Advertisement

ಹು-ಧಾ ವಾರ್ಡ್‌ಗಳ ಸಂಖ್ಯೆ 67ರಿಂದ 82ಕ್ಕೆ ಹೆಚ್ಚಳ

03:16 PM Jul 01, 2017 | |

ಹುಬ್ಬಳ್ಳಿ: ಮಹಾನಗರದ ವಾರ್ಡ್‌ಗಳ ಪುನರ್‌ ವಿಂಗಡನೆ ಕುರಿತು ನಗರಾಭಿವೃದ್ಧಿ ಇಲಾಖೆ ಅಧಿಸೂಚನೆ ಹೊರಡಿಸಿದ್ದು, ಆಕ್ಷೇಪಣೆಗಳಿದ್ದರೆ ಜುಲೈ 8ರೊಳಗೆ ದಾಖಲೆಗಳೊಂದಿಗೆ ಸಲ್ಲಿಸಬೇಕು ಎಂದು ಪಾಲಿಕೆ ಆಯುಕ್ತ ಸಿದ್ದಲಿಂಗಯ್ಯ ಹಿರೇಮಠ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

Advertisement

ನಗರಾಭಿವೃದ್ಧಿ ಇಲಾಖೆ ರಾಜ್ಯಪತ್ರದಲ್ಲಿ ಮಹಾನಗರ ಪಾಲಿಕೆ ವಾರ್ಡ್‌ಗಳ ಸಂಖ್ಯೆ 67ರಿಂದ 82ಕ್ಕೆ ಹೆಚ್ಚಳಗೊಂಡಿರುವುದನ್ನು ಪ್ರಕಟಿಸಿದೆ. ಕರ್ನಾಟಕ ಮುನ್ಸಿಪಲ್‌ ಕಾರ್ಪೋರೇಶನ್‌ ಕಾಯಿದೆ 1976 ಅನ್ವಯ 2011ರ ಜನಗಣತಿ ಆಧಾರದ ಮೇಲೆ ವಾರ್ಡ್‌ ಪುನರ್‌ ವಿಂಗಡನೆ ಮಾಡಲಾಗಿದೆ ಎಂದರು. 

10ರಿಂದ 13 ಸಾವಿರ ಜನಸಂಖ್ಯೆಗೆ ಅನುಗುಣವಾಗಿ ವಾರ್ಡ್‌ ಸಂಖ್ಯೆ ಹೆಚ್ಚಿಸಲಾಗಿದೆ. ಜೂನ್‌ 23ರಂದು ಅಧಿಸೂಚನೆ ಹೊರಡಿಸಲಾಗಿದ್ದು, 15 ದಿನಗಳಲ್ಲಿ ಆಕ್ಷೇಪಣೆಗಳಿದ್ದರೆ ಜಿಲ್ಲಾಧಿಕಾರಿಗೆ ಲಿಖೀತವಾಗಿ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ ಎಂದು ತಿಳಿಸಿದರು. ಧಾರವಾಡ (71) ವಿಧಾನಸಭೆ ಮತಕ್ಷೇತ್ರದಲ್ಲಿ 1,05,946 ಜನಸಂಖ್ಯೆಯಿದ್ದು, 8 ವಾರ್ಡ್‌ಗಳ ಸಂಖ್ಯೆ 9ಕ್ಕೆ ಹೆಚ್ಚಲಿದೆ. 

ಅದೇ ರೀತಿ ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನಸಭಾ ಮತಕ್ಷೇತ್ರದಲ್ಲಿ 2,56,766 ಜನಸಂಖ್ಯೆಯಿದ್ದು, 20 ವಾರ್ಡ್‌ಗಳಿದ್ದವು, ಅವುಗಳ ಸಂಖ್ಯೆ 23ಕ್ಕೆ ಹೆಚ್ಚುವುದು. ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ 2,85,934 ಜನಸಂಖ್ಯೆಯಿದ್ದು, ವಾರ್ಡ್‌ಗಳ ಸಂಖ್ಯೆ 19ರಿಂದ 25ಕ್ಕೇರುವುದು.

