Advertisement

ಮೊಗ್ಗಿನ ಮನಸು ಹುಡುಗನ ಹೊಸ ಸಿನ್ಮಾ

06:15 PM Nov 13, 2017 | |

ಸಿನಿಮಾ ಸೆಳೆತವೇ ಹಾಗೆ. ಇಲ್ಲಿ ಒಮ್ಮೆ ಬಂದರೆ, ಮತ್ತೆ ಮತ್ತೆ ಬರಬೇಕೆನಿಸುವುದು ನಿಜ. ಇಲ್ಲೀಗ ಹೇಳ ಹೊರಟಿರುವುದು ಯುವ ನಟ ಮನೋಜ್‌ ಕುಮಾರ್‌ ಬಗ್ಗೆ. ಶಶಾಂಕ್‌ ನಿರ್ದೇಶನದ “ಮೊಗ್ಗಿನ ಮನಸು’ ಸಿನಿಮಾ ನೋಡಿದವರಿಗೆ ಈ ಮನೋಜ್‌ ಅವರ ಪರಿಚಯ ಇದ್ದೇ ಇರುತ್ತೆ. ಆ ಚಿತ್ರದಲ್ಲಿ ಮನೋಜ್‌ ಹೀರೋ ಆಗಿ ಕಾಣಿಸಿಕೊಂಡವರು. ಅದಾದ ಬಳಿಕ ಮನೋಜ್‌ ಎಲ್ಲೂ ಕಾಣಿಸಿಕೊಳ್ಳಲಿಲ್ಲ.

Advertisement

ಒಂದಷ್ಟು ಕಥೆಗಳನ್ನು ಕೇಳಿದರೂ, ಅವುಗಳನ್ನು ಒಪ್ಪಲಿಲ್ಲ. ಆ ಮಧ್ಯೆ “ಪರವಶನಾದೆನು’ ಎಂಬ ಸಿನಿಮಾ ಶುರುವಾಗಿತ್ತಾದರೂ, ಅದು ಮುಂದುವರೆಯಲಿಲ್ಲ. ಕೊನೆಗೆ ಮನೋಜ್‌ ಒಂದು ಗ್ಯಾಪ್‌ ಪಡೆದು ಈಗ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ. ಆ ಚಿತ್ರಕ್ಕೆ ಅವರೇ ಹೀರೋ. ಅಷ್ಟೇ ಅಲ್ಲ, ನಿರ್ದೇಶನ ಕೂಡ ಅವರದೇ. ಅಂದಹಾಗೆ, ಆ ಚಿತ್ರದ ಹೆಸರು “ಓ ಪ್ರೇಮವೇ’.

ಈ ಹಿಂದೆ ರವಿಚಂದ್ರನ್‌ ಅಭಿನಯದಲ್ಲಿ “ಓ ಪ್ರೇಮವೇ’ ಚಿತ್ರ ಬಂದಿತ್ತು. ಈಗ ಪುನಃ ಅದೇ ಶೀರ್ಷಿಕೆಯಡಿ ಮನೋಜ್‌ ಸಿನಿಮಾ ಮಾಡಿ ಮುಗಿಸಿದ್ದು, ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಇನ್ನು, ಎಂ.ಕೆ.ಫಿಲ್ಮ್ಸ್ ಬ್ಯಾನರ್‌ನಡಿ ನಿರ್ಮಾಣಗೊಂಡ ಮೊದಲ ಚಿತ್ರವಿದು. ಸಿ.ಟಿ.ಚಂಚಲ ಕುಮಾರಿ ಈ ಚಿತ್ರದ ನಿರ್ಮಾಪಕರು. ಒಂದು ಗ್ಯಾಪ್‌ ಪಡೆದಿದ್ದ ಮನೋಜ್‌, ಲಂಡನ್‌ನ ಹೆಸರಾಂತ “ಲಂಡನ್‌ ಫಿಲ್ಮ್ ಅಕಾಡೆಮಿ’ಯಲ್ಲಿ ನಿರ್ದೇಶನದ ತರಬೇತಿ ಪಡೆದು ಬಂದು, ಈ ಚಿತ್ರ ನಿರ್ದೇಶಿಸಿರುವುದು ವಿಶೇಷ.

