Advertisement

ನಾಲ್ಯಪದವು ಹಿ.ಪ್ರಾ. ಶಾಲೆ: ಮೂಲಸೌಕರ್ಯದ ನಿರೀಕ್ಷೆ

10:10 PM Sep 03, 2021 | Team Udayavani |

ಸರಕಾರಿ ಶಾಲೆಯ ದಾಖಲಾತಿ ಹೆಚ್ಚಳವಾಗುತ್ತಿರುವುದು ಸಂತಸದ ವಿಚಾರವಾದರೂ ಮೂಲ ಸೌಕರ್ಯಗಳ ಕೊರತೆ ಚಿಂತೆಗೆ ಕಾರಣವಾಗಿದೆ. ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಉದಯವಾಣಿ ಸುದಿನವು “ಮಕ್ಕಳು ಬರುವರು ಶಾಲೆಗೆ – ಸೌಲಭ್ಯ ಕಲ್ಪಿಸಿ’ಅಭಿಯಾನದ ಮೂಲಕ ಬೆಳಕು ಚೆಲ್ಲಲಿದೆ.

Advertisement

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ ವರ್ಷಕ್ಕಿಂತ ಅಧಿಕ (103) ವಿದ್ಯಾರ್ಥಿಗಳ ದಾಖಲಾತಿಯೊಂದಿಗೆ ಗುರುತಿಸಿಕೊಂಡಿರುವ ಶಕ್ತಿನಗರ ಸಮೀಪದ ನಾಲ್ಯಪದವು ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯು ಮೂಲ ಸೌಕರ್ಯವನ್ನು ಹೊಂದಿದ್ದರೂ ಇನ್ನಷ್ಟು ನೆರವಿನ ನಿರೀಕ್ಷೆಯಲ್ಲಿದೆ.

1962ರಲ್ಲಿ ಆರಂಭವಾದ ಇಲ್ಲಿನ ಶಾಲೆ ಹಿಂದೆ ಮಾದರಿ ಶಾಲೆ ಎಂದೇ ಜನಜನಿತವಾಗಿತ್ತು. ಇಲ್ಲಿ ಕಳೆದ ವರ್ಷ 256 ವಿದ್ಯಾರ್ಥಿಗಳಿದ್ದರೆ, ಈ ವರ್ಷ 360ಕ್ಕೆ ಏರಿಕೆಯಾಗಿದೆ!

ಶಾಲೆಯಲ್ಲಿ 1ರಿಂದ 8ನೇ ತರಗತಿವರೆಗೆ ಇದೆ. ಆಂಗ್ಲಮಾಧ್ಯಮವೂ ಇರುವ ಕಾರಣದಿಂದ 1ನೇ ತರಗತಿಗೆ ಸುಮಾರು 60 ಮಕ್ಕಳ ದಾಖಲಾತಿ ಯಾಗಿದೆ. ಉಳಿದಂತೆ 2ರಿಂದ 8ನೇ ತರಗತಿವರೆಗೆ ಕೂಡ ಮಕ್ಕಳು ಹೊಸ ದಾಖಲಾತಿ ಯಾಗಿದೆ. ಶಕ್ತಿನಗರ, ರಾಜರಾಜೇಶ್ವರಿ ನಗರ, ರಾಜೀವ ನಗರ, ಮೊಗ್ರೋಡಿ, ಕಾರ್ಮಿಕ ಕಾಲನಿ, ಕುಂಟಲ್ಪಾಡಿ, ದತ್ತನಗರ, ಗುಂಡಳಿಕೆ ಸಹಿತ ವಿವಿಧ ಭಾಗಗಳಿಂದ ಶಾಲೆಗೆ ವಿದ್ಯಾರ್ಥಿಗಳು ಬರುತ್ತಾರೆ.

ಕಳೆದ ವರ್ಷವೂ 100ಕ್ಕಿಂತ ಅಧಿಕ ಮಕ್ಕಳು ಇದೇ ಶಾಲೆಗೆ ಹೆಚ್ಚುವರಿಯಾಗಿ ಸೇರ್ಪಡೆಯಾಗಿದ್ದರು. ಇಲ್ಲಿ ಎಲ್‌ಕೆಜಿ, ಯುಕೆಜಿಯಲ್ಲಿ 80 ಮಕ್ಕಳಿದ್ದಾರೆ. ಜತೆಗೆ 1, 2, 3ನೇ ತರಗತಿ ಆಂಗ್ಲಮಾಧ್ಯಮ ಶಾಲೆ ಇದೆ. ಜತೆಗೆ 6, 7, 8ನೇ ತರಗತಿ ಕೂಡ ಆಂಗ್ಲಮಾಧ್ಯಮವಿದೆ. ಹೀಗಾಗಿ ಸಮೀಪದ ವ್ಯಾಪ್ತಿಯ ಹಲವು ಮಕ್ಕಳು ಇದೇ ಶಾಲೆಯನ್ನು ಅವಲಂಬಿಸಿದ್ದಾರೆ.

