ಬೆಂಗಳೂರು: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕನ್ನಡ ಭಾಷೆ ಬಳಕೆ ಮಾಡಿದರೆ ಮಾತ್ರ ಕನ್ನಡ ಉಳಿಕೆ ಸಾಧ್ಯ ಎಂದು ಕವಿ ಹಾಗೂ ವಿಮರ್ಶಕ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.
ಕನ್ನಡಪರ ಹೋರಾಟಗಾರ ಕೆ.ರಾಜಕುಮಾರ್ ಅಭಿನಂದನಾ ಸಮಿತಿ ಭಾನುವಾರ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ಹಮ್ಮಿಕೊಂಡಿದ್ದ “ಕೆ.ರಾಜಕುಮಾರ್-60′ ಅಭಿನಂದನೆ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ ಜೀವಂತವಾಗಿರಬೇಕಾದರೆ ಮೊದಲು ಸರ್ಕಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಬಳಕೆ ಮಾಡಬೇಕು ಎಂದು ಹೇಳಿದರು.
ಕನ್ನಡ ಉಳಿಕೆ ಬೆಳಕೆ ವಿಚಾರದಲ್ಲಿ ಕವಿ, ಲೇಖಕರಂತೆ ಕನ್ನಡಪರ ಹೋರಾಟಗಾರರು ಮುಖ್ಯವಾಗುತ್ತಾರೆ. ಹೋರಾಟಗಾರರು ಭಾಷೆಯನ್ನು ಪೋಷಿಸಿ ಬೆಳೆಸಿದರೆ ಸಾಹಿತಿಗಳು ಭಾಷೆಯನ್ನು ಬಳಸಿ ಬೆಳಸುತ್ತಾರೆ. ಹೀಗಾಗಿ ಕನ್ನಡಪರ ಹೋರಾಟಗಾರರ ಸಾಧನೆಯನ್ನು ಮರೆಯಲು ಸಾಧ್ಯವಿಲ್ಲ. ಲೇಖಕರದ್ದು ಅಂತರಂಗದ ಸೇವೆಯಾಗಿದ್ದರೆ ಹೋರಾಟಗಾರರದ್ದು, ಬಹಿರಂಗ ಸೇವೆ ಎಂದು ತಿಳಿಸಿದರು.
ಕೆ.ರಾಜಕುಮಾರ್ ಅವರ ಕನ್ನಡ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು ಇವರ ಮನೆ ಮಾತು ತೆಲಗು ಆಗಿದ್ದರೂ ಕನ್ನಡ ಮನದ ಮಾತಾಗಿದೆ.ಹೀಗಾಗಿಯೇ ಕನ್ನಡಮ್ಮನ ಸೇವೆ ಮಾಡಿದ್ದಾರೆ ಎಂದು ಪ್ರಶಂಸಿಸಿದರು.
ಶಾಸಕ ರಾಮಲಿಂಗಾರೆಡ್ಡಿ ಮಾತನಾಡಿ,ರಾಜಕುಮಾರ್ ಅವರು ಸುಮಾರು ನಲ್ವತ್ತು ವರ್ಷಗಳಿಂದಲೂ ಕನ್ನಡಪರ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದಾರೆ.ಹೀಗಾಗಿ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಮುಂದಿನ ದಿನಗಳಲ್ಲಿ ಸರ್ಕಾರ ಇವರನ್ನು ರಾಜ್ಯೋತ್ಸವ ಪ್ರಶಸ್ತಿಗೆ ಪರಿಗಣಿಸಲಿ ಎಂದು ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ ಮಾತನಾಡಿ, ಕಳೆದ 40 ವರ್ಷಗಳಿಂದಲೂ ಕನ್ನಡ ಪರ ಚಳವಳಿಯಲ್ಲಿ ರಾಜಕುಮಾರ್ ತೊಡಗಿಸಿಕೊಂಡಿದ್ದ ಅವರ ಕನ್ನಡ ಸೇವೆ ಹೀಗೆ ಮುಂದುವರಿಯಲಿ ಎಂದು ಆಶಿಸಿದರು. ಶಾಸಕಿ ಸೌಮ್ಯಾರೆಡ್ಡಿ, ವಿಮರ್ಶಕ ಸ.ರಘುನಾಥ, ಸಿ.ಕೆ.ರಾಮೇಗೌಡ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.