Advertisement

ನೂರೆಂಟು ನಿರೀಕ್ಷೆಯ ಹೊಸ ನೆಂಟಸ್ಥಿಕೆ

03:10 PM Jan 01, 2018 | |

ವಿಜಯಪುರ: ಹಲವು ಏಳು-ಬೀಳುಗಳ ಕೊಡುಗೆ ನೀಡಿ ಕಾಲುತೆಗೆದ ಹದಿನೇಳು, ಇದೀಗ ನೂರೆಂಟು ಕನಸುಗಳ ನಿರೀಕ್ಷೆಯಲ್ಲಿ ಹದಿನೆಂಟರ ನೆಂಟಸ್ತನಕ್ಕೆ ಜಿಲ್ಲೆ ತೆರೆದುಕೊಳ್ಳುತ್ತಿದೆ.

Advertisement

ಜಿಲ್ಲೆಯಲ್ಲಿ ಕಳೆದ 2017ರಲ್ಲಿ ಚಾಲನೆ ಪಡೆದಿರುವ ಕೆರೆ ತುಂಬುವ ಯೋಜನೆ 2018ರಲ್ಲಿ ಸಂಪೂರ್ಣಗೊಳ್ಳುವ ನಿರೀಕ್ಷೆ ಇದೆ. ಜಿಲ್ಲೆಯನ್ನು ಸಮಗ್ರ ನೀರಾವರಿ ಮಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ಏತ ನೀರಾವರಿಗಳಲ್ಲಿ ಮುಳವಾಡ, ಚಿಮ್ಮಲಗಿ ಯೋಜನೆಯ ಬಹುತೇಕ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೆಲವು ಭಾಗದಲ್ಲಿ ಪ್ರಾಯೋಗಿಕವಾಗಿ ನಾಲೆಗೆ ನೀರು ಹರಿದಿದೆ. ಮತ್ತೆ ಕೆಲವು ಕಡೆಗಳಲ್ಲಿ ನಾಲೆಗಳ ಮೂಲಕ ಜಿಲ್ಲೆಯ ನೂರೆಂಟು ಕೆರೆಗಳಿಗೆ ನೀರು ತುಂಬಿಸುವ ಕಾರ್ಯವೂ ಭರದಿಂದ ಸಾಗಿದೆ. 2018ರಲ್ಲಿ ಕೆರೆಗೆ ನೀರು ತುಂಬಿಸುವ ಯೋಜನೆ ಪೂರ್ಣಗೊಳ್ಳುವ ಜೊತೆಗೆ, ರೈತರ ಜಮೀನಿಗೆ ನೀರು ಹರಿಸುವಲ್ಲಿ ಈ ಯೋಜನೆಗಳು ನೆರವಾಗುತ್ತವೆ ಎಂದು ನಿರೀಕ್ಷೆ ರೈತರಲ್ಲಿದೆ.

ಇದಲ್ಲದೇ ಜಿಲ್ಲೆಯಲ್ಲಿ ಅತ್ಯಂತ ಎತ್ತರದ ಪ್ರದೇಶ ಎನಿಸಿರುವ ತಿಕೋಟಾ ಭಾಗಕ್ಕೆ ನೀರುವ ಹರಿಸುವ ಮಹತ್ವಾಕಾಂಕ್ಷೆಯ ಬಬಲೇಶ್ವರ-ತುಬಚಿ ಯೋಜನೆ ಕಾಮಗಾರಿಯೂ ಪೂರ್ಣಗೊಳ್ಳುವ ಕನಸು ಹೊತ್ತಿರುವ ರೈತರು, ಚಡಚಣ, ಪೀರಾಪುರ-ಬೂದಿಹಾಳ ಮಾತ್ರವಲ್ಲ ನಾಗರಬೆಟ್ಟ ಯೋಜನೆಯೂ ಕೈಗೂಡಿ ಜಿಲ್ಲೆ ಸಂಪೂರ್ಣ ನೀರಾವರಿ ಆಗುವ ನಿರೀಕ್ಷೆಯಲ್ಲಿದ್ದಾರೆ.

ಇನ್ನು ವಿಶ್ವವಿಖ್ಯಾತಿ ಪಡೆದಿರುವ ಐತಿಹಾಸಿಕ ಗೋಲಗುಮ್ಮಟ, ಆಗ್ರಾದಲ್ಲಿ ಬಿಳಿ ತಾಜಮಹಲ್‌ ನಿರ್ಮಾಣಕ್ಕೆ ಪ್ರೇರಣೆ ನೀಡಿದ ಕರಿತಾಜ್‌ ಎಂದೇ ಪ್ರಖ್ಯಾತಿ ಪಡೆದಿರುವ ಇಬ್ರಾಹಿಂ ರೋಜಾ, ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತರೂ ಜಗತ್ತಿನ ಜನರ ಅಚ್ಚರಿಗೆ ಕಾರಣವಾಗಿರುವ ಬಾರಾ ಕಮಾನ್‌ ಹೀಗೆ ಐತಿಹಾಸಿಕ ನೂರಾರು ಸ್ಮಾರಕಗಳು ಜಿಲ್ಲೆಯಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮನ್ನು ಕಾಣಲು ಬರುವ ನಿರೀಕ್ಷೆ ಹೊತ್ತಿವೆ.

