Advertisement

ಮೃತರಾದವರ ಸಂಖ್ಯೆ ಮೂವತ್ತು ಶಿಕ್ಷೆಯಾಗಿಲ್ಲ ಯಾವತ್ತೂ!

12:40 PM Jan 08, 2018 | Team Udayavani |

ಬೆಂಗಳೂರು: ಮಲ ಹೊರುವ, ಮಲವನ್ನು ಕೈಯಿಂದ ಸ್ವತ್ಛಗೊಳಿಸುವ ಅನಾಗರಿಕ ಪದ್ಧತಿಯನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿ ದಶಕಗಳೇ ಕಳೆದಿವೆ. ಆದರೆ, ಈ ಮ್ಯಾನ್‌ ಹೋಲ್‌, ಎಸ್‌ಟಿಪಿ ಸ್ವತ್ಛಗೊಳಿಸುವ ಕಾರ್ಯದ ಮೂಲಕ ಈ ಅನಿಷ್ಠ ಪದ್ಧತಿ ರಾಜಧಾನಿಯಲ್ಲಿ ಇನ್ನೂ ಜೀವಂತವಾಗಿದ್ದು, ಅಮಾಯಕರು ನಿರಂತರವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.

Advertisement

ರಾಜಧಾನಿ ಬೆಂಗಳೂರು ಒಂದರಲ್ಲೇ ಈವರೆಗೆ 30 ಕಾರ್ಮಿಕರು ಮ್ಯಾನ್‌ಹೋಲ್‌ಗಿಳಿದು ಉಸಿರುಗಟ್ಟಿ ಮೃತಪಟ್ಟಿರುವ ಪ್ರಕರಣಗಳು ವರದಿಯಾಗಿವೆ. 2008ರಿಂದ ಸಫಾಯಿ ಕರ್ಮಚಾರಿ ಆಯೋಗ ಕಲೆಹಾಕಿರುವ ಮಾಹಿತಿಯಂತೆ ರಾಜ್ಯದಲ್ಲಿ ಒಟ್ಟು 66 ಕಾರ್ಮಿಕರು ಮ್ಯಾನ್‌ಹೋಲ್‌ ಸ್ವರ್ಚಚತೆ, ಪಿಟ್‌ ಗುಂಡಿ ಸ್ವತ್ಛಗೊಳಿಸುವಾಗ ಬಲಿಯಾಗಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬೆಂಗಳೂರಿನಲ್ಲಿಯೇ ಸುಮಾರು 20 ಪ್ರಕರಣಗಳು ದಾಖಲಾಗಿದ್ದರೂ, ಈವರೆಗೆ ಯಾರಿಗೂ ಶಿಕ್ಷೆಯಾಗಿಲ್ಲ ಎಂಬುದೇ ಅಚ್ಚರಿ ಹುಟ್ಟಿಸುವ ಅಂಶ.

ಶೌಚಗುಂಡಿಗಳ ಸ್ವತ್ಛತೆಗಾಗಿ ಮಾರುಕಟ್ಟೆಗೆ ಅತ್ಯಾಧುನಿಕ ಯಂತ್ರಗಳು ಬಂದಿವೆ. ಆದರೆ, ಹಣ ಉಳಿಸಲು ಮಾಲೀಕರು ಕಾರ್ಮಿಕರ ಮೂಲಕ ಇಂತಹ ಕೆಲಸಗಳನ್ನು ಮಾಡಿಸುತ್ತಿದ್ದಾರೆ. ರಾಜಧಾನಿಯಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದರೂ, ರಾಜ್ಯ ಸರ್ಕಾರವಾಗಲಿ, ಸಫಾಯಿ ಕರ್ಮಚಾರಿ ಆಯೋಗವಾಗಲಿ ಸೂಕ್ತ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಕೆಲ ಸಂಘ-ಸಂಸ್ಥೆಗಳು ದೂರಿವೆ.

2011ರ ಜನಗಣತಿಯಂತೆ ರಾಜ್ಯದಲ್ಲಿ 13 ಸಾವಿರಕ್ಕೂ ಹೆಚ್ಚು ಮಲ ಹೊರುವವರಿದ್ದಾರೆ ಎಂದು ಸರ್ಕಾರ ಗುರುತಿಸಿತ್ತು. ಆದರೆ, 2013ರಲ್ಲಿ ಸಫಾಯಿ ಕರ್ಮಚಾರಿ ಆಯೋಗ ಮನೆ ಮನೆ ತೆರಳಿ ಮಲ ಹೊರುವ ಕಾರ್ಯದಲ್ಲಿ ತೊಡಗಿರುವವರನ್ನು ಗುರುತಿಸಿದ್ದಾರೆ. ಅದರಂತೆ ಬೆಂಗಳೂರಿನಲ್ಲಿಯೇ 202 ಮಂದಿ ಇಂದಿಗೂ ಇಂತಹ ಕೆಲಸಗಳಲ್ಲಿ ತೊಡಗಿಕೊಂಡಿದ್ದು, ರಾಜ್ಯದಾದ್ಯಂತ ಗ್ರಾಮೀಣ ಭಾಗದಲ್ಲಿ 470 ಹಾಗೂ ನಗರ ಪ್ರದೇಶದಲ್ಲಿ 302 ಮಂದಿಯಿರುವುದು ಕಂಡುಬಂದಿದೆ. 

