ಪಿರಿಯಾಪಟ್ಟಣ: ತಾಪಂ ಅನುದಾನದ ಅಭಾವ ಹಾಗೂ ಸಿಬ್ಬಂದಿಗಳ ಕೊರತೆಯಿದ್ದರೆ ತಾಪಂ ಅನ್ನು ವಿಸರ್ಜಿಸಿ ಎಂದು ಸದಸ್ಯರು ಒಕ್ಕೊರಲಿನಿಂದ ತಾಪಂ ಸಾಮಾನ್ಯ ಸಭೆಯಲ್ಲಿ ಒತ್ತಾಯಿಸಿದರು. ತಾಪಂ ಸದಸ್ಯರಿಗೆ ಸಭೆಗೆ ಒಂದು ವಾರ ಮುಂಚಿತವಾಗಿ ಹಿಂದಿನ ಸಭೆಯ ನಡಾವಳಿಯ ಪ್ರತಿ ನೀಡುವಂತೆ ಹಲವು ಬಾರಿ ತಿಳಿಸಿದ್ದರೂ ಸಭೆ ಆರಂಭಗೊಂಡ ನಂತರ ನಡಾವಳಿ ಪ್ರತಿ ನೀಡುತ್ತಿದ್ದಾರೆ.
ಇದರಿಂದ ಸಭೆಯಲ್ಲಿ ಪ್ರಸ್ತಾಪ ಮಾಡಬೇಕಾದ ವಿಷಯಗಳು ಏನೆಂಬುದು ತಿಳಿಯುವುದಿಲ್ಲ ಎಂದು ಸದಸ್ಯ ಆರ್.ಎಸ್.ಮಹದೇವ್ ದೂರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ತಾಪಂ ಅಧ್ಯಕ್ಷೆ ಕೆ.ಆರ್.ನಿರೂಪ, ಸಿಬ್ಬಂದಿ ಕೊರತೆಯಿಂದಾಗಿ ನಡಾವಳಿ ಪ್ರತಿ ಮುಂಚಿತವಾಗಿ ನೀಡಲಾಗುತ್ತಿಲ್ಲ ಎಂದು ಉತ್ತರಿಸಲು ಮುಂದಾದಾಗ ಸದಸ್ಯರು ಒಕ್ಕೊರಲಿನಿಂದ ತಾಪಂ ವಿಸರ್ಜಿಸುವಂತೆ ಆಗ್ರಹಿಸಿದರು.
ಸಭೆ ಆರಂಭಗೊಳ್ಳುತ್ತಿದಂತೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವರಾಮೇಗೌಡ ಇಲಾಖೆ ವರದಿ ಮಂಡಿಸಲು ಮುಂದಾದರು. ಈ ವೇಳೆ ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ರಾಮುಐಲಾಪುರ, ರೈತರಿಗೆ ಸೌಲಭ್ಯ ನೀಡುವಲ್ಲಿ ಇಲಾಖೆ ಸಂಪೂರ್ಣವಾಗಿ ವಿಫಲಗೊಂಡಿದೆ ಎಂದು ದೂರಿದರು. ಸದಸ್ಯ ಟಿ.ಈರಯ್ಯ, ಅಕ್ರಮ ಗಣಿಗಾರಿಕೆ ನಡೆಯುತ್ತಿದ್ದರೂ ಇಲಾಖೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿದ್ದಾರೆಂದು ದೂರಿದರು. ಈ ವೇಳೆ ಅಧ್ಯಕ್ಷರು, ಅಧಿಕಾರಿಗಳು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಇತ್ತೀಚೆಗೆ ತಾಲೂಕಿನ ಚಿಕ್ಕಬೇಲಾಳು ಸರ್ಕಾರಿ ಶಾಲೆಯಲ್ಲಿ ದಲಿತ ಮಹಿಳೆ ಅಡುಗೆ ತಯಾರಿಕೆಗೆ ವಿದ್ಯಾರ್ಥಿಗಳು ಊಟ ಮಾಡದೆ ನಿರಾಕರಿಸುತ್ತಿದ್ದಾರೆ ಎಂಬ ವಿಚಾರ ಸತ್ಯಕ್ಕೆ ದೂರ. ಕೂಡಲೇ ಕ್ಷೇತ್ರ ಶಿಕ್ಷಣಾಧಿಕಾರಿಗಳು ಉತ್ತರಿಸಬೇಕು ಎಂದಾಗ ಬಿಇಒ ಆರ್.ಕರಿಗೌಡ, ಘಟನೆ ನಡೆದಿರುವುದು ನಿಜ, ಆದರೆ ಮೇಲಧಿಕಾರಿಗಳು ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿದಿದೆ ಎಂದು ಉತ್ತರಿಸಿದರು.