ಅದೇ ರೀತಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮತಕ್ಷೇತ್ರದಲ್ಲಿ 2,95,142 ಜನಸಂಖ್ಯೆಯಿದ್ದು, ವಾರ್ಡ್‌ಗಳ ಸಂಖ್ಯೆ 20ರಿಂದ 25ಕ್ಕೆ ಹೆಚ್ಚಲಿದೆ ಎಂದರು. 1955ರಲ್ಲಿ ಅಸ್ತಿತ್ವಕ್ಕೆ ಬಂದ ಮುನ್ಸಿಪಲ್‌ ಕೌನ್ಸಿಲ್‌ 18 ಜನ ಸದಸ್ಯರನ್ನು ಹೊಂದಿತ್ತು. 1962ರಲ್ಲಿ ಹುಬ್ಬಳ್ಳಿ-ಧಾರವಾಡ ನಗರಗಳನ್ನು ಸೇರಿಸಿ ಮುನ್ಸಿಪಲ್‌ ಕಾರ್ಪೋರೇಶನ್‌ ಎಂದು ಮೇಲ್ದರ್ಜೆಗೇರಿಸಲಾಯಿತು. ಅಲ್ಲಿಂದ ಈವರೆಗೆ 7 ಬಾರಿ ವಾರ್ಡ್‌ಗಳ ಮರು ವಿಂಗಡನೆ ಮಾಡಲಾಗಿದೆ ಎಂದರು. 

Advertisement

ಅತಿಕ್ರಮಣ ತೆರವು ನಿರಂತರ: ಅತಿಕ್ರಮಣ ತೆರವು ಕಾರ್ಯಾಚರಣೆ ನಿರಂತರ ನಡೆಯಲಿದೆ. ಪಾಲಿಕೆ ಆಸ್ತಿಯನ್ನು ಅತಿಕ್ರಮಿಸಿಕೊಂಡಿದ್ದನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಒಂದೆರಡು ದಿನಗಳಲ್ಲಿ ತೆರವು ಕಾರ್ಯಾಚರಣೆ ಮುಗಿಯುವಂಥದ್ದಲ್ಲ ಎಂದು ತಿಳಿಸಿದರು. 

ಸಿಬ್ಬಂದಿ ವಿರುದ್ಧ ಎಫ್ಐಆರ್‌: ನಗರದ ಕೆಲ ಬಡಾವಣೆಗಳಲ್ಲಿ ತೆರಿಗೆ ತುಂಬುವುದಾಗಿ ಹಣ ಪಡೆದು ನಾಪತ್ತೆಯಾಗಿದ್ದ ಕರ ವಸೂಲಿಗಾರ ಎಂ.ಸಿ. ಬೂದಿಹಾಳಮಠ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ. ಅಲ್ಲದೇ ಸೇವೆಯಿಂದ ವಜಾಗೊಳಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ. ವಲಯ ಕಚೇರಿ 5ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಬೂದಿಹಾಳಮಠ ಅನಧಿಕೃತ ಗೈರುಹಾಜರಾಗಿದ್ದರು ಎಂದರು. 

ಆಸ್ತಿ ತೆರಿಗೆ ಭರಿಸುವುದಾಗಿ ಹಲವರಿಂದ ಸುಮಾರು 42,000 ರೂ. ಪಡೆದುಕೊಂಡ ಬೂದಿಹಾಳಮಠ ನಾಪತ್ತೆಯಾಗಿದ್ದಾಗಿ ತಿಳಿಸಿದರು. ಘನ ತ್ಯಾಜ್ಯ ವಿಲೇವಾರಿ ಘಟಕದ ಕುರಿತು ಪ್ರಕರಣ ಉಚ್ಚ ನ್ಯಾಯಾಲಯದಲ್ಲಿದ್ದು, ಅದು ಇತ್ಯರ್ಥಗೊಳ್ಳಬೇಕಿದೆ. ಕೆಲವು ಗುತ್ತಿಗೆದಾರರು ಟೆಂಡರ್‌ ನಡೆಯದಂತೆ ತಡೆಯಲು ಯತ್ನಿಸುತ್ತಿದ್ದಾರೆ ಎಂದರು. ಪಾಲಿಕೆ  ಜಂಟಿ ಆಯುಕ್ತ ಅಜೀಜ್‌ ದೇಸಾಯಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next