Advertisement

Udupi krishna janmashtami; ಅಷ್ಟಮಿ ಪೇಟ್ಲದ ಸದ್ದು ಕಡಿಮೆಯಾಗುತ್ತಿದೆ!

11:03 AM Aug 28, 2024 | Team Udayavani |

ಉಡುಪಿ: ಅದೆಷ್ಟೋ ಜನರ ಬಾಲ್ಯದ ಸಂಭ್ರಮದ ಆಟಿಕೆ, ಕೃಷ್ಣಾಷ್ಟಮಿಯ ವಿಶೇಷ ಆಕರ್ಷಣೆಯಾದ ಪೇಟ್ಲದ ಸದ್ದು ಈ ಬಾರಿ ಕಡಿಮೆಯಾಗಿದೆ. ಅಷ್ಟಮಿ ಎಂದರೆ ಪೇಟ್ಲ ಖರೀದಿ ಎಂಬಷ್ಟು ಖದರು ಹೊತ್ತಿದ್ದ ಪೇಟ್ಲ ರಥಬೀದಿಗೆ ಬರುವ ಮಕ್ಕಳ ಕೈಯಲ್ಲಿ ಹಿಂದೆ ರಾರಾಜಿಸುತ್ತಿತ್ತು. ಆದರೆ ಈ ಬಾರಿ ಕೇವಲ ಒಂದೆರಡು ವ್ಯಾಪಾರಿಗಳಷ್ಟೇ ಪೇಟ್ಲ ಮಾರಾಟ ಮಾಡಿದ್ದಾರೆ. ಹೆಚ್ಚು

Advertisement

ಆಕರ್ಷಣೆಯ ಬೇರೆ ಆಟಿಕೆಗಳ ನಡುವೆ ಪೇಟ್ಲ ತನ್ನ ಖದರನ್ನು ಕಳೆದುಕೊಂಡಿತೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ.

ಏನಿದು ಪೇಟ್ಲ ಆಟಿಕೆ?
ಸೀಮೆ ಕೋಲು, ಬಿದಿರಿನ ಕೋಲು ಮತ್ತು ತಗಡನ್ನು ಬಳಸಿ ಮಾಡುವ ಕೋವಿಯಂಥ ಆಟಿಕೆ ಇದು. ಬಿದಿರಿನ ರಂಧ್ರದೊಳಗೆ ಕಾಡಿನಲ್ಲಿ ಸಿಗುವ ಪೇಟ್ಲ ಕಾಯಿಯನ್ನು (ಕಮಟೆ ಕಾಯಿ) ಹಾಕಿ, ಇನ್ನೊಂದು ಕೋಲಿನಿಂದ ಬಿದಿರಿನ ರಂಧ್ರದೊಳಗೆ ಜೋರಾಗಿ ತಳ್ಳುವುದು. ಆಗ ಪೇಟ್ಲ ಕಾಯಿ ಅತ್ಯಂತ ರಭಸದಿಂದ ಹೊರಬಂದು ದೂರಕ್ಕೆ ಚಿಮ್ಮುತ್ತದೆ,  ಬುಲೆಟ್‌ನಂತೆ! ಹಿಂದೆ ಮನೆಗಳಲ್ಲೇ ಈ ಆಟಿಕೆ

ಯನ್ನು ಮಕ್ಕಳಿಗೆ ಮಾಡಿಕೊಡುತ್ತಿದ್ದರು. ಕಾಲಾಂತರದಲ್ಲಿ ಅದು ವಿಟ್ಲಪಿಂಡಿಯಂಥ ಜಾತ್ರೆಯಲ್ಲಿ ಸಿಗುವ ಆಟಿಕೆಯಾಯಿತು. ಈಗ ಅದೂ ಕಡಿಮೆಯಾಗಿ, ಒಂದೆರಡು ವ್ಯಾಪಾರಿಗಳಿಗೆ ಸೀಮಿತವಾಗುತ್ತಿದೆ.

ಈ ಹಿಂದೆ ಮಠದಲ್ಲಿ ಶ್ರೀ ಕೃಷ್ಣನಿಗೆ ಪೂಜೆ, ಮಂಗಳಾರತಿ ನಡೆಯುವ ಸಂದರ್ಭದಲ್ಲಿ, ಮನೆಯಲ್ಲಿ ಹಬ್ಟಾಚರಣೆ ಮಾಡಿದಾಗ ಪೇಟ್ಲ ಹೊಡೆಯುವುದು ರೂಢಿಯಾಗಿತ್ತು.

