Advertisement

ಹಳೆಯ ಕತೆ ಹೊಸ ಬಗೆಯಲ್ಲಿ !

05:40 PM Aug 03, 2019 | mahesh |

ಒಂದಾನೊಂದು ಕಾಲದಲ್ಲಿ ಅಕ್ಕಪಕ್ಕದಲ್ಲಿ ವಾಸಿಸುತ್ತಿದ್ದ ಆಮೆ ಮತ್ತು ಮೊಲದ ಮಧ್ಯೆ ಯಾರು ಅತ್ಯಂತ ವೇಗವಾಗಿ ಓಡುತ್ತಾರೆ ಎನ್ನುವ ವಿಚಾರದ ಕುರಿತಾಗಿ ಚರ್ಚೆ ಪ್ರಾರಂಭವಾಯಿತು. ನಿರ್ದಿಷ್ಟವಾದ ಓಟದ ಪಂದ್ಯವನ್ನು ಏರ್ಪಡಿಸಿ ಅದರ ಮೂಲಕ ಯಾರು ಅತ್ಯಂತ ವೇಗಿಗಳು ಎಂದು ತೀರ್ಮಾನಿಸಿಕೊಳ್ಳೋಣ ಎಂದು ನಿರ್ಧರಿಸುತ್ತಾರೆ. ಒಂದು ರಸ್ತೆಯನ್ನು ಆಯ್ಕೆ ಮಾಡಿಕೊಂಡು ಸಿದ್ಧತೆಯನ್ನು ಮಾಡಿಕೊಳ್ಳುತ್ತಾರೆ. ಪಂದ್ಯ ಪ್ರಾರಂಭವಾಗುತ್ತಿದ್ದಂತೆಯೇ ಮಿಂಚಿನ ವೇಗದಲ್ಲಿ ಮೊಲವು ಓಡಲಾರಂಭಿಸುತ್ತದೆ. ವೇಗವಾಗಿ ಓಡುತ್ತಿದ್ದ ಮೊಲವು ತಿರುಗಿ ನೋಡಿದಾಗ ಆಮೆಯು ಕಿ. ಮೀ. ಗಟ್ಟಲೆ ಹಿಂದುಳಿದಿರುವುದನ್ನು ಗಮನಿಸಿ, ತಾನು ಸ್ವಲ್ಪ ಮರದಡಿಯಲ್ಲಿ ವಿರಮಿಸಿ ಮತ್ತೆ ಓಟವನ್ನು ಮುಂದುವರೆಸುವ ನಿರ್ಧಾರ ಮಾಡುತ್ತದೆ. ವಿಶ್ರಾಂತಿಯನ್ನು ಪಡೆಯಲು ಮರದಡಿಯಲ್ಲಿ ಕುಳಿತ ಮೊಲವು ತಂಪಾದ ಗಾಳಿಗೆ ಅಲ್ಲೇ ದೀರ್ಘ‌ ನಿದ್ರೆಗೆ ಜಾರಿ ಬಿಡುತ್ತದೆ. ನಿಧಾನವಾಗಿ ಕುಪ್ಪಳಿಸುತ್ತ ಕುಪ್ಪಳಿಸುತ್ತ ಸಾಗಿ ಬಂದ ಆಮೆಯು ಮೊಲವನ್ನು ದಾಟಿ ತನ್ನ ಗುರಿಯನ್ನು ತಲುಪಿ ಅನಭಿಷಿಕ್ತ ಚಾಂಪಿಯನ್‌ ಆಗಿ ಗೆದ್ದು ಬೀಗುತ್ತದೆ.
.
ಈಗಾಗಲೇ ಆಮೆಯೊಂದಿಗಿನ ಪಂದ್ಯವನ್ನು ಸೋತ ಮೊಲವು ತನ್ನ ಸೋಲಿಗೆ ಕಾರಣವೇನೆಂದು ದೀರ್ಘ‌ಚಿಂತನೆಯನ್ನು ಮಾಡುತ್ತದೆ. ತನ್ನ ಶಕ್ತಿಯ ಮೇಲಿದ್ದ ಅತಿಯಾದ ಆತ್ಮವಿಶ್ವಾಸ, ಆಮೆಯ ಮೇಲಿನ ನಿರ್ಲಕ್ಷ್ಯ ಭಾವನೆ ಮತ್ತು ಔದಾ ಸೀನ್ಯ ತನ್ನ ಸೋಲಿಗೆ ಕಾರಣವೆಂಬ ಉತ್ತರವನ್ನು ಕಂಡುಕೊಳ್ಳುತ್ತದೆ. ಆಮೆಯನ್ನು ಮತ್ತೂಂದು ಓಟದ ಪಂದ್ಯಕ್ಕೆ ಆಹ್ವಾನಿಸುತ್ತದೆ.