ಸುಪ್ರೀಂ ಕೋರ್ಟ್‌ ಆದೇಶವೇನು?: ಸುಪ್ರೀಂ ಕೋರ್ಟ್‌ 1993ರಲ್ಲಿ “ದಿ ಎಂಪ್ಲಾಯಮೆಂಟ್‌ ಆಫ್ ಮ್ಯಾನ್ಯುಯಲ್‌ ಸ್ಕೆವೇಂಜರ್ ಅಂಡ್‌ ಕನ್ಸ್‌ಟ್ರಕ್ಷನ್‌ ಅಫ್ ಡ್ರೈ ಲೆಟ್ರೀನ್ಸ್‌ (ಪ್ರೊಹಿಬಿಷನ್‌) ಆಕ್ಟ್’ ಪ್ರಕಾರ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿ ಆದೇಶ ಹೊರಡಿಸಿತ್ತು. ಸುಪ್ರೀಂ ಕೋರ್ಟ್‌ ಆದೇಶದಂತೆ ಕೇಂದ್ರ ಸರ್ಕಾರ 2013ರಲ್ಲಿ “ದಿ ಪ್ರೊಹಿಬಿಷನ್‌ ಆಫ್ ಎಂಪ್ಲಾಯಿಮೆಂಟ್‌ ಆಸ್‌ ಮ್ಯಾನ್ಯುಯಲ್‌ ಸ್ಕೆವೇಂಜರ್ ಅಂಡ್‌ ದೇರ್‌ ರಿಹೆಬಿಲಿಟೇಷನ್‌ ರೂಲ್ಸ್‌-2013′ ಜಾರಿಗೊಳಿಸಿದೆ. ಅದರಂತೆ ಶೌಚಾಲಯ ಗುಂಡಿ ಮತ್ತು ಒಳಚರಂಡಿಗಳ ಸ್ವತ್ಛಗೊಳಸಲು ವ್ಯಕ್ತಿಯನ್ನು ನೇರವಾಗಿ ಅಥವಾ ಪರೋಕ್ಷವಾಗಿ ನೇಮಿಸುವುದು ಮತ್ತು ಬಳಸುವುದು ಶಿಕ್ಷಾರ್ಹ ಅಪರಾಧವಾಗಿದೆ. 

Advertisement

ಕಾನೂನು ಉಲ್ಲಂಘನೆಗೆ ಶಿಕ್ಷೆಯೇನು?: ದಿ ಪ್ರೊಹಿಬಿಷನ್‌ ಆಫ್ ಎಂಪ್ಲಾಯಿಮೆಂಟ್‌ ಆಸ್‌ ಮ್ಯಾನ್ಯುಯಲ್‌ ಸ್ಕೆವೇಂಜರ್ ಅಂಡ್‌ ದೇರ್‌ ರಿಹೆಬಿಲಿಟೇಷನ್‌ ನಿಯಮಗಳು – 2013ರ ಅಡಿಯಲ್ಲಿ ಪ್ರಕರಣ ದಾಖಲಾದರೆ, ತಪ್ಪಿತಸ್ಥರಿಗೆ ಜಾಮೀನು ರಹಿತ 6 ತಿಂಗಳ ಕರಾಗೃಹ ವಾಸ ಹಾಗೂ 2 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಆದರೆ, ಪೊಲೀಸರು ಕಾಯ್ದೆಯಡಿಯಲ್ಲಿ ಪ್ರಕರಣಗಳನ್ನು ದಾಖಲಿಸುವ ಬದಲಿಗೆ, ನಿರ್ಲಕ್ಷ್ಯವೆಂದು ಪ್ರಕರಣ ದಾಖಲಿಸುತ್ತಿರುವುದರಿಂದ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತಿಲ್ಲವೆಂದು ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ ಆರೋಪಿಸಿದ್ದಾರೆ. 

