ಬೈಂದೂರು: ಕಳೆದ ಹಲವು ದಿನಗಳಿಂದ ಅಪಾಯದ ಮುನ್ಸೂಚನೆ ನೀಡುತ್ತಿದ್ದ ಒತ್ತಿನೆಣೆಗುಡ್ಡ ಬುಧವಾರ ಮುಂಜಾವು ಕುಸಿದು ಬಿದ್ದಿದೆ. ಹೆದ್ದಾರಿ ಮೇಲ್ಗಡೆ ಬೃಹತ್ ಗಾತ್ರದ ಕಲ್ಲು ಹಾಗೂ ಮಣ್ಣಿನ ರಾಶಿ ಶೇಖರಣೆಗೊಂಡಿರುವ ಪರಿಣಾಮ ತೆರವುಗೊಳಿಸಲು ಹರಸಾಹಸ ಪಡಬೇಕಾಯಿತು. ಐದು ಗಂಟೆಗೂ ಅಧಿಕ ಸಮಯ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ಗುಡ್ಡ ಕುಸಿಯುವ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಯಾವುದೇ ವಾಹನ ಸಂಚಾರವಿಲ್ಲದ ಕಾರಣ ಭಾರಿ ಅನಾಹುತವೊಂದು ತಪ್ಪಿದೆ.ಆದರೆ ಪ್ರಯಾಣಿಕರು ಮಾತ್ರ ಹೆದ್ದಾರಿ ಅವ್ಯವಸ್ಥೆಯಿಂದ ಹೈರಾಣಾಗಿದ್ದಾರೆ.
ಜಿಲ್ಲಾಡಳಿತ ನಿರ್ಲಕ್ಷ್ಯ, ಕಂಪೆನಿ ಮುಂಜಾಗ್ರತೆ ಕೊರತೆ: ಬೈಂದೂರಿನ ಮಟ್ಟಿಗೆ ಈ ಬಾರಿಯ ಗುಡ್ಡ ಕುಸಿತ ಹಾಗೂ ಹೆದ್ದಾರಿ ತಡೆಗೆ ಜಿಲ್ಲಾಡಳಿತದ ನಿರ್ಲಕ್ಷ್ಯ ಹಾಗೂ ಕಾಮಗಾರಿ ನಡೆಸುವ ಕಂಪೆನಿಯ ಮುಂಜಾಗರೂಕತೆಯ ಕೊರತೆ ಕಾರಣವಾಗಿದೆ ಎನ್ನುವುದು ಸಾರ್ವಜನಿಕರ ಅಭಿಪ್ರಾಯವಾಗಿದೆ.ಕಾರಣವೆಂದರೆ ಈಗಾಗಲೇ ಆರಕ್ಷಕ ಇಲಾಖೆ ಸಂಭವನೀಯ ಘಟನೆ ಕುರಿತು ಮಾಹಿತಿ ನೀಡಿದೆ. ಉದಯವಾಣಿ ಎರಡು ದಿನಗಳ ಹಿಂದೆ ಗುಡ್ಡ ಕುಸಿತ ಅಪಾಯದ ಕುರಿತು ವಿಸ್ಕೃತ ವರದಿ ಪ್ರಕಟಿಸಿರುವುದನ್ನು ನೆನಪಿಸಿಕೊಳ್ಳಬಹುದಾಗಿದೆ. ಆದರೆ ಈ ಬಗ್ಗೆ ನಿಗಾ ವಹಿಸಬೇಕಾದ ಜಿಲ್ಲಾಡಳಿತ ಕೇವಲ ಕಂಪೆನಿ ಅಧಿಕಾರಿಗಳ ಭರವಸೆಯ ಮಾತುಗಳಿಗಷ್ಟೆ ತೃಪ್ತವಾಗಿದೆ. ಮೊದಲ ಮಳೆ ಪ್ರಾರಂಭವಾದಂದಿನಿಂದ ಗುಡ್ಡದ ಒಂದೊಂದು ಭಾಗಗಳು ಕುಸಿಯಲು ಪ್ರಾರಂಭವಾಗಿವೆ. ಸಂಬಂಧಪಟ್ಟ ಎಂಜಿನಿ ಯರ್‌ಗಳ ತಾಂತ್ರಿಕ ಮಾಹಿತಿ ಸಮಸ್ಯೆ ಯಿಂದ ಈ ಪ್ರಮಾದ ಉಂಟಾಗಿದೆ.