Advertisement

ಬಿದಿರು ಸಿಗುತ್ತಿಲ್ಲ, ಕಾಯಿ ಹುಡುಕಾಟ ಕಷ್ಟ
ಈ ಬಾರಿ ವಿಟ್ಲ ಪಿಂಡಿಯಲ್ಲಿ ಇಬ್ಬರು ವ್ಯಾಪಾರಿಗಳು ಸುಮಾರು 500ರಷ್ಟು ಪೇಟ್ಲ ಮಾರಾಟ ಮಾಡಿದ್ದಾರೆ. ಹಿಂದೆ ಪೇಟ್ಲಕ್ಕೆ ತಗಡನ್ನು ಬಳಸುತ್ತಿದ್ದರೆ ಈಗ ಪ್ಲಾಸ್ಟಿಕ್‌ ಬಾಟಲಿ ಮತ್ತು ಪೈಪ್‌ ಬಳಸಲಾಗುತ್ತಿದೆ. ಕಮಟೆ ಕಾಯಿಯನ್ನು ಗುಡ್ಡದಿಂದ ತರುವುದು ಕೂಡ ತ್ರಾಸದಾಯವಾಗಿದೆ, ಬಿದಿರೂ ಸಿಗುತ್ತಿಲ್ಲ. ಎಂದು ವ್ಯಾಪಾರಿಗಳು ಹೇಳುತ್ತಾರೆ. ಈ ಬಾರಿ ವಿಟ್ಲ ಪಿಂಡಿಯಲ್ಲಿ  ಪೇಟ್ಲ ಆಟಿಕೆ 200-250 ರೂ.ಗಳಿಗೆ ಮಾರಾಟವಾಗಿದೆ.

ಮೊದಲೆಲ್ಲ 15-20 ಜನ ಬರ್ತಾ ಇದ್ದರು
ಈ ಹಿಂದೆ ಅಷ್ಟಮಿ, ವಿಟ್ಲಪಿಂಡಿ ಸಂದರ್ಭದಲ್ಲಿ 15ರಿಂದ 20 ಮಾರಾಟಗಾರರು ಬರುತ್ತಿದ್ದರು. ಆದರೆ, ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಇದರ ತಿಳುವಳಿಕೆ ಇಲ್ಲದೆ ವ್ಯಾಪಾರ ಕಡಿಮೆ. ಈ ಬಾರಿ ಒಂದಿಬ್ಬರಷ್ಟೇ ಮಾರಾಟಗಾರರು ಬಂದಿದ್ದರು.
– ಪ್ರಶಾಂತ್‌, ಪೇಟ್ಲ ವ್ಯಾಪಾರಿ

ನಮಗೆಲ್ಲ ಪೇಟ್ಲವೇ ಪ್ರಧಾನ ಆಟಿಕೆ ಆಗಿತ್ತು!
70 ವರ್ಷದ ಹಿಂದಿನಿಂದಲೂ ಪೇಟ್ಲ ನೋಡುತ್ತಾ, ಆಡುತ್ತಾ ಬಂದಿದ್ದೇನೆ. ನಮಗೆಲ್ಲ ಅದೇ ದೊಡ್ಡ ಆಟದ ವಸ್ತು ಆಗಿತ್ತು. ಈಗಿನ ಮಕ್ಕಳಿಗೆ ಪೇಟ್ಲ ಅಂದರೆ ಗೊತ್ತಿಲ್ಲ, ಬೇರೆ ಆಟಿಕೆಗಳು ಬೇಕಾದಷ್ಟಿವೆ. ಹಾಗಾಗಿ ಬೇಡಿಕೆ ಕಡಿಮೆಯಾಗಿದೆ.
– ಗೋಕುಲ್‌ ದಾಸ್‌ ನಾಯಕ್‌, ಸ್ಥಳೀಯರು, ಉಡುಪಿ

Advertisement

Udayavani is now on Telegram. Click here to join our channel and stay updated with the latest news.

Next