ಬೆಂಗಳೂರು: ರಾಜ್ಯದಲ್ಲಿನ ತನ್ನ ಕಚೇರಿಗಳಿಗೆ 42 ಸಿ ದರ್ಜೆಯ ಹುದ್ದೆಗಳನ್ನು ನೇಮಕ ಮಾಡುವಲ್ಲಿ ಕನ್ನಡಿಗರನ್ನು ಕಡೆಗಣಿಸಿದ್ದು, ತಕ್ಷಣ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಎಸ್.ಜಿ. ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಈಗಾಗಲೇ 42 ಸಿ ದರ್ಜೆಯ ಹುದ್ದೆಗಳಿಗೆ ಎರಡು ಹಂತದ ಪರೀಕ್ಷೆ ನಡೆಸಿದ್ದು, ನೇಮಕಗೊಂಡಿರುವ ಅಭ್ಯರ್ಥಿಗಳಿಗೆ ಕನ್ನಡ ಬರುವುದನ್ನು ಖಾತ್ರಿ ಮಾಡಿಕೊಳ್ಳಲು ಶನಿವಾರ ಸಂಸ್ಥೆಯೇ
ಆಂತರಿಕವಾಗಿ ಅಧಿಕಾರಿಗಳ ಸಮಿತಿ ಮಾಡಿ ಕೊಂಡು ಹೆಚ್ಚಿನ ಅನ್ಯ ಭಾಷಿಕರಿಗೆ ಅವಕಾಶ ಮಾಡಿಕೊ ಡಲು ಪ್ರಯತ್ನ ನಡೆಸಿದೆ ಎಂದು ಆರೋಪಿಸಿದರು.
ಈ ಕುರಿತು ಕಂಪನಿಯ ಪ್ರಾದೇಶಿಕ ಮುಖ್ಯಸ್ಥ ಚಿರಂಜೀವಿ ರೆಡ್ಡಿಗೆ ನೇಮಕ ಪ್ರಕ್ರಿಯೆ ಸ್ಥಗಿತಗೊಳಿಸುವಂತೆ ಪತ್ರ ಬರೆದು ದೂರವಾಣಿ ಮೂಲಕ ಮನವಿ ಮಾಡಿದರೂ, ನೇಮಕ ಪ್ರಕ್ರಿಯೆ ಮುಂದುವರಿಸುವುದಾಗಿ ಹೇಳುತ್ತಿದ್ದಾರೆ. ಇದಕ್ಕೆ ಕೇಂದ್ರ ಸರ್ಕಾರ 2016 ರಲ್ಲಿ ಬ್ಯಾಂಕಿಂಗ್ ನೇಮಕಾತಿ ನಿಯಮಗಳಲ್ಲಿ ಮಾಡಿರುವ ಬದಲಾವಣೆಗಳೇ ಕಾರಣವಾಗಿದ್ದು, ಈ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಎರಡು ಬಾರಿ ಪತ್ರ ಬರೆದು 2014ರ ನೇಮಕಾತಿ ನಿಯಮಗಳನ್ನೇ ಮುಂದುವರಿಸುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಕೇಂದ್ರ ಸಚಿವರಾಗಿದ್ದ ಅನಂತ್‌ಕುಮಾರ್ ಪ್ರಾಧಿಕಾರದ ಮನವಿಗೆ ಸ್ಪಂದಿಸಿ ನಬಾರ್ಡ್ ಹಾಗೂ ಐಬಿಪಿಎಸ್‌ಗೆ ಪತ್ರ ಬರೆದು ನಿಯಮ ಬದಲಾಯಿಸುವಂತೆ ಸೂಚಿಸಿದ್ದರು. ಆದರೆ, ಆ ನಂತರ ಯಾವುದೇ ಬೆಳವಣಿಗೆಗಳು ಆಗಲಿಲ್ಲ ಎಂದು ಹೇಳಿದರು.
ರಾಜ್ಯದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ರಾಜ್ಯದ ಸಂಸದರು ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು 2014 ರ ಐಬಿಪಿಎಸ್ ನೇಮಕಾತಿ ನಿಯಮಗಳನ್ನೇ ಮುಂದುವರಿಸುವಂತೆ ಒತ್ತಡ ಹೇರಬೇಕು ಎಂದು ಆಗ್ರಹಿಸಿದರು.