Advertisement

ಬಿಐಎಎಲ್‌ನಲ್ಲಿ ವಿಮಾನಯಾನಿಗಳ ಸಂಖ್ಯೆಯಲ್ಲಿ ಶೇ.28 ಏರಿಕೆ

12:43 PM Oct 15, 2018 | Team Udayavani |

ಬೆಂಗಳೂರು: ನಗರದ ಕೆಂಪೇಗೌಡ ಅಂತಾರಾಷ್ಟ್ರೀ ವಿಮಾನ ನಿಲ್ದಾಣ ನಿಗಮದ (ಬಿಐಎಎಲ್‌) ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ತೈಮಾಸಿಕ ಫ‌ಲಿತಾಂಶ ಪ್ರಕಟಗೊಂಡಿದ್ದು, ಈ ಅವಧಿಯಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.28.1ರಷ್ಟು ವೃದ್ಧಿ ಕಂಡುಬಂದಿದೆ.

Advertisement

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ 81.33 ಲಕ್ಷ ಜನ ಪ್ರಯಾಣಿಸಿದ್ದಾರೆ. ಕಳೆದ ವರ್ಷ ಇದೇ ಅವಧಿಯಲ್ಲಿ ಸಂಚರಿಸಿದ ಪ್ರಯಾಣಿಕರ ಸಂಖ್ಯೆ 63.51 ಲಕ್ಷ ಇದ್ದು, ಶೇ. 28.1ರಷ್ಟು ಏರಿಕೆಯಾಗಿದೆ. ಇದರಲ್ಲಿ ದೇಶೀಯ ಮತ್ತು ವಿದೇಶಿ ಪ್ರಯಾಣ ಮಾಡಿದವರ ಪ್ರಮಾಣ ಕ್ರಮವಾಗಿ ಶೇ.30.5 ಹಾಗೂ ಶೇ.13.8ರಷ್ಟಿದೆ.

ಅದೇ ರೀತಿ, ವಿಮಾನಗಳ ಹಾರಾಟದಲ್ಲಿ ಕೂಡ ಪ್ರಗತಿ ಕಂಡುಬಂದಿದ್ದು, ಕಳೆದ ವರ್ಷದ ಎರಡನೇ ತೈಮಾಸಿಕಕ್ಕಿಂತ ಶೇ.23.4ರಷ್ಟು ವೃದ್ಧಿಯಾಗಿದೆ. ಕಳೆದ ಮೂರು ತಿಂಗಳಲ್ಲಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ 59,184 ವಿಮಾನಗಳು ಬಂದುಹೋಗಿವೆ. ಕಳೆದ ಬಾರಿ ಇದೇ ಅವಧಿಯಲ್ಲಿ 47,971 ವಿಮಾನಗಳು ಹಾರಾಟ ನಡೆಸಿದ್ದವು. ಆಗಸ್ಟ್‌ 31ರಂದು ಒಂದೇ ದಿನದಲ್ಲಿ 692 ವಿಮಾನಗಳು ಈ ನಿಲ್ದಾಣದ ಮೂಲಕ ಸಂಚರಿಸಿದ್ದು, ವಿಮಾನಗಳ ಕಾರ್ಯಾಚರಣೆ ನಿತ್ಯ ಸರಾಸರಿ 643ಕ್ಕೆ ಏರಿಕೆಯಾಗಿದೆ.

ಅಲ್ಲದೆ, ಕಾರ್ಗೊದಲ್ಲಿ ಕೂಡ ಶೇ. 16.4ರಷ್ಟು ವೃದ್ಧಿ ಸಾಧಿಸಿದ್ದು, 1.04 ಲಕ್ಷ ಮೆಟ್ರಿಕ್‌ ಟನ್‌ನಷ್ಟು ಸರಕು ಸಾಗಣೆ ಮಾಡಲಾಗಿದೆ. ಇದರಲ್ಲಿ 64,451 ಮೆಟ್ರಿಕ್‌ ಟನ್‌ ಅಂತರರಾಷ್ಟ್ರೀಯ ಮತ್ತು 39,642 ಮೆಟ್ರಿಕ್‌ ಟನ್‌ ದೇಶೀಯವಾಗಿ ರಫ್ತು ಮಾಡಲಾಗಿದ್ದು, ಕ್ರಮವಾಗಿ ಶೇ. 15.8 ಮತ್ತು ಶೇ. 17.4ರಷ್ಟು ಹೆಚ್ಚಳವಾಗಿದೆ. ಅಂದಹಾಗೆ ದೇಶೀಯ ವಿಮಾನ ಪ್ರಯಾಣಿಕರಿಗೆ ಈಗಲೂ ದೆಹಲಿ (1.12 ಲಕ್ಷ), ಮುಂಬೈ (9.06 ಲಕ್ಷ) ಮತ್ತು ಹೈದರಾಬಾದ್‌ (4.55 ಲಕ್ಷ) ಅಚ್ಚುಮೆಚ್ಚು ಎನ್ನಲಾಗಿದೆ.  

ಬೆಂಗಳೂರು ದೇಶದ ಅತಿಹೆಚ್ಚು ದಟ್ಟಣೆವುಳ್ಳ ವಿಮಾನ ನಿಲ್ದಾಣಗಳಲ್ಲಿ ಮೂರನೇ ಸ್ಥಾನದಲ್ಲಿದೆ. ಹಾಗೂ ಎರಡನೇ ಅತಿ ವೇಗವಾಗಿ ಪ್ರಗತಿ ಹೊಂದುತ್ತಿರುವ ನಿಲ್ದಾಣವಾಗಿದೆ. ಹೊಸ ತಂತ್ರಜ್ಞಾನಗಳ ಅಳವಡಿಕೆ, ಪ್ರಯಾಣಿಕ ಸ್ನೇಹಿ ಸೇವೆಗಳಿಂದ ಈ ಪ್ರಗತಿ ಸಾಧ್ಯವಾಗಿದೆ ಎಂದು ಬಿಐಎಎಲ್‌ ವ್ಯವಸ್ಥಾಪಕ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿ ಮರಾರ್‌ ಸಂತಸ ವ್ಯಕ್ತಪಡಿಸಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next