Advertisement

ಕೈ-ದಳ ಅತೃಪ್ತ ಶಾಸಕರ ನಡೆ ಆಧರಿಸಿ ಮುಂದಿನ ಹೆಜ್ಜೆ

12:30 PM May 26, 2019 | Team Udayavani |

ಬೆಂಗಳೂರು: ‘ಬಿಜೆಪಿಗೆ ದಕ್ಷಿಣ ಭಾರತದ ಬಾಗಿಲು ಮುಚ್ಚಿಸ್ತೇವೆ ಎಂದವರ ಬಾಗಿಲೇ ಬಂದ್‌ ಆಗಿದೆ. ರಾಜ್ಯದ ಶೇ.99ರಷ್ಟು ಜನ ಮೈತ್ರಿ ಸರ್ಕಾರವನ್ನು ತಿರಸ್ಕರಿಸಿದ್ದಾರೆ. ಕಾಂಗ್ರೆಸ್‌- ಜೆಡಿಎಸ್‌ನ ನಿಲುವು ಹಾಗೂ ಆಡಳಿತ ಪಕ್ಷಗಳ ಅತೃಪ್ತ ಶಾಸಕರ ಮುಂದಿನ ನಡೆ ಆಧರಿಸಿ ಪಕ್ಷದ ವರಿಷ್ಠರ ಸೂಚನೆ ಯಂತೆ ಮುಂದುವರಿಯುತ್ತೇವೆ. ಸರ್ಕಾರವನ್ನು ಅಸ್ಥಿರಗೊಳಿಸು ವುದಿಲ್ಲ. ಸದ್ಯಕ್ಕೆ ಪ್ರತಿಪಕ್ಷವಾಗಿ ಕೆಲಸ ಮಾಡುತ್ತೇವೆ.’

Advertisement

ಇದು ಬಿಜೆಪಿ ರಾಜ್ಯಾಧ್ಯಕ್ಷರಾದ, ವಿಧಾನಸಭೆ ಪ್ರತಿಪಕ್ಷ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರ ಖಡಕ್‌ ನುಡಿ. ರಾಜ್ಯದ ಇತಿಹಾಸದಲ್ಲೇ ದಾಖಲೆ ಪ್ರಮಾಣದಲ್ಲಿ ಲೋಕಸಭಾ ಸ್ಥಾನವನ್ನು ಬಿಜೆಪಿ ಗೆದ್ದಿರುವ ಸಂದರ್ಭದಲ್ಲಿ ಅವರು ‘ಉದಯವಾಣಿ’ಗೆ ಸಂದರ್ಶನ ನೀಡಿದ್ದು, ವಿವರ ಹೀಗಿದೆ:

ರಾಜ್ಯದಲ್ಲಿ 22 ಸ್ಥಾನ ಗೆಲ್ಲುವುದಾಗಿ ಹೇಳಿದ್ದೀರಿ, ಆ ಗುರಿಯನ್ನೂ ದಾಟಿ ಬಿಜೆಪಿ 25 ಸ್ಥಾನ ಗೆದ್ದಿದೆ. ಮುಂದಿನ ನಡೆ ಏನು?
-ರಾಜ್ಯದಲ್ಲಿ ಬಿಜೆಪಿ 25 ಸ್ಥಾನ ಗೆಲ್ಲುವ ಜತೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕೂಡ ಗೆದ್ದಿದ್ದು, ಒಟ್ಟು 26ಕ್ಕೆ ಏರಿದೆ. ಹಾಗೆಂದು ಮೈತ್ರಿ ಸರ್ಕಾರವನ್ನು ಅಸ್ಥಿರಗೊಳಿ ಸುವ ಯಾವುದೇ ಪ್ರಯತ್ನ ನಡೆಸುವುದಿಲ್ಲ. ಫ‌ಲಿತಾಂ ಶದ ಬಳಿಕ ಕಾಂಗ್ರೆಸ್‌- ಜೆಡಿಎಸ್‌ ನಿಲುವು, ಭವಿಷ್ಯ ದಲ್ಲೂ ಒಟ್ಟಿಗೆ ಹೋಗುತ್ತಾರೋ, ವಿಧಾನಸಭೆಯನ್ನು ವಿಸರ್ಜಿಸುತ್ತಾರೋ ಎಂಬ ಬಗ್ಗೆ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಅವಲೋಕಿಸಲಾಗು ವುದು. ಆಡಳಿತ ಪಕ್ಷದ ಅತೃಪ್ತ ಶಾಸಕರ ಮುಂದಿನ ನಡೆ ಏನು ಎಂಬುದನ್ನು ಗಮನಿಸಲಾಗುವುದು. ಸದ್ಯ ಪ್ರತಿಪಕ್ಷದಲ್ಲಿದ್ದು, ಸಮರ್ಥವಾಗಿ ಅದೇ ಸ್ಥಾನದಲ್ಲಿ ಮುಂದುವರಿಯುತ್ತೇವೆ. ಮುಂದೆ ಏನಾಗುವುದೋ ಕಾದು ನೋಡೋಣ.

