Advertisement

ಹೊಸ ಮಾದರಿ ವಂಚಕರ ಹಾವಳಿ

12:17 PM Nov 03, 2018 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ಹೊಸ ಮಾದರಿ ವಂಚಕರ ಹಾವಳಿ ಪ್ರಾರಂಭವಾಗಿದ್ದು, ದ್ವಿಚಕ್ರ ವಾಹನ ಸವಾರರ ಹೆಲ್ಮೆಟ್‌ಗೆ ತುರಿಕೆ ಪುಡಿ ಹಾಕಿ ಹಣ ದೋಚುವ ತಂಡವೊಂದು ಸಕ್ರಿಯಾಗಿದೆ.

Advertisement

ಬ್ಯಾಂಕ್‌ಗಳಿಂದ ಹಣ ಡ್ರಾ ಮಾಡಿಕೊಂಡು ಹೋಗುವರು, ರಾತ್ರಿ ವೇಳೆ ವ್ಯಾಪಾರ ಮುಗಿಸಿ ಮನೆಗೆ ಮರಳುವವರನ್ನೇ ಹೊಂಚು ಹಾಕುವ ತಂಡ ದ್ವಿಚಕ್ರ ವಾಹನ ನಿಲ್ಲಿಸಿದ್ದಾಗ ಹೆಲ್ಮೆಟ್‌ ಒಳಗೆ ತುರಿಕೆ ಪುಡಿ ಹಾಕುವುದು. ಆ ಹೆಲ್ಮೆಟ್‌ ಧರಿಸಿದವರು ವಾಹನ ಹತ್ತಿ ಸ್ವಲ್ಪ ದೂರ ಹೋಗುತ್ತಿದ್ದಂತೆ ತುರಿಕೆಯಿಂದ ವಾಹನ ನಿಲ್ಲಿಸಿದ ವೇಳೆ ಗಮನ ಬೇರೆಡೆ ಸೆಳೆದು ಅವರಲ್ಲಿನ ಹಣ, ಚಿನ್ನಾಭರಣ ದೋಚುವುದು ಇವರ ಕೆಲಸ.

ವೃದ್ಧರೊಬ್ಬರ ಹೆಲ್ಮೆಟ್‌ ಒಳಗೆ ತುರಿಕೆ ಔಷಧ ಸಿಂಪಡಿಸಿ ಅವರ ಗಮನ ಬೇರೆಡೆ ಸೆಳೆದ ಇಬ್ಬರು ದುಷ್ಕರ್ಮಿಗಳು 2.5 ಲಕ್ಷ ರೂ. ಕಳವು ಮಾಡಿರುವ‌ ಘಟನೆ ಜೆ.ಪಿ.ನಗರ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ಸಂಭವಿಸಿದೆ. ತಿಲಕನಗರದ ಸತ್ಯನಾರಾಣರಾವ್‌ (83) ಹಣ ಕಳೆದುಕೊಂಡವರು. ಮೈಕೋಲೇಔಟ್‌ನ ಬ್ಯಾಂಕ್‌ವೊಂದರಿಂದ ಜಯನಗರದಲ್ಲಿರುವ 2ನೇ ಪುತ್ರಿಯ ಮನೆಗೆ ಹಣ ಕೊಂಡೊಯ್ಯುತ್ತಿದ್ದರು. ಇದನ್ನು ಗಮನಿಸಿದ ದುಷ್ಕರ್ಮಿಗಳು ಕೃತ್ಯವೆಸಗಿದ್ದಾರೆ.

ಘಟನಾ ಸ್ಥಳದ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿ ಸಂಗ್ರಹಿಸಿದ್ದು, ಆರೋಪಿಗಳ ಶೋಧ  ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು. ಈ ಹಿಂದೆ ನಗರದಲ್ಲಿ ಸರಗಳವು ಸೇರಿ ಇತರೆ ಅಪರಾಧ ಕೃತ್ಯ ನಡೆಸುತ್ತಿದ್ದ ತಮಿಳುನಾಡಿನ ಓಜಿಕುಪ್ಪಂ ತಂಡವೇ ಈಗ ಹೊಸ ಮಾದರಿಯ ಕೃತ್ಯಕ್ಕೆ ಇಳಿದಿರಬಹುದು ಎಂಬ ಶಂಕೆಯೂ ಪೊಲೀಸರಿಗೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next