ಶೌಚ ಗುಂಡಿಗಿಳಿದರೆ ಸಾಯುವುದೇಕೆ?: ಒಳಚರಂಡಿ ಅಥವಾ ಗಟಾರದಲ್ಲಿ  ಬೀರುವ ದುರ್ವಾಸನೆಯಲ್ಲಿ ಕಾರ್ಬನ್‌ ಮೊನಾಕ್ಸೈಡ್‌, ಮೀಥೆನ್‌, ಹೈಡ್ರೋ ಸಲ್ಪೆ„ಡ್‌ ಇರುತ್ತವೆ. ಇದರಲ್ಲಿ ಕಾರ್ಬನ್‌ ಮೊನಾಕ್ಸೈಡ್‌ ವಿಷಕಾರಿಯಾಗಿದ್ದು, ಉಸಿರಾಟದ ಮೂಲಕ ದೇಹವನ್ನು ಸೇರಿದ ಕೆಲ ಕ್ಷಣಗಳಲ್ಲೇ ಸಾವು ಸಂಭವಿಸುತ್ತದೆ. ತೆರೆದ ಪ್ರದೇಶವಾದರೆ ಆಮ್ಲಜನಕ ಹೆಚ್ಚಿರುವುದರಿಂದ ಹೆಚ್ಚಿನ ಸಮಸ್ಯೆಯಾಗುವುದಿಲ್ಲ.

ಆದರೆ ಗಾಳಿಯಾಡದ ಪ್ರದೇಶದಲ್ಲಿ ಕಾರ್ಬನ್‌ ಮೊನಾಕ್ಸೈಡ್‌ ಹೆಚ್ಚಾದರೆ ಸಾವು ತಪ್ಪಿದ್ದಲ್ಲ. ನಿರಂತರವಾಗಿ ಶೌಚಗುಂಡಿ ಸ್ವತ್ಛತಾ ಕಾರ್ಯದಲ್ಲಿ ತೊಡಗುವುದರಿಂದ ಮಾರಣಾಂತಿಕ ರೋಗಗಳು ಹರಡುವುದಲ್ಲದೆ, ನಿರಂತರ ಸೇವನೆಯಿಂದ ಮನುಷ್ಯನ ಜೀವಿತಾವಧಿ ಕಡಿಮೆಯಾಗುತ್ತದೆ ಎಂಬುದು ವೈದ್ಯರ ಅಭಿಪ್ರಾಯವಾಗಿದೆ.

ಪ್ರಕರಣವನ್ನು ಆಯೋಗ ಗಂಭೀರವಾಗಿ ಪರಿಗಣಿಸಿದ್ದು, ತಪ್ಪಿತಸ್ಥರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮಕೈಗೊಳ್ಳಲಾಗುವುದು. ಮೃತರ ಕುಟುಂಬದವರಿಗೆ ತಲಾ 10 ಲಕ್ಷ ರೂ. ಪರಿಹಾರ ನೀಡಲಾಗುವುದು. ಸೋಮವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. 
-ಎಂ.ಆರ್‌.ವೆಂಕಟೇಶ್‌, ರಾಜ್ಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ

ಅಪಾರ್ಟ್‌ಮೆಂಟ್‌ ಒಳಗಡೆ ನಡೆಯುತ್ತಿರುವ ನಾಲ್ಕನೇ ದುರ್ಘ‌ಟನೆ ಇದಾಗಿದೆ. ಈ ಹಿಂದಿನ ಯಾವ ಘಟನೆಯಲ್ಲಿಯೂ ತಪ್ಪಿಸ್ಥತರಿಗೆ ಶಿಕ್ಷೆಯಾಗಿಲ್ಲ. ಆಡಳಿತ ವ್ಯವಸ್ಥೆಯ ವೈಫ‌ಲ್ಯದಿಂದಾಗಿ ಅಮಾಯಕರು ಬಲಿಯಾಗುತ್ತಿದ್ದು, ಅವರಿಗೂ ನ್ಯಾಯವೂ ದೊರೆಯದಂತಾಗಿದೆ.
-ಮೈತ್ರೇಯಿ, ಅಲ್ಟರ್‌ನೆಟ್‌ ಲಾ ಫೋರಂ ಸಂಸ್ಥೆ ಸದಸ್ಯೆ

ಎಸ್‌ಟಿಪಿ ಶುಚಿಗೊಳಿಸಲು ಹೋಗಿ ಮೂವರು ಸಾವನ್ನಪ್ಪಿರುವ ದುರಂತದ ಹಿಂದೆ ಅಪಾರ್ಟ್‌ಮೆಂಟ್‌ನ ನಿರ್ಲಕ್ಷ್ಯವೂ ಇದೆ. ಅಪಾರ್ಟ್‌ಮೆಂಟ್‌ ಹಾಗೂ ಸರ್ಕಾರದಿಂದ ಮೃತ ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತಿದ್ದು, ಪಾಲಿಕೆಯಿಂದ ಮೂರು ಕುಟುಂಬಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗುವುದು. 
-ಆರ್‌.ಸಂಪತ್‌ರಾಜ್‌, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next