Advertisement

ಮುಂದಿನ ಸಿಎಂ ಹೊಸ ಲೆಕ್ಕಾಚಾರ; ಕಾಂಗ್ರೆಸ್‌ನಲ್ಲಿ ಅಚ್ಚರಿಯ ಪ್ರಸ್ತಾವನೆ

12:25 AM Oct 27, 2020 | mahesh |

ಬೆಂಗಳೂರು: ಉಪ ಚುನಾವಣೆ ಪ್ರಚಾರ ತಾರಕಕ್ಕೆ ಏರುತ್ತಿರುವಂತೆಯೇ ಕಾಂಗ್ರೆಸ್‌ನಲ್ಲಿ “ಮುಂದಿನ ಸಿಎಂ’ ಪ್ರಸ್ತಾವ ಸಿಡಿದೆದ್ದಿದ್ದು, ಜೆಡಿಎಸ್‌ ಮತ್ತು ಬಿಜೆಪಿ ರಾಜಕೀಯ ಲಾಭ- ನಷ್ಟದ ಲೆಕ್ಕಾಚಾರದಲ್ಲಿ ತೊಡಗಿವೆ.

Advertisement

ಬಿಜೆಪಿಯಲ್ಲಿ ಈಚೆಗಷ್ಟೇ ಸಿಡಿದ “ಸಿಎಂ ಬದಲಾವಣೆ’ ಬಾಂಬ್‌ ತಣ್ಣಗಾದ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ವ್ಯವಸ್ಥಿತವಾದ ಇನ್ನೊಂದು ಹೇಳಿಕೆ ಹೊರಬಿದ್ದಿದೆ. ವಿಧಾನಸಭೆ ಚುನಾವಣೆಗೆ ಇನ್ನೂ ಎರಡೂವರೆ ವರ್ಷಗಳು ಇರುವಾಗಲೇ ಈ ವಿಚಾರ ಭುಗಿಲೆದ್ದಿದೆ. ದಿಢೀರ್‌ ಕೇಳಿಬಂದ ಈ ಮಾತು ಉಪ ಚುನಾವಣೆಯ ಫ‌ಲಿತಾಂಶದ ಮೇಲೂ ಪರಿಣಾಮ ಬೀರಬಹುದೇ ಎಂಬ ವಿಶ್ಲೇಷಣೆಯೂ ಕೇಳಿಬರುತ್ತಿದೆ.

ಕಾಂಗ್ರೆಸ್‌ನಲ್ಲಿ ಆತಂಕ
ಡಿ.ಕೆ. ಶಿವಕುಮಾರ್‌ ಕೆಪಿಸಿಸಿ ಅಧ್ಯಕ್ಷರಾಗಿರುವುದರಿಂದ ಕಾಂಗ್ರೆಸ್‌ನಲ್ಲಿ ಸಹಜವಾಗಿ ಅವರು ಸಿಎಂ ಅಭ್ಯರ್ಥಿಯಾಗಿ ಬಿಂಬಿತರಾಗುತ್ತಾರೆ. ಆದರೆ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ ಬಂದರೆ ಸಿದ್ದರಾಮಯ್ಯ ಸಿಎಂ ಆಗು ತ್ತಾರೆ ಎಂಬ ಪ್ರಸ್ತಾವ ಮತಬ್ಯಾಂಕ್‌ಗೆ ಒಂದಷ್ಟು ಹಾನಿ ಉಂಟು ಮಾಡಬಹುದು ಎಂಬ ಆತಂಕ ಕಾಂಗ್ರೆಸ್‌ನಲ್ಲೇ ಇದೆ. ಇದರಿಂದ ಜೆಡಿಎಸ್‌ ಮತ್ತು ಬಿಜೆಪಿಗೆ ಲಾಭವಾಗಬಹುದು ಎನ್ನಲಾಗುತ್ತಿದೆ.

ಉಪ ಚುನಾವಣೆಯಲ್ಲಿ ಶಿರಾದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರ ಹಣಾಹಣಿ ಇತ್ತಾದರೂ ಸಿಎಂ ಬಿಎಸ್‌ವೈ ಪುತ್ರ ವಿಜಯೇಂದ್ರ ಸಹಿತ ಬಿಜೆಪಿ ನಾಯಕರು ಅಲ್ಲೇ ಮೊಕ್ಕಾಂ ಹೂಡಿದ ಅನಂತರ ಚಿತ್ರಣ ಬದಲಾಗುತ್ತಿದೆ ಎಂದು ಬಿಜೆಪಿ ನಾಯಕರು ಆಂತರಿಕವಾಗಿ ಹೇಳಿಕೊಂಡಿದ್ದಾರೆ.