Advertisement

ಇದನ್ನೂ ಓದಿ:ಸೋಯಾಬೀನ್‌ ಬೆಳೆಗೆ ರಸ್ಟ್‌ ಫಂಗಸ್‌ ಕಾಟ | ಸೋಯಾ ಬೆಳೆದ ರೈತರೇ ಗಯಾ

ಕೊಠಡಿ ಇದೆಯಾದರೂ ಇನ್ನೂ ಆವಶ್ಯಕತೆಯಿದೆ!
ಶಾಲೆಯಲ್ಲಿ ಹೆಚ್ಚುವರಿ ತರಗತಿ ಕೊಠಡಿಗೆ ಸಮಸ್ಯೆ ಇಲ್ಲ. ಹಾಗಾಗಿ ಸದ್ಯಕ್ಕೆ ಕೊಠಡಿ ಕೊರತೆ ಎದುರಾಗದು ಎಂಬುದು ಶಾಲೆಯ ಆಡಳಿತ ಮಂಡಳಿ ಲೆಕ್ಕಾಚಾರ. “ಹಾಲ್‌’ ಕೂಡ ಇದೆ. ಜತೆಗೆ 10 ಲಕ್ಷ ರೂ.ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಅನುಮೋದನೆ ದೊರಕಿದೆ. ಆದರೂ ಮುಂದೆ ಮಕ್ಕಳ ಸಂಖ್ಯೆ ಏರಿಕೆಯಾಗುತ್ತಿರುವ ಕಾಲದಲ್ಲಿ ಹೆಚ್ಚುವರಿ ಕೊಠಡಿ ಒದಗಿಸುವ ಕಾರ್ಯವನ್ನು ಶಿಕ್ಷಣ ಇಲಾಖೆ ಆದ್ಯತೆಯ ನೆಲೆಯಲ್ಲಿ ಮಾಡ ಬೇಕಿದೆ. ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಶಾಲೆಯನ್ನು ದತ್ತು ತೆಗೆದುಕೊಂಡಿರುವ ಹಿನ್ನೆಲೆಯಲ್ಲಿ ಶಾಲೆಗೆ ಬೇಕಾಗುವ ಪರ್ಯಾಯ ವ್ಯವಸ್ಥೆಗಳನ್ನು ಮಾಡಿಕೊಡುವ ನಿಟ್ಟಿನಲ್ಲಿ ಇತ್ತೀಚೆಗೆ ಸಭೆ ಕೂಡ ನಡೆಸಿದ್ದಾರೆ.

ಶಿಕ್ಷಕರ ನೇಮಕ ಅಗತ್ಯ
ಮುಖ್ಯಶಿಕ್ಷಕರು, ದೈಹಿಕ ಶಿಕ್ಷಕರು ಸಹಿತ 8 ಶಿಕ್ಷಕರು ಇದ್ದಾರೆ. ಆದರೆ ಮಕ್ಕಳ ಸಂಖ್ಯೆ ಏರಿಕೆಯಾಗಿರುವ ಕಾರಣದಿಂದ ಹೆಚ್ಚುವರಿಯಾಗಿ ಕನಿಷ್ಠ 5 ಶಿಕ್ಷಕರನ್ನು ಸರಕಾರ ಇಲ್ಲಿಗೆ ನಿಯೋಜಿಸಬೇಕಿದೆ. ಬಹುಮುಖ್ಯವಾಗಿ 1, 2, 3ನೇ ತರಗತಿಯಲ್ಲಿ 150ಕ್ಕೂ ಅಧಿಕ ಮಕ್ಕಳು ಇರುವ ಕಾರಣದಿಂದ ಸರಕಾರದ ವತಿಯಿಂದ ಶಿಕ್ಷಕರ ನೇಮಕ ಆಗಲೇಬೇಕಿದೆ ಅಥವಾ ಅತಿಥಿ ಶಿಕ್ಷಕರ ನಿಯೋಜನೆ ಮಾಡಬೇಕಾಗಿದೆ. ಸದ್ಯ ಶಾಲೆಯ ಹಳೆ ವಿದ್ಯಾರ್ಥಿ ಸಂಘ, ಶಾಲಾಭಿವೃದ್ಧಿ ಸಮಿತಿಯು ಶಾಲೆಗೆ ಗೌರವ ಶಿಕ್ಷಕರ ನಿಯೋಜನೆಗೆ ನೆರವಾಗಿದ್ದಾರೆ.

ಸರ್ವ ವ್ಯವಸ್ಥೆಗೆ ಆದ್ಯತೆ
ಶಾಲೆಯಲ್ಲಿ ಈ ಬಾರಿಯೂ ವಿದ್ಯಾರ್ಥಿ ಗಳ ದಾಖಲಾತಿ ಏರಿಕೆಯಾಗಿದೆ. ಪೀಠೊಪಕರಣ ವನ್ನು ಸ್ಥಳೀಯ ದಾನಿಗಳು ಶಾಲೆಗೆ ನೀಡಿದ್ದರೂ ಮಕ್ಕಳ ಸಂಖ್ಯೆ ಏರಿಕೆಯಾಗಿರುವ ಕಾರಣದಿಂದ ಇನ್ನಷ್ಟು ಪೀಠೊಪಕರಣದ ಅಗತ್ಯವಿದೆ. ಭೌತಿಕ ತರಗತಿ ಶುರುವಾಗುವ ಸಮಯದಲ್ಲಿ ಮಕ್ಕಳಿಗೆ ಅನುಕೂಲವಾಗಲು ಶಿಕ್ಷಕರ ನೇಮಕ, ಕೊಠಡಿ, ನೀರಿನ ವ್ಯವಸ್ಥೆಗಳನ್ನು ಮಾಡಲು ಕ್ರಮ ಕೈಗೊಳ್ಳಲಾಗುವುದು. ಶಿಕ್ಷಣ ಇಲಾಖೆಯು ಈ ನಿಟ್ಟಿನಲ್ಲಿ ವಿಶೇಷ ಆದ್ಯತೆ ನೀಡಲಿದೆ.
-ಬಿ. ಸುರೇಶ್‌ ರಾವ್‌, ಮುಖ್ಯ ಶಿಕ್ಷಕರು,
ಕುವೆಂಪು ಶತಮಾನೋತ್ಸವ ಉನ್ನತೀಕರಿಸಿದ ಹಿ.ಪ್ರಾ. ಶಾಲೆ-ನಾಲ್ಯಪದವು

-ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next