ಸುಳ್ಯ ಪದವು: ಹುಟ್ಟುಹಬ್ಬ ಎಂದಾಕ್ಷಣ ಪಾರ್ಟಿ ಮಾಡಿ ಎಂಜಾಯ್ ಮಾಡುವ ಈಗಿನ ದಿನಗಳಲ್ಲಿ, ತನ್ನಿಂದ ಪಾಪದ ಮಕ್ಕಳಿಗೆ ಏನಾದರೂ ಪ್ರಯೋಜನ ಆಗಬೇಕು ಎನ್ನುವ ದೃಷ್ಟಿಕೋನವನ್ನಿಟ್ಟು ಯುವ ಜನತೆಗೆ ಸ್ಫೂರ್ತಿಯಾದ ಯುವಕ ಸುಧೀರ್ ಕುಮಾರ್ ಎಂ ಎಸ್.
ಸುಳ್ಯಪದವಿನ ಸರ್ವೋದಯ ವಿದ್ಯಾ ಸಂಸ್ಥೆಯಲ್ಲಿ ಕಲಿಯುತ್ತಿರುವ, ಆರ್ಥಿಕವಾಗಿ ಹಿಂದುಳಿದ ಸುಮಾರು 17 ಬಡ ವಿದ್ಯಾರ್ಥಿಗಳಿಗೆ ಸುಧೀರ್ ಉಚಿತವಾಗಿ ಪುಸ್ತಕ ಮತ್ತು ಬ್ಯಾಗ್ ವಿತರಣೆ ಮಾಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವುದರೊಂದಿಗೆ ಸುಮಾರು 300 ವಿದ್ಯಾರ್ಥಿಗಳಿಗೆ ಸಿಹಿತಿಂಡಿ ನೀಡಿ 28ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಿದರು.
ಬಾಲ್ಯದಿಂದಲೂ ಕಷ್ಟಗಳನ್ನು ಎದುರಿಸಿ ಜೀವನದಲ್ಲಿ ಏರುಪೇರು ಕಂಡ ಯುವಕ ಇಂದು ಸುಳ್ಯಪದವು ಪೇಟೆಯಲ್ಲಿ ಬೀಡ ಅಂಗಡಿ ಇಟ್ಟು ಬಂದ ಆದಾಯದಲ್ಲಿ ಉಳಿತಾಯ ಮಾಡಿಕೊಂಡು ಹುಟ್ಟುಹಬ್ಬದ ದಿನ ತಾನು ಕಲಿತ ಶಾಲೆಗೆ ಭೇಟಿ ನೀಡಿ ಆರ್ಥಿಕವಾಗಿ ಹಿಂದುಳಿದ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಪುಸ್ತಕ ಮತ್ತು ಬ್ಯಾಗನ್ನು ನೀಡಿ ಸಾರ್ಥಕತೆ ಮೆರೆದರು.
ಸರ್ವೋದಯ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸುಕೇಶ್ ರೈ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರ ರಾಮಚಂದ್ರ ರಾವ್, ಶಿಕ್ಷಕಿ ಪ್ರಶಾಂತಿ ರೈ, ಸುಳ್ಯ ಪದವು ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಅಶೋಕ್ ಪಿ.ಎಸ್. ಮತ್ತಿತರರು ಉಪಸ್ಥಿತರಿದ್ದರು.
ಜೀವನದಲ್ಲಿ ಹಲವಾರು ರೀತಿಯ ಕಷ್ಟಗಳನ್ನು ಎದುರಿಸಿದ್ದೇನೆ. ಇದೀಗ ಆರ್ಥಿಕವಾಗಿ ಸದೃಢನಾಗಿದ್ದು, ನನ್ನ ಹುಟ್ಟುಹಬ್ಬದ ಶುಭ ಸಂದರ್ಭದ ದಿನ ಬ್ಯಾಗ್ ಮತ್ತು ಪುಸ್ತಕ ವಿತರಿಸಿದ್ದೇನೆ ಎಂದು ಹೇಳಿದ್ದಾರೆ.