್ಮಾಣ ವೆಚ್ಚ 5 ಲಕ್ಷ ರೂ. ಗಳನ್ನು ಭರಿಸುವುದಾಗಿ ಘೋಷಿಸಿದರು.
ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಸ್ಥಾಪಕ ಪಟ್ಲ ಸತೀಶ್ ಶೆಟ್ಟಿ ಮಾತನಾಡಿ, ಫೌಂಡೇಶನ್ ಮೂಲಕ ರಂಗದಲ್ಲೇ ಮಡಿದ ಕಲಾವಿದ ಗಂಗಯ್ಯ ಶೆಟ್ಟಿ ಕುಟುಂಬಕ್ಕೆ 2.5ಲಕ್ಷ ರೂ. ಗಳನ್ನು ನೀಡಲಾಗಿದೆ. ನೇಪಥ್ಯಕ್ಕೆ ಸರಿದಿರುವ ಯಕ್ಷ ಕಲಾವಿದರನ್ನು ಗುರುತಿಸುವ ಕಾರ್ಯ ಮುಂದುವರಿಯಲಿ ಎಂದರು.ಕೊಲೆಕಾಡಿ ವಾದಿರಾಜ ಉಪಾಧ್ಯಾಯ ಶುಭಾಶಂಸನೆಗೈದರು.
ಉದ್ಯಮಿ ಸುರೇಶ್ ಶೆಟ್ಟಿ ಗುರ್ಮೆ, ಎರ್ಮಾಳು ಪುಚ್ಚೊಟ್ಟುಬೀಡು ಸೀತಾರಾಮ ಶೆಟ್ಟಿ, ಅವರಾಲು ಕಂಕಣ ಗುತ್ತು ಯಜಮಾನ ಕೃಷ್ಣ ಶೆಟ್ಟಿ, ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾ ಗಣಪತಿ ದೇಗುಲದ ಆನುವಂಶಿಕ ಮೊಕ್ತೇಸರ ದಾನಶಿರೋಮಣಿ ಪಡುಬಿದ್ರಿ ಬೀಡು ರತ್ನಾಕರ ರಾಜ್ ಅರಸ್ ಕಿನ್ಯಕ್ಕ ಬಲ್ಲಾಳರು, ವಿಹಿಂಪ ಪಡುಬಿದ್ರಿ ಘಟಕಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ ಪಾದೆಬೆಟ್ಟು, ಶ್ರೀಲಕ್ಷ್ಮೀ ವೆಂಕಟರಮಣ ದೇಗುಲದ ಆಡಳಿತ ಮೊಕ್ತೇಸರ ಪ್ರಶಾಂತ್ ಶೆಣೈ, ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಕೋಶಾಧಿಕಾರಿ ಸುರೇಶ್ ಕುಮಾರ್ ರೈ, ಎಂ.ಬಿ. ಕರ್ಕೇರ, ಕೊರ್ನಾಯ ಶ್ರೀಪತಿ ರಾವ್, ಪಡುಬಿದ್ರಿ ಘಟಕದ ಗೌರವಾಧ್ಯಕ್ಷ ಪ್ರೇಮನಾಥ ಶೆಟ್ಟಿ, ಸಂಚಾಲಕ ನವೀನ್ ಎನ್. ಶೆಟ್ಟಿ, ಕೋಶಾಧಿಕಾರಿ ಶೈಲೇಂದ್ರ ಉಪಾಧ್ಯಾಯ, ಉದ್ಯಮಿ
ದುರ್ಗಾಪ್ರಕಾಶ್ ರಾವ್, ಸಂತೋಷ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ನೇಪಥ್ಯ ಕಲಾವಿದ ಕುಟ್ಟಿ ಅಮೀನ್ ಪಡುಬಿದ್ರಿ, ಭಾಗವತ ನಾಗರಾಜ ಭಟ್ ಪಡುಬಿದ್ರಿ, ಹಿರಿಯ ಯಕ್ಷಗುರು, ಕಲಾವಿದರಾಗಿದ್ದ ದಿ| ಜಗದೀಶ್ ಆಚಾರ್ಯರ ಪತ್ನಿ ಹೇಮಲತಾ, ಹಿರಿಯ ಯಕ್ಷಗಾನ ಹವ್ಯಾಸಿ ಕಲಾವಿದ ದೇವರಾಜ ರಾವ್‌ರನ್ನು ಫೌಂಡೇಶನ್ ಮೂಲಕ ಸಮ್ಮಾನಿಸಲಾಯಿತು. ಯಕ್ಷಧ್ರುವ ಪಟ್ಲ ಫೌಂಡೇಶನ್‌ಗೆ ಪಡುಬಿದ್ರಿ ಘಟಕದ ಮೂಲಕವಾಗಿ 2ಲಕ್ಷ ರೂ.ಗಳ ದೇಣಿಗೆಯನ್ನು ಹಸ್ತಾಂತರಿಸಲಾಯಿತು.
ಪಡುಬಿದ್ರಿ ಘಟಕಾಧ್ಯಕ್ಷ ಜಯ ಎಸ್. ಶೆಟ್ಟಿ ಪದ್ರ ಸ್ವಾಗತಿಸಿದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಪ್ರಸ್ತಾವಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ನಿರ್ವಹಿಸಿದರು. ಪಡುಬಿದ್ರಿ ಘಟಕದ ಕಾರ್ಯದರ್ಶಿ ಪ್ರಕಾಶ್ ರಾವ್ ಪಿ. ಎನ್. ವಂದಿಸಿದರು. ಕದ್ರಿ ನವನೀತ ಶೆಟ್ಟಿ ಅವರ ನಿರೂಪಣೆಯಲ್ಲಿ ಯಕ್ಷ – ಗಾನ – ನಾಟ್ಯ – ವೈಭವ ಕಾರ್ಯಕ್ರಮ ಹಾಗೂ ಯಕ್ಷಗಾನ ಬಯಲಾಟ ‘ಹಿರಣ್ಯಮಣಿ ಕಲ್ಯಾಣ’ವು ಪ್ರದರ್ಶಿತಗೊಂಡಿತು.