Advertisement

ಅವನತಿಯತ್ತ ದೇಶೀ ರಾಸುಗಳ ಸಂತತಿ

09:13 PM Jan 10, 2020 | Lakshmi GovindaRaj |

ಹಿರೀಸಾವೆ: ಹೈನುಗಾರಿಕೆಗೆ ಜೆರ್ಸಿ ಹಸುಗಳನ್ನು ಸಾಕುತ್ತಿರುವುದಲ್ಲದೆ, ಅಧುನಿಕ ಕೃಷಿಯಿಂದ ಯಂತ್ರೋಪಕರಣ ಬಳಕೆ ಮಾಡುತ್ತಿರುವುದರಿಂದ ನಾಟಿರಾಸುಗಳ ಸಂತತಿ ಕ್ಷೀಣಿಸುತ್ತಿದೆ ಎಂದು ಶಾಸಕ ಸಿ.ಎನ್‌.ಬಾಲಕೃಷ್ಣ ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಹಿರೀಸಾವೆ ಹೋಬಳಿ ಬೂಕನ ಬೆಟ್ಟದ ರಂಗನಾಥಸ್ವಾಮಿ 89ನೇ ಜಾತ್ರಾ ಮಹೋತ್ಸವದ ಪ್ರಯುಕ್ತ ತಾಲೂಕು ಆಡಳಿತದಿಂದ ಆಯೋಜಿಸಿದ್ದ ಕೃಷಿ ಮೇಳ ಹಾಗೂ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.

Advertisement

ರೈತರು ದೇಶೀಯ ರಾಸು ಸಂತತಿ ಉಳಿಸಲು ಮುಂದಾಗಲಿ: ಎರಡ್ಮೂರು ದಶಕದಿಂದ ದೇಶೀಯ ತಳಿಗಳ ಸಂತತಿ ಕಡಿಮೆಯಾಗುತ್ತಿದೆ. ಇವುಗಳನ್ನು ಉಳಿಸಲು ರೈತರು ಮುಂದಾಗಬೇಕಿದೆ. ನಾಟಿ ರಾಸುಗಳ ಹಾಲು ಉತ್ಕೃಷ್ಟವಾಗಿರುವುದಲ್ಲದೆ, ಹೆಚ್ಚು ಬೇಡಿಕೆಯಿದೆ. ಈ ಹಾಲನ್ನು ಹೆಚ್ಚು ಬೆಲೆಗೆ ಕೊಳ್ಳುತ್ತಾರೆ. ಬೇಸಿಗೆ, ಚಳಿ ಹಾಗೂ ಮಳೆಗಾಲಕ್ಕೆ ಹೊಂದಿಕೊಳ್ಳುತ್ತವೆ. ಯಾವಾಗಲು ಹಸಿರು ಮೇವು ಕೆಳುವುದಿಲ್ಲ. ಎಲ್ಲಾ ಹವಾಗುಣಕ್ಕೆ ಹೊಂದುಕೊಳ್ಳುವುದರಿಂದ ರೈತರಿಗೆ ಹೆಚ್ಚು ಹೊರಯಾಗುವುದಿಲ್ಲ. ಇನ್ನು ಬೇಸಾಯದ ವೇಳೆಯಲ್ಲಿ, ಇವುಗಳನ್ನು ಉಪಯೋಗಿಸುವುದರಿಂದ ಯಂತ್ರದ ಅವಲಂಬನೆ ತಪ್ಪಲಿದೆ ಎಂದು ತಿಳಿಸಿದರು.

ವಿವಿಧ ಜಿಲ್ಲೆ ಹಾಗೂ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಸೇರುವುದರಿಂದ ಸರ್ಕಾರದ ವಿವಿಧ ಇಲಾಖೆ ಯೋಜನೆಗಳು ರೈತರಿಗೆ ತಲುಪಿಸುವ ಉದ್ದೇಶದಿಂದ ಪ್ರತಿ ವರ್ಷ ಕೃಷಿ ಮೇಳ ಆಯೋಜನೆ ಮಾಡಲಾಗುತ್ತಿದೆ. ಜಾತ್ರೆಯಲ್ಲಿ ರಾಸುಗಳನ್ನು ಕಟ್ಟಿರುವ ರೈತರಿಗೆ, ಸಮಸ್ಯೆ ಉಂಟಾದಲ್ಲಿ ತಾಲೂಕು ಆಡಳಿತದ ಗಮನಕ್ಕೆ ತರುವ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು.

