Advertisement

ಚುನಾವಣೆ ವ್ಯವಸ್ಥೆ  ಸುಧಾರಣೆ ಅಗತ್ಯ

04:31 PM Jan 16, 2017 | Team Udayavani |

ಕೋಟ: ನಮ್ಮ ದೇಶ ಸುಧಾರಣೆಯಾಗಬೇಕಾದರೆ ಪ್ರಥಮವಾಗಿ ಚುನಾವಣೆ ವ್ಯವಸ್ಥೆ ಸುಧಾರಣೆಯಾಗಬೇಕು. ಚುನಾವಣೆ ವ್ಯವಸ್ಥೆಯಿಂದ ಭ್ರಷ್ಟಾಚಾರ, ಕಪ್ಪುಹಣ ಚಲಾವಣೆ ಹೆಚ್ಚುತ್ತದೆ. ನರೇಂದ್ರ ಮೋದಿಯವರು ಈ ದೇಶದ ಚುನಾವಣೆ ವ್ಯವಸ್ಥೆ ಸುಧಾರಿಸಿದರೆ ಪ್ರತಿಯೊಬ್ಬ ಪ್ರಜೆ ಅವರನ್ನು ನೆನಪಿಟ್ಟುಕೊಳ್ಳುತ್ತಾರೆ ಹಾಗೂ ಅರ್ಹ ಪ್ರಾಮಾಣಿಕ ಅಭ್ಯರ್ಥಿಗಳು ಹಳ್ಳಿಯಿಂದ ದಿಲ್ಲಿ ತನಕ ಜನಪ್ರತಿನಿಧಿಗಳಾಗಿ ಆಯ್ಕೆಯಾಗುತ್ತಾರೆ ಎಂದು ಆರೋಗ್ಯ ಸಚಿವ ರಮೇಶ್‌ ಕುಮಾರ್‌ ತಿಳಿಸಿದರು.

Advertisement

ಅವರು ರವಿವಾರ ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ನಡೆದ ಕೋಟತಟ್ಟು ಗ್ರಾ.ಪಂ.ನ ನಗದು ರಹಿತ ವ್ಯವಸ್ಥೆಗೆ ಚಾಲನೆ ನೀಡಿ ಮಾತನಾಡಿದರು.

ಬಡವರ ಬೆವರಿಗೆ ಬೆಲೆ ಇಲ್ಲ
ಕಪ್ಪು ಹಣದ ಹಾವಳಿಯಿಂದ ಬಡವರ ದುಡಿಮೆಗೆ ಬೆಲೆ ಇಲ್ಲದಂತಾಗಿದೆ. ಇದು ದೇಶದ ಅಭಿವೃದ್ಧಿಗೆ ಶತ್ರುವಾಗಿ ಬಡವರ ಶ್ರಮದ ದುಡಿಮೆಯನ್ನು ಅವಮಾನಿಸುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಎಲ್ಲರೂ ಪಕ್ಷಭೇದ ಮರೆತು ದೇಶದ ಹಿತವನ್ನು ಮುಖ್ಯವಾಗಿರಿಸಿ ಹೋರಾಡಬೇಕು ಎಂದರು.

ಕಪ್ಪು ಹಣ ತಡೆ ಸುಲಭವಲ್ಲ
ಕೇವಲ ನೋಟು ನಿಷೇಧದಿಂದ ಕಪ್ಪು ಹಣ ತಡೆ ಅಸಾಧ್ಯ. ಕಪ್ಪು ಹಣ ತಡೆಯಬೇಕಾದರೆ ಚಲಾವಣೆಯಲ್ಲಿರುವ ನೋಟುಗಳು ಹಾಗೂ ಮುದ್ರಣಗೊಂಡ ನೋಟುಗಳ ನಿಖರ ಅಂಕಿ-ಅಂಶ ತಿಳಿಯಬೇಕಿದೆ ಹಾಗೂ ಇದೀಗ 2,000 ರೂ. ನೋಟುಗಳನ್ನು ಚಲಾವಣೆಗೆ ತಂದಿರುವುದರಿಂದ ಕಾಳಧನಿಕರಿಗೆ ಹಣ ಬಚ್ಚಿಡಲು ಸುಲಭವಾಗಿದೆ ಎಂದರು. ನೋಟು ನಿಷೇಧದ ಅನಂತರ ಪ್ರಧಾನಿಯವರು ಸಂಸತ್ತಿನಲ್ಲಿ ಮೌನವಾಗಬಾರದಿತ್ತು ಎಂದು ಅಭಿಪ್ರಾಯಪಟ್ಟರು.

