ಶಿವಮೊಗ್ಗ: ತುಂಗಾ ಏತ ನೀರಾವರಿ ಯೋಜನೆ ಪೂರ್ಣಗೊಳಿಸುವಲ್ಲಿ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಎಂದು ಆರೋಪಿಸಿ ಗ್ರಾಮಾಂತರ ಕ್ಷೇತ್ರ ಶಾಸಕಿ ಶಾರದಾ ಪೂರ್ಯನಾಯ್ಕ ನೇತೃತ್ವದಲ್ಲಿ ತುಂಗಾ ಮೇಲ್ದಂಡೆ ಯೋಜನೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು. ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಕಾಮಗಾರಿ ಕುಂಟುತ್ತಾ ಸಾಗಿದೆ. ರೈತರಿಗೆ ನೀರು ಸಿಗದಂತಾಗಿದೆ. ಯೋಜನೆ ಪೂರ್ಣಗೊಂಡಿದ್ದರೆ ಈ ವೇಳೆಗೆ ಕಾಲುವೆಯಲ್ಲಿ ನೀರು ಹರಿಯಬೇಕಿತ್ತು ಎಂದು ತಿಳಿಸಿದರು.
ಗುತ್ತಿಗೆ ಒಪ್ಪಂದದ ಪ್ರಕಾರ 2015ರ ಆಗಸ್ಟ್‌ನಲ್ಲಿ ಯೋಜನೆ ಪೂರ್ಣಗೊಳಿಸಿ ನೀರು ಹಾಯಿಸಬೇಕಿತ್ತು. 7310 ಎಕರೆ ಪ್ರದೇಶಕ್ಕೆ ನೀರಾವರಿ ಅನುಕೂಲ ಪಡೆಯುವ ಈ ಭಾಗದ ಗೌಡನಕೆರೆ, ಹಾರನಹಳ್ಳಿ ಮತ್ತು ಆಯನೂರು ಹೋಬಳಿಯ ಹಾಯ್‌ಹೊಳೆ, ಬಾರೆಹಳ್ಳ ಕೆರೆಗಳ ಸುತ್ತಲಿನ ಗ್ರಾಮಗಳು ಶಾಶ್ವತ ಬರಪೀಡಿತ ವಾಗಿದ್ದು, ನೀರು ಕೊಟ್ಟರೆ ಜನ, ಜಾನುವಾರುಗಳಿಗೆ ಅನುಕೂಲವಾಗುತ್ತಿತ್ತು ಎಂದರು.
ಅಧಿಕಾರಿಗಳ ನಿರ್ಲಕ್ಷದಿಂದಾಗಿಯೇ ಯೋಜನೆ ಇದುವರೆಗೂ ಪೂರ್ಣಗೊಂಡಿಲ್ಲ. ಹಲವು ಬಾರಿ ಪ್ರತಿಭಟನೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಕೇವಲ ಭರವಸೆ ನೀಡುತ್ತಾರೆಯೇ ವಿನಃ ಕಾಮಗಾರಿ ಪೂರ್ಣಗೊಳಿಸುವಲ್ಲಿ ಆಸಕ್ತಿ ವಹಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಪ್ರತಿಭಟನೆ ನಡೆಸಿದ ಸಂದರ್ಭದಲ್ಲಿ ಆ.31ರೊಳಗೆ ಕಾಮಗಾರಿ ಪೂರ್ಣಗೊಳಿಸಿ ಕಾಲುವೆಗಳಲ್ಲಿ ನೀರು ಹರಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ ಭರವಸೆ ಈಡೇರಿಲ್ಲ. ಈ ಕುರಿತು ಪ್ರಶ್ನೆ ಮಾಡಿದರೆ ಸೆ.31ರೊಳಗೆ ಕಾಮಗಾರಿ ಪೂರ್ಣಗೊಳ್ಳಲಿದೆ ಎಂಬ ಹಾರಿಕೆಯ ಉತ್ತರ ನೀಡತೊಡಗಿದ್ದಾರೆ. ಬೆಳೆ ಬೆಳೆದ ರೈತರು ಆತಂಕಕ್ಕೆ ಸಿಲುಕಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ನೀರು ಹರಿಸಬೇಕು. ಇಲ್ಲವಾದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು. ಪ್ರತಿಭಟನೆಯಲ್ಲಿ ಇ.ಬಿ. ಜಗದೀಶ್, ನರಸಿಂಹಮೂರ್ತಿ ಮತ್ತಿತರರು ಇದ್ದರು.