ಸಾರ್ವಜನಿಕ ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ಎಲ್.ರವಿ ಮಾತನಾಡಿ, ಪಟ್ಟಣದ ಆಸ್ಪತ್ರೆಯಲ್ಲಿ ಕಿಡ್ನಿ ಡಯಾಲಿಸಿಸ್ ಕೇಂದ್ರ ಶೀಘ್ರವೇ ಆರಂಭಗೊಳ್ಳಲಿದೆ ಎಂದರು. ತಾಪಂ ಸದಸ್ಯ ಮಾನುಇನಾಯಿತ್, ಕಾಡಂಚಿನಲ್ಲಿರುವ ರೈತರು ಸಂಜೆಯ ನಂತರ ತಮ್ಮ ಜಮೀನುಗಳಿಂದ ವಾಪಸ್ಸು ಬರುವಾಗ ಅರಣ್ಯ ಸಿಬ್ಬಂದಿಗಳು ರೈತರನ್ನು ತಡೆದು ಪ್ರಶ್ನಿಸುತ್ತಿರುವುದರಿಂದ ತೊಂದರೆಯಾಗುತ್ತಿದೆ ಎಂಬ ಪ್ರಶ್ನೆಗೆ ಆರ್‌ಎಫ್ಒ ಆರ್.ಗಿರೀಶ್ ಉತ್ತರಿಸಿ, ರೈತರಿಗೆ ಓಡಾಡಲು ಯಾವುದೇ ತೊಂದರೆಯಾಗದಂತೆ ಕ್ರಮ ವಹಿಸುವುದಾಗಿ ಮಾಹಿತಿ ನೀಡಿದರು.
ಸಿಡಿಪಿಒ ಇಂದಿರಾ ಮಾತನಾಡಿ, ತಾಲೂಕಿನ ಅಂಗನವಾಡಿಗಳಲ್ಲಿನ ಸಿಬ್ಬಂದಿಗಳ ಸಮಸ್ಯೆ ಶೀಘ್ರ ಪರಿಹರಿಸಿ ನೂತನ ಕಟ್ಟಡಗಳಿಗೆ ಶಿಫಾರಸು ಮಾಡಲಾಗುವುದೆಂದರು. ಪಶುಸಂಗೋಪನಾ ಇಲಾಖೆ, ಶಿಕ್ಷಣ ಇಲಾಖೆ, ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ,
ಸೆಸ್ಕ್ ಇಲಾಖೆ ಸೇರಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ತಾಪಂ ಉಪಾಧ್ಯಕ್ಷೆ ಜಯಮ್ಮ, ತಾಪಂ ಸದಸ್ಯರಾದ ಮಲ್ಲಿಕಾರ್ಜುನ್, ಶೋಭಾ, ಸುಮಿತ್ರ, ಪುಷ್ಪಲತಾ, ಟಿ.ಎನ್.ಪಂಕಜಾ, ಮುತ್ತ, ಶಿವಮ್ಮ, ಜಯಂತಿ, ಪ್ರೀತಿ, ತಾಪಂ ಇಒ ಕೆ.ಬಸವರಾಜ್, ಎಇಇ ವಾಜೀದ್‌ಖಾನ್, ಸಹಾಯಕ ಎಂಜಿನಿಯರ್ ಪ್ರಭು ಮತ್ತಿತರರಿದ್ದರು.