Advertisement
ಕೆಲವೇ ದಿನಗಳ ಹಿಂದೆ “ದಿ ಗಾರ್ಡಿಯನ್’ ಎಂಬ ಬ್ರಿಟನ್‌ನ ಪತ್ರಿಕೆಯೊಂದರಲ್ಲಿ ಸುದೀರ್ಘ ಲೇಖನ ಪ್ರಕಟವಾಗಿದ್ದು, ದೇಶದ ಲಕ್ಷಾಂತರ ಜನರ ಹಸಿವನ್ನು ತಣಿಸಿದ ಈ ಹಣ್ಣಿನ ಬಗ್ಗೆ ಕೇವಲ ವಾಗಿ ಬರೆಯಲಾಗಿದೆ. ಇದೊಂದು ಕುರೂಪಿ ಹಣ್ಣು. ಭಾರತದಲ್ಲಿ ಜನರು ತಿನ್ನಲು ಏನೂ ಇಲ್ಲದಿದ್ದಾಗ ಇದನ್ನು ಸೇವಿಸುತ್ತಾರೆ. ಮುಳ್ಳುಗಳಿರುವ ಈ ಅಸಹ್ಯಕರ ಹಣ್ಣಿನಲ್ಲಿ ಯಾವ ರುಚಿಯೂ ಇಲ್ಲ. ಈ ಹಣ್ಣು ನೋಡಿದರೆ ರಾಕ್ಷಸ ಆಕೃತಿಯನ್ನು ನೋಡಿದಂತಾಗುತ್ತದೆ ಎಂದೂ ಲೇಖನದಲ್ಲಿ ವಿವರಿಸಲಾಗಿದೆ. ಜೋಯ್ ವಿಲಿಯಮ್ಸ್ ಇದರ ಲೇಖಕಿ.
ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ಕೇರಳದ ಶೆಫ್ಗಳು ತಾವು ತಯಾರಿಸಿದ ತಿಂಡಿ ತಿನಿಸುಗಳ ವಿವರಗಳನ್ನು ಪ್ರಕಟಿಸಿದ್ದು, ಲೇಖಕರು ಇನ್ನಷ್ಟು ಹೆಚ್ಚು ಸಂಶೋಧನೆ ಮಾಡಿ ಈ ಬಗ್ಗೆ ಬರೆಯಬೇಕು ಎಂದಿದ್ದಾರೆ. ಟ್ವಿಟರ್‌ನಲ್ಲಂತೂ ಲೇಖಕಿಯನ್ನು ಕೇರಳ ಮತ್ತು ಇತರ ರಾಜ್ಯಗಳ ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಹಲಸಿನ ಹಣ್ಣನ್ನು ಪ್ರಚುರಪಡಿಸಲು ಕೇರಳ ಸರಕಾರ ವಿಶೇಷ ಕ್ರಮಗಳನ್ನು ಕೈಗೊಂಡಿದ್ದು, ಕಳೆದ ಕೆಲವು ವರ್ಷಗಳಿಂದ ಹಲಸಿನ ಹಣ್ಣಿನ ಬಳಕೆಯೂ ಹೆಚ್ಚಾಗಿದೆ. ಕೇರಳ ಮತ್ತು ಕರ್ನಾಟಕದಲ್ಲಿ ಹಲಸಿನ ಹಣ್ಣಿನ ಮೇಳಗಳೂ ನಡೆಯುತ್ತವೆ.