ಚುನಾವಣೆ ಸಂದರ್ಭದಲ್ಲಿ ನೀವು ಹೇಳಿದ ಭವಿಷ್ಯವೆಲ್ಲಾ ನಿಜವಾಗಿದೆ. ಮುಂದಿನ ಭವಿಷ್ಯದ ಬಗ್ಗೆ ಏನು ಹೇಳುವಿರಿ?
-ಹಿರಿಯ ನಾಯಕರಾದ ಎಚ್.ಡಿ.ದೇವೇಗೌಡ, ಮಲ್ಲಿಕಾರ್ಜುನ ಖರ್ಗೆ, ಕೆ.ಎಚ್.ಮುನಿಯಪ್ಪ ಸೇರಿ ಅತಿರಥ ಮಹಾರಥರು ಸೋಲುತ್ತಾರೆ ಎಂದು ಹೇಳಿದ್ದೆ. ಅದರಂತೆ ಸೋತಿದ್ದಾರೆ. ರಾಜ್ಯದ ಜನ ಮೋದಿಯವರ ನಾಯಕತ್ವದ ಮೇಲೆ ಪ್ರೀತಿ, ವಿಶ್ವಾಸವಿಟ್ಟು ಬೆಂಬಲಿಸಿದ್ದಾರೆ. ದಾಖಲೆ ಸಂಖ್ಯೆ ಸ್ಥಾನ ಗೆದ್ದಿದ್ದೇವೆ. ಮುಂದಿನ ಭವಿಷ್ಯದ ಬಗ್ಗೆ ಈಗ ಏನೂ ಹೇಳುವುದಿಲ್ಲ. ಕಾದು ನೋಡೋಣ. ಮೇ 30ಕ್ಕೆ ಪ್ರಧಾನಿ ಮೋದಿಯವರು ಪ್ರಮಾಣ ವಚನ ಸ್ವೀಕರಿಸಲಿದ್ದು, ಸಂಸದರೊಂದಿಗೆ ದೆಹಲಿಗೆ ಹೋಗುತ್ತೇನೆ. ಬೆಳವಣಿಗೆ ಆಧರಿಸಿ ವರಿಷ್ಠರೊಂದಿಗೆ ಸಮಾಲೋಚಿಸಿ ಮುಂದಿನ ಹೆಜ್ಜೆ ಇಡಲಾಗುವುದು.

ಸಮ್ಮಿಶ್ರ ಸರ್ಕಾರದ ಒಂದು ವರ್ಷದ ಆಡಳಿತಕ್ಕೆ ಲೋಕಸಭೆ ಫ‌ಲಿತಾಂಶ ಜನಾದೇಶವೇ?
-ಖಂಡಿತಾ, ಹೌದು. ಮೈತ್ರಿ ಸರ್ಕಾರವನ್ನು ರಾಜ್ಯದ ಜನ ತಿರಸ್ಕರಿಸಿದ್ದು, ಮೈತ್ರಿ ಪಕ್ಷಗಳಿಗೆ ನೈತಿಕತೆಯಿಲ್ಲ. ಕಾಂಗ್ರೆಸ್‌- ಜೆಡಿಎಸ್‌ ಮುಂದೆ ಯಾವ ನಿಲುವು ತಳೆಯಲಿದೆ ಎಂಬುದನ್ನು ಜನ ಕೂಡ ಕುತೂಹಲದಿಂದ ನಿರೀಕ್ಷಿಸುತ್ತಿದ್ದಾರೆ. ಇನ್ನು 2-3 ದಿನದಲ್ಲಿ ಮೈತ್ರಿ ಪಕ್ಷಗಳ ಮುಂದಿನ ನಡೆ ಗಮನಿಸಿ ವರಿಷ್ಠರೊಂದಿಗೂ ಚರ್ಚಿಸಿ ಅವರ ಸೂಚನೆಯಂತೆ ಮುಂದುವರಿಯುತ್ತೇವೆ.

Advertisement

ಫ‌ಲಿತಾಂಶ ನಿಮಗೆ ತೃಪ್ತಿ ತಂದಿದೆಯಾ?
– ಚುನಾವಣೆ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ನನ್ನ ಬಗ್ಗೆ ಕಾಂಗ್ರೆಸ್‌, ಜೆಡಿಎಸ್‌ನವರು ಮನಬಂದಂತೆ ಟೀಕಿಸಿದರು. ಬಿಜೆಪಿ ಒಂದಂಕಿ ದಾಟಲು ಬಿಡುವುದಿಲ್ಲ ಎಂದವರೇ ಒಂದಂಕಿ ಪಡೆದಿದ್ದಾರೆ. ಬಿಜೆಪಿಗೆ ದಕ್ಷಿಣದ ಬಾಗಿಲು ಮುಚ್ಚುವುದಾಗಿ ಹೇಳಿದವರ ಬಾಗಿಲೇ ಬಂದ್‌ ಆಗಿದೆ. ನಾನು ರಾಜ್ಯಾಧ್ಯಕ್ಷನಾಗಿದ್ದ ಅವಧಿಯಲ್ಲಿ ಬಿಜೆಪಿ ಅದ್ಭುತ ಸಾಧನೆ ಮಾಡಿರುವುದು ಸಂತೋಷ ನೀಡಿದೆ. ಮೋದಿಯವರು ಮತ್ತೂಮ್ಮೆ ಪ್ರಧಾನಿಯಾಗಲು ರಾಜ್ಯದಿಂದ 22 ಸಂಸದರನ್ನು ಕೊಡುಗೆಯಾಗಿ ನೀಡುವುದಾಗಿ ಹೇಳಿದ್ದೆ. 25 ಸಂಸದರು ಗೆಲ್ಲುವ ಮೂಲಕ ಕರ್ನಾಟಕದಿಂದ ದೊಡ್ಡ ಕೊಡುಗೆ ನೀಡಿದ ತೃಪ್ತಿ ಇದೆ.

