Advertisement

ಚೀನದತ್ತ ತಿರುಗಿದ ಜಗತ್ತಿನ ಎಲ್ಲರ ಆಕ್ರೋಶ

11:58 AM Apr 20, 2020 | Sriram |

ವಾಷಿಂಗ್ಟನ್‌: ಜಗತ್ತಿಗೇ ಕೋವಿಡ್ 19 ಹಬ್ಬಿಸಿರುವ ಕುಖ್ಯಾತಿಗೆ ಪಾತ್ರವಾದ ಚೀನ ಈಗ ಜಾಗತಿಕ ಪ್ರತಿರೋಧವನ್ನು ಎದುರಿಸುತ್ತಿದೆ. ದಿನದಿಂದ ದಿನಕ್ಕೆ ಒಂದೊಂದೇ ದೇಶಗಳು ಚೀನದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಂತೂ ನೇರವಾಗಿಯೇ ಈ ಕಮ್ಯೂನಿಸ್ಟ್‌ ರಾಷ್ಟ್ರದ ವಿರುದ್ಧ ತಿರುಗಿ ಬಿದ್ದಿದ್ದಾರೆ. ರವಿವಾರ ಮತ್ತೆ ಹೇಳಿಕೆ ನೀಡಿರುವ ಟ್ರಂಪ್‌, ಚೀನ ಮಾಡಿದ ತಪ್ಪಿಗೆ ತಕ್ಕ ಶಾಸ್ತಿ ಅನುಭವಿಸಲೇಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

Advertisement

ಕೋವಿಡ್ 19 ಹರಡುವಿಕೆ ಬಗ್ಗೆ ಚೀನಕ್ಕೆ ಮೊದಲೇ ಗೊತ್ತಿತ್ತು. ಆದರೂ ಅದು ತಡೆಯಲು ಮುಂದಾಗಲಿಲ್ಲ. ಇದರಿಂದಾಗಿ ಇಡೀ ಜಗತ್ತೇ ನರಳುತ್ತಿದೆ. ಒಂದು ವೇಳೆ ಚೀನ ಗೊತ್ತಿದ್ದೆ ಈ ಕೆಲಸ ಮಾಡಿದೆ ಎಂದಾಗಿದ್ದರೆ ಅದು ತಕ್ಕ ಪಾಠ ಅನುಭವಿಸಿಯೇ ತೀರುತ್ತದೆ ಎಂದು ಹೇಳಿದ್ದಾರೆ.

ಕೋವಿಡ್ 19 ವೈರಸ್‌ ವುಹಾನ್‌ನ ಪ್ರಯೋಗಾಲಯದಿಂದ ಸೋರಿಕೆಯಾಗಿದೆ ಎಂಬ ಸುದ್ದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಇದರಲ್ಲಿ ಸತ್ಯಾಂಶವಿದೆ ಎಂದು ಅನ್ನಿಸುತ್ತಿದೆ. ಆದರೆ ನನ್ನ ಬಳಿ ಯಾವುದೇ ಸಾಕ್ಷ್ಯವಿಲ್ಲ. ಆದರೂ ಈ ವೈರಸ್‌ ಬಾವಲಿಯಿಂದ ಬಂದಿದೆ ಎಂದು ಚೀನದವರು ಹೇಳುತ್ತಾರೆ. ವುಹಾನ್‌ನ ಮಾಂಸದ ಮಾರುಕಟ್ಟೆ ಬಳಿ ಬಾವಲಿಗಳು ಇರಲೇ ಇಲ್ಲ. ಅವು ಕಂಡುಬರುವುದು ಅಲ್ಲಿಂದ 40 ಮೈಲು ದೂರದಲ್ಲಿ. ಈ ವೈರಸ್‌ ಉಗಮದ ಬಗ್ಗೆ ಜಗತ್ತಿನ ನಾನಾ ಸಂಸ್ಥೆಗಳು ತನಿಖೆ ನಡೆಸುತ್ತಿವೆ. ಮುಂದೆ ನೋಡೋಣ ಎಂದು ಟ್ರಂಪ್‌ ಹೇಳಿದ್ದಾರೆ.