5 ಗಂಟೆ ಹೆದ್ದಾರಿ ಬಂದ್, ಕಂಪೆನಿ ಅಧಿಕಾರಿಗಳ ಮೇಲೆ ಪ್ರಕರಣ ದಾಖಲು: ಬೈಂದೂರು ವ್ಯಾಪ್ತಿಯಲ್ಲಿ ಮ್ಯಾಂಗನೀಸ್ ಅದಿರು ಸಾಗಾಟದ ವೇಬ್ರಿಡ್ಜ್ ಸಂದರ್ಭದಲ್ಲಿ ಒಂದೆರಡು ಗಂಟೆ ರಸ್ತೆ ತಡೆ ಉಂಟಾಗಿರುವುದು ಹೊರತುಪಡಿಸಿದರೆ ಇದೇ ಮೊದಲ ಬಾರಿಗೆ ಐದು ಗಂಟೆಗೂ ಅಧಿಕ ಸಮಯ ಹೆದ್ದಾರಿ ತಡೆ ಉಂಟಾಗಿದೆ. ಸ್ಥಳೀಯರು ಹೇಳುವ ಪ್ರಕಾರ ಮುಂಜಾನೆ ನಾಲ್ಕು ಗಂಟೆಗೆ ಗುಡ್ಡ ಕುಸಿತ ಉಂಟಾದರೂ ಸಹ ಕಾಮಗಾರಿ ನಡೆಸುವ ಅಧಿಕಾರಿಗಳು ಏಳು ಗಂಟೆಗೆ ತೆರವು ಕಾರ್ಯ ಪ್ರಾರಂಭಿಸಿದ್ದಾರೆ.ಅಪಾಯ ಸಂಭವಿಸುವ ಸಾಧ್ಯತೆಯಿದ್ದರು ಸಹ ಯಾವುದೇ ಸಿಬಂದಿಯಿಲ್ಲದಿರುವುದು ಹಾಗೂ ಮುನ್ನೆಚ್ಚರಿಕೆ ವಹಿಸದಿರುವುದು ಕಾಮಗಾರಿ ನಡೆಸುವ ಕಂಪೆನಿಯ ನಿರ್ಲಕ್ಷ್ಯವಾಗಿದೆ ಎನ್ನಲಾಗುತ್ತಿದೆ.
ಈ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಕೆ.ಡಿ.ಪಿ. ಸದಸ್ಯ ಎಸ್. ರಾಜು ಪೂಜಾರಿ ಒತ್ತಿನೆಣೆ ಪ್ರಕರಣ ಅತ್ಯಂತ ಗಂಭೀರವಾದ ಸಮಸ್ಯೆಯಾಗಿದೆ. ಸ್ವತಃ ಜಿಲ್ಲಾಧಿಕಾರಿಗಳೇ ಈ ಬಗ್ಗೆ ಮುತುವರ್ಜಿ ವಹಿಸಬೇಕಾಗಿದೆ. ಪ್ರಮುಖ ಸಂಚಾರ ಮಾರ್ಗದಲ್ಲಿ ಈ ರೀತಿಯ ಅಪಾಯ ಸಂಭವಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಸಮಸ್ಯೆ ಎದುರಾಗುವ ಸಾಧ್ಯತೆಯಿದೆ. ಹೀಗಾಗಿ ಜಿಲ್ಲಾಡಳಿತ ಒತ್ತಿನೆಣೆ ಕುರಿತು ವಿಶೇಷ ನೋಡಲ್ ಅಧಿಕಾರಿಯನ್ನು ನೇಮಿಸಿ ಕಾಮಗಾರಿ ನಡೆಸಬೇಕಾಗಿದೆ ಎನ್ನುತ್ತಾರೆ.
