Advertisement

ಮತ್ತೆ ಬಾ ಎನ್ನುವುದಕ್ಕೆ ಒಂದೇ ಕಾರಣ

06:49 PM Nov 17, 2017 | |

ಯಮ ಧರ್ಮರಾಜ ಭೂಲೋಕಕ್ಕೆ ಹೋಗುವುದಕ್ಕೆ ವರ ಕೊಟ್ಟಾಗ, ಅಷ್ಟೆಲ್ಲಾ ಆಗಬಹುದು ಎಂದು ಅವನಿಗೆ ಗೊತ್ತಿರುವುದಿಲ್ಲ. ಏನೂ ಗೊತ್ತಿಲ್ಲದೆ ಆತ್ಮವಾಗಿ ತನ್ನ ಹೆಂಡತಿಗೆ ಮಾತ್ರ ಕಾಣಿಸಿಕೊಳ್ಳುತ್ತಾನೆ. ಕ್ರಮೇಣ ತನ್ನ ಮಗನ ಸಂಸಾರದಲ್ಲಿ ಬಿರುಕು ಬಿಟ್ಟಿರುವ ವಿಚಾರ ಗೊತ್ತಾಗಿ, ಅದನ್ನು ಸರಿ ಮಾಡುವುದಕ್ಕೆ ಪ್ರಯತ್ನಿಸುತ್ತಾನೆ. ಇನ್ನೇನು ಎಲ್ಲವೂ ಸರಿ ಹೋಗುತ್ತಿದೆ ಎನ್ನುವಷ್ಟರಲ್ಲಿ, ಅವನಿಗೆ ತಾನು ಮೂವತ್ತು ವರ್ಷದ ಹಿಂದೆ ಸತ್ತಿದ್ದು ಸಹಜವಾಗಲ್ಲ ಎಂದು ಗೊತ್ತಾಗುತ್ತದೆ.

Advertisement

ಕ್ರಮೇಣ ಅದೊಂದು ಕೊಲೆಯಾಗಿತ್ತು ಎನ್ನುವುದರ ಜೊತೆಗೆ, ತನ್ನ ಮಗ ಹಾಗೂ ಇಡೀ ಕುಟುಂಬದವರನ್ನೇ ಸಾಯಿಸುವುದಕ್ಕೆ ದೊಡ್ಡ ಪ್ಲಾನ್‌ ನಡೆಯುತ್ತಿದೆ ಎಂಬುದು ಅವನಿಗೆ ಮನವರಿಕೆಯಾಗುತ್ತದೆ. ಅಲ್ಲಿಯವರೆಗೂ ಜಾಲಿಯಾಗಿದ್ದ ಉಪೇಂದ್ರ ರಾಜು, ಕ್ರಮೇಣ ಸೀರಿಯಸ್‌ ಆಗುತ್ತಾನೆ. ತನ್ನ ಮನೆಯವರೆಲ್ಲರನ್ನೂ ಉಳಿಸಿಕೊಳ್ಳುವುದಕ್ಕೆ ಶತಾಯಗತಾಯ ಪ್ರಯತ್ನ ಮಾಡುತ್ತಾನೆ. ಆದರೆ, ಅವನಿಂದ ಅದು ಸಾಧ್ಯವಾ ಎಂಬ ಪ್ರಶ್ನೆ ಬೇಡ.

ಏನೇನೋ ಮಾಡುವ ಆತ್ಮಕ್ಕೆ ಅದು ಸಾಧ್ಯವಿಲ್ಲವಾ? ಹೇಗೆ ಸಾಧ್ಯವಾಗಿಸುತ್ತದೆ ಎನ್ನುವುದೇ “ಉಪೇಂದ್ರ ಮತ್ತೆ ಬಾ’. ತೆಲುಗಿನಲ್ಲಿ ಕಳೆದ ವರ್ಷ ಬಿಡುಗಡೆಯಾದ “ಸೊಗ್ಗಾಡೆ ಚಿನ್ನ ನಾಯ್ನ’ ಎಂಬ ಚಿತ್ರದ ಕನ್ನಡದ ರೀಮೇಕೇ ಈ “ಉಪೇಂದ್ರ ಮತ್ತೆ ಬಾ’. ಈ ತರಹದ ಕಥೆ ಮತ್ತು ಚಿತ್ರಗಳು ಹೊಸದೂ ಅಲ್ಲ, ವಿಶೇಷವೂ ಅಲ್ಲ. ಮತ್ಯಾವ ಕಾರಣಕ್ಕೆ ಈ ಚಿತ್ರ ನೋಡಬೇಕು ಎಂದು ಕೇಳಿದರೆ, ಉಪೇಂದ್ರ ಎಂಬ ಒಂದು ಕಾರಣ ಬಿಟ್ಟರೆ, ಇನ್ನೊಂದು ಕಾರಣ ಹೇಳುವುದು ಕಷ್ಟ.