ನಿರೀಕ್ಷೆಗೂ ಮೀರಿ ಸೇರಿದ ಜಾನುವಾರು: ತಹಶೀಲ್ದಾರ್‌ ಜೆ.ಬಿ.ಮಾರುತಿ ಮಾತನಾಡಿ, ಜಾತ್ರೆಯ ಪ್ರಾರಂಭಕ್ಕೂ ಎರಡು ದಿನಗಳ ಮೊದಲೇ ಹೆಚ್ಚಿನ ಸಂಖ್ಯೆಯಲ್ಲಿ ಜಾನುವಾರುಗಳು ಸೇರಿವೆ. ಈ ಬಾರಿ ನಿರೀಕ್ಷೆಗೂ ಮೀರಿ ಸುಮಾರು ಮೂರು ಸಾವಿರಕ್ಕೂ ಹೆಚ್ಚು ಜೋಡಿರಾಸುಗಳು ಜಾತ್ರೆಗೆ ಬಂದವೆ. ಜಾತ್ರೆಗೆ ಬರುವ ಜನ-ಜಾನುವಾರುಗಳ ಕುಡಿಯುವ ನೀರಿಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ಜಾತ್ರೆಯಲ್ಲಿ ರಾಸುಗಳನ್ನು ಕಟ್ಟುವ ಪ್ರದೇಶದಲ್ಲಿ ಎರಡು ಕೊಳವೆ ಬಾವಿಗಳ ಸಹಾಯದಿಂದ ನೀರಿನ ಸರಬರಾಜು ಮಾಡಲಾಗುತ್ತಿದೆ. ರೈತರಿಗೂ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಜಾತ್ರೆಗೆ ಬರುವವರಿಗೆ ಸಮಸ್ಯೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಜಾತ್ರೆ ಮುಗಿಯುವವರೆಗೂ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲಾಗುವುದು ಎಂದು ತಿಳಿಸಿದರು.

Advertisement

ರಾಸುಗಳ ಆರೋಗ್ಯ ಪರೀಕ್ಷೆ: ರಾತ್ರಿ ವೇಳೆ ವಿದ್ಯುತ್‌ ವ್ಯವಸ್ಥೆ ಕಲ್ಪಿಸಲು 40 ವಿದ್ಯುತ್‌ ಕಂಬ ನೆಟ್ಟು ಬೀದಿ ದೀಪ ಅಳವಡಿಸಲಾಗಿದೆ. ಜಾತ್ರೆ ಮುಗಿರಯುವ ವರೆಗೆ ನಿರಂತರ ವಿದ್ಯುತ್‌ ನೀಡುವಂತೆ ಸೆಸ್ಕ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಜಾತ್ರೆಗಾಗಿ ಪ್ರತ್ಯೇಕ ಪಶುವೈದ್ಯರ ನೇಮಕ ಮಾಡಿದ್ದು, ರಾಸುಗಳ ಆರೋಗ್ಯ ಪರೀಕ್ಷಿಸಲಾಗುತ್ತದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು, ಕಂದಾಯ ಇಲಾಖೆ ಸಿಬ್ಬಂದಿ ಮೇಲುಸ್ತುವಾರಿ ವಹಿಸಲಿದ್ದಾರೆ ಎಂದು ಹೇಳಿದರು.

ತಾಪಂ ಇಒ ಎಚ್‌.ಎಸ್‌.ಚಂದ್ರಶೇಖರ್‌ ಮಾತನಾಡಿ, ಜಾತ್ರೆ ಮಹೋತ್ಸವಕ್ಕೆ ರಾಜ್ಯದ ವಿವಿಧೆಡೆಯಂದ ಹೆಚ್ಚು ಜನ ಹಾಗೂ ಜಾನುವಾರು ಬಂದಿದ್ದು, ಜಾತ್ರೆಗೆ ಮೆರುಗು ಬಂದಿದೆ. ಬೇಸಿಗೆ ಇರುವುರಿಂದ ರೈತರ ಆರೋಗ್ಯದ ಮೇಲೂ ನಿಗಾವಹಿಸಲಾಗಿದ್ದು ತಾಲೂಕು ಆರೋಗ್ಯ ಇಲಾಖೆಯಿಂದ ಉಚಿತ ಚಿಕಿತ್ಸೆ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲಾಗಿದೆ ಎಂದು ನುಡಿದರು.

ಕೃಷಿ ಮೇಳದಲ್ಲಿ ಆರೋಗ್ಯ ಇಲಾಖೆ, ಪಶುಪಾಲನೆ, ಕೃಷಿ, ರೇಷ್ಮೆ ಮತ್ತು ತೋಟಗಾರಿಕೆ, ಸಮಾಜ ಕಲ್ಯಾಣ ಇಲಾಖೆ, ಮೀನುಗಾರಿಕೆ, ಕಾರ್ಮಿಕ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವಸ್ತು ಪ್ರದರ್ಶನ ಹಮ್ಮಿಕೊಂಡಿದ್ದು ಹಿರೀಸಾವೆ ವ್ಯಾಪ್ತಿಯ ಸ್ತ್ರೀ ಶಕ್ತಿ ಹಾಗೂ ಸ್ವಸಹಾಯ ಸಂಘದ ಮಹಿಳೆಯರು ಪಾಲ್ಗೊಂಡಿದ್ದರು.

ಹೇಮಾವತಿ ಸಕ್ಕರೆ ಕಾರ್ಖಾನೆಯ ಮಾಜಿ ಅಧ್ಯಕ್ಷ ತೋಟಿ ಜಯರಾಮ್‌, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಚನ್ನವೀರೇಗೌಡ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ಭಾನುಪ್ರಕಾಶ್‌, ಹಿರೀಸಾವೆ ಪೊಲೀಸ್‌ ಠಾಣೆಯ ಪಿಎಸ್‌ಐ ಭವಿತ ಮೊದಲಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next