“ಭರ್ಜರಿ’ ಹುಡುಗ ಧ್ರುವ ಸರ್ಜಾ “ಹಯಗ್ರೀವ’ ಎಂಬ ಸಿನಿಮಾ ಒಪ್ಪಿಕೊಂಡಿರೋದು ನಿಮಗೆ ಗೊತ್ತೇ ಇದೆ. “ಅದ್ಧೂರಿ’, “ಬಹದ್ದೂರ್’ ಯಶಸ್ಸಿನ ಬಳಿಕ “ಭರ್ಜರಿ’ ಸಿನಿಮಾದಲ್ಲಿ ತೊಡಗಿದ್ದ ಧ್ರುವ ಸರ್ಜಾ, ಆ ಸಿನಿಮಾ ಬಿಡುಗಡೆ ಮುನ್ನವೇ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದರು. ನಂದಕಿಶೋರ್ ನಿರ್ದೇಶನದ ಈ ಚಿತ್ರಕ್ಕೆ ಮುಹೂರ್ತ ನಡೆದಿದೆ. ಚಿರಂಜೀವಿ ಸರ್ಜಾ ಕ್ಲಾಪ್ ಮಾಡಿದ್ದಾರೆ.
“ಹಯಗ್ರೀವ’ ಅನ್ನುವುದು ವಿಷ್ಣುವಿನ ಮತ್ತೂಂದು ಅವತಾರ. ಅಶ್ವಮೇಧ ಯಾಗ ಮಾಡುವ ಸಂದರ್ಭದಲ್ಲಿ ಕುದುರೆ ಬಿಡುವ ಹೆಸರೇ ಹಯಗ್ರೀವ. ಅದನ್ನು ಕಟ್ಟಿದರೆ ಯುದ್ಧ ಮಾಡಬೇಕು, ಇಲ್ಲವಾದರೆ ಶರಣಾಗಬೇಕು. ಇಂತಹ ಸನ್ನಿವೇಶ “ಬಬ್ರುವಾಹನ’ ಸಿನಿಮಾದಲ್ಲೂ ಇತ್ತು. ಈಗ ಅಂತಹ ವಿಶೇಷ ದೃಶ್ಯಗಳು ಈ “ಹಯಗ್ರೀವ’ ಸಿನಿಮಾದಲ್ಲೂ ಇವೆ.
ಸುಮಾರು 800 ವರ್ಷಗಳ ಹಿಂದಿನ ಕಥೆಯೇ ಚಿತ್ರಕ್ಕೆ ಸ್ಫೂರ್ತಿ. ಅದನ್ನು ಇಟ್ಟುಕೊಂಡೇ ಚಿತ್ರಕ್ಕೆ ಕಥೆ ರೆಡಿ ಮಾಡಿರುವ ನಿರ್ದೇಶಕರು, ಈಗಿನ ಯೂತ್ಸ್ಗೆ ಏನೆಲ್ಲಾ ಬೇಕೋ ಆ ಎಲ್ಲಾ ಅಂಶಗಳನ್ನೂ ಇಲ್ಲಿಟ್ಟು ಸಿನಿಮಾ ಮಾಡಲು ಸಜ್ಜಾಗಿದ್ದಾರೆ. ಇದು ಚೈನಾ ಮತ್ತು ರಾಜ್ಯದ ಅನೇಕ ಸುಂದರ ತಾಣಗಳಲ್ಲಿ ಚಿತ್ರೀಕರಣಗೊಳ್ಳಲಿದೆ.