Advertisement

ಹಿಂದಿನ ಸೋಲಿನಿಂದ ಪಾಠ ಕಲಿತ ಮೊಲವು ಈ ಬಾರಿ ಪಂದ್ಯ ಪ್ರಾರಂಭವಾಗುತ್ತಿದ್ದಂತೆ ಸತತ ವೇಗದಿಂದ ನಿರಂತರವಾಗಿ ಓಡಿ ಗುರಿಯನ್ನು ತಲುಪಿ ವಿಜಯವನ್ನು ಸಾಧಿಸುತ್ತದೆ. ಆಮೆಯನ್ನು ಹಲವಾರು ಕಿ. ಮೀ. ಗಳ ಅಂತರದಿಂದ ಸೋಲಿಸುತ್ತದೆ.
.
ಈ ಬಾರಿ ಆಳವಾಗಿ ಯೋಚಿಸಿದ ಆಮೆ ಸ್ವಲ್ಪ ಜಾಣ ನಡೆಯನ್ನು ತೋರಿ ಪ್ರತ್ಯೇಕವಾದ ಹಾಗೂ ವಿಭಿನ್ನವಾದ ರಸ್ತೆಯಲ್ಲಿ ಓಟದ ಪಂದ್ಯವನ್ನು ಆಯೋಜಿಸಿ ಮೊಲವನ್ನು ಮತ್ತೆ ಓಟದ ಪಂದ್ಯಕ್ಕೆ ಕರೆಯುತ್ತದೆ. ತನ್ನ ಮಿಂಚಿನ ಓಟದ ಹಾಗೂ ತೋಳ್ಬಲದ ಮೇಲೆ ಅತಿಯಾದ ನಂಬಿಕೆಯನ್ನು ಹೊಂದಿದ್ದ ಮೊಲವು ಹಿಂದೆ ಮುಂದೆ ಯೋಚಿಸದೆ ಪಂದ್ಯಕ್ಕೆ ಒಪ್ಪಿಕೊಳ್ಳುತ್ತದೆ.

