Advertisement

ಕ್ಷೇತ್ರ ಮರುವಿಂಗಡಣೆಗೆ ಭುಗಿಲೆದ್ದ ಆಕ್ರೋಶ

06:27 PM Mar 29, 2021 | Team Udayavani |

ಆಳಂದ: ಜಿಲ್ಲೆಯ ರಾಜಕೀಯ ವಲಯದಲ್ಲಿ ಗಮನಿಸಿದರೆ ಎಲ್ಲದರಲ್ಲೂ ತಾಲೂಕು ಮುಂಚೂಣಿಯಲ್ಲಿದೆ. ಆದರೆ ದಿನ ಕಳೆದಂತೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಚುನಾವಣೆಯಲ್ಲಿ ಜಾತಿ, ಧರ್ಮ, ಹಣಬಲ ತೋಳ್ಬಲದ ಲೆಕ್ಕಾಚಾರದಿಂದಾಗಿ ಅಭಿವೃದ್ಧಿಯಲ್ಲಿ ಏರಿಳಿತವೂ ಕಂಡಿದೆ. ಈಗ ಹೊಸದಾಗಿ ಕ್ಷೇತ್ರಗಳ ಮರು ವಿಂಗಡಣೆಯಿಂದ ಜನರ ಆಕ್ರೋಶ ಭುಗಿಲೆದ್ದಿದೆ.

Advertisement

ಮಾಜಿ ಶಾಸಕ ಬಿ.ಆರ್‌. ಪಾಟೀಲ ಅವರ ಸರಸಂಬಾ ಗ್ರಾಮಕ್ಕಿದ್ದ ಜಿಪಂ ಕ್ಷೇತ್ರ ಹಿರೋಳಿಗೆ ವರ್ಗವಾಗುತ್ತಿದ್ದರೆ, ಮತ್ತೂಂದೆಡೆ ಪ್ರಸಿದ್ಧ ನವಕಲ್ಯಾಣ ಮಠ ಹೊಂದಿದ್ದ ಜಿಡಗಾ ಕ್ಷೇತ್ರವನ್ನು ಉಳಿಸಿಕೊಳ್ಳಲು ಸ್ಥಳೀಯರು ಮುಂದಾಗಿದ್ದಾರೆ. ಇಷ್ಟಾಗಿಯೂ ಸರ್ಕಾರದಿಂದ ಅಧಿಕೃತವಾಗಿ ಕ್ಷೇತ್ರಗಳ ವಿಂಗಡಣೆ ಪಟ್ಟಿ ಹೊರಬೀಳಬೇಕಿದೆ. ಸದ್ಯ ಮೇಲ್ನೋಟಕ್ಕೆ ಅನಧಿಕೃತ ಪಟ್ಟಿ ಆಧಾರದ ಮೇಲೆ ಜನರ ಆಕ್ರೋಶವೂ ಇದೆ.

ಈ ಮೊದಲು ಏಳು ಜಿಪಂ ಸ್ಥಾನ ಖಜೂರಿ, ನಿಂಬರಗಾ, ಮಾದನಹಿಪ್ಪರಗಾ, ತಡಕಲ್‌ ಹಾಗೂ ಸದ್ಯ ಕ್ಷೇತ್ರಗಳ ಮರು ವಿಂಗಡಣೆಯಿಂದ ಚಿಂಚನಸೂರ ಬದಲು ನರೋಣಾ, ಸರಸಂಬಾ ಬದಲು ಹಿರೋಳಿ, ಜಿಡಗಾ ಬದಲು ಭೂಸನೂರ, ಹೊಸದಾಗಿ ರಚನೆಯಾದ ಮಾಡಿಯಾಳ ಜಿಪಂ ಕ್ಷೇತ್ರ ಸೇರಿ ಎಂಟು ಕ್ಷೇತ್ರಗಳಾಗಿವೆ. ಒಟ್ಟು 30 ತಾಪಂ ಕ್ಷೇತ್ರಗಳ ಪೈಕಿ ವಿಭಜಿತ ಕಮಲಾಪುರ ತಾಲೂಕಿಗೆ ಮೂರು ತಾಪಂ ಕ್ಷೇತ್ರಗಳ ವರ್ಗಾಯಿಸಿದ ಮೇಲೆ ಉಳಿದ 27 ತಾಪಂ ಕ್ಷೇತ್ರಗಳಲ್ಲಿ ಗ್ರಾಮಗಳ ಮರುವಿಂಗಣೆ ಕಾರ್ಯದಿಂದಾಗಿ 27 ತಾಪಂ ಕ್ಷೇತ್ರ ಸದ್ಯಕ್ಕೆ 22 ಸ್ಥಾನಕ್ಕೆ ನಿಂತುಕೊಂಡಿದೆ.

