Advertisement

ಮುಗುರುಜಾ, ವೀನಸ್‌ ಫೈನಲಿಗೆ

04:00 AM Jul 14, 2017 | Team Udayavani |

ಲಂಡನ್‌: ಗಾರ್ಬಿನ್‌ ಮುಗುರುಜಾ ಅವರು ನೇರ ಸೆಟ್‌ಗಳ ಹೋರಾಟದಲ್ಲಿ ಮಗ್ಡಲೆನಾ ರಿಬರಿಕೋವಾ ಅವರನ್ನು ಉರುಳಿಸಿ ವಿಂಬಲ್ಡನ್‌ ಟೆನಿಸ್‌ ಕೂಟದ ಫೈನಲ್‌ ಹಂತಕ್ಕೇರಿದರು. ಅವರು ವಿಂಬಲ್ಡನ್‌ನಲ್ಲಿ ಫೈನಲಿಗೇರಿರುವುದು ಇದು ಎರಡನೇ ಸಲವಾಗಿದೆ.

Advertisement

ಗ್ರ್ಯಾನ್‌ ಸ್ಲಾಮ್‌ ಕೂಟದಲ್ಲಿ ಮೂರನೇ ಬಾರಿ ಫೈನಲಿಗೇರಿದ್ದ 14ನೇ ಶ್ರೇಯಾಂಕದ ಮುಗುರುಜಾ 6-1, 6-1 ನೇರ ಸೆಟ್‌ಗಳಿಂದ ಜಯ ಸಾಧಿಸಿ ಪ್ರಶಸ್ತಿ ಸುತ್ತಿಗೆ ತಲುಪಿದರು. 2015ರ ವಿಂಬಲ್ಡನ್‌ ಫೈನಲ್‌ನಲ್ಲಿ ಸೆರೆನಾಗೆ ಶರಣಾಗಿದ್ದ ಮುಗುರುಜಾ ಶನಿವಾರದ ಫೈನಲ್‌ನಲ್ಲಿ ಐದು ಬಾರಿಯ ಚಾಂಪಿಯನ್‌ ವೀನಸ್‌ ವಿಲಿಯಮ್ಸ್‌ ಅವರನ್ನು ಎದುರಿಸಲಿದ್ದಾರೆ. ವೀನಸ್‌ ದಿನದ ಇನ್ನೊಂದು ಸೆಮಿಫೈನಲ್‌ ಪಂದ್ಯದಲ್ಲಿ ಬ್ರಿಟನ್‌ನ ಜೋಹಾನಾ ಕೊಂಟಾ ಅವರನ್ನು 6-4, 6-2 ಸೆಟ್‌ಗಳಿಂದ ಸೋಲಿಸಿದರು.

ಖಂಡಿತವಾಗಿಯೂ ನಾನು ಚೆನ್ನಾಗಿ ಆಡಿದ್ದೇನೆ. ಬಹಳಷ್ಟು ಆತ್ಮವಿಶ್ವಾಸದೊಂದಿಗೆ ಅಂಗಣಕ್ಕೆ ಇಳಿದಿದ್ದೆ ಮತ್ತು ಎಲ್ಲವೂ ಎನಿಸಿದಂತೆ ನಡೆಯಿತು ಎಂದು ಪಂದ್ಯದ ಬಳಿಕ ಮುಗುರುಜಾ ಹೇಳಿದರು.

ಕಳೆದ ವರ್ಷ ಫ್ರೆಂಚ್‌ ಓಪನ್‌ ಗೆಲ್ಲುವ ಮೂಲಕ ತನ್ನ ಬಾಳ್ವೆಯ ಚೊಚ್ಚಲ ಗ್ರ್ಯಾನ್‌ ಸ್ಲಾಮ್‌ ಪ್ರಶಸ್ತಿ ಪಡೆದ ಮುಗುರುಜಾ ಆಬಳಿಕ ನೀರಸವಾಗಿ ಆಡಿದ್ದರಿಂದ ರ್‍ಯಾಂಕಿಂಗ್‌ನಲ್ಲಿ ಅಗ್ರ 10ಕ್ಕಿಂತ ಹೊರಗಿನ ಸ್ಥಾನಕ್ಕೆ ಕುಸಿದಿದ್ದರು. ಆದರೆ ಇದೀಗ ಹುಲ್ಲುಹಾಸಿನ ಅಂಗಣಗಳಲ್ಲಿ ಉತ್ತಮ ನಿರ್ವಹಣೆ ನೀಡುತ್ತಿರುವ ಮುಗುರುಜಾ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಒಂದು ವೇಳೆ ಅವರು ವಿಂಬಲ್ಡನ್‌ ಪ್ರಶಸ್ತಿ ಗೆದ್ದರೆ ಅಗ್ರ ಐದರೊಳಗಿನ ಸ್ಥಾನಕ್ಕೇರುವ ಸಾಧ್ಯತೆಯಿದೆ. 