ರಾಜ್ಯಕ್ಕೆ  ಮಾದರಿ ಗ್ರಾ.ಪಂ.
ಕೋಟತಟ್ಟು ಗ್ರಾ.ಪಂ. ಜಾರಿಗೆ ತಂದಿರುವ ನಗದು ರಹಿತ ವ್ಯವಹಾರ ಪಾರದರ್ಶಕ ಆಡಳಿತಕ್ಕೆ ನಿದರ್ಶನವಾಗಿದ್ದು, ರಾಜ್ಯದ ಇತರ ಗ್ರಾಮಗಳಿಗೂ ಮಾದರಿಯಾಗಿದೆ. ಗ್ರಾಮೀಣಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸಿ ಹಿರಿಯ ಅಧಿಕಾರಿಗಳ ತಂಡವನ್ನು ಇಲ್ಲಿಗೆ ಕಳುಹಿಸಿ, ವರದಿ ಪಡೆದು ರಾಜ್ಯದ ಎಲ್ಲ ಜಿಲ್ಲೆಗಳ ಕನಿಷ್ಠ 2 ಗ್ರಾ.ಪಂ.ಗಳಲ್ಲಿ ನಗದು ರಹಿತ ವ್ಯವಹಾರವನ್ನು ಶೀಘ್ರದಲ್ಲಿ ಪ್ರಾರಂಭಿಸಲು ಸಲಹೆ ನೀಡಲಾಗುವುದು ಎಂದರು.

Advertisement

ಸಂಪೂರ್ಣ ನಗದುರಹಿತ ವ್ಯವಸ್ಥೆ
ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರಸ್ತಾವನೆಗೈದು, ಕೋಟತಟ್ಟು ಗ್ರಾ.ಪಂ.ನ 1,032 ಕುಟುಂಬಗಳು ಪಂಚಾಯತ್‌ಗೆ ಸಂಬಂಧಿಸಿದ ಎಲ್ಲ ಶುಲ್ಕಗಳನ್ನು ನಗದು ರಹಿತವಾಗಿಯೇ ಪಾವತಿಸಲು ಅನುಕೂಲವಾಗುವಂತೆ ಎಲ್ಲ ಕುಟುಂಬಗಳಿಗೂ ಬ್ಯಾಂಕ್‌ ಖಾತೆ ತೆರೆಸಿ, ಡೆಬಿಟ್‌ ಕಾರ್ಡ್‌ ವಿತರಿಸಲಾಗಿದೆ. ಇಂದಿನಿಂದ ಗ್ರಾ.ಪಂ.ನ ಕಟ್ಟಡ ಲೈಸನ್ಸ್‌, ಮನೆ ತೆರಿಗೆ, ನೀರಿನ ತೆರಿಗೆ ಸೇರಿದಂತೆ ಎಲ್ಲ ವ್ಯವಹಾರಗಳು ನಗದು ರಹಿತವಾಗಿ ನಡೆಯಲಿವೆ ಎಂದು ತಿಳಿಸಿದರು.

ಕೋಟತಟ್ಟು ಗ್ರಾ.ಪಂ. ಅಧ್ಯಕ್ಷ ಎಚ್‌. ಪ್ರಮೋದ್‌ ಹಂದೆ ಅಧ್ಯಕ್ಷತೆ ವಹಿಸಿದ್ದರು. 
ಈ ಸಂದರ್ಭ ಪಂಚಾಯತ್‌ ತಜ್ಞ ಜನಾರ್ದನ ಮರವಂತೆ ಅವರನ್ನು ಸಮ್ಮಾನಿಸಲಾಯಿತು.
ಉಡುಪಿ ಜಿ.ಪಂ. ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್‌ ರಾವ್‌, ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್‌, ಜಿ.ಪಂ. ಸಿಇಒ ಪ್ರಿಯಾಂಕಾ ಮೇರಿ ಫ್ರಾನ್ಸಿಸ್‌, ಉಡುಪಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಶೇಷಪ್ಪ, ಕುಂದಾಪುರ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಚೆನ್ನಪ್ಪ ಮೊಲಿ, ಲೀಡ್‌ ಬ್ಯಾಂಕ್‌ ಮ್ಯಾನೇಜರ್‌ ಫ್ರಾನ್ಸಿಸ್‌, ಕೋಟತಟ್ಟು ಗ್ರಾ.ಪಂ. ಉಪಾಧ್ಯಕ್ಷ ಲೋಕೇಶ್‌ ಶೆಟ್ಟಿ, ಡಾ| ಕಾರಂತ ಹುಟ್ಟೂರ ಪ್ರತಿಷ್ಠಾನ ಸಮಿತಿ ಗೌರವಾಧ್ಯಕ್ಷ ಅನಂದ್‌ ಸಿ. ಕುಂದರ್‌, ಪಂಚಾಯತ್‌ ತಜ್ಞ ಜನಾರ್ದನ ಮರವಂತೆ, ತಾ.ಪಂ. ಸದಸ್ಯೆ ಲಲಿತಾ, ಕೋಟ ಗ್ರಾ.ಪಂ. ಅಧ್ಯಕ್ಷೆ ವನಿತಾ ಆಚಾರ್ಯ, ವಕೀಲ ಟಿ.ಬಿ. ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಪಿಡಿಒ ಸತೀಶ್‌ ನಿರ್ವಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next