ಜಿಪಂ ಕ್ಷೇತ್ರಗಳ ಬದಲಾವಣೆ ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಸುಮಾರು 12 ಸಾವಿರ ಜನಸಂಖ್ಯೆ ಗ್ರಾಪಂ ಕೇಂದ್ರ ಸ್ಥಾನ ಹೊಂದಿರುವ ಚಿಂಚನಸೂರ ತಾಲೂಕಿನ ಗಡಿಪ್ರದೇಶಕ್ಕೆ ಹೊಂದಿಕೊಂಡಿದ್ದು, ಇಲ್ಲಿ ತಾಪಂ ಕ್ಷೇತ್ರ ಹೊಂದಿದೆ. ಸಪ್ತ ಖಾತೆ ಹೊಂದಿದ ಮಾಜಿ ಸಚಿವ ಬಾಬುರಾವ್‌ ಚಿಂಚನಸೂರ ಮೂಲತಃ ಚಿಂಚನಸೂರ ಗ್ರಾಮದವರು. ಅಲ್ಲದೇ, ತಾಲೂಕು ಕೇಂದ್ರದಿಂದ ಆಳಂದ ಪಟ್ಟಣದಿಂದ 35 ಕಿ.ಮೀ. ಜಿಲ್ಲಾ ಕೇಂದ್ರ ಕಲಬುರಗಿಯಿಂದ 20 ಕಿ.ಮೀ ಚಿಂಚನಸೂರ ಅಂತರದಲ್ಲಿದೆ. ಈ ಗ್ರಾಮವೂ ನೆರೆಯ ಬೀದರ ಜಿಲ್ಲೆಯ ಬಸವ ಕಲ್ಯಾಣ ಹಾಗೂ ಕಲಬುರಗಿಗೆ ನೇರ ಮತ್ತು ಆಂತರಿಕ ಸಮೀಪದ ರಸ್ತೆ ಸಂಪರ್ಕವೂ ಕಲ್ಪಿಸಿದ ಖ್ಯಾತಿ ಹೊಂದಿದೆ.

ಧಾರ್ಮಿಕವಾಗಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲೇ ತೀವ್ರ ಗಮನ ಸೆಳೆದ ಚಿಂಚನಸೂರ ಮಹಾಪೂರ ತಾಯಿ ಜಾತ್ರೆ ಪ್ರತಿವರ್ಷ ಜೋರಾಗಿ ನಡೆಯುತ್ತದೆ. ಆದರೆ ರಾಜಕೀಯವಾಗಿ, ಶೈಕ್ಷಣಿಕ, ಸಾಮಾಜಿಕ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದ ಕ್ಷೇತವೂ ಆಗಿದೆ. ಹಠಾತ್‌ ಆಗಿ ಚಿಂಚನಸೂರ ಜಿಪಂ ಕ್ಷೇತ್ರ ಬೇರೆಡೆ ವರ್ಗಾವಣೆಗೊಂಡಿದ್ದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

Advertisement

ಹೊಸದಾಗಿ ಕಮಲಾಪುರ ತಾಲೂಕು ರಚನೆಯಾದ ಮೇಲೆ ಆಳಂದ ತಾಲೂಕಿನ ನರೋಣಾ ಹೋಬಳಿ ವಲಯದ 11 ಗ್ರಾಪಂಗಳಲ್ಲಿ 6 ಉಳಿದು ಇನ್ನುಳಿದ ಶ್ರೀಚಂದ, ವಿ.ಕೆ.ಸಲಗರ, ಲಾಡಮುಗಳಿ, ಮುದ್ದಡಗಾ, ಅಂಬಲಗಾ ಈ ಐದು ಗ್ರಾಪಂಗಳು ಮತ್ತು ವಿ.ಕೆ. ಸಲಗರ, ಮಡಕಿ, ಅಂಬಲಗಾ ಈ ಮೂರು ತಾಲೂಕು ಪಂಚಾಯಿತಿ ಕ್ಷೇತ್ರ ಹಂಚಿಹೋಗಿವೆ. ಅಲ್ಲದೆ, ಒಟ್ಟು ನಾಲ್ಕು ತಾಂಡಾಳಾದ ವಿ.ಕೆ. ಸಲಗರ ತಾಂಡಾ, ಲಾಡಮುಗಳಿ ತಾಂಡಾ, ಮಡಕಿ ತಾಂಡಾ, ಅಂಬಲಗಾ ತಾಂಡಾ ಹಾಗೂ 20 ಗ್ರಾಮಗಳಾದ ಶ್ರೀಚಂದ್‌, ಹೊಡಲ, ಜವಳ ಬಿ, ಕೊಟ್ಟರಗಿ, ಮಳ್ಳಪ್ಪನವಾಡಿ, ಅಫಚಂದ, ಮುದ್ದಡಗಾ, ಮಡಕಿ, ಮುರಡಿ, ವಿ.ಕೆ.
ಸಲಗರ, ಲಾಡಮುಗಳಿ, ಲೆಂಗಟಿ, ಅಂಬಲಗಾ, ಕುದಮುಡ, ಕಲಕುಟಗಿ ಗ್ರಾಮಗಳು ಹಂಚಿಹೋಗಿವೆ. ಆದರೆ ದಾಖಲಾರ್ಹ ಎನ್ನುವಂತೆ ಜಿಪಂ ಕ್ಷೇತ್ರ ಹೊಂದಿದ್ದ ಚಿಂಚನಸೂರ ಮಾತ್ರ ತಾಲೂಕಿನ ನರೋಣಾ ವಲಯಕ್ಕೆ ಉಳಿದುಕೊಂಡ ಸಂತಸವಿದೆ. ಆದರೆ ಈ ಗ್ರಾಮದ ಜಿಪಂ ಕ್ಷೇತ್ರ ರದ್ದಾಗಿರುವುದು ಸ್ಥಳೀಯರಿಗೆ ಬೇಸರ ತರಿಸಿದೆ. ಕ್ಷೇತ್ರವನ್ನು ಉಳಿಸಿಕೊಡಬೇಕು ಎಂದು ಸರ್ಕಾರಕ್ಕೆ ರೈತ ಮುಖಂಡ ಪಾಂಡುರಂಗ ಮಾವೀನಕರ್‌ ಮತ್ತು ಸುಧಾಮ ಧನ್ನಿ ಆಗ್ರಹಿಸಿದ್ದಾರೆ.

