Advertisement

ತಪ್ಪಿ ಹೋದ ಅವಕಾಶ ಮತ್ತೆ ಸಿಕ್ಕಿತು

11:35 AM Apr 30, 2018 | |

“ಕನ್ನಡದ ಕೋಟ್ಯಾಧಿಪತಿ’ಯನ್ನು ಪುನೀತ್‌ರಾಜಕುಮಾರ್‌ ನಡೆಸಿಕೊಡುತ್ತಿದ್ದ ವಿಷಯ ನಿಮಗೆ ಗೊತ್ತಿದೆ. ಆದರೆ, ಈ ಬಾರಿ ಪುನೀತ್‌ ನಡೆಸಿಕೊಡುತ್ತಿಲ್ಲ. ಕೋಟ್ಯಾಧಿಪತಿಗೆ ಈಗ ಹೊಸ ಸಾರಥಿ ಬಂದಿದ್ದಾರೆ. ಅದು ರಮೇಶ್‌ ಅರವಿಂದ್‌. ಹಲವು ಕಿರುತೆರೆ ಕಾರ್ಯಗಳನ್ನು ನಿರೂಪಿಸಿ, ಸೈ ಎನಿಸಿಕೊಂಡಿರುವ ರಮೇಶ್‌ ಅರವಿಂದ್‌, ಈಗ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿರುವ, “ಕನ್ನಡದ ಕೋಟ್ಯಾಧಿಪತಿ’ ನಿರೂಪಕ.

Advertisement

ಇಷ್ಟು ದಿನ “ವೀಕೆಂಡ್‌ ವಿತ್‌ ರಮೇಶ್‌’ ಕಾರ್ಯಕ್ರಮದಲ್ಲಿ “ಹೃದಯಕ್ಕೆ’ ಸಂಬಂಧಿಸಿದ ಪ್ರಶ್ನೆ ಕೇಳುತ್ತಿದ್ದ ರಮೇಶ್‌ ಇನ್ನು ಮುಂದೆ ಹೃದಯದ ಜೊತೆಗೆ ಮೆದುಳಿಗೆ ಕೆಲಸ ಕೊಡುವ ಪ್ರಶ್ನೆ ಕೇಳಲಿದ್ದಾರೆ.  “ಕನ್ನಡದ ಕೋಟ್ಯಾಧಿಪತಿ’ ನಿರೂಪಣೆಯ ಜವಾಬ್ದಾರಿಯನ್ನು ತುಂಬಾ ಖುಷಿಯಿಂದ ಒಪ್ಪಿಕೊಂಡಿದ್ದಾಗಿ ಹೇಳುತ್ತಾರೆ ರಮೇಶ್‌.  ಅದಕ್ಕೆ ಕಾರಣ ತುಂಬಾ ಇದು ರಮೇಶ್‌ ಅವರು ತುಂಬಾ ಇಷ್ಟಪಟ್ಟ ಕಾರ್ಯಕ್ರಮವಂತೆ.

ಹಾಗೆ ನೋಡಿದರೆ ರಮೇಶ್‌ ಅವರು ಈ ಕಾರ್ಯಕ್ರಮವನ್ನು ಆರಂಭದಲ್ಲೇ ನಿರೂಪಿಸಬೇಕಿತ್ತಂತೆ. “120 ದೇಶಗಳಲ್ಲಿ ಯಶಸ್ಸು ಕಂಡಿರುವ ಈ ಕಾರ್ಯಕ್ರಮ ನನಗೆ ತುಂಬಾ ಇಷ್ಟ. ಅದಕ್ಕೆ ತಕ್ಕಂತೆ ಆರಂಭದಲ್ಲಿ ಈ ಕಾರ್ಯಕ್ರಮ ಕನ್ನಡದಲ್ಲಿ ಆಗುತ್ತದೆ ಎಂದಾಗ ಅದರ ನಿರೂಪಣೆ ಮಾಡುವ ಜವಾಬ್ದಾರಿ ನನಗೆ ಬಂದಿತ್ತು. ಬಹುತೇಕ ಎಲ್ಲವೂ ಸಿದ್ಧವಾಗಿತ್ತು. ಇನ್ನೇನು ಶೋ ಶುರುವಾಗಬೇಕೆನ್ನುವಷ್ಟರಲ್ಲಿ ಆ ಕಾರ್ಯಕ್ರಮ ಮತ್ತೂಂದು ವಾಹಿನಿಗೆ ಶಿಫ್ಟ್ ಆಯಿತು.