ಮೂರನೆಯ ಪಂದ್ಯ ಪ್ರಾರಂಭವಾಗುತ್ತಿದ್ದಂತೆಯೇ ಆಮೆ ಮತ್ತು ಮೊಲ ಎರಡೂ ತಮ್ಮ ಸ್ವ-ಸಾಮರ್ಥ್ಯವನ್ನು ಸರಿಯಾಗಿ ಬಳಸಿಕೊಂಡು ಆತ್ಮವಿಶ್ವಾಸದಿಂದ ಓಡಲು ಪ್ರಾರಂಭಿಸುತ್ತವೆ. ಅತ್ಯಂತ ವೇಗವಾಗಿ ಓಡಿದ ಮೊಲವು ಹೊಸತಾದ ಮಾರ್ಗ ದ ಅರಿವಿಲ್ಲದೆ ರಸ್ತೆಗೆ ಅಡ್ಡಲಾಗಿದ್ದ ನದಿಯ ದಡದವರೆಗೂ ಓಡಿ ನದಿಯ ದಡದಲ್ಲಿ ನಿಂತು ಪೆಚ್ಚು ಮೋರೆ ಹಾಕುತ್ತ ಕುಳಿತುಕೊಳ್ಳುತ್ತದೆ. ಪಂದ್ಯವನ್ನು ಗೆಲ್ಲಬೇಕಾದರೆ ನದಿಯ ಇನ್ನೊಂದು ದಡದಿಂದ ದೂರದಲ್ಲಿದ್ದ ವಿಜಯದ ಗೆರೆಯನ್ನು ತಲುಪಬೇಕಿತ್ತು. ನದಿಯಲ್ಲಿ ಈಜಲು ಬಾರದ ಮೊಲವು ಮುಂದೇನು ಮಾಡುವುದೆಂದು ಚಿಂತಿಸುತ್ತ ಕುಳಿತಿರುತ್ತದೆ. ನಿಧಾನವಾಗಿ ಕುಪ್ಪಳಿಸಿಕೊಂಡು ಬಂದ ಆಮೆಯು ನದಿಗೆ ಜಿಗಿದು ನೀರಲ್ಲಿ ಈಜುತ್ತ ಸಾಗಿ ನದಿಯ ಇನ್ನೊಂದು ದಡದಲ್ಲಿದ್ದ ವಿಜಯದ ಗೆರೆಯನ್ನು ತಲುಪುತ್ತದೆ. ಈ ಬಾರಿ ಪಂದ್ಯವನ್ನು ಮತ್ತೆ ಗೆಲ್ಲುವ ಸರದಿ ಆಮೆಯದ್ದಾಗಿತ್ತು.
.
ಇಷ್ಟರವರೆಗೂ ಪ್ರತ್ಯೇಕವಾಗಿ ಪಂದ್ಯಗಳಲ್ಲಿ ಸೆಣಸುತ್ತಿದ್ದ ಆಮೆ ಮತ್ತು ಮೊಲಗಳು ಈ ಬಾರಿ ಗೆಳೆಯರಾಗಿ ಪಂದ್ಯದಲ್ಲಿ ಭಾಗವಹಿಸಲು ನಿರ್ಧರಿಸುತ್ತವೆ.

ಪಂದ್ಯವು ಪ್ರಾರಂಭಗೊಳ್ಳುತ್ತಿದ್ದಂತೆ ಮೊದಲಿಗೆ ಮೊಲವು ಆಮೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಮಿಂಚಿನ ವೇಗದಲ್ಲಿ ಓಡುತ್ತ ನದಿ ದಡದಲ್ಲಿ ಬಂದು ನಿಲ್ಲುತ್ತದೆ. ಮೊಲದ ಬೆನ್ನಿನಿಂದ ಕೆಳಗಿಳಿದ ಆಮೆಯು ಮೊಲವನ್ನು ತನ್ನ ಬೆನ್ನ ಮೇಲೆ ಕೂರಿಸಿಕೊಂಡು ನದಿಯಲ್ಲಿ ಈಜುತ್ತ ನದಿಯ ಇನ್ನೊಂದು ದಡವನ್ನು ತಲುಪುತ್ತದೆ. ನಂತರ ಆಮೆಯ ಬೆನ್ನಿನಿಂದ ಕೆಳಗಿಳಿದ ಮೊಲವು ಮತ್ತೆ ಆಮೆಯನ್ನು ತನ್ನ ಬೆನ್ನ ಮೇಲೆ ಹೊತ್ತುಕೊಂಡು ವೇಗವಾಗಿ ಓಡುತ್ತ ವಿಜಯದ ಗುರಿಯನ್ನು ತಲುಪುತ್ತದೆ.
.
ಇವತ್ತಿನ “ವ್ಯವಹಾರ ಲೋಕ’ ಈ ಕತೆಯನ್ನು ಅವಶ್ಯ ಗಮನಿಸಿ ಪಾಠ ಕಲಿತುಕೊಳ್ಳಬೇಕಾಗಿದೆ.

ಸಂತೋಷ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next