Advertisement
2019 ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸಿನಿಮಾಗಳು ಬಿಡುಗಡೆಯಾದ ವರ್ಷ ಎಂದೇ ಹೇಳಲಾಗಿತ್ತು. 200ಕ್ಕೂ ಅಧಿಕ ಸಿನಿಮಾಗಳು ಬಿಡುಗಡೆಯಾಗಿ ದಾಖಲೆ ನಿರ್ಮಿಸಿದ್ದವು. ಆದರೆ ಈ ವರ್ಷ ಆ ಸಂಖ್ಯೆಯನ್ನು ತಲುಪೋದು ಕಷ್ಟವಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಿನಿಮಾ ಬಿಡುಗಡೆಯಲ್ಲಿ ಗಣನೀಯವಾಗಿ ಇಳಿಕೆಯಾಗಲಿದೆ. ಅದಕ್ಕೆ ಕಾರಣ ಕೋವಿಡ್ ಎಂದುಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಕೋವಿಡ್ ಮಹಾ ಮಾರಿಗೆ ಇಡೀ ಜಗತ್ತೆ ತಲ್ಲಣಿಸಿದೆ. ಇದರಿಂದ ಕನ್ನಡ ಚಿತ್ರರಂಗ ಕೂಡಾ ಹೊರತಾಗಿಲ್ಲ. ಕಳೆದ ಒಂದೂವರೆ ತಿಂಗಳಿನಿಂದ ಚಿತ್ರರಂಗದಲ್ಲಿ ಯಾವುದೇ ಚಟುವಟಿಕೆಗಳಿಲ್ಲ. ಸಿನಿಮಾ ಬಿಡುಗಡೆಯಾಗಲಿ, ಚಿತ್ರೀಕರಣವಾಗಲಿ ನಡೆಯುತ್ತಿಲ್ಲ. ಒಂದು ವೇಳೆ ಎಲ್ಲವೂ ಸರಿ ಇದ್ದರೆ ಈ ಒಂದೂವರೆ ತಿಂಗಳಲ್ಲಿ ಕಡಿಮೆ ಎಂದರೂ 20 ಪ್ಲಸ್ ಸಿನಿಮಾಗಳು ಬಿಡುಗಡೆಯಾ ಗುತ್ತಿದ್ದವು. ಆದರೆ ಈ ಸಿನಿಮಾಗಳೆಲ್ಲವೂ ಅನಿರ್ದಿಷ್ಟಾವಧಿ ಮುಂದೆ ಹೋಗಿವೆ. ಹಾಗಂತ ಲಾಕ್ ಡೌನ್ ಮೇಗೆ ತೆರವುಗೊಂಡರೂ ಸಿನಿಮಾ ಬಿಡುಗಡೆಗೆ ಕೂಡಲೇ ಅನುಮತಿ ಸಿಗುತ್ತದೆ ಎಂದು ಹೇಳುವಂತಿಲ್ಲ. ಚಿತ್ರಮಂದಿರಗಳಲ್ಲಿ ಸಾಮಾಜಿಕ ಅಂತರವನ್ನು ಪಾಲಿಸೋದು ಕಷ್ಟಸಾಧ್ಯವಾದ್ದರಿಂದ ಕೋವಿಡ್ ನಿಯಂತ್ರಣಕ್ಕೆ ಬರುವವರೆಗೆ ಸಿನಿಮಾ ಬಿಡುಗಡೆಗೆ ಅವಕಾಶ ಸಿಗೋದು ಕಷ್ಟ ಎನ್ನುತ್ತಿವೆ ಮೂಲಗಳು. ಅಲ್ಲಿಗೆ ಏನಿಲ್ಲವೆಂದರೂ 50ರಿಂದ 60 ಸಿನಿಮಾಗಳ ಬಿಡುಗಡೆ ಪ್ಲ್ಯಾನ್ ಉಲ್ಟಾ ಆಗುತ್ತವೆ. ಈ ಎಲ್ಲಾ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕದೇ ಬೇರೆ ವಿಧಿ ಇಲ್ಲ. ಹೇಗೋ ಧೈರ್ಯ ಮಾಡಿ ಸಿನಿಮಾ ಬಿಡುಗಡೆ ಮಾಡಿ ಬಿಡೋಣ ಎಂದು ಮುಂದೆ ಬರುವಂತೆಯೂ ಇಲ್ಲ. ಏಕೆಂದರೆ ಸ್ಟಾರ್ ಸಿನಿಮಾಗಳು ಸರತಿಯಲ್ಲಿ ನಿಂತಿವೆ. ರಾಬರ್ಟ್, ಕೋಟಿಗೊಬ್ಬ -3, ಪೊಗರು, ಸಲಗ, 100, ಯುವರತ್ನ … ಹೀಗೆ ಲೆಕ್ಕ ಹಾಕುತ್ತಾ ಹೋದರೆ ಪಟ್ಟಿ ಬೆಳೆಯುತ್ತದೆ. ಈ ಸಿನಿಮಾಗಳ ನಡುವೆ ಬಂದರೆ ಸಿನಿಮಾ ಬಿಡುಗಡೆಯಾದ ಸಂತಸ ಸಿಗಬಹುದೇ ಹೊರತು ಅದರಾಚೆ ಯಾವುದೇ ಲಾಭವಾಗಬಹುದು. ಆ ಕಾರಣದಿಂದ ಹೊಸಬರ ಸಿನಿಮಾಗಳ ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಿವೆ. ಅಲ್ಲಿಗೆ ಬಿಡುಗಡೆಯ ಸಂಖ್ಯೆಯಲ್ಲೂ ಗಣನೀಯವಾಗಿ ಇಳಿಕೆಯಾಗಲಿದೆ.
ಮಾಡೋದು ಸಿನಿಮಾದ ಬಿಡುಗಡೆಯೇ. ಶುಕ್ರವಾರದ ಸಂಭ್ರಮದಲ್ಲಿ ಸಾಕಷ್ಟು ಮಂದಿ ಬದುಕು ಕಟ್ಟಿಕೊಳ್ಳುತ್ತಾರೆ ಕೂಡಾ. ಆದರೆ ಈ ವರ್ಷ ಸಂಭ್ರಮ ಮಂಕಾಗಲಿದೆಯೇ ಎಂಬ ಭಯ ಸಿನಿಪ್ರೇಮಿಗಳನ್ನು ಕಾಡುತ್ತಿರೋದಂತೂ ಸುಳ್ಳಲ್ಲ. ಹೊಸಬರ ಹಾದಿ ಕಷ್ಟ ಕೋವಿಡ್ ಎಫೆಕ್ಟ್ ದಿಂದ ಚಿತ್ರರಂಗದಲ್ಲಿ ದೊಡ್ಡ ಹೊಡೆತ ತಿನ್ನುವವರು ಹೊಸಬರು. ಏಕೆಂದರೆ ಹೊಸಬರ ಸಿನಿಮಾಗಳು ಮೊದಲಿ ನಿಂದಲೂ ಒಮ್ಮೆಲೇ ಟೇಕಾಫ್ ಆಗೋದು ಸ್ವಲ್ಪ ತಡವಾಗಿಯೇ. ಆದರೆ, ಕೋವಿಡ್ ಹೊಡೆತದಿಂದಾಗಿ ಹೊಸಬರಿಗೆ ಚಿತ್ರಮಂದಿರ ಸಿಗೋದು ಕೂಡಾ ಕಷ್ಟ ಎಂಬಂತಾಗಿದೆ. ಸ್ಟಾರ್‌ಗಳ ಸಿನಿಮಾಕ್ಕಾದರೆ ಅವರದ್ದೇ ಆದ ಅಭಿಮಾನಿ ವರ್ಗವಿರುತ್ತದೆ. ಆದರೆ, ಹೊಸಬರು ಜೀರೋ ದಿಂದಲೇ ತಮ್ಮ ಪಯಣ ಆರಂಭಿಸಬೇಕು.