ಇನ್ನು, ಧ್ರುವಸರ್ಜಾ ಅವರಿಗೆ ಇಲ್ಲಿ ಮೂರು ಶೇಡ್‌ಗಳಿವೆ. ಆ ಪಾತ್ರಕ್ಕಾಗಿಯೇ ಅವರು ವಿಶೇಷ ತಯಾರಿಯನ್ನೂ ಮಾಡಿಕೊಳ್ಳುತ್ತಿದ್ದಾರಂತೆ. ಧ್ರುವಸರ್ಜಾ ಹಿಟ್ ಸಿನಿಮಾ ಕೊಟ್ಟಿರುವುದರಿಂದ ಅವರ ಮುಂದಿನ ಸಿನಿಮಾಗಳಿಗೂ ಆ ಕುತೂಹಲ ಇದ್ದೇ ಇರುತ್ತೆ. “ಭರ್ಜರಿ’ ತಡವಾಗಿದ್ದರೂ, ಅದೊಂದು ಹೊಸತನದಿಂದ ಕೂಡಿರುವ ಸಿನಿಮಾ ಎನ್ನುವ ಧ್ರುವಸರ್ಜಾ, ಇಷ್ಟರಲ್ಲೇ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ.
ಇನ್ನು ಮುಂದಿನ ದಿನಗಳಲ್ಲಿ, ನನ್ನ ಸಿನಿಮಾಗಳು ಯಾವುದೇ ಕಾರಣಕ್ಕೂ ತಡವಾಗಿ ಬರುವುದಿಲ್ಲ ಎಂದು ಅಭಿಮಾನಿಗಳಿಗೆ ಸ್ಪಷ್ಟಪಡಿಸುವ ಅವರು, “ಹಯಗ್ರೀವ’ ಸಿನಿಮಾ ಮೇಲೆ ಸಿಕ್ಕಾಪಟ್ಟೆ ಭರವಸೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ, ನಂದಕಿಶೋರ್ ನಿರ್ದೇಶನ, ಕಥೆ ಮತ್ತು ಚಿತ್ರತಂಡ ಎಂಬುದು ಅವರ ಮಾತು.
ಅದೇನೆ ಇರಲಿ, “ಹಯಗ್ರೀವ’ ಸಿನಿಮಾಗೆ ನಂದಕಿಶೋರ್ ಟೀಮ್ ಸಜ್ಜಾಗಿದ್ದು, ಇಷ್ಟರಲ್ಲೇ ಫಸ್ಟ್‌ಲುಕ್ ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಸದ್ಯಕ್ಕೆ ಚಿತ್ರದ ಹೀರೋ ಧ್ರುವಸರ್ಜಾ. ಆದರೆ, ಅವರಿಗೆ ನಾಯಕಿ ಯಾರು ಎಂಬುದಿನ್ನೂ ಆಯ್ಕೆಯಾಗಿಲ್ಲ. ಚಿತ್ರದಲ್ಲಿ ರವಿಚಂದ್ರನ್, ರಮ್ಯಾಕೃಷ್ಣ, ಪ್ರಕಾಶ್ ರೈ, ಸಾಧುಕೋಕಿಲ. ರವಿಶಂಕರ್, ಸೋನು ಸೂದ್, ತಬಲನಾಣಿ ಮತ್ತು ಚಿಕ್ಕಣ್ಣ ಸೇರಿದಂತೆ ದೊಡ್ಡ ತಾರಾಬಳಗವೇ ಇರಲಿದೆ.
ಚಿತ್ರಕ್ಕೆ ಅರ್ಜುನ್ ಜನ್ಯಾ ಸಂಗೀತ ನಿರ್ದೇಶಕರು. ಅವರಿಲ್ಲಿ ಐದು ಹಾಡುಗಳಿಗೆ ಸಂಗೀತ ನೀಡಲಿದ್ದಾರಂತೆ. ಅಂದಹಾಗೆ, ಇತ್ತೀಚೆಗೆ ಚಿತ್ರಕ್ಕೆ ಪೂಜೆ ನಡೆದಿದೆ. “ಅಧ್ಯಕ್ಷ’ ನಿರ್ಮಿಸಿದ್ದ ಟಿ.ಕೆ.ಗಂಗಾಧರ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಅಂದಹಾಗೆ, ನಟ ಹಾಗೂ ಧ್ರುವಸರ್ಜಾ ಸಹೋದರ ಚಿಂರಜೀವಿ ಸರ್ಜಾ ಅವರು ಚಿತ್ರಕ್ಕೆ ಕ್ಲಾಪ್ ಮಾಡಿ, ಶುಭಹಾರೈಸಿದ್ದಾರೆ.