Advertisement

ರಾಜ್ಯದಲ್ಲಿ ಮತದಾರರ ಸಂಖ್ಯೆ 72ಲಕ್ಷ ಹೆಚ್ಚಳ

04:34 PM Dec 05, 2017 | |

ಬೆಂಗಳೂರು: ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಕರಡು ಮತದಾರರ ಪಟ್ಟಿಯನ್ನು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಿಸಿದ್ದು,  ಕಳೆದ ವಿಧಾನಸಭೆ ಚುನಾವಣೆಗೆ ಹೊಲಿಸಿದರೆ 72 ಲಕ್ಷ ಮತದಾರರ ಸಂಖ್ಯೆ ಹೆಚ್ಚಾಗಿದೆ.

Advertisement

ಅಲ್ಲದೇ 18 ವರ್ಷ ದಾಟಿದ ಸುಮಾರು 7.69 ಲಕ್ಷ ಯುವ  ಮತದಾರರು ಮತದಾರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ  ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ ಕುಮಾರ್‌, 2013ರ ವಿಧಾನಸಭೆ ಚುನಾವಣೆ ವೇಳೆ ಒಟ್ಟು ಮತದಾರರ ಸಂಖ್ಯೆ 4.18 ಕೋಟಿ ಇತ್ತು, 

2017ರ ಕರಡು ಮತದಾರರ ಪಟ್ಟಿಯಂತೆ ಸದ್ಯ 2.48 ಕೋಟಿ ಪುರುಷರು, 2.41 ಕೋಟಿ ಮಹಿಳೆಯರು, 4,340 ತೃತೀಯ ಲಿಂಗಿಗಳು ಸೇರಿ ಒಟ್ಟು 4.90 ಕೋಟಿ  ಮತದಾರರು ಇದ್ದಾರೆ. ಅದರಂತೆ ಮತದಾರರ ಸಂಖ್ಯೆ 72 ಲಕ್ಷ ಹೆಚ್ಚಾಗಿದೆ. ಈ  ಪ್ರಕಾರ 2,433 ಹೊಸ ಮತಗಟ್ಟೆಗಳು ಸ್ಥಾಪಿಸಬೇಕಾಗಬಹುದು ಎಂದರು.

ಫೆಬ್ರವರಿಗೆ ಅಂತಿಮ ಪಟ್ಟಿ: 2017ರ ಜನವರಿಯಲ್ಲಿ ಪ್ರಕಟಗೊಂಡ ಅಂತಿಮ ಮತದಾರರ ಪಟ್ಟಿಯಲ್ಲಿ ರಾಜ್ಯದ ಒಟ್ಟು ಜನಸಂಖ್ಯೆಗೆ ಮತದಾರರ ಪ್ರಮಾಣ ಶೇ.72 ಇದ್ದರೆ, ಈಗ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು ಜನಸಂಖ್ಯೆಗೆ ಮತದಾರರ ಪ್ರಮಾಣ ಶೇ.71 ಆಗಿದೆ.

ಅದೇ ರೀತಿ 978 ಇದ್ದ ಮಹಿಳಾ ಮತದಾರರ ಅನುಪಾತ 968 ಆಗಿದೆ. ನ.30ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ತಿದ್ದುಪಡಿ. ಸೇರ್ಪಡೆ, ತೆಗೆದು ಹಾಕುವಿಕೆಯ ಪ್ರಕ್ರಿಯೆಯ ನಂತರ 2018ರ ಫೆ.15ರಂದು  ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು.

Advertisement

ಸುಮಾರು 2 ತಿಂಗಳು ನಡೆಯುವ ಮತದಾರರ ಪಟ್ಟಿಯ ಪರಿಷ್ಕರಣೆ ಅಭಿಯಾನದಲ್ಲಿ ರಾಜಕೀಯ  ಪಕ್ಷಗಳು ಮತ್ತು ಸಾರ್ವಜನಿಕರು ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಲೋಪಗಳು, ಗೊಂದಲಗಳಿಲ್ಲದ ಪೂರ್ಣ ರೂಪದ ಮತದಾರರ ಪಟ್ಟಿ ಪ್ರಕಟಣೆಗೆ  ಸಹಕರಿಸಬೇಕು ಎಂದು ಸಂಜೀವಕುಮಾರ್‌ ಮನವಿ ಮಾಡಿದರು. 

ಪಟ್ಟಿ ಪರಿಷ್ಕರಣೆಗೆ ಸೂಚನೆ: ಈಗಾಗಲೇ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದ್ದು, ಮುಖ್ಯ ಚುನಾವಣಾಧಿಕಾರಿಗಳ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಕ್ಷೇತ್ರ ಚುನಾವಣಾ ನೋಂದಣಾಧಿಕಾರಿ ಮತ್ತು ತಾಲೂಕ ಚುನಾವಣಾ ನೋಂದಣಾಧಿಕಾರಿಗಳ ಬಳಿಯೂ ಕರಡು ಪಟ್ಟಿ ಲಭ್ಯವಿದೆ.

ಅಲ್ಲದೇ ಅಧಿಕೃತ ಮಾನ್ಯತೆ ಪಡೆದ ನೋಂದಾಯಿತ ರಾಜಕೀಯ ಪಕ್ಷಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಕರಡು ಪಟ್ಟಿಯನ್ನು ತಲುಪಿಸಲಾಗಿದೆ. ಪ್ರತಿ ರಾಜಕೀಯ ಪಕ್ಷಗಳು ಬೂತ್‌ ಮಟ್ಟದ ಏಜೆಂಟ್‌ಗಳನ್ನು ನೇಮಿಸಿ ಮತದಾರರ ಪಟ್ಟಿಯ ಪರಿಷ್ಕರಣೆಗೆ  ಸಹಕರಿಸಬೇಕು. 

ಡಿ.17ರವರೆಗೆ ನಡೆಯುವ ಬೂತ್‌ ಮಟ್ಟದ ವಿಶೇಷ ಆಂದೋಲನದ ಈ ಅವಕಾಶವನ್ನು ಬಳಸಿಕೊಂಡು ಪ್ರತಿಯೊಬ್ಬರು ತಮ್ಮ  ಸರಿಯಾದ ಹೆಸರು, ಸಂಬಂಧಪಟ್ಟ ಭಾಗದ ಮತದಾರರ ಪಟ್ಟಿಯಲ್ಲಿ ಇರುವಂತೆ ನೋಡಿಕೊಳ್ಳಬೇಕು ಎಂದು ಮುಖ್ಯ ಚುನಾವಣಾಧಿಕಾರಿಗಳು ಮನವಿ ಮಾಡಿದರು. 

Advertisement

Udayavani is now on Telegram. Click here to join our channel and stay updated with the latest news.

Next