Advertisement
ಗುಣಮಟ್ಟದ ಕಾಮಗಾರಿ ಕೈಗೊಳ್ಳುವಲ್ಲಿ ಬೇಜವಾಬ್ದಾರಿ ವರ್ತನೆ ತೋರಿರುವ ಗುತ್ತಿಗೆದಾರರು ಹಾಗೂ ಸರಿಮಾಡಿಸಬೇಕಾದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಸಾರ್ವಜನಿಕರ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ತರಾತುರಿಯಲ್ಲಿ ಮುಗಿಸುವ ಧಾವಂತದಲ್ಲಿ ಕಾಮಗಾರಿಗಳನ್ನು ಕಳಪೆ ಮಾಡಲಾಗಿದೆ. ಕಾಮಗಾರಿ ಮುಗಿಸಬೇಕಾದ ಅವಧಿ ಮುಕ್ತಾಯವಾಗುತ್ತಾ ಬರುತ್ತಿದ್ದರೂ ಇನ್ನೂ ಕೆಲವೆಡೆ ಕಾಮಗಾರಿಗಳನ್ನೇ ಆರಂಭ ಮಾಡಿಲ್ಲ.
Related Articles
Advertisement
ತುಕ್ಕು ಹಿಡಿಯುವ ಮಟ್ಟಕ್ಕೆ ತಲುಪಿದೆ ಕಬ್ಬಿಣ: ರಸ್ತೆ ಮಟ್ಟಕ್ಕಿಂತ ಎತ್ತರದಲ್ಲಿರುವ ಚರಂಡಿ ಬಳಿ ಗ್ರಿಲ್ಗಳ ಕೆಳಭಾಗಕ್ಕೆ ಆಸರೆಯೇ ಇಲ್ಲವಾಗಿದೆ. ಚರಂಡಿಯ ಕಬ್ಬಿಣವನ್ನು ಆಶ್ರಯಿಸಿವೆ. ಸಿಮೆಂಟ್ ಇಟ್ಟಿಗೆಯನ್ನು ತೋರ್ಪಡಿಕೆಗೆ ಕೆಳಗೆ ಕಟ್ಟಿ ಕಾಮಗಾರಿಯನ್ನು ಮುಗಿಸಲಾಗಿದೆ. ಇದ್ಯಾವ ಗುಣಮಟ್ಟದ ಕಾಮಗಾರಿ ಎಂಬುದನ್ನು ಅಧಿಕಾರಿಗಳೇ ಹೇಳಬೇಕಿದೆ. ಕಳಪೆ ಗುಣಮಟ್ಟದ ಕಬ್ಬಿಣ ಹಾಕಿರುವುದರಿಂದ ತುಕ್ಕು ಹಿಡಿಯುವ ಮಟ್ಟಕ್ಕೆ ತಲುಪಿದೆ. ಅಲ್ಲಲ್ಲಿ ಕಿತ್ತು ಬಂದಿರುವುದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿವೆ.
ಅಧಿಕಾರಿ, ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಆಗ್ರಹ: ಇನ್ನು ಕೋಟ್ಯಂತರ ರೂ. ವ್ಯಯಿಸಿ ನಡೆಸಲಾಗುತ್ತಿರುವ ಕಾಮಗಾರಿಯನ್ನು ತಮಗೆ ಇಷ್ಟ ಬಂದಂತೆ ನಿರ್ವಹಿಸಲಾಗುತ್ತಿದ್ದು, ಅಧಿಕಾರಿಗಳು, ಎಂಜಿನಿಯರುಗಳು ಕೇಳುತ್ತಿಲ್ಲವೇ ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹತ್ತಾರು ವರ್ಷ ಇರಬೇಕಾದ ಕಾಮಗಾರಿಗಳು ಕೆಲವೇ ದಿನಗಳಲ್ಲಿ ಕಿತ್ತುಬರುತ್ತಿವೆ ಎಂದರೆ ಅಧಿಕಾರಿಗಳ ಬೇಜವಾಬ್ದಾರಿಯೇ ಇದಕ್ಕೆ ಕಾರಣವಾಗಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ಜತೆಗೆ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಬೇಕೆಂದು ಸಾರ್ವಜನಿಕರು ಆಗ್ರಹಪಡಿಸಿದ್ದಾರೆ.
