ನೀವು ಈ ತನಕ ಕಷ್ಟಕಾಲದಲ್ಲಿ ನೇರ ಸಹಾಯ ಮಾಡಿದ ಘಟನೆಗಳ ಬಗ್ಗೆ ಓದಿದ್ದೀರ. ಆದರೆ, ತುಸು ಬೇರೆ ರೀತಿಯದ್ದು. ನೆರವು ಕೇಳಿದ ವ್ಯಕ್ತಿಯಿಂದಲೇ ನನ್ನ ಜೀವ ಉಳಿದದ್ದು. ಅದು ಹೇಗೆ ಎಂದು ಹೇಳ್ತೀನಿ ಕೇಳಿ. ಅಂದು ಸೋಲಾರ್ ವರ್ಕ್ ಮಾಡಲು ಬಿಡದಿಯ ಸೈಟ್‌ಗೆ ಹೋಗಬೇಕಾಗಿತ್ತು. ತಡವಾಗಿ ಎದ್ದಿದ್ದ ಪರಿಣಾಮ, ಅವಸರವಸರದಲ್ಲಿ ರೆಡಿಯಾಗಿ ತಿಂಡಿಯನ್ನೂ ತಿನ್ನದೇ ಕರ್ನಾಟಕ ವಿದ್ಯುತ್ ಕಾರ್ಖಾನೆಯ ಎದುರು ಬಸ್ಸಿಗಾಗಿ ಕಾಯುತ್ತಾ ನಿಂತಿದ್ದೆ. ಟೈಮ್ ಈಸ್ ಫಾಸ್ಟ್ ವೆನ್ ವೀ ಆರ್ ಲೇಟ್ ಎನ್ನುವಂತೆ ಸಮಯ ಜಾರುತ್ತಿದ್ದರೂ ನನ್ನ ದಾರಿಯ ಕಡೆಗಿನ ಬಸ್ಸುಗಳೇ ಬರುತ್ತಿರಲಿಲ್ಲ.
ಸ್ವಲ್ಪ ಹೊತ್ತಿನ ನಂತರ ನಾ ಹೋಗಬೇಕಾಗಿದ್ದ ಬಸ್ಸು ದೂರದಲ್ಲಿ ಬರುವುದು ಕಾಣಿಸಿತು. ಅಬ್ಟಾ! ಎಂದು ನಿಟ್ಟುಸಿರು ಬಿಡುತ್ತಾ ಬಸ್ ಹತ್ತಲು ಅಣಿಯಾಗಿವಷ್ಟರಲ್ಲಿ, ನನ್ನ ಬಳಿ ಬಂದ ಒಬ್ಬ 70 ವರ್ಷ ವಯಸ್ಸಿನ ಅಜ್ಜ “ದಯವಿಟ್ಟು, ಸ್ವಲ್ಪ ರಸ್ತೆ ದಾಟಿಸು ಮಗ’ ಎಂದ. ಮನಸ್ಸು ಕರಗಿತು. ಇಳಿವಯಸ್ಸಿನಲ್ಲಿ ಸ್ವಾವಲಂಬಿಯಂತೆ
ಕಡ್ಲೆಕಾಯಿ ಮಾರಿ ಬದುಕುತ್ತಿದ್ದ ಅಜ್ಜನ ಸ್ಥಿತಿ ಕರುಣಾಜನಕ ಎನಿಸಿತು. ಹಿಂದೆಮುಂದೆ ನೋಡದೇ ಆ ಅಜ್ಜನ ಕೈಹಿಡಿದು ರಸ್ತೆ ದಾಟಿಸಿದೆ. ಅವನ ಬಳಿ ನನಗೆ ಬೇಡದಿದ್ದರೂ 100 ರೂ. ಕಡ್ಲೆಕಾಯಿ ಖರೀದಿಸಿದೆ. “ದೇವ್ರು ನೂರು ಕಾಲ ನಿನ್ನ ಚೆನ್ನಾಗಿಟ್ಟಿರ್ಲಿಪ್ಪ’ ಎಂದು ಹರಸಿದ.
ಅಷ್ಟರಲ್ಲಿ ಆ ಬಸ್ಸು ಮಿಸ್ಸಾಗಿತ್ತು, ಹಿಂದೆ ಬಂದ ಇನ್ನೊಂದು ಬಸ್ಸಿಗೆ ಹತ್ತಿದೆ. ನಾಯಂಡಳ್ಳಿ ಸಮೀಸುತ್ತಿರುವಾಗ ಅಲ್ಲಿ ತುಂಬಾ ಜನ, ಆಂಬುಲೆನ್ಸ್‌ಗಳೆಲ್ಲ ನೆರೆದಿದ್ದವು. ಏನಾಯ್ತು, ಯಾವುದೋ ಆಕ್ಸಿಡೆಂಟ್ ಆಗಿರಬೇಕು ಬೇಕು ಅಂತ ನೋಡಿದರೆ ಎದೆ ಢವ ಢವ ಹೂಡೆದುಕೊಳ್ಳೋಕೆ ಶುರುವಾಯಿತು. ಏಕೆಂದರೆ, ನಾನು ಹತ್ತಬೇಕಿದ್ದು ಬಸ್ಸೇ ಅದು ಚಾಲಕನ ನಿರ್ಲಕ್ಷದಿಂದ ಆಯ ತಪ್ಪಿ ಅಪಘಾತಕ್ಕೆ ಈಡಾಗಿತ್ತು! ಒಂದಷ್ಟು ಜನಕ್ಕೆ ಗಾಯಗಳಾಗಿದ್ದವು. ಅಕಸ್ಮಾತ್ ನಾನೇದರೂ ಆ ಬಸ್ಸು ಹತ್ತಿದ್ದರೆ ಅಪಘಾತವಾಗಿ, ಗಾಯಗೊಂಡ ಪ್ರಯಾಣಿಕರಲ್ಲಿ ನಾನೂ ಒಬ್ಬನಾಗಿರುತ್ತಿದ್ದೆ. ಆ ಕಡ್ಲೆಕಾಯಿ ಮಾರುವ ಅಜ್ಜ ನನ್ನ ನೆರವು ಕೇಳದೆ ಇದ್ದಿದ್ದರೆ ನನ್ನ ಗತಿ ಏನಾಗುತ್ತಿತ್ತು? ಯೋಚಿಸಿ ಭಯವಾಯಿತು. ಆಗ ಆತ ಸಹಾಯ ಕೇಳಲು ಬಂದ ಅಜ್ಜನಲ್ಲ, ದೇವರೇ ಆ ರೂಪದಲ್ಲಿ ಬಂದು ನನ್ನ ಕಾಪಾಡಿದ್ದ ಎಂದೆನಿಸಿತು. ಮೂರು ನಿಮಿಷ ನೆರವು ಪಡೆದು ನನ್ನ ಬದುಕನ್ನೇ ಉಳಿಸಿದ ಅವರನ್ನು ನನ್ನ ಜೀವ ಇರುವವರೆಗೆ ಮರೆಯಲಾಗದು.