ಗೋಲಗುಮ್ಮಟ ಸ್ಮಾರಕವನ್ನು ವಿಶ್ವ ಪರಂಪರೆ ಪಟ್ಟಿಗೆ ಸೇರಿಸಬೇಕು. ಭಾರತೀಯ ಪುರಾತತ್ವ ಇಲಾಖೆಯ ವೃತ್ತ ಕಚೇರಿಯನ್ನು ಧಾರವಾಡದಿಂದ ವಿಜಯಪುರಕ್ಕೆ ಸ್ಥಳಾಂತರಿಸಬೇಕು ಎಂಬ ಬೇಡಿಕೆ ದಶಕದಿಂದ ಕೇಳಿ ಬರುತ್ತಿದೆ. ಆದರೆ ನಿತ್ಯವೂ ದೇಶ-ವಿದೇಶದ ಸಾವಿರಾರು ಪ್ರವಾಸಿಗರು ಜಿಲ್ಲೆಗೆ ಆಗಮಿಸುತ್ತಾರೆ. ಆದರೆ ಜಿಲ್ಲೆಯ ಪ್ರವಾಸಿ ಶ್ರೀಮಂತಿಕೆಯ ಮಾಹಿತಿ ನೀಡಿಕೆಯ ಕೊರತೆ, ಸೌಲಭ್ಯಗಳ ಕೊರತೆ ಕಾರಣ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ನಿರೀಕ್ಷೆಯಂತೆ ಬೆಳವಣಿಗೆ ಕಂಡಿಲ್ಲ. ಹೀಗಾಗಿ ಹೊಸ ಕನಸುಗಳೊಂದಿಗೆ ಬರುತ್ತಿರುವ ಹದಿನೆಂಟು ಹೊಸ ನೆಂಟಸ್ಥಿಕೆ ಸ್ಮರಣೆಯಾಗಿಸಿಕೊಳ್ಳುವ ನಿರೀಕ್ಷೆ ಇದೆ.

Advertisement

ಇನ್ನು ಕೇಂದ್ರ ಸರ್ಕಾರ ಅನುದಾನದಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಕೂಡಗಿ ಬಳಿ ತಲೆ ಎತ್ತಿರುವ ಎನ್‌ಟಿಪಿಸಿ ಸ್ಥಾವರ ಈಗಾಗಲೇ ಎರಡು ಘಟಕಗಳು ವಿದ್ಯುತ್‌ ಉತ್ಪಾದನೆ ಆರಂಭಿಸಿವೆ. ಇದೀಗ ಮೂರನೇ ಘಟಕ 2018 ಮಾರ್ಚ್‌ ಮಧ್ಯಾವ ಧಿಯಲ್ಲಿ ವಿದ್ಯುತ್‌ ಉತ್ಪಾದನೆ ಆರಂಭಿಸುವ ನಿರೀಕ್ಷೆ ಇದೆ. ಆ ಮೂಲಕ ಮೊದಲ ಹಂತದ ಮೂರು ಘಟಕಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. 

ಇನ್ನು ಸದರಿ ಕೇಂದ್ರಕ್ಕೆ ಕಲ್ಲಿದ್ದಲು ಪೂರೈಕೆಗಾಗಿಯೇ ಪ್ರತ್ಯೇಕ ರೈಲು ಮಾರ್ಗ ನಿರ್ಮಾಣಕ್ಕೆ ಮುಂದಾಗಿರುವ ಎನ್‌ಟಿಪಿಸಿ ಸಂಸ್ಥೆ, ಇದಕ್ಕಾಗಿ ರೂಪಿಸಿರುವ ಹುಟಗಿ-ಗದಗ ಮಧ್ಯೆ ಜೋಡಿ ಮಾರ್ಗದ ನಿರ್ಮಾಣ ಕಾರ್ಯ ನಡೆದಿದೆ. ಉಷ್ಣ ವಿದ್ಯುತ್‌ ಸ್ಥಾವರಕ್ಕೆ ಅಗತ್ಯ ಇರುವ ಕಲ್ಲಿದ್ದಲು ಪೂರೈಕೆಗೆ ಪ್ರತ್ಯೇಕ ರೈಲು ಮಾರ್ಗ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, 2018ರಲ್ಲಿ ಪೂರ್ಣಗೊಳ್ಳುವ ವಿಶ್ವಾಸ ಕೇಂದ್ರದ ಅಧಿಕಾರಿಗಳದ್ದು.

ಇದರ ಹೊರತಾಗಿ ಜಿಲ್ಲೆಯ ರೈತರ ಅದರಲ್ಲೂ ದ್ರಾಕ್ಷಿ-ದಾಳಿಂಬೆ ಬೆಳೆಗಾರರ ಸಾಲ ಮನ್ನಾ, ಸ್ಥಳೀಯ ಮಾರುಕಟ್ಟೆಗಾಗಿ ಇ-ಖರೀದಿ ಕೇಂದ್ರದ ಪುನಶ್ಚೇತನ ಹೀಗೆ ಹಲವು ಕನಸುಗಳು ಹೊಸ ವರ್ಷದಲ್ಲಾದರೂ ಈಡೇರುತ್ತವೆ ಎಂಬ ನಿರೀಕ್ಷೆಯಲ್ಲಿದ್ದಾರೆ. 

„ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next