1990ರಲ್ಲಿ ಅರಾಂತಾ ಸ್ಯಾಂಚೆಸ್‌ ವಿಕಾರಿಯೊ ಬಳಿಕ ಒಂದಕ್ಕಿಂತ ಹೆಚ್ಚಿನ ಬಾರಿ ವಿಂಬಲ್ಡನ್‌ ಕೂಟದ ಫೈನಲಿಗೇರಿದ ಸ್ಪೇನ್‌ನ ಮೊದಲ ಆಟಗಾರ್ತಿ ಎಂಬ ಗೌರವಕ್ಕೆ ಮುಗುರುಜಾ ಪಾತ್ರರಾಗಿದ್ದಾರೆ. ಕಳೆದ 9 ವರ್ಷಗಳಲ್ಲಿ ಅತ್ಯಂತ ನಿಕೃಷ್ಟ ರ್‍ಯಾಂಕಿನ ವಿಂಬಲ್ಡನ್‌ ಸೆಮಿಫೈನಲಿಸ್ಟ್‌ ಆಗಿರುವ ರಿಬರಿಕೋವಾ ತನ್ನ 36ನೇ ಪ್ರಯತ್ನದಲ್ಲಿ ಮೊದಲ ಬಾರಿ ಗ್ರ್ಯಾನ್‌ ಸ್ಲಾಮ್‌ ಕೂಟದ ಅಂತಿಮ ನಾಲ್ಕರ ಸುತ್ತಿಗೇರಿದ್ದರು.

Advertisement

ಮುಗುರುಜಾ ಅವರು ಕಾಂಚಿಟಾ ಮಾರ್ಟಿನೆಸ್‌ ಅವರಲ್ಲಿ ತರಬೇತಿ ಪಡೆಯುತ್ತಿದ್ದಾರೆ. ವಿಂಬಲ್ಡನ್‌ ಪ್ರಶಸ್ತಿ ಗೆದ್ದ ಸ್ಪೇನ್‌ನ ಏಕೈಕ ಆಟಗಾರ್ತಿ ಕಾಂಚಿಟಾ ಆಗಿದ್ದಾರೆ. ಅವರು 1994ರಲ್ಲಿ ಇಲ್ಲಿ ಪ್ರಶಸ್ತಿ ಜಯಿಸಿದ್ದರು.

ಕೊಂಟಾಗೆ ನಿರಾಸೆ: ಕಳೆದ 40 ವರ್ಷಗಳಲ್ಲಿ ಮೊದಲ ಬಾರಿ ವಿಂಬಲ್ಡನ್‌ ಕೂಟದ ಫೈನಲಿಗೇರಿದ ಬ್ರಿಟನ್‌ನ ಪ್ರಥಮ ಆಟಗಾರ್ತಿ ಎಂದೆನಿಸುವ ಪ್ರಯತ್ನದಲ್ಲಿ ಜೋಹಾನಾ ಕೊಂಟಾ ಎಡವಿದ್ದಾರೆ. ಇದರಿಂದ ಅವರಿಗೆ ತೀವ್ರ ನಿರಾಸೆಯಾಗಿದೆ. 1978ರಲ್ಲಿ ವರ್ಜಿನಿಯಾ ವೇಡ್‌ ಬಳಿಕ ವಿಂಬಲ್ಡನ್‌ ಕೂಟದ ಸೆಮಿಫೈನಲಿಗೇರಿದ ಬ್ರಿಟನ್‌ನ ಮೊದಲ ಆಟಗಾರ್ತಿ ಕೊಂಟಾ ಆಗಿದ್ದರು. ಆದರೆ ಸೆಮಿಫೈನಲ್‌ನಲ್ಲಿ ಯಾವುದೇ ಪ್ರತಿರೋಧ ನೀಡದೇ ಕೊಂಟಾ ಅವರು ವೀನಸ್‌ಗೆ 4-6, 2-6ರಿಂದ ಶರಣಾದರು. 

ಫೈನಲ್‌ ಹಂತಕ್ಕೇರುವ ಮೂಲಕ ವೀನಸ್‌ ಅವರು 1994ರಲ್ಲಿ ಮಾರ್ಟಿನಾ ನವ್ರಾಟಿಲೋವಾ ಬಳಿಕ ವಿಂಬಲ್ಡನ್‌ ಫೈನಲಿಗೇರಿದ ಅತೀ ಹಿರಿಯ ಆಟಗಾರ್ತಿ ಎಂದೆನಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next