ಕೇಂದ್ರ ಸ್ಥಾನ ಚಿಂಚನಸೂರ ಗ್ರಾಮವೊಂದೇ ಆಳಂದ ತಾಲೂಕಿಗೆ ಒಳಪಟ್ಟಿದೆ. ಚಿಂಚನಸೂರ ಜಿಪಂ ಕ್ಷೇತ್ರಕ್ಕೆ ಬೆಳಮಗಿ, ಕಮಲಾನಗರ, ಬೋಧನ, ಕೆರೆ ಅಂಬಲಗಾ ಗ್ರಾಪಂಗಳು ಒಳಪಟ್ಟಿದ್ದವು. ಸದ್ಯ ಚಿಂಚನಸೂರಗೆ ನಾಲ್ಕು ಗ್ರಾಪಂಗಳಾದ ಕಮಲಾನಗರ, ಬೋಧನ, ಕೆರೆ ಅಂಬಲಗಾ, ಚಿಂಚನಸೂರ ಈ ನಾಲ್ಕು ಗ್ರಾಪಂಗೆ ಚಿಂಚನಸೂರ ಜಿಪಂ ಕ್ಷೇತ್ರ ನೀಡುವುದು ಸೂಕ್ತವಾಗಿದೆ ಎಂದು ಮುಖಂಡರು ಅಧಿಕಾರಿಗಳ ಮುಂದೆ ಲಿಖೀತವಾಗಿ ವಾದಿಸಿದ್ದಾರೆ.

ವಿಶೇಷವಾಗಿ ಚಿಂಚನಸೂರ ಜಿಲ್ಲಾ ಪರಿಷತ್‌ ಕ್ಷೇತ್ರ ರಚನೆಯಾದ ಮೇಲೆ ಮೊದಲು ಚುನಾಯಿತರಾಗಿದ್ದ ದಿ| ಮಾರುತಿ ಮಾನ್ಪಡೆ, ಜಿಪಂ ರಚನೆಯಾದ ಮೇಲೆ ನಂತರ ರೈತ ಸಂಘದ ಜಿಲ್ಲಾ ಮುಖಂಡ ಕಾಮ್ರೆಡ್‌ ಮೇಘರಾಜ ಕಠಾರೆ, ಕಾಂಗ್ರೆಸ್‌ನಿಂದ ಶೋಭಾ ದಿಗಂಬರ ಬೆಳಮಗಿ, ಕಾಂಗ್ರೆಸ್‌ನಿಂದ ಹರ್ಷಾನಂದ ಎಸ್‌. ಗುತ್ತೇದಾರ, ಬಿಜೆಪಿಯಿಂದ ಮಾಯಾದೇವಿ ಪರಶುರಾಮ ಅಗ್ಗಿ, ಕಾಂಗ್ರೆಸ್‌ನಿಂದ ಶ್ರೀಮತಿ ಸಂಜುಕುಮಾರ ಹಾಗೂ ಸದ್ಯ ಶರಣಗೌಡ ಪಾಟೀಲ ವಿ.ಕೆ. ಸಲಗರ ಸರಣಿ ಅ ಧಿಕಾರಕ್ಕೆ ತಂದ ಕ್ಷೇತ್ರವನ್ನು ಹಠಾತಾಗಿ ರದ್ದುಗೊಳಿಸಿದ್ದು ಸರಿಯಲ್ಲ. ಕಳೆದ 30 ವರ್ಷಗಳಿಂದ ರಾಜಕೀಯ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಕ್ಷೇತ್ರವಾಗಿದ್ದ ಚಿಂಚನಸೂರ ಅಭಿವೃದ್ಧಿ ಪಡಿಸಲು ಜಿಪಂ ಕ್ಷೇತ್ರವನ್ನು ಮುಂದುರೆಸುವುದು ಮುಖ್ಯವಾಗಿದೆ ಎನ್ನುತ್ತಾರೆ ಮುಖಂಡರು.

Advertisement

Udayavani is now on Telegram. Click here to join our channel and stay updated with the latest news.

Next