ಮಂಗಳೂರು: ಆಸ್ಪತ್ರೆಗೆ ರೋಗಿಗಳನ್ನು ಕರೆದೊಯ್ಯಲು ಉಚಿತ ಸೇವೆ ನೀಡುವ ಮಂಗಳೂರಿನ ಓಲಾ ಕಾರು ಚಾಲಕ ಸುನೀಲ್ ಅವರ ಜನಸೇವೆಯ ಬಗ್ಗೆ ಗುರುವಾರ ಉದಯವಾಣಿ ವಿಶೇಷ ವರದಿ ಪ್ರಕಟಿಸಿದ್ದು, ಈಗ ಅವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಸುನೀಲ್ ಅವರ ಈ ಉತ್ತಮ ಕಾರ್ಯದ ಹಿನ್ನೆಲೆಯಲ್ಲಿ ಮಂಗಳೂರು ಓಲಾ ಕಚೇರಿಯಲ್ಲಿ ಗುರುವಾರ ಸಮ್ಮಾನ ಕಾರ್ಯಕ್ರಮ ನಡೆಯಿತು.
ಓಲಾದಲ್ಲಿ ಬುಕ್ ಮಾಡಿದವರಿಗೆ ಮಾತ್ರವಲ್ಲದೆ ಇತರ ಯಾರೇ ಕರೆ ಮಾಡಿದರೂ ಸುನೀಲ್ ಅವರ ಸೇವೆ ಲಭ್ಯವಿದೆ. ಇಂತಹ ಆದರ್ಶ ಅನುಕರಣನೀಯ ಎಂದು ಓಲಾ ತಮ್ಮ ಚಾಲಕನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದೆ.
“ಓವರ್‌ನೆçಟ್ ಹೀರೋ ಆದ ಮಂಗಳೂರು ಕ್ಯಾಬ್ ಡ್ರೈವರ್’ ಎಂಬ ಶೀರ್ಷಿಕೆಯಡಿ ಉದಯವಾಣಿಯಲ್ಲಿ ವಿಶೇಷ ಲೇಖನ ಗುರುವಾರ ಪ್ರಕಟಗೊಂಡಿತ್ತು. ಸುನೀಲ್ ಅವರ ಸೇವೆಯ ಕುರಿತ ಲೇಖನಕ್ಕೆ ಉದಯವಾಣಿ ವೈಬ್‌ಸೈಟ್‌ನಲ್ಲಿ ಒಂದೇ ದಿನಕ್ಕೆ 3,200 ಜನರು ಲೈಕ್ ನೀಡಿದ್ದು, 66 ಮೆಚ್ಚುಗೆ ಕಮೆಂಟ್ಸ್‌ಗಳನ್ನು ಮಾಡಿದ್ದಾರೆ. ಅಲ್ಲದೆ, 310 ಜನರು ಈ ಲೇಖನವನ್ನು ಶೇರ್ ಮಾಡಿಕೊಂಡಿದ್ದಾರೆ.
ಲೇಖನ ಪ್ರಕಟಗೊಂಡ ಬಳಿಕ ಬೆಳಗ್ಗೆ 7 ಗಂಟೆ ಯಿಂದಲೇ ಸಾಕಷ್ಟು ಕರೆಗಳು ಬರತೊಡಗಿದ್ದು, ಹಲವರು ಶುಭ ಕೋರಿದ್ದಾರೆ. ಓಲಾದ ಕಂಪೆನಿಯ ಮೇಲಧಿಕಾರಿಗಳೂ ಕರೆ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಆಸ್ಪತ್ರೆಗೆ ತುರ್ತಾಗಿ ರೋಗಿಗಳನ್ನು ಒಯ್ಯುವ ಕುಟುಂಬ ಎಂತಹ ಒತ್ತಡದಲ್ಲಿರುತ್ತದೆ ಎಂಬ ಅರಿವು ನನಗಿದೆ. ಆ ದಿನದಿಂದಲೇ ವೈದ್ಯಕೀಯ ಚಿಕಿತ್ಸೆಗೆ ತೆರಳುವವರ ಕೈಯಿಂದ ಹಣ ಪಡೆಯದಿರಲು ನಿರ್ಧರಿಸಿದ್ದೇನೆ. ಪ್ರತೀ ವಾರ ಮೂರು- ನಾಲ್ಕು ಮಂದಿ ಈ ಸೇವೆ ಪಡೆಯುತ್ತಾರೆ. ಪ್ರತೀ ರೋಗಿಗಳನ್ನು ಆಸ್ಪತ್ರೆಗೆ ಬಿಟ್ಟಾಗಲೂ ಸಮಾಜದ ಋಣವನ್ನು ತೀರಿಸುತ್ತಿದ್ದೇನೆ ಎಂಬ ಭಾವನೆ ನನಗೆ ಬರುತ್ತದೆ. ಆದ್ದರಿಂದ ಎಷ್ಟೇ ಒತ್ತಾಯಿಸಿದರೂ ಎಲ್ಲದರಲ್ಲೂ ಲಾಭ ನೋಡುವುದು ಸರಿಯಲ್ಲ. ಓಲಾ ಚಾಲಕನಾಗಿ ನನಗೆ ನಿಗದಿತ ಆದಾಯ ಬರುತ್ತದೆ. ಕಷ್ಟದ ಸಮಯದಲ್ಲಿ ಜನರಿಗೆ ಸಹಾಯ ಮಾಡುವುದು ಕಷ್ಟ ಎಂದು ನನಗೆ ಅನಿಸುತ್ತಿಲ್ಲ ಎಂದು ಅಭಿನಂದನೆ ಸೀÌಕರಿಸಿದ ಬಳಿಕ ಸುನೀಲ್ ತಿಳಿಸಿದರು.