Advertisement
ಹೊಳೆದಂಡೆಗೂ, ಹಳ್ಳಿ ಬದುಕಿಗೂ ಅನ್ಯೋನ್ಯ ಸಂಬಂಧವಿದೆ. ಬೇಸಿಗೆಯ ರಜಾ ದಿನಗಳಲ್ಲಿ ಮಲೆನಾಡಿನ ಮಕ್ಕಳೆಲ್ಲ ಜಲಚರ ಜೀವಿಗಳು. ನೀರಿನಾಟದ ಖುಷಿಯ ಕ್ಷಣಗಳಿಗೆ ಬಾಲ್ಯ ಮೀಸಲು. ಕುಂಟುನೇರಳೆ ಎಲೆಯ “ಪೀಪಿ’ ಊದುತ್ತ ಗದ್ದೆಯ ಬದುವಿನಲ್ಲಿ ಹತ್ತಾರು ಮಕ್ಕಳು ಓಡುತ್ತ ಸಾಗಿದರೆ ಪಯಣ ಹಳ್ಳಕ್ಕೆ ನಿಲ್ಲುತ್ತಿತ್ತು. ಮಾವಿನ ಎಲೆಯಲ್ಲಿ ಹಲ್ಲು ಉಜ್ಜುವುದು, ಸೀಗೆಯಲ್ಲಿ ಮೈ ತಿಕ್ಕಿಕೊಳ್ಳುತ್ತ, ಈಜುತ್ತ ಮೈ ಮರೆಯುವುದು ಕಾಲಯೋಗ. ಹುಳಿಮಾವಿನಕಾಯಿ, ಹೊಳೆದಾಸವಾಳದ ಹಣ್ಣು, ಮುರುಗಲು ಹಣ್ಣು, ಸಂಪಿಗೆ ಹಣ್ಣು, ಸಳ್ಳೆ ಹಣ್ಣು, ಕವಳಿ ಹಣ್ಣು ತಿನ್ನುತ್ತ ನಡೆಯುವ ನಿಸರ್ಗ ಕಲಿಕೆಗೆ ಹಳ್ಳದ ನೀರು ಮುಖ್ಯ ಆಧಾರ.
Related Articles
Advertisement
ವಾಟೆ ಗಳದ ಕೊಳಲು ತಯಾರಿಸಿ ಹೊಳೆದಂಡೆಯ ಕಲ್ಲಿನಲ್ಲಿ ಊದುತ್ತ ಕುಳಿತರೆ ಸ್ವರ್ಗ ಸರಿಯಾಗಿ ಮೂರೇ ಗೇಣು. ಕರಾವಳಿಯ ಮಕ್ಕಳು ಈಜಿನ ವಿಚಾರದಲ್ಲಿ ಇನ್ನೂ ನಿಸ್ಸೀಮರು. ಅವರು ಆಳ ನದಿ ನೀರಿನ ಭಯ ಮರೆಯಬೇಕು. ದೋಣಿ ನಡೆಸಲು ಕಲಿಯಬೇಕು. ನೀರಿಗೆ ಹೆದರುವವರು ಊರಲ್ಲಿ ಬದುಕಲು ಸಾಧ್ಯವಿಲ್ಲ. ಉತ್ತರ ಕನ್ನಡದ ಮೊರೆ ಊರಿಗೆ 16 ವರ್ಷಗಳ ಹಿಂದೆ ಹೋಗಿದ್ದೆ. ಸುಮಾರು 300 ಅಡಿ ವಿಸ್ತಾರಕ್ಕೆ ಹರಿಯುವ ಅಘನಾಶಿನಿ ನದಿಯನ್ನು ಆಚೀಚೆ ಓಲಾಡುವ ಪಾತಿ ದೋಣಿಯಲ್ಲಿ ದಾಟಬೇಕಿತ್ತು. ನದಿ ದಂಡೆಯ ಸನಿಹದಲ್ಲಿ ಯಾರ ವಸತಿಯೂ ಇಲ್ಲ.