ಶಿರಾದಲ್ಲಿ ಮೂರೂ ಅಭ್ಯರ್ಥಿಗಳು ಒಕ್ಕಲಿಗ ಸಮುದಾಯಕ್ಕೆ ಸೇರಿರುವುದರಿಂದ ಅಲ್ಲಿ ಪ.ಪಂಗಡ, ಗೊಲ್ಲ, ಕುರುಬ, ಮುಸ್ಲಿಂ ಮತಗಳು ನಿರ್ಣಾಯಕ. ರಾಜರಾಜೇಶ್ವರಿ ನಗರದಲ್ಲಿ ಒಕ್ಕಲಿಗ ಮತಗಳು ಎರಡು ಲಕ್ಷಕ್ಕೂ ಹೆಚ್ಚು ಇರುವುದರಿಂದ ನಿರ್ಣಾಯಕ. ಆ ಮತಗಳ ಕ್ರೋಡೀಕರಣಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿ. ಹೆಚ್ಚು ಒತ್ತು ನೀಡಿದ್ದಾರೆ. ಇದರ ಜತೆಗೆ ಕಾಂಗ್ರೆಸ್‌ನ ಸಾಂಪ್ರದಾಯಿಕ ಮತಗಳನ್ನೂ ನೆಚ್ಚಿಕೊಳ್ಳಲಾಗಿದೆ.

Advertisement

ಎಲ್ಲಿಂದ ಆರಂಭ?
ಬಾದಾಮಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು, ಮತ್ತೆ ನಾನು ಸಿಎಂ ಆದರೆ ಬಡವರಿಗೆ ಮಾಸಿಕ ತಲಾ 10 ಕೆ.ಜಿ. ಅಕ್ಕಿ ಕೊಡುತ್ತೇನೆ ಎಂದು ಹೇಳಿರುವುದು ಚರ್ಚೆಗೆ ಕಾರಣವಾಯಿತು. ಇದಕ್ಕೆ ಪ್ರತಿಯಾಗಿ ಮೊದಲು ಕಾಂಗ್ರೆಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕಾಗಿದೆ. ಅನಂತರ ಸಿಎಂ ಮಾತು. ನಾನು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟವನು ಎಂದು ಹೇಳಿ ಡಿ.ಕೆ.ಶಿ. ಅವರು ಪ್ರಸ್ತಾವಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದರು. ಕಾಂಗ್ರೆಸ್‌ನ ಈ ವಿದ್ಯಮಾನದಿಂದ ಜೆಡಿಎಸ್‌ ಮತ್ತು ಬಿಜೆಪಿ ತಮಗಾಗುವ ಲಾಭದ ಲೆಕ್ಕಾಚಾರ ಮಾಡಿಕೊಂಡು ಸಮುದಾಯದಲ್ಲಿ ಅದೇ ಅಸ್ತ್ರ ಪ್ರಯೋಗಿಸಲು ಕಾರ್ಯತಂತ್ರ ರೂಪಿಸುತ್ತಿವೆ ಎನ್ನಲಾಗಿದೆ.

ಪರಿಷತ್‌ ಚುನಾವಣೆ: ಪ್ರಚಾರ ಮುಕ್ತಾಯ
ವಿಧಾನಪರಿಷತ್ತಿನ ನಾಲ್ಕು ಕ್ಷೇತ್ರಗಳ ಚುನಾವಣೆಗೆ ಪ್ರಚಾರ ಕೊನೆಗೊಂಡಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರ, ಆಗ್ನೇಯ ಪದವೀಧರ ಕ್ಷೇತ್ರ, ಪಶ್ಚಿಮ ಪದವೀಧರ ಕ್ಷೇತ್ರ ಹಾಗೂ ಈಶಾನ್ಯ ಶಿಕ್ಷಕರ ಕ್ಷೇತ್ರಗಳಿಗೆ ಅಕ್ಟೋಬರ್‌ 28ರಂದು ಮತದಾನ ನಡೆಯಲಿದ್ದು, ಸೋಮವಾರ ಸಂಜೆ ಬಹಿರಂಗ ಪ್ರಚಾರಕ್ಕೆ ತೆರೆ ಬಿದ್ದಿದೆ. ಬುಧವಾರ ಮತದಾನ ನಡೆಯಲಿದೆ.

 ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next