Advertisement

ಜಿಲ್ಲೆಯ ಏಕೈಕ ಮಕ್ಕಳ ಗ್ರಂಥಾಲಯ

02:49 PM Nov 08, 2019 | Suhan S |

ಹಳಿಯಾಳ: ವಿದ್ಯಾರ್ಥಿಗಳಿಗೆ ಹಾಗೂ ಹಿರಿಯರಿಗೆ ಸಾವಿರಾರು ಪುಸ್ತಕ, ಪತ್ರಿಕೆಗಳ ಮೂಲಕ ಜ್ಞಾನ ಧಾರೆ ಎರೆಯುತ್ತಿರುವ ಇಲ್ಲಿನ ಕೇಂದ್ರ ಗ್ರಂಥಾಲಯ ಜಿಲ್ಲೆಯಲ್ಲಿಯೇ ಏಕೈಕ ಮಕ್ಕಳ ಗ್ರಂಥಾಲಯ ಹೊಂದಿದ್ದು ಮಕ್ಕಳಿಗೂ ಜ್ಞಾನಧಾರೆ ಎರೆಯುವಲ್ಲಿ ಸೈ ಎನಿಸಿಕೊಂಡಿದೆ.

Advertisement

ವಿಭಿನ್ನ ಸಾಂಸ್ಕೃತೀಕ ಚಟುವಟಿಕೆ, ಆಧ್ಯಾತ್ಮಿಕತೆ ಕಾರ್ಯಕ್ರಮಗಳು ಜೊತೆಗೆ ಕ್ರೀಡೆ ಹಾಗೂ ಕೃಷಿ ಕ್ಷೇತ್ರದಲ್ಲಿ ಹೆಸರುವಾಸಿಯಾದ ಹಳಿಯಾಳದ ಗ್ರಂಥಾಲಯ ಸುದೀರ್ಘ‌ 150 ವರ್ಷ ಪೂರೈಸಿದೆ ಎಂಬುದು ಗಮನಾರ್ಹ. ಹಳಿಯಾಳ ಮಂಡಳ ಪಂಚಾಯತ ಪ್ರಾರಂಭ ವಾದಾಗಲೇ ಈ ಗ್ರಂಥಾಲಯ ಪ್ರಾರಂಭವಾಯಿತು. ಅಂದಿನ ಜಮಿನ್ದಾರರು, ಸಾಹುಕಾರ್‌ ಎಂದೆ ಕರೆಯಲಾಗುತ್ತಿದ್ದ ರಾವಬಹದ್ದೂರ್‌ ಗೋಪಾಲ ಗಿರಿ ಈ ಗ್ರಂಥಾಲಯಕ್ಕೆ ಕಟ್ಟಡ ಹಾಗೂ ಪುಸ್ತಕಗಳನ್ನು ದಾನ ಮಾಡಿದ್ದರಿಂದ ಶ್ರೀ ರಾವಬಹದ್ದೂರ್‌ ಗೋಪಾಲ ಗಿರಿ ಸಾರ್ವಜನೀಕ ಕೇಂದ್ರ ಗ್ರಂಥಾಲಯ ಎಂದು ಗೌರವಾರ್ಥವಾಗಿ ಅವರ ಹೆಸರಿಡಲಾಗಿದೆ.

1400 ಸದಸ್ಯರನ್ನು ಹೊಂದಿದೆ. ಸ್ಪರ್ಧಾತ್ಮಕ, ಕತೆ, ಕಾದಂಬರಿ, ನಾಟಕ, ಕವನ, ವಿದ್ಯಾಲಯಗಳ, ಪಠ್ಯೇತರ, ಆಧ್ಯಾತ್ಮಿಕ, ಜಾನಪದ, ಸಾಹಿತ್ಯ ಸೇರಿದಂತೆ ವಿವಿಧ ವಿಭಾಗದ 36 ಸಾವಿರಕ್ಕೂ ಅಧಿಕ ಪುಸ್ತಕಗಳನ್ನು ಹೊಂದಿದ್ದು ವಿವಿಧ ಭಾಷೆಯಲ್ಲಿ ಪುಸ್ತಕ ಹಾಗೂ ಪತ್ರಿಕೆಗಳು ಲಭ್ಯವಿದೆ. ಪ್ರತಿದಿನ ವಿವಿಧ ಭಾಷೆಯ 14 ದಿನಪತ್ರಿಕೆಗಳು ಹಾಗೂ ವಾರ, ಪಾಕ್ಷಿಕ, ಮಾಸಿಕ ಸೇರಿ 30-35 ಪತ್ರಿಕೆಗಳು ಬರುತ್ತವೆ. ಪುರಸಭೆಯವರು 2013-14ನೇ ಸಾಲಿನ