ನದಿ ದಾಟುವ ಅನುಕೂಲಕ್ಕೆ ಒಂದು ದೋಣಿಯೇನೋ ಇತ್ತು. ಆದರೆ ಊರಿನ ಜನರೆಲ್ಲ ದೋಣಿ ನಡೆಸುವ ಪರಿಣಿತರಾದ್ದರಿಂದ ಆ ದೋಣಿ ದಾಟಿದವರ ಸಂಗಡವೇ ಒಂದೊಂದು ದಡ ಸೇರಿ ನಿಲ್ಲುತ್ತಿತ್ತು. ಈಚೆ ದಡದಲ್ಲಿದ್ದವರು ಆಚೆ ದಡದ ದೋಣಿ ಪಡೆಯುವುದು ಸುಲಭವಲ್ಲ. ಕಿಲೋ ಮೀಟರ್ ದೂರದ ಮನೆಯ ಯಾರಾದರೂ ಬಂದು ದೋಣಿ ತರಬೇಕು. ಅಲ್ಲಿನ ರಸ್ತೆಯಂಚಿನ ಬೆಳ್ಳಣ್ಣನ ಅಂಗಡಿಯಲ್ಲಿ ಯಾವತ್ತೂ ಗರ್‍ನಾಲ್(ಪಟಾಕಿ) ಸಿಗುತ್ತಿತ್ತು. ಹೊಳೆ ದಂಡೆಗೆ ಹೋಗಿ ಒಂದು ಗರ್‍ನಾಲ್ ಸಿಡಿಸಿದರೆ ಸಪ್ಪಳ ಮರೆಹಳ್ಳಿಗೆ ಕೇಳುತ್ತಿತ್ತು.
ಆ ಸಪ್ಪಳ ಕೇಳಿದವರು ಹೊಳೆ ದಂಡೆಯಲ್ಲಿ ಯಾರೋ ದೋಣಿಗಾಗಿ ಕಾಯುತ್ತಿದ್ದಾರೆಂದು ತಿಳಿದು ದೋಣಿ ದಡಕ್ಕೆ ತಂದು ನೆರವಾಗುತ್ತಿದ್ದರು. ಶಾಲೆಗೆ ಹೋಗುವ ಮಕ್ಕಳು, ಮಹಿಳೆಯರೆಲ್ಲ ಅಲ್ಲಿ ದೋಣಿ ನಡೆಸುವ ಪರಿಣಿತರಾಗಿದ್ದರು. ಈ ಊರಿನ ಶಾಲೆಗೆ ಒಮ್ಮೆ ಹೊಸ ಮೇಷ್ಟ್ರು ಬಂದರು. ಅವರು ಯಾವತ್ತೂ ನದಿ ಕಂಡವರಲ್ಲ. ನೀರೆಂದರೆ ಭಯ. ಶಾಲೆ ಮುಗಿಸಿ ಮನೆಗೆ ಹೊರಟರೆ ದೋಣಿ ನಡೆಸಲಾಗದ ಮೇಷ್ಟ್ರು ಒಮ್ಮೊಮ್ಮೆ ರಾತ್ರಿವರೆಗೂ ದಂಡೆಯಲ್ಲಿ ಕಾಯುತ್ತ ಕುಳಿತ ಪ್ರಸಂಗಗಳಿದ್ದವು. ಕಟ್ಟಕಡೆಗೆ ಕಾಡುಕಷ್ಟ ಮೇಷ್ಟ್ರಿಗೂ ವಿದ್ಯೆ ಕಲಿಸಿತು.
ಮುಂದಿನ ಎರಡು ಮೂರು ತಿಂಗಳಲ್ಲಿ ಅವರು ಸ್ವತಃ ದೋಣಿ ಬಿಡಲು ಕಲಿತರು. ಎಲ್ಲರ ಜೀವನ ಪಾಠಗಳು ನದಿದಂಡೆಯಲ್ಲಿ ಶುರುವಾಗುತ್ತಿದ್ದವು. ಮುಳುಗೇಳುತ್ತ ಬದುಕುವುದರಲ್ಲಿ ಖುಷಿ ಇತ್ತು. “ಈಜು ಬರುತ್ತದೆಯೇ?’ನಮ್ಮ ಹಳ್ಳಿಗಳಲ್ಲಿ ಮಕ್ಕಳ ಜೊತೆಗೆ ಮಾತಾಡುವಾಗ 30 ವರ್ಷಗಳ ಹಿಂದೆ ಹಿರಿಯರು ಕೇಳುತ್ತಿದ್ದರು. ಯಾವ ಮಕ್ಕಳಿಗೆ ಈಜು ಬರುವದಿಲ್ಲವೋ ಅವರ ಮನೆಯ ಸನಿಹದಲ್ಲಿ ಹಳ್ಳ, ಹೊಳೆಗಳಿಲ್ಲವೆಂದು ಅರ್ಥೈಸಬಹುದಿತ್ತು. ಅಂಥ ಮಕ್ಕಳು ಈಜು ಕಲಿಯುವುದನ್ನೇ ನೆಪಮಾಡಿಕೊಂಡು ರಜಾ ದಿನಗಳಲ್ಲಿ ಹೊಳೆದಂಡೆ ಹತ್ತಿರವಿರುವ ನೆಂಟರ ಮನೆಗೆ ಹೋಗುತ್ತಿದ್ದರು.
