Advertisement

ಹಾಸನಾಂಬೆ ದರ್ಶನಕ್ಕೆ ಭಕ್ತರ ಸಂಖ್ಯೆ ಕ್ಷೀಣ

09:24 PM Oct 19, 2019 | Team Udayavani |

ಹಾಸನ: ಹಾಸನಾಂಬೆಯ ದರ್ಶನದ 3 ನೇ ದಿನವಾದ ಶನಿವಾರ ಭಾರೀ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕೆಯಿತ್ತು. ಆದರೆ ನಿರೀಕ್ಷಿಸಿದಷ್ಟು ಭಕ್ತರು ಬಾರದಿದ್ದರಿಂದ ಬೆಳಗ್ಗೆಯಿಂದ ಮಧ್ಯಾಹ್ನದವರಗೆ ಭಕ್ತರು ಸರದಿಯ ಸಾಲಿನಲ್ಲಿ ಸಲೀಸಾಗಿ ತೆರಳಿ ದೇವಿಯ ದರ್ಶನಪಡೆದರು. ಭಕ್ತರು ಭಾರೀ ಸಂಖ್ಯೆಯಲ್ಲಿ ಇಲ್ಲದಿದ್ದರಿಂದ ಗಾಂಧೀ ಬಜಾರ್‌ ರಸ್ತೆಯಿಂದ ಚನ್ನವೇಶವ ದೇವಾಲಯದ ರಸ್ತೆ ವರೆಗೂ ದ್ವಚಕ್ರಗಳ ಸಂಚಾರ ಸಹಜವಾಗಿತ್ತು.

Advertisement

ಭದ್ರತೆಗೆ ನಿಯೋಜನೆಯಾಗಿದ್ದ ಪೊಲೀಸರೂ ಅರಾಮವಾಗಿದ್ದರು. ಆಟೋ ಚಾಲಕರೂ ಪ್ರಯಾಣಿಕರಿಗಾಗಿ ಕಾಯುತ್ತಿದ್ದರು. ಶನಿವಾರ ದೇವಾಲಯಕ್ಕೆ ಅತಿ ಗಣ್ಯರ ಆಗಮನವೂ ಇರಲಿಲ್ಲ. ಹೈಕೋರ್ಟ್‌ ನ್ಯಾಯಾಧೀಶ ನಟರಾಜ್‌ ಮತ್ತು ಹಾಸನ ಜಿಪಂ ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್‌ ಅವರು ದೇವಿಯ ದರ್ಶನ ಪಡೆದರು.

ಮಳೆಯ ಆತಂಕ: ಶನಿವಾರ ಸಂಜೆ ವೇಳೆಗೆ ಭಕ್ತರ ಸಂಖ್ಯೆ ಏರುವ ನಿರೀಕ್ಷೆಯಲ್ಲಿ ಪೊಲೀಸರು ಸಜ್ಜಾಗಿದ್ದರು. ಮಧ್ಯಾಹ್ನದವರೆಗೆ ಶಾಲೆ – ಕಾಲೇಜು ಮುಗಿಸಿಕೊಂಡು ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಭಕ್ತರು ಸಂಜೆ ವೇಳೆಗೆ ಬರುವ ನಿರೀಕ್ಷೆಯಿತ್ತು. ಆದರೆ ಸಂಜೆ ವೇಳೆಯ ಆತಂಕದಲ್ಲಿ ಕಳೆದ ಮೂರು ದಿನಗಳಿಂದಲೂ ಸಂಜೆ ವೇಳೆಯೂ ಭಕ್ತರ ಸಂಖ್ಯೆ ನಿರೀಕ್ಷಿಸಿದಷ್ಟಿಲ್ಲ. ಭಾನುವಾರ ರಜಾ ದಿನವಾಗಿರುವುದರಿಂದ ಮುಂಜಾನೆಯಿಂದ ರಾತ್ರಿವರೆಗೂ ಭಾರೀ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಿದೆ.

