Advertisement

ರಾಜ್ಯಭಾಷೆಯಾದರೆ ಮಾತ್ರ ಕನ್ನಡದ ಉಳಿವು : ಕಲ್ಕೂರ

07:30 AM Aug 06, 2017 | Harsha Rao |

ಉಡುಪಿ: ದೇಶದಲ್ಲಿ ಏಕರೂಪದ ಶಿಕ್ಷಣ ವ್ಯವಸ್ಥೆ ಜಾರಿ ಯಾಗಲಿ. ಕನ್ನಡವನ್ನು ರಾಜ್ಯಭಾಷೆಯಾಗಿ ಬೋಧಿಸುವ ನಿರ್ಣಯವನ್ನು ಸರಕಾರ ಮಾಡಲು ಮುಂದಾದರೆ ಮಾತ್ರ ಕನ್ನಡವನ್ನು ಉಳಿಸಲು ಸಾಧ್ಯ ಎಂದು ದ. ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಪ್ರದೀಪ್‌ ಕುಮಾರ ಕಲ್ಕೂರ ಹೇಳಿದರು. 

Advertisement

ಉಡುಪಿಯ ಬಳಕೆದಾರರ ವೇದಿಕೆ ವತಿಯಿಂದ ನಾರ್ತ್‌ ಶಾಲೆಯ ಆವರಣದಲ್ಲಿರುವ ಸಭಾಂಗಣದಲ್ಲಿ ಶನಿವಾರ ನಡೆದ”ಕನ್ನಡಮಾಧ್ಯಮ-ಗ್ರಾಹಕರ ಗೊಂದಲಕ್ಕೆಂದು ಮಂಗಲ’ ಎನ್ನುವ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

ಭಾಷೆಯಾಗಿ ಇಂಗ್ಲಿಷ್‌ಗೆ ಗೌರವವಿದೆ. ವ್ಯವಸ್ಥೆಯ ನ್ಯೂನತೆಯಿಂದ ಕನ್ನಡ ಭಾಷೆಗೆ ತೊಂದರೆಯಾಗುತ್ತಿದೆ. ಶಿಕ್ಷಣದ ವಾಣಿಜ್ಯೀಕರಣದಿಂದಾಗಿ ಕನ್ನಡವು ಮಾಧ್ಯಮವಾಗಿ ಉಳಿಯುತ್ತಿಲ್ಲ. ಹಿಂದೆ ಕನ್ನಡ – ಇಂಗ್ಲಿಷ್‌ ಎನ್ನುವ ಮಾಧ್ಯಮವಿರಲಿಲ್ಲ. ಆದರೆ ಈಗದು ವ್ಯಾಪಾಕವಾಗಿದ್ದು, ಗೊಂದಲವನ್ನು ಹುಟ್ಟುಹಾಕಿದೆ. ಕನ್ನಡವನ್ನು ರಾಜ್ಯ ಭಾಷೆಯಾಗಿ ಒಂದೇ ವ್ಯವಸ್ಥೆಯಡಿ, ಎಲ್ಲರಿಗೂ ಸಮಾನವಾದ ಶಿಕ್ಷಣವನ್ನು ನೀಡಿದಾಗ ಮಾತ್ರ ಮಾಧ್ಯಮಗಳ ಗೊಂದಲ ನಿವಾರಣೆಯಾಗಬಹುದು ಎಂದರು. 