ಹತ್ತಾರು ಮಕ್ಕಳು ತಂಡ ಕಟ್ಟಿಕೊಂಡು ನೀರಿನ ಭಯ ಮರೆತು ಕಲಿಯುತ್ತಿದ್ದರು. ಆ ಕಾಲಕ್ಕೆ ಈಜುವುದರಿಂದ ವ್ಯಾಯಾಮ ದೊರೆಯುತ್ತದೆ ಎಂಬುದಕ್ಕಿಂತ ಸಮಯ ಕಳೆಯಲು ಉರಿಬಿಸಿಲಿನ ಒಳ್ಳೆಯ ಆಟವಾಗಿತ್ತು. ಹಿರಿಯರಿಗೆ ಮಕ್ಕಳನ್ನು ಹೊಳೆಗೆ ಕಳಿಸಿಲು ಭಯವಿರಲಿಲ್ಲ. ಮನೆಯಲ್ಲಿ ಇಲ್ಲಸಲ್ಲದ ಕಿಲಾಡಿ ಮಾಡುವುದಕ್ಕಿಂತ ನೀರಲ್ಲಿರುವುದು ಲಾಯಕ್ಕೆಂದು ಅವರು ಭಾವಿಸಿದ್ದರು. ಗುಡ್ಡಬೆಟ್ಟಗಳಲ್ಲಿ ದನಕರು ಮೇಯಿಸಿಕೊಂಡು ಮಧ್ಯಾಹ್ನ ನದಿ ದಂಡೆಗೆ ಬರುವುದು ಅಕ್ಕರೆಯ ಕಾಯಕವಾಗಿತ್ತು. ನೀರಿಗಿಳಿಯುವ ಹೊಸ ಹುಡುಗರು ಎಮ್ಮೆಗಳ ಬೆನ್ನೇರಿ ಬಚಾವಾಗುತ್ತಿದ್ದರು.
ಧೂಳಿನಲ್ಲಿ ಅಡ್ಡಾಡಿ, ಬಿಸಿಲಲ್ಲಿ ಕುಣಿದಾಡುವ ನಮ್ಮ ಕಾಲಿಗೆ ಕಲ್ಲು ಮುಳ್ಳಿನ ಗಾಯ ಕಾಯಂ. ಅದು ಮಲೆನಾಡ ಮಕ್ಕಳ ಟ್ರೇಡ್ ಮಾರ್ಕ್! ಕಜ್ಜಿ ರಸಿಗೆಯಾಗಿ ಹರಿಯುವಾಗ ನಾವು ಹಳ್ಳದಲ್ಲಿ ಹರಿವ ನೀರಿಗೆ ಕಾಲಿಟ್ಟು ಕುಳಿತವರು. ಆಗ ಮೀನುಗಳು ಡಾಕ್ಟರ್ ಆಗಿ ಗಾಯ ಕಚ್ಚಿ ತಿನ್ನುತ್ತ ಸ್ವತ್ಛಗೊಳಿಸಿವೆ! ಹಳ್ಳದಲ್ಲಿ ಯಾವೆಲ್ಲ ಮೀನುಗಳಿದ್ದವು? ವಾಟೆ ಬಿದಿರಿನ ಗಾಳದಲ್ಲಿ ಮೀನು ಹಿಡಿಯುತ್ತಿದ್ದ ವಾರಿಗೆಯ ಮಂದಿ ಮಗ್ಗಿಗಿಂತ ವೇಗವಾಗಿ ಮೀನು ಜಾತಿ ವಿವರಿಸುತ್ತಿದ್ದರು. ಈಗ ನಡೆದಂಡೆಯ ವಾರಿಗೆಯ ಗೆಳೆಯರೆಲ್ಲ ನಗರಕ್ಕೆ ಕೂಲಿಗಳಾಗಿ ವಲಸೆ ಹೋಗಿದ್ದಾರೆ. ನದಿಯಂತೆ ನೆನಪುಗಳು ಒಣಗುತ್ತಿವೆ.