ಆ ನಂತರ ಎಲ್ಲವೂ ಬದಲಾಯಿತು. ನಾನು ಈ ಕಾರ್ಯಕ್ರಮ ಮಾಡುತ್ತೇನೆ ಎಂದಾಗ ನನ್ನ ಹೆಂಡತಿ ಕೂಡಾ ಅಮಿತಾಭ್‌ ಬಚ್ಚನ್‌ ಮಾಡಿದ ಕಾರ್ಯಕ್ರಮವನ್ನು ನಾನು ಮಾಡುತ್ತೇನೆ ಎಂದು ಖುಷಿಯಾಗಿದ್ದಳು. ಆಗ ಕೂಡಿಬರದ ಅವಕಾಶ ಈಗ ಬಂದಿದೆ’ ಎನ್ನುತ್ತಾರೆ. ಆಗ ಕಾರ್ಯಕ್ರಮ ನಿರೂಪಕನಿಗೆ ಏನೆಲ್ಲಾ ಅರ್ಹತೆಗಳು ಇರಬೇಕು ಎಂದು ಬರೆದುಕೊಂಡಿದ್ದ ಡೈರಿ ಇವತ್ತಿಗೂ ಅವರ ಬಳಿ ಇದೆಯಂತೆ. 

“ಕನ್ನಡದ ಕೋಟ್ಯಾಧಿಪತಿ’ ಒಪ್ಪುತ್ತಿದ್ದಂತೆ ರಮೇಶ್‌, ಪುನೀತ್‌ರಾಜಕುಮಾರ್‌ಗೆ ಮೆಸೇಜ್‌ ಮಾಡಿ ತಿಳಿಸಿದರಂತೆ. ಪುನೀತ್‌ ಕೂಡಾ ಖುಷಿಯಿಂದ ಶುಭ ಹಾರೈಸಿದ್ದಾಗಿ ಹೇಳುತ್ತಾರೆ ರಮೇಶ್‌. ಇನ್ನು, ರಮೇಶ್‌ ಅವರಿಗೆ “ಕನ್ನಡದ ಕೋಟ್ಯಾಧಿಪತಿ’ಯ ಹಾಟ್‌ ಸೀಟ್‌ನ ಮೊದಲ ವ್ಯಕ್ತಿಯಾಗಿ ಪುನೀತ್‌ರಾಜಕುಮಾರ್‌ ಅವರನ್ನು ನೋಡುವ ಆಸೆ ಇದೆಯಂತೆ.

Advertisement

ಕಾರ್ಯಕ್ರಮದ ಬಗ್ಗೆ ಮಾತನಾಡುವ ರಮೇಶ್‌, “ಈ ಕಾರ್ಯಕ್ರಮ ಭರವಸೆಯ ಬಂಡಿಯಂತೆ. ಪ್ರಶ್ನೆಗಳೇ ಈ ಬಂಡಿಯನ್ನು ಮುಂದುವರೆಸುತ್ತವೆ. ಕನಸುಗಳನ್ನು ಸಾಕಾರಗೊಳಿಸಲು ಇದೊಂದು ಒಳ್ಳೆಯ ಅವಕಾಶ ‘ ಎನ್ನುತ್ತಾರೆ ಅವರು. ಅಂದಹಾಗೆ, “ಕನ್ನಡದ ಕೋಟ್ಯಾಧಿಪತಿ’ಯ ಪ್ರಕ್ರಿಯೆ ಮೇ 7ರಿಂದ ಆರಂಭವಾಗಲಿದೆ.

ವಾಹಿನಿ ಕೇಳುವ ಪ್ರಶ್ನೆಗಳಿಗೆ ಎಸ್‌ಎಂಎಸ್‌ ಅಥವಾ ಕರೆ ಮಾಡಿ ಉತ್ತರಿಸಬಹುದು. ಹತ್ತು ದಿನಗಳ ಕಾಲ ಕೇಳಲಾಗುವ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿದರೆ ಹಾಟ್‌ ಸೀಟ್‌ನಲ್ಲಿ ಕುಳಿತುಕೊಳ್ಳುವ ಅವಕಾಶ ಸ್ಪರ್ಧಿಗಳಿಗೆ ಸಿಗುತ್ತದೆ.  ಅಂದಹಾಗೆ, “ಕನ್ನಡದ ಕೋಟ್ಯಾಧಿಪತಿ’ ಪ್ರಸಾರ ದಿನಾಂಕ ಇನ್ನೂ ಅಂತಿಮವಾಗಿಲ್ಲ. ಜೂನ್‌ನಿಂದ ಪ್ರಸಾರ ಕಾಣುವ ಸಾಧ್ಯತೆ ಇದೆ. 

Advertisement

Udayavani is now on Telegram. Click here to join our channel and stay updated with the latest news.

Next