ಹೌದು, ಈ ಚಿತ್ರವನ್ನ ಉಪೇಂದ್ರ ಅವರಿಗಾಗಿ ನೋಡಬೇಕು ಮತ್ತು ಬಹುಶಃ ಉಪೇಂದ್ರ ಅವರಿಲ್ಲದಿದ್ದರೆ, ಈ ಚಿತ್ರ ಕನ್ನಡಕ್ಕೆ ರೀಮೇಕ್‌ ಆಗುತ್ತಿರಲಿಲ್ಲವೇನೋ. ಆ ಮಟ್ಟಿಗೆ ಇದು ಉಪೇಂದ್ರ ಬ್ರಾಂಡ್‌ ಸಿನಿಮಾ. ಪ್ರಮುಖವಾಗಿ ಇಲ್ಲೊಂದು ವರ್ಣರಂಜಿತ ಪಾತ್ರವನ್ನು ಉಪೇಂದ್ರ ಬಹಳ ಸಲೀಸಾಗಿ ನಿರ್ವಹಿಸಿದ್ದಾರೆ. ಮಹಾನ್‌ ರಸಿಕನಾಗಿ, ತುಂಟನಾಗಿ, ಹೆಣ್ಮಕ್ಕಳ ಪಾಲಿನ ಮೋಸ್ಟ್‌ ವಾಂಟೆಡ್‌ ಆಗಿ ಅವರು ಫ‌ುಲ್‌ ಕಂಗೊಳಿಸಿದ್ದಾರೆ.

ಇಲ್ಲಿ ಅವರ ಮಾತು, ಮಾತನಾಡುವ ಶೈಲಿ, ಕೀಟಲೆ ನಗು ಎಲ್ಲವೂ ಅಂಥದ್ದೊಂದು ಫ್ಲರ್ಟ್‌ ಪಾತ್ರಕ್ಕೆ ಹೇಳಿ ಮಾಡಿಸಿದಂತಿದೆ. ಬರೀ ಒಂದೇ ಪಾತ್ರವಲ್ಲ, ಎರಡೆರೆಡು ಪಾತ್ರಗಳಲ್ಲೂ ಉಪೇಂದ್ರ ಮಿಂಚಿದ್ದಾರೆ. ಇನ್ನು ಯಾಕೆ ನೋಡಬಾರದು ಎಂಬುದಕ್ಕೆ ಹಲವು ಕಾರಣಗಳಿವೆ. ಪ್ರಮುಖವಾಗಿ ಉಪೇಂದ್ರರನ್ನೇ ಬಂಡವಾಳ ಮಾಡಿಕೊಂಡಿರುವುದರಿಂದ, ಅವರ ಚೇಷ್ಟೆಗಳಿಗೆ ಸಾಕಷ್ಟು ಸಮಯ ಮೀಸಲಾಗಿದೆಯೇ ಹೊರತು, ಕಥೆಯೇ ಮುಂದುವರೆಯುವುದಿಲ್ಲ.

Advertisement

ಚಿತ್ರದ ಆರಂಭದಲ್ಲೇ ಒಂದು ಒಳ್ಳೆಯ ಟ್ವಿಸ್ಟ್‌ನಿಂದ ಚಿತ್ರ ಶುರುವಾಗುತ್ತದೆ. ಮಗ-ಸೊಸೆ ಇಬ್ಬರೂ ಅಮೇರಿಕಾದಿಂದ ಹಳ್ಳಿಗೆ ಬರುತ್ತಾರೆ. ಯಾಕೆ ಎಂದು ಕೇಳಿದಾಗ, ಡೈವೋರ್ಸ್‌ ಕೊಡುವುದಕ್ಕೆ ಎಂಬ ಉತ್ತರ ಅವರಿಂದ ಬರುತ್ತದೆ. ಹಾಗಾಗಿ ಅವರಿಬ್ಬರನ್ನು ಸೇರಿಸುವ ಹೊಣೆಯೊಂದಿಗೆ ಕಥೆ ಶುರುವಾಗುತ್ತದೆ. ಹೀಗೆ ಗಂಭೀರವಾಗಿ ಶುರುವಾಗುವ ಚಿತ್ರ, ನಂತರ ನಿಧಾನವಾಗಿ, ಕ್ರಮೇಣ ಜಾಳುಜಾಳಾಗಿ, ಬೋರ್‌ ಹೊಡೆಸಿ, ಒಂದು ಹಂತದಲ್ಲಿ ಸಾಕು ಎನಿಸುತ್ತಿದ್ದಂತೆ ಚಿತ್ರ ಟೇಕಾಫ್ ಆಗುತ್ತದೆ.