ಜೇಸಿ ತರಬೇತುದಾರ ರಾಜೇಂದ್ರ ಭಟ್‌ ಮಾತನಾಡಿ ಸರಕಾರಕ್ಕಿರುವ ಇಚ್ಛಾಶಕ್ತಿ ಕೊರತೆ ಹಾಗೂ ಪ್ರತಿಷ್ಠೆಯ ಹಿಂದೆ ಹೋಗಬೇಕು ಎನ್ನುವ ಪೋಷಕರ ಮನಸ್ಥಿತಿಯಿಂದಾಗಿ ಇಂದು ಕನ್ನಡ ಭಾಷೆ ಬಡವಾಗಿದೆ. ದೇಶದ ಜಿಡಿಪಿಯಲ್ಲಿ ಶೇ. 5 ರಷ್ಟು ಶಿಕ್ಷಣಕ್ಕಾಗಿ ಮೀಸಲಿಡಬೇಕಿಂದಿದ್ದರೂ ಕೇವಲ ಶೇ. 2 ರಷ್ಟು ಹಣವನ್ನು ಮಾತ್ರ ನೀಡುತ್ತಿದ್ದಾರೆ. ಈಗಿನ ಪ್ರಾಥಮಿಕ ಶಿಕ್ಷಣ ವ್ಯವಸ್ಥೆಯನ್ನೇ ನಿರ್ಲಕ್ಷಿಸುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದರು. ಶಿಕ್ಷಣ ಇಲಾಖೆಯ ಬಿಇಒ ಅಶೋಕ್‌ ಕಾಮತ್‌ ಸಂವಾದದಲ್ಲಿ ನಡೆದ ನಿರ್ಣಯವನ್ನು ಮಂಡಿಸಿದರು. ವೇದಿಕೆಯ ಸಂಚಾಲಕ ದಾಮೋದರ ಐತಾಳ ಸ್ವಾಗತಿಸಿದರು. ವಿಶ್ವಸ್ತ  ಎಚ್‌. ಶಾಂತಾರಾಜ್‌ ಐತಾಳ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಕ್ಷ್ಮೀಬಾಯಿ ಕಾರ್ಯಕ್ರಮ ನಿರ್ವಹಿಸಿದರು. ಅಲ್ತಾಫ್ ಅಹಮ್ಮದ್‌ ವಂದಿಸಿದರು.

“ಕನ್ನಡ ಅನ್ನದ ಭಾಷೆಯಾಗಲಿ’
ಭಾಷಣ, ಘೋಷಣೆಗಳಿಂದ ಕನ್ನಡ ಭಾಷೆ ಉಳಿಯಲ್ಲ. ಯಾವಾಗ ಕನ್ನಡ ಅನ್ನದ ಭಾಷೆಯಾಗುವುದೋ ಆಗ ಭಾಷೆಯ ಉಳಿವು ಸಾಧ್ಯ. ಜಾಗತೀಕರಣದಿಂದ ಕನ್ನಡಕ್ಕೆ ಕುತ್ತು ಬಂದಿದೆ. 1 ರಿಂದ 10ರವರೆಗೆ ಕನ್ನಡ ಪ್ರಥಮ ಭಾಷೆಯಾಗಿರಲಿ, 1 ನೇ ತರಗತಿಯಿಂದಲೇ ಇಂಗ್ಲೀಷ್‌ ಸಂವಹನ ಭಾಷೆಯಾಗಿರಲಿ, 10ನೇ ತರಗತಿವರೆಗೆ ಕನ್ನಡದಲ್ಲಿ ಕಲಿತವರಿಗೆ ಶೇ. 50 ರಷ್ಟು ಸರಕಾರಿ ಕೆಲಸ, ಸಿಇಟಿಯಲ್ಲಿ ಕನಿಷ್ಠ ಶೆ. 25 ರಷ್ಟು ಮೀಸಲಾತಿ, 5 ನೇ ತರಗತಿಯಿಂದ ಗಣಿತ – ವಿಜ್ಞಾನ ಇಂಗ್ಲೀಷ್‌ನಲ್ಲಿ ಕಲಿಸುವಂತಾಗಲಿ, ಸರಕಾರಿ ಶಾಲೆಗಳಲ್ಲಿ ತರಗತಿಗೊಬ್ಬ ಶಿಕ್ಷಕರನ್ನು ನೇಮಿಸಲಿ, ಗ್ರಾಮಕ್ಕೊಂದು ಕನ್ನಡ ಶಾಲೆಗಳ ನಿರ್ಮಾಣವಾದರೆ ಮಾತ್ರ ಕನ್ನಡ ಭಾಷೆಯನ್ನು ಉಳಿಸಬಹುದು ಎಂದು ರಾಜೇಂದ್ರ ಭಟ್‌ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next