Advertisement

Vitla: ಅಂತಾರಾಜ್ಯ ಸಂಪರ್ಕ ರಸ್ತೆ ಅಧೋಗತಿ

06:29 PM Sep 02, 2024 | Team Udayavani |
ವಿಟ್ಲ: ಕನ್ಯಾನ- ಮಂಜೇಶ್ವರ, ಅಥವಾ ಕನ್ಯಾನ -ಉಪ್ಪಳ ಹೀಗೆ ಕೇರಳವನ್ನು ಸಂಪರ್ಕಿಸಲು ಇರುವ  ಅಂತಾರಾಜ್ಯ ರಸ್ತೆಯ ಉಕ್ಕುಡ- ಕನ್ಯಾನ ಭಾಗದ  ರಸ್ತೆಯ ಸ್ಥಿತಿ ಅಧೋಗತಿಯಾಗಿದೆ.
ಈ ರಸ್ತೆಯನ್ನು ಪುತ್ತೂರು ಹಾಗೂ ಬಂಟ್ವಾಳ ಕ್ಷೇತ್ರದ ಶಾಸಕರು ಪ್ರತಿನಿಧಿಸುತ್ತಿದ್ದು ಅವರು ಒಂದಷ್ಟು ಕಾಳಜಿ ವಹಿಸಿದ್ದರೆ ಎಂದೋ ಅಭಿವೃದ್ಧಿಯಾಗುತ್ತಿತ್ತು ಎಂದು ಈ ಭಾಗದ ಜನರಾಡಿಕೊಳ್ಳುತ್ತಿದ್ದಾರೆ.
ಕಳೆಂಜಿಮಲೆ ಗುಡ್ಡವನ್ನು ಅಗೆದು ಮಾಡಿದ ಈ ರಸ್ತೆಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿದು ರಸ್ತೆಗೆ ಬೀಳುವ ಸಂಭವವವೂ ಈಗ ಹೆಚ್ಚಾಗಿದೆ. ಇನ್ನೂ ಮಳೆ ಮುಂದುವರಿಯುತ್ತಿದ್ದು ರಸ್ತೆ ಕುಸಿದರೆ ಸಂಪರ್ಕ ಕಡಿತವಾಗಲಿದೆ. ಈ ರಸ್ತೆಯಲ್ಲಿ ಸಂಚರಿಸುವಾಗ ಭಯ ಆವರಿಸುತ್ತದೆ.
ಹೊಂಡ ಗುಂಡಿಗಳ ಸಂಖ್ಯೆ ಜಾಸ್ತಿ
ವಿಟ್ಲ – ಕನ್ಯಾನ ರಸ್ತೆಯಲ್ಲಿ ಹೊಂಡ ಗುಂಡಿಗಳ ಸಂಖ್ಯೆ ಜಾಸ್ತಿಯಾಗಿದೆ. ಬೈರಿಕಟ್ಟೆ ಮತ್ತು ಆನೆಪದವು ಎಂಬಲ್ಲಿ ಡಾಮರು ರಸ್ತೆಯೇ ಕುಸಿಯುತ್ತಲಿದೆ. ಅಲ್ಲಿ ಎಚ್ಚರಿಸಲು ಗೋಣಿಚೀಲ ಮತ್ತು ಕಂಬಗಳನ್ನು ಹಾಕಲಾಗಿದೆ. ಒಂದು ಬದಿಯಲ್ಲಿ ಗುಡ್ಡ ಕುಸಿಯುತ್ತಲಿದೆ.  ಎರಡು ಮೋರಿ ಕುಸಿದಿದೆ. ಕಳೆದ ವರ್ಷದ ಅನುದಾನದಲ್ಲಿ ಹೊಸ ಮೋರಿಯನ್ನೇನೋ ನಿರ್ಮಿಸಲಾಗಿದೆ. ಅಲ್ಲಿ ಡಾಮರು ಹಾಕಿಲ್ಲ. ವಾಹನಗಳು ಹಾರುತ್ತಾ  ಹಾರುತ್ತ ಸಂಚರಿಸುವಂತಾಗಿದೆ. ಕಿರಿಂಚಿಮೂಲೆಯಲ್ಲಿ ಚರಂಡಿಯಿಲ್ಲದೆ ರಸ್ತೆಯಲ್ಲೇ ನೀರು ನಿಂತು ಕೆರೆಯಂತಾಗುತ್ತಿದೆ.