ಇದಾಗುವಷ್ಟರಲ್ಲಿ ಎರಡು ಗಂಟೆ ಕಳೆದಿರುತ್ತದೆ. ಇನ್ನುಳಿದಿರುವುದು ಅರ್ಧೇ ಅರ್ಧ ಗಂಟೆ, ಈ ಅರ್ಧ ಗಂಟೆಯಲ್ಲಿ ಇಷ್ಟು ದೊಡ್ಡ ಕಥೆಗೆ ಹೇಗೆ ತಾರ್ಕಿಕವಾಗಿ ಅಂತ್ಯ ಕೊಡಬಹುದು ಎಂಬ ಕುತೂಹಲದಲ್ಲಿ ಕೂತರೆ, ಮಿಸ್ಸಿಂಗ್‌ ಕೊಂಡಿಗಳನ್ನು ಒಂದೊಂದೇ ಸೇರಿಸಿ ಸೇರಿಸಿ ಪದಬಂಧವನ್ನು ಪೂರ್ತಿ ಮಾಡುತ್ತಾರೆ ನಿರ್ದೇಶಕ ಲೋಕಿ. ಚಿತ್ರದ ಒಂದು ಸರ್‌ಪ್ರೈಸ್‌ ಎಂದರೆ ಪ್ರೇಮ. ಈ ಚಿತ್ರದಲ್ಲಿ ನೀವು ಹಳೆಯ ಪ್ರೇಮ ಅವರನ್ನು ಕಣ್ತುಂಬಿಕೊಳ್ಳಬಹುದು.

ಅವರು ಪದೇಪದೇ ಉಪೇಂದ್ರ ರಾಜು, ಉಪೇಂದ್ರ ರಾಜು ಎಂದು ಕೂಗುವುದನ್ನು ಕೇಳಿ ಸುಸ್ತಾದರೂ, ಪ್ರೇಮಗೆ ಇದು ಬಹಳ ಒಳ್ಳೆಯ ಕಂಬ್ಯಾಕ್‌ ಸಿನಿಮಾ ಎಂದರೆ ತಪ್ಪಿಲ್ಲ. ಪ್ರೇಮ ಬಿಟ್ಟರೆ ಶ್ರುತಿ ಹರಿಹರನ್‌ಗೂ ಒಂದೊಳ್ಳೆಯ ಪಾತ್ರವಿದೆ. ಮಿಕ್ಕಂತೆ ಅವಿನಾಶ್‌, ವಸಿಷ್ಠ, ಶೋಭರಾಜ್‌ ಎಲ್ಲರೂ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ. ಸಾಧು ಸ್ವಲ್ಪ ಹೊತ್ತು ನಗಿಸಿ ಹೋಗುತ್ತಾರೆ. ಮಿಕ್ಕಂತೆ ಈ ಚಿತ್ರವನ್ನು ಕಣ್ಸೆಳೆಯುವ ಹಾಗೆ ಕಟ್ಟಿಕೊಟ್ಟಿರುವುದು ಛಾಯಾಗ್ರಾಹಕ ಸ್ವಾಮಿ. ಶ್ರೀಧರ್‌ ಸಂಭ್ರಮ್‌ ಅವರ ಎರಡು ಹಾಡುಗಳು ಕೇಳುವಂತಿವೆ.

ಚಿತ್ರ: ಮತ್ತೆ ಬಾ ಉಪೇಂದ್ರ
ನಿರ್ಮಾಣ: ಶ್ರೀಕಾಂತ್‌ ಮತ್ತು ಶಶಿಕಾಂತ್‌
ನಿರ್ದೇಶನ: ಅರುಣ್‌ ಲೋಕನಾಥ್‌
ತಾರಾಗಣ: ಉಪೇಂದ್ರ, ಪ್ರೇಮ, ಶ್ರುತಿ ಹರಿಹರನ್‌, ಅವಿನಾಶ್‌, ವಸಿಷ್ಠ ಸಿಂಹ, ಸಾಧು ಕೋಕಿಲ ಮುಂತಾದವರು

* ಚೇತನ್‌ ನಾಡಿಗೇರ್‌

Advertisement

Udayavani is now on Telegram. Click here to join our channel and stay updated with the latest news.

Next