ವ್ಯಾಪಾರವಿಲ್ಲದೇ ಬೇಸರ: ಪ್ರತಿ ವರ್ಷದಂತೆ ಈ ವರ್ಷವೂ ಭಾರೀ ಸಂಖ್ಯೆಯಲ್ಲಿ ಭಕ್ತರು ಬರುವ ನಿರೀಕ್ಷೆಯಲ್ಲಿ ದೇವಸ್ಥಾನದ ಸುತ್ತಲೂ ಹೊರ ಜಿಲ್ಲೆಗಳು ಹಾಗೂ ಹೊರ ರಾಜ್ಯಗಳಿಂದ ಬೀದಿ ಬದಿ ವ್ಯಾಪಾರಿಗಳು ಆಗಮಿಸಿದ್ದಾರೆ. ಆದರೆ ಕಳೆದ ಎರಡು ದಿನಗಳಿಂದ ವ್ಯಾಪಾರವಿಲ್ಲದೇ ಗಿರಾಕಿಗಳಿಗಾಗಿ ವ್ಯಾಪಾರಸ್ಥರು ಎದರು ನೋಡುತ್ತಿದ್ದಾರೆ. ಪ್ರತಿ ದಿನವೂ ಸಂಜೆಯಿಂದ ಮಧ್ಯರಾತ್ರಿವರೆಗೂ ಮಳೆ ಬರುತ್ತಿರುವುದರಿಂದ ದೇವಿಯ ರ್ದನಕ್ಕೆ ಜನರು ಬರುತ್ತಿಲ್ಲ ಎಂದು ಬೊಂಬೆಗಳ ವ್ಯಾಪಾರಿ ಬೆಂಗಳೂರಿನ ಸತೀಶ್‌ ಎಂಬವರು ಅಭಿಪ್ರಾಯಪಟ್ಟರು.

ಸುಂಕದ ಹೆಸರಲ್ಲಿ ಸುಲಿಗೆ: ಹಾಸನಾಂಬೆ ದೇವಾಲಯದ ಸುತ್ತಮುತ್ತ ಇರುವ ಮನೆಗಳು ಹಾಗೂ ಅಂಗಡಿಗಳ ಮಾಲೀಕರಿಗೆ ಒಂದಿಷ್ಟು ಬಾಡಿಗೆ ಕೊಟ್ಟು ರಸ್ತೆ ಬದಿ ತಾತ್ಕಾಲಿಕವಾಗಿ ಅಂಗಡಿ ಹಾಕಿಕೊಂಡಿದ್ದಾರೆ. ವ್ಯಾಪಾರವಿಲ್ಲವೆಂದು ಪರದಾಡುತ್ತಿರುವ ಆ ವ್ಯಾಪಾರಿಗಳ ಬಳಿಯೂ ಹಾಸನ ನಗರಸಭೆಯಿಂದ ಸುಂಕ ವಸೂಲಿ ಗುತ್ತಿಗೆ ಪಡೆದಿರವವರು ಪ್ರತಿ ದಿನವೂ 50 ರೂ. ವಸೂಲಿ ಮಾಡುತ್ತಿದ್ದಾರೆ. 20 ರೂ – 30 ರೂ. ರಶೀದಿ ಕೊಟ್ಟು 50 ರೂ. ಸುಂಕ ವಸೂಲಿ ಮಾಡುತ್ತಿರುವ ಬಗ್ಗೆಯೂ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement

ಭಕ್ತರ ಮೆಚ್ಚುಗೆ: ಈ ವರ್ಷ ಭಕ್ತರಿಗೆ ದೇವಾಲಯದ ಆವರಣ ಹಾಗೂ ಸರದಿಯ ಸಾಲಿನ ವ್ಯವಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ. ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆ ಹಾಗೂ ಸರದಿಯ ಸಾಲುಗಳಲ್ಲಿ ಕೆಲಕಾಲ ವಿಶ್ರಮಿಸಿಕೊಳ್ಳಲು ಕುರ್ಚಿಯ ವ್ಯವಸ್ಥೆಯನ್ನೂ ಮಾಡಲಾಗಿದೆ. ದೇವಿಯ ದರ್ಶನಕ್ಕೆ ದಿವ್ಯಾಂಗರಿಗಾಗಿ ಜಿಲ್ಲಾಡಳಿತದಿಂದ ಈ ಬಾರಿ ಉತ್ತಮ ರೀತಿಯ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ದೇವಿ ದರ್ಶನ ಪಡೆದ ದಿವ್ಯಾಂಗರು ಸಂತಸ ವ್ಯಕ್ತಪಡಿಸಿ ಜಿಲ್ಲಾಡಳಿತಕ್ಕೆ ಧನ್ಯವಾದ ತಿಳಿಸಿದರು.