content-img

ರಸ್ತೆಯ ಶಕ್ತಿ ಕುಸಿದಿದೆ
ಈ ರಸ್ತೆಯಲ್ಲಿ ವಾಹನಗಳು ಬಸ್ಸು, ಲಾರಿ, ಕಾರು ವಾಹನಗಳಿಗಿಂತ ಹೆಚ್ಚು 16ಕ್ಕೂ ಅಧಿಕ ಚಕ್ರಗಳಿಗಿರುವ ದೊಡ್ಡ ದೊಡ್ಡ ಲಾರಿಗಳಲ್ಲಿ ಮಣ್ಣು ಸಾಗಾಟವಾಗುತ್ತಿದೆ. ಈ ರಸ್ತೆ ಅಷ್ಟು ಭಾರ ತಡೆಯುವ ಶಕ್ತಿ ಹೊಂದಿಲ್ಲ. ದೊಡ್ಡ ಲಾರಿಗಳ ಸಂಚಾರ ಹೆಚ್ಚಾಗಿರುವುದರಿಂದ ಕಳೆದ ಒಂದೇ ವರ್ಷದಲ್ಲಿ ಈ ರಸ್ತೆಯ ಶಕ್ತಿ ಕುಸಿದಿದೆ.
ಉಕ್ಕುಡ-ಕನ್ಯಾನ ರಸ್ತೆಗಿಲ್ಲ ಅನುದಾನ
ಈ ರಸ್ತೆಯ ಸುತ್ತಮುತ್ತಲಿನ ರಸ್ತೆಗೆ ಅನುದಾನ ಬಿಡುಗಡೆಯಾಗಿದೆ. ಆದರೆ ಉಕ್ಕುಡ-ಕನ್ಯಾನ ರಸ್ತೆಗೆ ಯಾವ ಅನುದಾನವೂ ಮಂಜೂರಾಗಿಲ್ಲ. ಕಲ್ಲಡ್ಕ-ಕಾಂಜಂಗಾಡ್‌ ರಸ್ತೆಯ ಕಾಶಿಮಠದಿಂದ ಪಡಿಬಾಗಿಲು ವರೆಗಿನ ರಸ್ತೆಗೆ 5 ಕೋಟಿ ರೂ., ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯಲ್ಲಿ ನೀರ್ಕಜೆಯಿಂದ ಧೂಮಾವತಿಕಟ್ಟೆ ಮತ್ತು ಪಡಿಬಾಗಿಲಿನಿಂದ ಅಳಿಕೆ ಮೂಲಕ ಬೈರಿಕಟ್ಟೆ ವರೆಗಿನ ರಸ್ತೆಗೆ 5 ಕೋಟಿ ರೂ., ಕನ್ಯಾನ ಪೇಟೆಯಿಂದ ನೆಲ್ಲಿಕಟ್ಟೆ ವರೆಗಿನ ರಸ್ತೆಯನ್ನು ಹೊಸ ರಸ್ತೆಯನ್ನಾಗಿಸಲು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಲ್ಲಿ 10 ಕೋಟಿ ರೂ. ಅನುದಾನ ಮಂಜೂರಾಗಿದೆ. ಈ ರಸ್ತೆಗೂ ಅನುದಾನ ಒದಗಿಸಿ ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

content-img

ಅನುದಾನ ಮಂಜೂರಾಗಿಲ್ಲ
ಉಕ್ಕುಡದಿಂದ ಕನ್ಯಾನ ವರೆಗಿನ ರಸ್ತೆಗೆ ಅನುದಾನ ಮಂಜೂರಾಗಿಲ್ಲ. ಪ್ರಸ್ತಾವನೆ ಕಳುಹಿಸಲಾಗಿದೆ. ಸುಬ್ರಹ್ಮಣ್ಯ- ಮಂಜೇಶ್ವರ ರಸ್ತೆ ಅಭಿವೃದ್ಧಿಗೆ ಅನುದಾನ ಮಂಜೂರಾದರೆ ಬೈರಿಕಟ್ಟೆಯಿಂದ ಕನ್ಯಾನ ವರೆಗಿನ ರಸ್ತೆ ಅಭಿವೃದ್ಧಿಯಾಗಬಹುದು.
-ಪ್ರೀತಮ್‌ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ
11 ಕಿಮೀ ರಸ್ತೆಯಲ್ಲಿ 101 ತಿರುವು
ವಿಟ್ಲದಿಂದ ಕನ್ಯಾನಕ್ಕೆ 11 ಕಿಮೀ ದೂರದ ಈ ರಸ್ತೆಯಲ್ಲಿ 101  ತಿರುವುಗಳಿವೆ. ಗ್ರಾಮೀಣ ರಸ್ತೆಯಾಗಿದ್ದರೂ ಅರ್ಧ ಭಾಗಕ್ಕೆ ರಾಜ್ಯ ಹೆದ್ದಾರಿ ಎಂಬ ಗೌರವವಿದೆ. ಬೈರಿಕಟ್ಟೆಯಿಂದ ಕನ್ಯಾನ ವರೆಗಿನ ರಸ್ತೆ ಸುಬ್ರಹ್ಮಣ್ಯ ಮಂಜೇಶ್ವರ ರಾಜ್ಯ ಹೆದ್ದಾರಿಯ ಭಾಗವಾಗಿದೆ.  ಉಕ್ಕುಡದಿಂದ ಬೈರಿಕಟ್ಟೆ ವರೆಗಿನ ರಸ್ತೆ ಜಿಲ್ಲಾ ಮುಖ್ಯ ರಸ್ತೆಯಾಗಿದೆ. ಉಕ್ಕುಡ -ಬೈರಿಕಟ್ಟೆ ರಸ್ತೆಗೆ 2013-14ನೇ ಸಾಲಿನಲ್ಲಿ ಡಾಮರು ಹಾಕಲಾಗಿತ್ತು. ಆಮೇಲೆ ಆ ರಸ್ತೆಯ ಅಭಿವೃದ್ಧಿಯಾಗಲೇ ಇಲ್ಲ. ಬೈರಿಕಟ್ಟೆಯಿಂದ ಕನ್ಯಾನದ ವರೆಗೆ ರಾಜ್ಯ ಹೆದ್ದಾರಿಯೇ ಆಗಿದ್ದರೂ ಅಭಿವೃದ್ಧಿಯಾಗದೇ  ಹಲವು ವರ್ಷಗಳೇ ಕಳೆದುಹೋಗಿದೆ.
-ಉದಯಶಂಕರ್‌ ನೀರ್ಪಾಜೆ
Advertisement

Udayavani is now on Telegram. Click here to join our channel and stay updated with the latest news.