ಇನ್ನೂ ಆರಂಭವಾಗಿಲ್ಲ ಕಾಮಗಾರಿ: ಇದೆಲ್ಲದರ ನಡುವೆ ಪಟ್ಟಣ ವ್ಯಾಪ್ತಿಯ ಬಹುತೇಕ ಕಡೆಗಳಲ್ಲಿ ಹೆದ್ದಾರಿ ಬದಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿಯೇ ಆರಂಭವಾಗಿಲ್ಲ. ನ್ಯಾಯಾಲಯದಲ್ಲಿ ಜಾಗದ ಪ್ರಕರಣ ಇರುವ ಕಾರಣದಿಂದ ಕೆಲವೆಡೆ ಕಾಮಗಾರಿ ಆರಂಭವಾಗಿಲ್ಲ. ಹೀಗಾಗಿ ಆ ಬದಿಯಲ್ಲಿ ಸ್ವಲ್ಪದೂರ ಹೆದ್ದಾರಿ ಮಣ್ಣಿನಿಂದಲೇ ಕೂಡಿದೆ. ಇದು ಸಾರ್ವಜನಿಕರಿಗೆ ಕಿರಿಕಿರಿಯುಂಟಾಗುತ್ತಿದೆ.
ಹೆದ್ದಾರಿಯಲ್ಲೇ ಸಂಚಾರಿಸುವ ಪರಿಸ್ಥಿತಿ: ಮಳೆಬಂದ ಸಂದರ್ಭದಲ್ಲಿ ಬದಿಯಲ್ಲೇ ನಡೆದುಹೋಗಬೇಕಾದ ಪರಿಸ್ಥಿತಿ ಎದುರಾಗಿದೆ. ಇನ್ನು ನಿರ್ಮಾಣವಾಗಿರುವ ಚರಂಡಿಯ ಮೇಲೆ ಪಕ್ಕದಲ್ಲಿರುವ ಅಂಗಡಿ ಮಳಿಗೆಗಳ ಮಾಲೀಕರು ಮಾರಾಟದ ವಸ್ತುಗಳನ್ನು ಇಟ್ಟುಕೊಂಡಿರುವುದರಿಂದ ಅಲ್ಲಿ ನಡೆಯಲಾಗದೆ, ಹೆದ್ದಾರಿ ಮೇಲೆಯೇ ನಡೆದಾಡುತ್ತಿದ್ದಾರೆ. ಇದನ್ನು ತೆರವುಗೊಳಿಸುವ ಕೆಲಸವನ್ನು ನಗರಸಭೆ ಮಾಡಬೇಕಿದೆ.
ಸಂಬಂಧಪಟ್ಟ ಮೇಲಧಿಕಾರಿಗಳು ಇನ್ನಾದರೂ ಕಳಪೆ ಕಾಮಗಾರಿಯನ್ನು ತೆರವುಗೊಳಿಸಿ, ಗುಣಮಟ್ಟದ ಕಾಮಗಾರಿಯನ್ನು ಗುತ್ತಿಗೆದಾರರಿಂದ ಮಾಡಿಸಲು ಕ್ರಮ ಕೈಗೊಳ್ಳಬೇಕಾಗಿದೆ. ಇಲ್ಲವಾದಲ್ಲಿ ಕೆಲವೇ ತಿಂಗಳಲ್ಲಿ ಎಲ್ಲಾ ಕಾಮಗಾರಿಗಳು ಹೇಳ ಹೆಸರಿಲ್ಲದಂತೆ ಮಾಯವಾಗಲಿದೆ. ಅದಾಗುವ ಮುನ್ನ ಸಾರ್ವಜನಿಕರ ತೆರಿಗೆ ಹಣವನ್ನು ಸಮರ್ಪಕವಾಗಿ ವಿನಿಯೋಗವಾಗುವಂತೆ ಮಾಡಬೇಕಿದೆ.
● ಎಂ.ಶಿವಮಾದು