ಬಾಲ್ಯದ ಆಪ್ತ ಗೆಳೆಯನಂತಿದ್ದ ನದಿ, ಹಳ್ಳಗಳು ಈಗ ಮುನಿಸಿಕೊಂಡಿವೆ. ನದಿ ಕಣಿವೆಯ ಇಕ್ಕೆಲಗಳಲ್ಲಿ ಅಡಿಕೆ, ಬಾಳೆ, ತೆಂಗಿನ ತೋಟಗಳು ಬೆಳೆದಿವೆ. ನದಿ ನೀರಿಗೆ ಪಂಪ್ ಜೋಡಿಸಿ ನೀರೆತ್ತುವ ಆರ್ಭಟಕ್ಕೆ ಹಳ್ಳಗಳು ಒಣಗುತ್ತಿವೆ. 30-40 ವರ್ಷಗಳ ಹಿಂದೆ ಉರಿ ಬಿಸಿಲ ಬೇಸಿಗೆಯ ಏಪ್ರಿಲ್- ಮೇನಲ್ಲಿ ನಮಗೆ ಈಜು ಕಲಿಯಲು ಆಶ್ರಯ ನೀಡಿದ್ದ ನೆಲೆಯಲ್ಲಿ ಇಂದು ಜನವರಿಗೇ ನೀರು ಒಣಗುತ್ತಿದೆ. ಕಲ್ಲು ಬಂಡೆ ಬಿಟ್ಟರೆ ಬೇರೆ ಏನೂ ಉಳಿದಿಲ್ಲ. ನದಿ ದೇಹ ಪ್ರಖರ ಬಿಸಿಲಿಗೆ ಮೈಯೊಡ್ಡಿ ಮಲಗಿದೆ. ಹೊಳೆದಂಡೆಯ ಸಸ್ಯ ಸಂತತಿ ಕಣ್ಮರೆಯಾಗಿವೆ. ಗುಡ್ಡಗಳಲ್ಲಿ ಅಕೇಶಿಯಾ ನೆಡುತೋಪು ಬೆಳೆದು, ಹುಟ್ಟಿ ಬೆಳೆದ ಪರಿಸರವೇ ಪರಕೀಯವೆನಿಸುತ್ತಿದೆ.
ಹಳ್ಳ, ನದಿ ಒಣಗಿದ ಬಳಿಕ ತೋಟ ಉಳಿಸಲು ಹೊಳೆ ದಂಡೆಗಳಲ್ಲಿ ಕೊಳವೆ ಬಾವಿ ಕೊರೆಯಲಾಗುತ್ತಿದೆ. ಇದು ಮುಂದೆ ಏಲ್ಲಿಗೆ ಮುಟ್ಟುತ್ತದೋ ಗೊತ್ತಿಲ್ಲ. ಸದಾ ಜಾಗಟೆ, ಮಂತ್ರಘೋಷಗಳ ಸದ್ದಿರುತ್ತಿದ್ದ ಶ್ರದ್ಧಾ ದೇಗುಲದಲ್ಲಿ ದೇವರು ನಾಪತ್ತೆಯಾದಂತೆ, ಚಿಲಿಪಿಲಿ ಪುಟಾಣಿಗಳು ಆಟ ಪಾಠದಲ್ಲಿ ಸಂಭ್ರಮಿಸುತ್ತಿದ್ದ ಶಾಲೆಗೆ ಇದ್ದಕ್ಕಿದ್ದಂತೆ ಬೀಗ ಬಿದ್ದಂತೆ ಹಳ್ಳಿ ಹಸಿರಿನ ಜೀವ ಭಾಗವಾದ ಹಳ್ಳಗಳು ಸ್ತಬ್ದಗೊಂಡಿವೆ. ನಮ್ಮ ನಿಸರ್ಗ ಶಾಲೆಯ ಮಡಿಲಲ್ಲಿ ಕಲ್ಲು, ಮರಳು, ಮರ ಕಳ್ಳರು ಅಂಗಡಿ ತೆಗೆದಿದ್ದಾರೆ. ಹವಾಮಾನ ವೈಪರಿತ್ಯ, ಬರಗಾಲದ ಮೂಲ ಪ್ರಶ್ನೆಗಳು ಇಲ್ಲಿ ಮೊಳೆಯುತ್ತಿವೆ. ಬಾಲ್ಯದ ಬೆರಗಿನ ಚಿತ್ರಗಳನ್ನು ನೆನಪಿನ ಪುಟದಲ್ಲಿ ಎತ್ತಿಡಲು ಹೋದರೆ ಹಳ್ಳವೂ ನೀರು ಕೇಳುತ್ತಿದೆ. ಹಳ್ಳಿ ಹಳ್ಳಕ್ಕೆ ಮರುಬಣ್ಣ ತುಂಬುವುದು ಸಾಧ್ಯವೇ?
ಮುಂದಿನ ಭಾಗ: ಅಘನಾಶಿನಿಯ ಜೀವಜಗತ್ತು.
* ಶಿವಾನಂದ ಕಳವೆ