ಧಾರವಾಡ: ಶರಣರ ವಚನಗಳನ್ನು ನಾಡಿನಾದ್ಯಂತ ಪ್ರಚಾರ ಮಾಡಿದ ಅನೇಕ ಮಹಾತ್ಮರು, ಶರಣರು ಸದಾ ಸ್ಮರಣೀಯರಾಗಿದ್ದು, ಅವರು ಹಾಕಿಕೊಟ್ಟ ಮಾರ್ಗ ಅತ್ಯಂತ ಸುಲಭ ಹಾಗೂ ಸರಳವಿದ್ದು ಅದನ್ನು ನಾವೆಲ್ಲರೂ ಅಳವಡಿಸಿಕೊಳ್ಳಬೇಕು ಎಂದು ಜ್ಞಾನಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಬಸವತತ್ವ ಪ್ರಸಾರ ಸಂಸ್ಥೆ ರವಿವಾರ ತಪೋವನದಲ್ಲಿ ಏರ್ಪಡಿಸಿದ್ದ ಡಾ|ಫ.ಗು.ಹಳಕಟ್ಟಿ ಹಾಗೂ ಶರಣ ಹಡೇìಕರ ಮಂಜಪ್ಪನವರ ಮತ್ತು ರೆವರೆಂಡ್ ಉತ್ತಂಗಿ ಚನ್ನಪ್ಪನವರ ಸ್ಮರಣೋತ್ಸವ ಹಾಗೂ ವಚನ ಸಂಗೀತೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
ಬಸವಾದಿ ಶರಣರು ರಚಿಸಿದ ವಚನ ಸಾಹಿತ್ಯವನ್ನು ಕ್ರೂಢೀಕರಿಸಿದ ಡಾ|ಫ.ಗು.ಹಳಕಟ್ಟಿ ಅವರು ತಮ್ಮ ಜೀವನವನ್ನು ಮುಡುಪಾಗಿಟ್ಟು ವಚನ ಸಾಹಿತ್ಯದ ಭಂಡಾರವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿದ್ದರು. ಕರ್ನಾಟಕದ ಗಾಂಧಿ ಮಂಜಪ್ಪನವರ ಹೋರಾಟ ನಮಗೆ ಸದಾ ಸ್ಮರಣೀಯ.
ಚನ್ನಪ್ಪನವರು ಅನ್ಯ ಧರ್ಮಿಯರಾಗಿದ್ದರೂ ವಚನ ಸಾಹಿತ್ಯದಲ್ಲಿ ಬಹಳಷ್ಟುಆಸಕ್ತಿ ಹೊಂದಿ ವಚನಗಳನ್ನು ತಮ್ಮ ನಿತ್ಯ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಇಂಥ ಮಹಾತ್ಮರ ಹಾಗೆ ನಾವೆಲ್ಲರೂ ವಚನಗಳ ಸಾರ ತಿಳಿದು ಬದುಕೋಣ ಎಂದರು.
ಶ್ರೀ ಪ್ರಣವಾನಂದ ಸ್ವಾಮೀಜಿ, ಡಾ|ಎಸ್. ಆರ್.ಗುಂಜಾಳ, ಮಾಜಿ ಶಾಸಕ ಚಂದ್ರಕಾಂತ ಬೆಲ್ಲದ, ಸಂಸದ ಬಸವರಾಜ ಪಾಟೀಲ ಸೇಡಂ ಉಪಸ್ಥಿತರಿದ್ದರು. ಡಾ|ಶಾಂತಾರಾಮ ಹೆಗಡೆ, ನೀಲಾ ಕೊಡ್ಲಿ, ಪಂ|ಸೋಮನಾಥ ಮರಡೂರ ವಚನ ಸಂಗೀತ ನಡೆಸಿಕೊಟ್ಟರು. ಸುರುಚಿ ಮತ್ತು ರಿಚಾ ಮಹೇಶ ಬೆಲ್ಲದ ಪ್ರಾರ್ಥಿಸಿದರು. ಕೆ.ಎಂ.ಕೊಪ್ಪದ ನಿರೂಪಿಸಿ ಸ್ವಾಗತಿಸಿದರು. ಮಾರ್ಕಂಡೇಯ ದೊಡಮನಿ ವಂದಿಸಿದರು.