Advertisement

ಒಲಿಂಪಿಕ್ಸ್‌ ನನಗೆ ಮುಖ್ಯ: ಅನ್ನು

10:13 PM May 02, 2020 | Sriram |

ಹೊಸದಿಲ್ಲಿ: ಲಾಕ್‌ಡೌನ್‌ ಮುಗಿದ ಬಳಿಕ ಮನೆಗೆ ಮರಳುವ ಯೋಜನೆ ಇಲ್ಲ, ನನ್ನ ಗುರಿ ಏನಿದ್ದರೂ ಟೋಕಿಯೊ ಒಲಿಂಪಿಕ್ಸ್‌ ಎಂಬುದಾಗಿ ಭರವಸೆಯ ಜಾವೆಲಿನ್‌ ಎಸೆತಗಾರ್ತಿ ಅನ್ನು ರಾಣಿ ಹೇಳಿದ್ದಾರೆ.

Advertisement

ಸದ್ಯ ಅನ್ನು ರಾಣಿ ಇತರ ಕ್ರೀಡಾಪಟುಗಳೊಂದಿಗೆ ಪಟಿಯಾಲದ “ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್ ಸ್ಪೋರ್ಟ್ಸ್’ ಕ್ಯಾಂಪ್‌ನಲ್ಲಿದ್ದಾರೆ. ಆದರೆ ಲಾಕ್‌ಡೌನ್‌ ಕಾರಣ ಇಲ್ಲೀಗ ಅಭ್ಯಾಸ ನಡೆಸಲು ಸಾಧ್ಯವಾಗುತ್ತಿಲ್ಲ ಎಂಬುದು ಅನ್ನು ರಾಣಿ ಅಳಲು. ಅವರು ಇಲ್ಲೇ 14 ದಿನಗಳ ಕ್ವಾರಂಟೈನ್‌ ಅವಧಿಯನ್ನು ಕಳೆದಿದ್ದರು.

ಲಾಕ್‌ಡೌನ್‌ಗೂ ಮೊದಲು ಅನ್ನು ರಾಣಿ ದಕ್ಷಿಣ ಆಫ್ರಿಕಾದ ಪೊಚೆಫ್ಸೂಮ್‌ನಲ್ಲಿ ಅಭ್ಯಾಸ ನಡೆಸುತ್ತಿದ್ದರು. ಲಾಕ್‌ಡೌನ್‌ ಘೋಷಣೆ ಆಗುತ್ತಿದ್ದಂತೆಯೇ ಭಾರತಕ್ಕೆ ಮರಳಿ ಕ್ವಾರಂಟೈನ್‌ಗೆ ಒಳಗಾದರು.

ಅನ್ನು ದಿನಚರಿ ಹೀಗಿದೆ…
“ಅಭ್ಯಾಸ ಇಲ್ಲದ ಕಾರಣ ಹಾಸ್ಟೆಲ್‌ನಲ್ಲಿ ಕಾಲ ಕಳೆಯುವುದು ಬಹಳ ಕಷ್ಟವಾಗುತ್ತಿದೆ. ಆದರೆ ಮಾನಸಿಕವಾಗಿ ಗಟ್ಟಿಯಾಗಿರುವುದು ಬಹಳ ಮುಖ್ಯ. ಇದಕ್ಕಾಗಿ ನಾನು ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದುತ್ತೇನೆ. ಕ್ರಿಸ್ಟಿಯಾನೊ ರೊನಾಲ್ಡೊ, ಮೈಕಲ್‌ ಪೆಲ್ಫ್ ಮೊದಲಾದ ಖ್ಯಾತ ಕ್ರೀಡಾಪಟುಗಳ ವೀಡಿಯೋ ನೋಡುತ್ತೇನೆ. ಇವರಿಂದ ಕಲಿಯುವುದು ಬಹಳಷ್ಟಿದೆ. ಜತೆಗೆ ಬ್ಯಾಡ್ಮಿಂಟನ್‌ ಆಡುವುದು, ಜಾಗಿಂಗ್‌ ನಡೆಸುವುದೂ ಉಂಟು. ಜತೆಗೆ ಧ್ಯಾನ, ಯೋಗ ಮಾಡುತ್ತೇನೆ’ ಎಂದು ಅನ್ನು ರಾಣಿ ತಮ್ಮ ದಿನಚರಿ ಬಗ್ಗೆ ಹೇಳಿದರು.

“ಲಾಕ್‌ಡೌನ್‌ ಮುಗಿದ ಬಳಿಕ ಮನೆಗೆ ಹೋಗುವ ಯೋಜನೆ ಇಲ್ಲ. ನನ್ನ ಗುರಿ ಟೋಕಿಯೊ ಒಲಿಂಪಿಕ್ಸ್‌. ಇದರತ್ತ ಹೆಚ್ಚಿನ ಗಮನ ಹರಿಸಬೇಕಿದೆ. ನನ್ನ ಕೋಚ್‌ ಕೂಡ ಇದೇ ಸಲಹೆ ನೀಡಿದ್ದಾರೆ’ ಎಂದರು.

Advertisement

ಕಳೆದ ವರ್ಷದ ಐಎಎಎಫ್ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಅನ್ನು ರಾಣಿ ತಮ್ಮದೇ ರಾಷ್ಟ್ರೀಯ ದಾಖಲೆ ಮುರಿದಿದ್ದರು. ಒಲಿಂಪಿಕ್ಸ್‌ ಪಂದ್ಯಾವಳಿಯಲ್ಲಿ ಅವರು ಭಾರತದ ಪದಕದ ಭರವಸೆಯಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next