ರಾಯ್ಪುರ: ಛತ್ತೀಸ್ ಗಢದಲ್ಲಿ ಚುನಾವಣಾ ಕಣಕ್ಕಿಳಿದಿರುವ ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದ ಕಾಂಗ್ರೆಸ್ ಘಟಕದ ವಿರುದ್ಧ ರಣಕಹಳೆ ಮೊಳಗಿಸಿದ್ದಾರೆ. ‘ನಾನು ಯಾವುದಕ್ಕೂ ಹೆದರುವುದಿಲ್ಲ ಮತ್ತು ಭಾರತೀಯ ಜನತಾ ಪಕ್ಷವು ಭ್ರಷ್ಟ ಸರ್ಕಾರವನ್ನು ಬಿಡುವುದಿಲ್ಲ’ ಎಂದು ಹೇಳಿದ್ದಾರೆ.
ಛತ್ತೀಸ್ ಗಢದ ರಾಜಧಾನಿ ರಾಯ್ಪುರದಲ್ಲಿ ಸುಮಾರು 7,600 ಕೋಟಿ ರೂಪಾಯಿ ಮೌಲ್ಯದ ಎಂಟು ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆಯನ್ನು ಪ್ರಧಾನಿ ಮಾಡಿದರು.
ಪ್ರತಿಪಕ್ಷ ಕಾಂಗ್ರೆಸ್ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, “ಜೋ ಢರ್ ಜಾಯೆ ವೋ ಮೋದಿ ನಹೀ (ಭಯಪಡುವವರು ಮೋದಿ ಅಲ್ಲ) ಕಾಂಗ್ರೆಸ್ ಎಷ್ಟೇ ಪ್ರಯತ್ನಿಸಿದರೂ ಛತ್ತೀಸ್ ಗಢದ ಕಲ್ಯಾಣಕ್ಕಾಗಿ ನಾನು ಇಟ್ಟ ಹೆಜ್ಜೆಯಿಂದ ಹಿಂದೆ ಸರಿಯುವುದಿಲ್ಲ. ಛತ್ತೀಸ್ ಗಢದಲ್ಲಿ ಕಾಂಗ್ರೆಸ್ ಮಾಡಿದ್ದಕ್ಕಿಂತ ದುಪ್ಪಟ್ಟು ಹೂಡಿಕೆ ಮಾಡಿದ್ದೇವೆ. ಕಾಂಗ್ರೆಸ್ ಬಡವರ ಶತ್ರು” ಎಂದರು.
ಇದನ್ನೂ ಓದಿ:ಚಾರ್ಮಾಡಿ ಘಾಟಿಯಲ್ಲಿ ಸರಕಾರಿ ಬಸ್ಸುಗಳ ಮುಖಾಮುಖಿ: ಚಾಲಕರ ಕಾಲಿಗೆ ಗಂಭೀರ ಗಾಯ
ಭ್ರಷ್ಟಾಚಾರವು ಕಾಂಗ್ರೆಸ್ ನ ಅತಿದೊಡ್ಡ ಸಿದ್ಧಾಂತವಾಗಿದೆ ಎಂದು ಆರೋಪಿಸಿದ ಪ್ರಧಾನಿ ಮೋದಿ, ಅದಿಲ್ಲದೆ ಆ ಪಕ್ಷವು ಉಸಿರಾಡಲು ಸಾಧ್ಯವಿಲ್ಲ ಎಂದು ಹೇಳಿದರು. ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ಗ್ಯಾರಂಟಿಯಾದರೆ, ಭ್ರಷ್ಟಾಚಾರದ ವಿರುದ್ಧ ಕ್ರಮಕ್ಕೆ ನಾವು ಗ್ಯಾರಂಟಿ ಎಂದು ಮೋದಿ ಹೇಳಿದರು.
ರಾಜ್ಯವು ಕಾಂಗ್ರೆಸ್ ಪಕ್ಷದ ಎಟಿಎಂ ಆಗಿದೆ ಎಂದ ಅವರು, ಹಗರಣಗಳಿಂದ ತುಂಬಿರುವ ಕಾಂಗ್ರೆಸ್ ಸರ್ಕಾರವು ದುರಾಡಳಿತಕ್ಕೆ ಮಾದರಿಯಾಗಿದೆ. ಮುಂದಿನ ಚುನಾವಣೆಯಲ್ಲಿ ಈ ಸರ್ಕಾರವನ್ನು ಬೇರು ಸಹಿತ ಕಿತ್ತೊಗೆಯಲು ಜನರು ನಿರ್ಧರಿಸಿದ್ದಾರೆ ಎಂದು ಮೋದಿ ಹೇಳಿದರು.