ರಾಜ್ಯ ಹಣಕಾಸು ಆಯೋಗದ ವಿಶೇಷ ಅನುದಾನದಡಿ 40 ಲಕ್ಷರೂ ವೆಚ್ಚದಲ್ಲಿ ಸಾರ್ವಜನಿಕ ಕೇಂದ್ರ ಗ್ರಂಥಾಲಯ ಕಟ್ಟಡ ಹಾಗೂ ಪುರಸಭೆ ಮತ್ತು ಕಾರವಾರ ಜಿಲ್ಲಾ ಕೇಂದ್ರ ಗ್ರಂಥಾಲಯದವರು 20 ಲಕ್ಷ ರೂ. ವೆಚ್ಚದಲ್ಲಿ ಜಿಲ್ಲಾ ಕೇಂದ್ರ ಮಕ್ಕಳ ಗ್ರಂಥಾಲಯ ಕಟ್ಟಡ ನೆಲ ಹಾಗೂ ಮೇಲ್ಮಹಡಿ ಹೊಂದಿ ವಿಸ್ತಾರ ಮತ್ತು ಸುಸಜ್ಜಿತವಾಗಿ ನಿರ್ಮಿಸಿ ಲೋಕಾರ್ಪಣೆ ಮಾಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಏಕೈಕ ಮಕ್ಕಳ ಗ್ರಂಥಾಲಯ ಇಲ್ಲಿದ್ದು, ಮಕ್ಕಳಿಗೆ ಆಟಿಕೆ, ಜ್ಞಾನ ನೀಡುವ ಪುಸ್ತಕಗಳು ಲಭ್ಯವಿದೆ. ಅಲ್ಲದೇ ಇನ್ನೊಂದು ಗ್ರಂಥಾಲಯದಲ್ಲಿ 4 ಕಂಪ್ಯೂಟರ್‌ಗಳನ್ನು ಹೊಂದಿದ್ದು ಜಿಲ್ಲೆಯಲ್ಲಿಯೇ ಗ್ರಂಥಾಲಯದಲ್ಲಿ ಕಂಪ್ಯೂಟರ್‌ಗಳನ್ನು ಹೊಂದಿರುವ, ಸುಸಜ್ಜಿತ ಕಟ್ಟಡ ಗ್ರಂಥಾಲಯ ಇದಾಗಿದೆ.

Advertisement

ಸಾಮಾಜಿಕ ಜಾಲತಾಣಗಳ ಭರಾಟೆ ಜೋರಾಗಿದ್ದರು ಓದುಗರ ಸಂಖ್ಯೆಯಲ್ಲಿ ಇಳಿಮುಖವಾಗಿಲ್ಲ. ಪ್ರತಿದಿನ ಸರಾಸರಿ ನೂರು ಜನ ಗ್ರಂಥಾಲಯಕ್ಕೆ ಭೇಟಿ ನೀಡುತ್ತಾರೆ. ಇನ್ನೂ ಹೆಚ್ಚಿನ ಪುಸ್ತಕಗಳು ಗ್ರಂಥಾಲಯಕ್ಕೆ ಸದ್ಯದಲ್ಲೆ ಬರಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. -ನಾಗಲಿಂಗ ಚಲವಾದಿ, ಸಹಾಯಕ ಗ್ರಂಥಾಲಯಾಧಿಕಾರಿ

 

ಯೋಗರಾಜ ಎಸ್‌.ಕೆ.

Advertisement

Udayavani is now on Telegram. Click here to join our channel and stay updated with the latest news.

Next