ಕುಂದಾಪುರ ಉಪ ವಿಭಾಗಾಧಿಕಾರಿ ಶಿಲ್ಪಾನಾಗ್ ಅವರು ಮಾತನಾಡಿ ಈಗಾಗಲೇ ಕಾಮಗಾರಿ ನಡೆಸುವ ಕಂಪೆನಿ ಅಧಿಕಾರಿಗಳು ಸೂಕ್ತ ಮುನ್ನೆಚ್ಚರಿಕೆ ವಹಿಸಿರುವ ಜತೆಗೆ ಅತ್ಯಾಧುನಿಕ ತಂತ್ರಜ್ಞಾನ ಕ್ರಮ ಅನುಸರಿಸಿ ಗುಡ್ಡ ಕುಸಿತ ನಿಯಂತ್ರಿಸುವುದಾಗಿ ತಿಳಿಸಿದ್ದಾರೆ. ಆದರೆ ಗುಡ್ಡ ಕುಸಿತದಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ. ಹೀಗಾಗಿ ನಿರ್ಲಕ್ಷ್ಯ ಸೇರಿದಂತೆ ಕಂಪೆನಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ.ಮತ್ತು ಸ್ಥಳ ಸಮೀಕ್ಷೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಬದಲಿ ರಸ್ತೆ
ಈಗಾಗಲೇ ಮುಖ್ಯ ರಸ್ತೆ ಗುಡ್ಡ ಕುಸಿತದಿಂದ ಹಾನಿಯಾದರೆ ಬದಲಿ ರಸ್ತೆ ವ್ಯವಸ್ಥೆ ಮಾಡಿರುವ ಕಂಪೆನಿಗೆ ಅದರಲ್ಲೂ ವಿಘ್ನ ಎದುರಾಗಿದೆ. ನೀರಿನ ಹರಿವಿನ ಪ್ರಭಾವದಿಂದ ಹೊಸ ರಸ್ತೆ ಕುಸಿಯುತ್ತಿದೆ ಹಾಗೂ ಈ ಭಾಗದಲ್ಲಿ ಅತ್ಯಂತ ಅಪಾಯಕಾರಿ ಪ್ರಯಾಣದ ಅನುಭವವಾಗುತ್ತದೆ. ಒಂದೊಮ್ಮೆ ಮಳೆ ಅಧಿಕವಾದರೆ ಗುಡ್ಡ ಕುಸಿಯುವ ಸಾಧ್ಯತೆ ಇನ್ನಷ್ಟು ಜಾಸ್ತಿಯಿದೆ. ಹೀಗಾಗಿ ಬದಲಿ ವ್ಯವಸ್ಥೆಗಾಗಿ ದೊಂಬೆ ರಸ್ತೆಗೆ ತಾತ್ಕಾಲಿಕವಾಗಿ ಡಾಮರೀಕರಣ ಮಾಡಿ ದುರಸ್ತಿ ಮಾಡಬೇಕಾಗಿದೆ. ಮಳೆಗಾಲದ ಆರಂಭದಲ್ಲೆ ಈ ರೀತಿಯ ಸಮಸ್ಯೆಯಾದರೆ ಚರಂಡಿಗಳಿಲ್ಲದ ಉಪ್ಪುಂದ, ಬೈಂದೂರು, ಶಿರೂರು ಮುಂತಾದ ಕಡೆ ಇನ್ನಷ್ಟು ಸಮಸ್ಯೆ ತಲೆದೋರುವ ಸಾಧ್ಯತೆಯಿದೆ. ಹೀಗಾಗಿ ಜಿಲ್ಲಾಧಿಕಾರಿಗಳು ಬೈಂದೂರು ಚತುಷ್ಪಥ ಕಾಮಗಾರಿ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವತ್ರಿಕ ಅಭಿಪ್ರಾಯವಾಗಿದೆ.