ಗದಗ: ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಗೆ ಅರ್ಜಿ ಹಾಕಿದವರ ಸಂಖ್ಯೆ ಕಳೆದ ವರ್ಷಕ್ಕೆ ಹೋಲಿಸಿದರೆ ಸುಮಾರು 7,000 ಹೆಚ್ಚಳಗೊಂಡಿದೆ. 2015ರಲ್ಲಿ ಕೆ-ಸೆಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಿದವರ ಸಂಖ್ಯೆ 84 ಸಾವಿರ ಇದ್ದರೆ, 2016ರಲ್ಲಿ ಆಕಾಂಕ್ಷಿಗಳ ಸಂಖ್ಯೆ 66 ಸಾವಿರಕ್ಕೆ ಇಳಿಕೆಯಾಗಿತ್ತು. ಈ ವರ್ಷ ಅರ್ಜಿ ಸಲ್ಲಿಸಿದರ ಸಂಖ್ಯೆ 73,608ಕ್ಕೆ ತಲುಪಿದ್ದು ಕಳೆದ ವರ್ಷಕ್ಕೆ ಹೋಲಿಸಿದರೆ ಅಧಿಕಗೊಂಡಿದೆ.
ವಾಣಿಜ್ಯ ಶಾಸ್ತ್ರಕ್ಕೆ ಹೆಚ್ಚು: ಪ್ರತಿ ವರ್ಷ ಕರೆಯಲಾಗುವ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆಯಲ್ಲಿ ಒಟ್ಟು 39 ವಿಷಯ ಗಳಿದ್ದು ಈ ಸಲ ವಾಣಿಜ್ಯಶಾಸ್ತ್ರದಲ್ಲಿ ಉಪನ್ಯಾಸಕ ಹುದ್ದೆ ಅರ್ಹತೆ ಬಯಸಿ ಅರ್ಜಿ ಸಲ್ಲಿಸಿದವರ ಸಂಖ್ಯೆಯೇ 10,823. ಕನ್ನಡ ವಿಷಯಕ್ಕೆ 7,581. ಇನ್ನು ಅರ್ಥಶಾಸ್ತ್ರ ವಿಷಯಕ್ಕೆ ಅರ್ಜಿ ಸಲ್ಲಿಸಿದವರ ಸಂಖ್ಯೆ 5,922. ಒಟ್ಟು 39 ವಿಷಯಗಳ ಪೈಕಿ ಲಿಂಗ್ವಿಸ್ಟಿಕ್ ವಿಷಯದಲ್ಲಿ ಉಪನ್ಯಾಸಕ ಅರ್ಹತೆ ಬಯಸಿದವರು ಕೇವಲ 45 ಜನ ಅಭ್ಯರ್ಥಿಗಳು ಮಾತ್ರ. ಅಂತ್ರಾಪಾಲಜಿ ವಿಷಯ ಉಪನ್ಯಾಸಕ ಹುದ್ದೆ ಅರ್ಹತೆ ಬಯಸಿ ಅರ್ಜಿ ಸಲ್ಲಿಸಿದವರ ಸಂಖ್ಯೆ 46. ಫಿಲಾಸಫಿ ವಿಷಯಕ್ಕೆ ಅರ್ಜಿ ಸಲ್ಲಿಸಿದವರು 47ಜನ ಆಕಾಂಕ್ಷಿಗಳು ಮಾತ್ರ
ಈ ವರ್ಷ ಕೆ-ಸೆಟ್ ಪರೀಕ್ಷೆಗೆ ಅರ್ಜಿ ಆಹ್ವಾನಿಸುವುದು ವಿಳಂಬವಾಗಿದ್ದು ನಿಜ. ಕೆಲ ತಾಂತ್ರಿಕ ಕಾರಣಗಳಿಂದ ತಡವಾಗಿದೆಯಷ್ಟೇ. ವಿಶೇಷವಾದ ಯಾವುದೇ ಕಾರಣಗಳಿಲ್ಲ. ಪ್ರತಿ ವರ್ಷದಂತೆ ಈ ವರ್ಷವೂ ಅರ್ಜಿ ಕರೆಯಲಾಗಿದ್ದು, ಡಿಸೆಂಬರ್ ಅಂತ್ಯಕ್ಕೆ ಪರೀಕ್ಷೆ ನಡೆಯಲಿದೆ. ಅದಕ್ಕಾಗಿ ರಾಜ್ಯದ 11 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲು ಸಿದ್ಧತೆ ನಡೆದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.
ಪ್ರೊ.ರಾಜಶೇಖರ್, ಸಂಯೋಜಕ, ಕೆ-ಸೆಟ್ ಸೆಂಟರ್, ಮೈಸೂರು
● ಬಸವರಾಜ ಕರುಗಲ್