ಕೇವಲ ಶೇ.0.33 ಸಾವು?
ಚೀನವು ವುಹಾನ್‌ನಲ್ಲಿ ಸಾವಿನ ಸಂಖ್ಯೆಯನ್ನು ಹೆಚ್ಚಳ ಮಾಡಿದ ಬಗ್ಗೆ ಮಾತನಾಡಿದ ಟ್ರಂಪ್‌, ಕೋವಿಡ್ 19 ದಿಂದ ಚೀನದಲ್ಲಿ ಸಾವಿಗೀಡಾದವರ ಸಂಖ್ಯೆಯನ್ನು ಭಾರೀ ಕಡಿಮೆ ಎಂಬಂತೆ ತೋರಿಸಲಾಗಿದೆ. ಬೇರೆ ದೇಶಗಳಿಗೆ ಹೋಲಿಕೆ ಮಾಡಿದರೆ ಅಲ್ಲಿನ ಸಾವಿನ ಪ್ರಮಾಣ ಶೇ.0.33. ಇದನ್ನು ನಂಬಲು ಸಾಧ್ಯವೇ? ಚೀನವು ಸಾವಿನ ಸಂಖ್ಯೆಯನ್ನೂ ಮುಚ್ಚಿಟ್ಟಿದೆ ಎಂದೂ ಆರೋಪಿಸಿದ್ದಾರೆ.

ಬರ್ಮಿನ್‌ ಗ್ರೂಪ್‌ನ ಸವಾಲು
ಅಮೆರಿಕದ ಮಿಯಾಮಿಯಲ್ಲಿರುವ ಬರ್ಮಿನ್‌ ಲಾ ಗ್ರೂಪ್‌ ಚೀನದ ವಿರುದ್ಧ ದಾವೆ ಹೂಡಿದ್ದು, ಇಡೀ ವಿಶ್ವವು ಕೋವಿಡ್ 19ದಿಂದ ತತ್ತರಿಸಲು ಚೀನದ ಕಮ್ಯೂನಿಸ್ಟ್‌ ನಾಯಕರೇ ಕಾರಣ. ವುಹಾನ್‌ನಲ್ಲಿ ಈ ರೋಗ ಕಾಣಿಸಿಕೊಂಡಾಗಲೇ ಚೀನ ಉದ್ದೇಶಪೂರ್ವಕವಾಗಿ ಇದು ಹೊರ ಜಗತ್ತಿಗೆ ತಿಳಿಯದಂತೆ ತಡೆಹಿಡಿಯಿತು. ಎಚ್ಚರಿಕೆ ನೀಡಿದ್ದ ವೈದ್ಯರನ್ನು ನಿಶ್ಶಬ್ದಗೊಳಿಸಿತು. ಹಾಗಾಗಿ ಇಂದು ಆಗಿರುವ ಎಲ್ಲ ಅವಘಡಕ್ಕೂ ಚೀನದ ನಾಯಕರೇ ಕಾರಣ ಎಂದು ಆರೋಪಿಸಿದೆ.

Advertisement

ಇಸ್ರೇಲ್‌ನ ಎನ್‌ಜಿಒ ಒಂದು ಕೂಡ ಚೀನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಿದೆ.

ಪ್ರಮುಖ ರಾಷ್ಟ್ರಗಳ ಆಕ್ರೋಶ
ಈಗಾಗಲೇ ಬ್ರಿಟನ್‌, ಫ್ರಾನ್ಸ್‌ ಸಹಿತ ಹಲವಾರು ದೇಶಗಳು ಚೀನ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿವೆ. ಈ ನಡುವೆ ಜಪಾನ್‌ ಮತ್ತು ದಕ್ಷಿಣ ಕೊರಿಯಾದಲ್ಲಿನ ಹಲವಾರು ಕಂಪೆನಿಗಳು ಚೀನದಲ್ಲಿರುವ ತಮ್ಮ ಶಾಖೆಗಳನ್ನು ಭಾರತಕ್ಕೆ ಸ್ಥಳಾಂತರಿಸಲು ಮುಂದಾಗಿವೆ. ಈಗಾಗಲೇ ಭಾರತವು ಚೀನದ ಎಫ್ಡಿಐ ಅಡ್ಡದಾರಿಯನ್ನು ನಿರ್ಬಂಧಿಸಿದೆ. ಒಟ್ಟಾರೆಯಾಗಿ ಚೀನ ಜಾಗತಿಕವಾಗಿ ಏಕಾಂಗಿಯಾಗುವ ಸ್ಥಿತಿ ಎದುರಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next