ಊಟದ ಬದಲು ದೊನ್ನೆಯಲ್ಲಿ ಪ್ರಸಾದ: ಹಾಸನಾಂಬ ಜಾತ್ರಾ ಮಹೋತ್ಸವದ ಸಿದ್ಧತೆಯ ಸಂದರ್ಭದಲ್ಲಿ ಮಾಹಿತಿ ನೀಡಿದ್ದ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಈ ವರ್ಷದಿಂದ ಭಕ್ತರಿಗೆ ಊಟದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದ್ದರು. ಆದರೆ ಚನ್ನಕೇಶವ ದೇವಾಲಯದ ಆವರಣದಲ್ಲಿ ದೊನ್ನೆಗಳಲ್ಲಿ ದಿನಕ್ಕೆ ಎರಡು ಬಾರಿ ಉಪಹಾರ ನೀಡುವ ವ್ಯವಸ್ಥೆ ಮಾಡಿದ್ದಾರೆ.

ಚಿತ್ರಾನ್ನ, ಖಾರಾಪೊಂಗಲ್‌, ಟೊಮೋಟೊ ಭಾತ್‌, ವಾಂಗಿಭಾತ್‌, ಬಿಸಿಬೇಳೆ ಭಾತ್‌, ತರಕಾರಿ ಪಲಾವ್‌, ಮೆಂತ್ಯಭಾತ್‌ನ್ನು 250 ಗ್ರಾಂ ಪ್ರಮಾಣದಲ್ಲಿ ಭಕ್ತರಿಗೆ ವಿತರಿಸಲಾಗುತ್ತಿದೆ. ಪ್ರತಿ ದೊನ್ನೆ ಪ್ರಸಾದಕ್ಕೆ 5.94 ರೂ. ದರದಲ್ಲಿ ಪೂರೈಕೆ ಮಾಡುವ ಗುತ್ತಿಗೆಯನ್ನು ಪ್ರೀತಿ ವರ್ಧನ್‌ ಅವರು ಪಡೆದುಕೊಂಡಿದ್ದಾರೆ. ಇದೇ ಗುತ್ತಿಗೆದಾರರು ದೇವಾಲಯದ ರ್ಕವ್ಯಕ್ಕೆ ನಿಯೋಜನೆಯಾಗಿರುವ ಕಂದಾಯ, ಪೊಲೀಸ್‌ ಇಲಾಖೆಯ ಸಿಬ್ಬಂದಿಗೂ ಊಟ ಪೂರೈಸುವ ಗುತ್ತಿಗೆ ಪಡೆದುಕೊಂಡಿದ್ದಾರೆ.

ಸಿಬ್ಬಂದಿಗೆ ಒಂದು ತಿಂಡಿ ಮತ್ತು ಎರಡು ಊಟಕ್ಕೆ 59.40 ರೂ.ದರ ನಮೂದಿಸಿ ಟೆಂಡರ್‌ ಮೂಲಕ ಕೀರ್ತಿ ವರ್ಧನ್‌ ಅವರು ಗುತ್ತಿಗೆ ಪಡೆದುಕೊಂಡಿದ್ದಾರೆ. ಭಕ್ತರಿಗೆ ಪ್ರಸಾದ ಮತ್ತು ಸಿಬ್ಬಂದಿಯ ಊಟವನ್ನು ಇಷ್ಟು ಕನಿಷ್ಠ ದರದಲ್ಲಿ ಪೂರೈಕೆ ಮಾಡುವುದು ಕಷ್ಟ. ಆದರೆ ಹಾಸನಾಂಬೆಯ ಸೇವೆ ಎಂಬ ದೃಷ್ಟಿಯಿಂದ ಉಪಹಾರ ಮತ್ತು ಊಟ ಪೂರೈಸುವ ಹೊಣೆಯನ್ನು ವಹಿಸಿಕೊಂಡಿದ್ದೇನೆ ಎಂದು ಪ್ರೀತಿವರ್ಧನ್‌ ಅವರು ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next