ಮೈಸೂರು: ಒಮಿಕ್ರಾನ್ ಹೆಚ್ಚಾಗುವ ಭೀತಿಯಿಂದ ಮುಂಜಾಗ್ರತ ಕ್ರಮವಾಗಿ ರಾಜ್ಯಾದ್ಯಂತ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದ್ದು, ಈ ಆದೇಶವನ್ನು ಪುನರ್ ಪರಿಶೀಲನೆ ಮಾಡುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಮೈಸೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಮಿಕ್ರಾನ್ ಹೆಚ್ಚಳ ಕುರಿತು ಈಗಾಗಲೇ ಬೆಳಗಾವಿಯಲ್ಲಿ ಸಭೆ ನಡೆಸಲಾಗಿದೆ. ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಪ್ರಕರಣಗಳಿಲ್ಲ. ಆದರೆ, ಅಕ್ಕಪಕ್ಕದ ರಾಜ್ಯ ಮತ್ತು ಬೇರೆ ದೇಶದಲ್ಲಿ ಒಮಿಕ್ರಾನ್ ಪೀಡಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ ಮುಂಜಾಗ್ರತ ಕ್ರಮವಾಗಿ ಮತ್ತು ಹೊಸ ವರ್ಷಾದ ಸಂಭ್ರಮಾಚರಣೆಯ ವೇಳೆ ಹೆಚ್ಚು ಜನ ಸೇರಿದಂತೆ ನೋಡಿಕೊಳ್ಳಲು ರಾತ್ರಿ 10ರಿಂದ ಬೆಳಗ್ಗೆ 5 ರವರೆಗೆ ರಾತ್ರಿ ಕಪ್ಯೂ ಜಾರಿಗೊಳಿಸಲಾಗಿದೆ ಎಂದರು.
ಹೊರಾಂಗಣದಲ್ಲಿ ಪಾರ್ಟಿ ಮಾಡುವುದು, ಡಿಜೆ ಹಾಕಿಕೊಳ್ಳುವುದಕ್ಕೂ ಅವಕಾಶವಿಲ್ಲ. ಈ ಹಿಂದೆ ಕೊರೋನಾದ ಮೊದಲ ಮತ್ತು ಎರಡನೇ ಅಲೆಯ ವೇಳೆ ಯೂರೋಪ್ ದೇಶಗಳಲ್ಲಿ ಕೊರೊನಾ ಕಾಣಿಸಿಕೊಂಡ ಒಂದೂವರೆ, ಎರಡು ತಿಂಗಳ ಬಳಿಕ ಭಾರತದಲ್ಲಿ ಹೆಚ್ಚಾಗುತ್ತಿತ್ತು. ಅದರ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದರು. ನೆರೆಯ ರಾಜ್ಯಗಳ ಕೋವಿಡ್ ಪರಿಸ್ಥಿತಿ ನೋಡಿ ನೈಟ್‌ಕರ್ಫ್ಯೂ ಜಾರಿ ಮಾಡಲಾಗಿದೆ.
ಹಾಗೆಯೇ ಹಲವು ಕಠಿಣ ನಿಯಮ ಜಾರಿ ಮಾಡಲಾಗಿದೆ. ಇದರಿಂದ ಉದ್ಯಮಿಗಳಿಗೆ ನಷ್ಟವಾಗಲಿದೆ ಎಂಬುದು ನನ್ನ ಗಮನಕ್ಕೆ ಬಂದಿದೆ. ಆದರೆ, ಜನರ ಆರೋಗ್ಯದ ದೃಷ್ಟಿಯಿಂದ ಡಿ.28ರಿಂದ ಹೇರಿರುವ ನೈಟ್‌ಕರ್ಫ್ಯೂ ಆದೇಶವನ್ನು ಪುನರ್ ಪರಿಶೀಲಿಸಲು ಸಾಧ್ಯವಿಲ್ಲ ಎಂದರು. ಭಾನುವಾರ ಮಧ್ಯಾಹ್ನ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿ ಅವರನ್ನು ಮೇಯರ್ ಸುನಂದಾ ಪಾಲನೇತ್ರ ಸ್ವಾಗತಿಸಿದರು.
ಶಾಸಕ ಎಸ್.ಎ. ರಾಮದಾಸ್, ಎಲ್.ನಾಗೇಂದ್ರ, ಮಾಜಿ ಮೇಯರ್ ಸಂದೇಶ್ ಸ್ವಾಮಿ, ನಿಗಮ ಮಂಡಳಿ ಅಧ್ಯಕ್ಷರಾದ ಎಲ್.ಆರ್. ಮಹದೇವಸ್ವಾಮಿ, ಕಾ.ಪು. ಸಿದ್ದಲಿಂಗಸ್ವಾಮಿ, ಕೃಷ್ಣಪ್ಪಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಮಂಗಳಾ ಸೋಮಶೇಖರ್ ಹಾಜರಿದ್ದರು.