ರಾಜ್ಯದಲ್ಲಿ ಬಿಜೆಪಿ ದಾಖಲೆ ಸ್ಥಾನ ಗಳಿಸಿರುವ ಹಿನ್ನೆಲೆಯಲ್ಲಿ ಕೇಂದ್ರ ಸಂಪುಟದಲ್ಲಿ ರಾಜ್ಯಕ್ಕೆ ಹೆಚ್ಚು ಪ್ರಾಧಾನ್ಯತೆ ನಿರೀಕ್ಷಿಸಿದ್ದೀರಾ?
– ಕೇಂದ್ರ ಸಂಪುಟದಲ್ಲಿ ಸಂಸದರ ಸಂಖ್ಯೆ, ಖಾತೆ, ಪ್ರಾತಿನಿಧ್ಯದ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆ ಬಗ್ಗೆ ಪ್ರಧಾನಿ, ರಾಷ್ಟ್ರೀಯ ಅಧ್ಯಕ್ಷರು, ವರಿಷ್ಠರು ಚರ್ಚಿಸಿ ತೀರ್ಮಾನಿಸಲಿದ್ದಾರೆ. ಈ ಬಗ್ಗೆ ಯಾವುದೇ ಚಿಂತನೆ ನಡೆಸಿಲ್ಲ.

ಬಿಜೆಪಿ ಅಭೂತಪೂರ್ವ ಗೆಲುವಿಗೆ ಕಾರಣವಾದ ಅಂಶಗಳೇನು?
– ಕಳೆದ ನಾಲ್ಕು ತಿಂಗಳಿನಿಂದ ನಿರಂತರವಾಗಿ ರಾಜ್ಯ ಪ್ರವಾಸ ನಡೆಸಿ ಪ್ರಚಾರ ನಡೆಯಲಾಯಿತು. ರಾಷ್ಟ್ರೀಯ ನಾಯಕರು ರಾಜ್ಯದ ಹಲವೆಡೆ ಪ್ರಚಾರ ನಡೆಸಿದ್ದು, ಪರಿಣಾಮಕಾರಿ ಯಾಗಿತ್ತು. ಲೋಕಸಭಾ ಚುನಾವಣೆ ಘೋಷಣೆಗೂ ಮೊದಲೇ ಜನ ಸಂಪರ್ಕ ಹಾಗೂ ಸಿದ್ಧತಾ ಕಾರ್ಯವನ್ನು ಯಶಸ್ವಿಯಾಗಿ ಕೈಗೊಳ್ಳಲಾಗಿತ್ತು. ಹಾಲಿ ಸಂಸದರಿಗೆಲ್ಲಾ ಟಿಕೆಟ್ ಕೊಡಿಸುವ ಭರವಸೆ ನೀಡುವ ಮೂಲಕ ಚುನಾವಣೆಗೂ ಮೊದಲೇ ಅವರು ಪ್ರಚಾರ ಆರಂಭಿಸುವಂತೆ ಸೂಚಿಸಲಾಯಿತು. ಒಂದೆ ರಡು ಬದಲಾವಣೆ ಹೊರತುಪಡಿಸಿ ಶೇ.99 ರಷ್ಟು ನಾವು ಶಿಫಾರಸು ಮಾಡಿದ ಅಭ್ಯರ್ಥಿ ಗಳೇ ಕಣಕ್ಕಿಳಿದರು. ಮತದಾರರನ್ನು ಸೆಳೆಯುವಲ್ಲಿ ಪ್ರಧಾನಿ ಮೋದಿಯವರ ವರ್ಚಸ್ಸು ಪ್ರಧಾನವಾಗಿತ್ತು. ಕಾರ್ಯಕರ್ತರು, ಮುಖಂಡರು, ನಾಯಕರು ಹಗಲು ರಾತ್ರಿ ಶ್ರಮಿಸಿದ ಫ‌ಲವಾಗಿ ಬಿಜೆಪಿ ಅದ್ಭುತ ಗೆಲುವು ಸಾಧಿಸಿದೆ.

-ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next