“ಓ ಪ್ರೇಮವೇ’ ಚಿತ್ರದ ಶೀರ್ಷಿಕೆಯೇ ಹೇಳುವಂತೆ ಇದೊಂದು ಲವ್‌ಸ್ಟೋರಿ. ಅದರಲ್ಲೂ ತ್ರಿಕೋನ ಪ್ರೇಮಕಥೆ. ಪಕ್ಕಾ ರೊಮ್ಯಾಂಟಿಕ್‌ ಲವ್‌ ಸ್ಟೋರಿಯಾಗಿರುವ ಈ ಚಿತ್ರದಲ್ಲಿ ಮನೋಜ್‌ ಇಲ್ಲಿ ಲವ್ವರ್‌ಬಾಯ್‌ ಆಗಿ ಕಾಣಿಸಿಕೊಂಡಿದ್ದಾರಂತೆ. ಒಬ್ಬ ಹುಡುಗನ ಬದುಕಿನಲ್ಲಾದ ನೈಜ ಘಟನೆ ಇಟ್ಟುಕೊಂಡು ಈ ಕಥೆ ಮಾಡಲಾಗಿದೆ.

ಈ ಚಿತ್ರದಲ್ಲಿ ಮನೋಜ್‌ಗೆ ನಾಯಕಿಯಾಗಿ ನಿಕ್ಕಿ ಗಲ್ರಾನಿ ಕಾಣಿಸಿಕೊಂಡಿದ್ದಾರೆ. ಅಪೂರ್ವ ಎಂಬ ಮತ್ತೂಬ್ಬ ಹುಡುಗಿಯೂ ನಾಯಕಿಯಾಗಿ ನಟಿಸಿದ್ದಾರೆ. ಇನ್ನು, ಈ ಚಿತ್ರದಲ್ಲಿ ರಂಗಾಯಣ ರಘು, ಸಾಧುಕೋಕಿಲ, ಬುಲೆಟ್‌ ಪ್ರಕಾಶ್‌, ಪ್ರಶಾಂತ್‌ ಸಿದ್ದಿ ಇತರರು ನಟಿಸಿದ್ದಾರೆ. ವಿಶೇಷವೆಂದರೆ, ಈ ಚಿತ್ರದಲ್ಲಿ ಹುಚ್ಚವೆಂಕಟ್‌ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Advertisement

ಕಿರಣ್‌ ಹಂಪಾಪುರ್‌ ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ಆನಂದ್‌, ರಾಜಾ ವಿಕ್ರಮ್‌ ಮತ್ತು ರಾಹುಲ್‌ದೇವ್‌ ಎಂಬ ಯುವ ಸಂಗೀತ ನಿರ್ದೇಶಕರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಆರು ಹಾಡುಗಳಿದ್ದು, ಜಯಂತ್‌ ಕಾಯ್ಕಿಣಿ, ಕವಿರಾಜ್‌, ಬಹದ್ದೂರ್‌ ಚೇತನ್‌ಕುಮಾರ್‌ ಗೀತೆ ರಚಿಸಿದ್ದಾರೆ. ಸೋನುನಿಗಮ್‌, ಶ್ರೇಯಾಘೋಷಾಲ್‌, ವಿಜಯಪ್ರಕಾಶ್‌, ಟಿಪ್ಪು ಹಾಡಿದ್ದಾರೆ.

ಈಗಾಗಲೇ ಚಿತ್ರದ ಲಿರಿಕಲ್‌ ವೀಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ಬಿಡುಗಡೆಯಾಗಿ, ಮೆಚ್ಚುಗೆ ಪಡೆದಿದೆ. ಥ್ರಿಲ್ಲರ್‌ ಮಂಜು ಮತ್ತು ಡಿಫ‌ರೆಂಟ್‌ ಡ್ಯಾನಿ ಅವರು ಸಾಹಸ ಸಂಯೋಜಿಸಿದ್ದಾರೆ. ಹರ್ಷ, ಮದನ್‌-ಹರಿಣಿ, ಕಂಬಿರಾಜು, ಶ್ರೀನಿವಾಸ್‌ ಪ್ರಭು ನೃತ್ಯ ಸಂಯೋಜಿಸಿದ್ದಾರೆ. ಕೆ.ಎಂ.ಪ್ರಕಾಶ್‌ ಚಿತ್ರಕ್ಕೆ ಕತ್ತರಿ ಪ್ರಯೋಗಿಸಿದ್ದಾರೆ ಎಂದು ವಿವರ ಕೊಡುತ್ತಾರೆ ಮನೋಜ್‌. ಇಷ್ಟರಲ್ಲೇ ಚಿತ್ರದ ಸಿಡಿಗಳು ಬಿಡುಗಡೆ ಮಾಡಲಿದ್ದು, ಆ ಬಳಿಕ ಪ್ರೇಕ್ಷಕರ ಮುಂದೆ ಚಿತ್ರ ತರುವುದಾಗಿ ಹೇಳುತ್ತಾರೆ ಮನೋಜ್‌.

Advertisement

Udayavani is now on Telegram. Click here to join our channel and stay updated with the latest news.

Next