Advertisement

ಚೀನಾದೊಂದಿಗೆ ಸ್ಪರ್ಧಿಸಲು ಅಗತ್ಯ ನೆರವು

12:46 PM Sep 20, 2018 | |

ಬೆಂಗಳೂರು: ರಾಜ್ಯದಲ್ಲಿ ಹೊಸ ಉದ್ದಿಮೆಗಳ ಸ್ಥಾಪನೆ ಮೂಲಕ ನಾವೀನ್ಯತೆ ಮತ್ತು ಉತ್ಪನ್ನ ವೈವಿಧ್ಯೀಕರಣವನ್ನು
ಬೆಳೆಸಲು 9 ಜಿಲ್ಲೆಗಳನ್ನು ಗುರುತಿಸಲಾಗಿದೆ. ಚೀನಾ ಹಾಗೂ ಇತರ ದೇಶದೊಂದಿಗೆ ಸ್ಪರ್ಧಿಸಲು ಉತ್ಪನ್ನ ಆಧಾರಿತ ಸಮೂಹಗಳ ಅಭಿವೃದ್ಧಿಗೆ ಸರ್ಕಾರ ಎಲ್ಲ ಅಗತ್ಯ ನೆರವು ನೀಡಲಿದೆ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಎಸ್‌.ಸುಬ್ರಹ್ಮಣ್ಯ ತಿಳಿಸಿದರು.

Advertisement

ನಗರದ ಹೋಟೆಲೊಂದರಲ್ಲಿ ಟಾಯ್ಸ ವಿಷನ್‌ ಗ್ರೂಪ್‌ ಮತ್ತು ಟೆಕ್ಸ್‌ಟೈಲ್ಸ್‌ ವಿಷನ್‌ ಗ್ರೂಪ್‌ ಆಯೋಜಿಸಿದ್ದ ಸಂವಾದಾತ್ಮಕ ಸಭೆಯಲ್ಲಿ ಮಾತನಾಡಿದ ಅವರು ಸರ್ಕಾರದ ಮೊದಲ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ರಾಜ್ಯದಲ್ಲಿ ಕೈಗಾರಿಕೀಕರಣವನ್ನು ಉತ್ತೇಜಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಸ್ಪರ್ಧಿಸುವ ವಿಶ್ವಾಸ ಹೆಚ್ಚಿಸಬೇಕಿದೆ. ಆಟಿಕೆ ಮತ್ತು ಜವಳಿ ಉದ್ಯಮದಲ್ಲಿ ಚೀನಾದೊಂದಿಗೆ, ಜವಳಿ ಉದ್ಯಮದಲ್ಲಿ ಇತರ ದೇಶದೊಂದಿಗೆ ಪೈಪೋಟಿ ನಡೆಸುವ ಅನಿವಾರ್ಯತೆಯಿದೆ. ಆ ಮೂಲಕ ರಾಜ್ಯವನ್ನು ವಿಶ್ವದ ಕಾರ್ಖಾನೆಯಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ.
 
ಈ ನಿಟ್ಟಿನಲ್ಲಿ ಇತರ ರಾಷ್ಟ್ರಗಳ ಮಾದರಿಯನ್ನು ಅನುಸರಿಸಬೇಕಾಗುತ್ತದೆ. ಅದಕ್ಕಾಗಿ ಒಂಬತ್ತು ಜಿಲ್ಲೆಗಳನ್ನು ಗುರುತಿಸಿ ಆ ಪ್ರದೇಶದಲ್ಲಿ ನವೀನ ಹಾಗೂ ವೈವಿಧ್ಯದಿಂದ ಕೂಡಿದ ಉತ್ಪನಗಳನ್ನು ತಯಾರಿಸುವ ಉದ್ದಿಮೆಗಳನ್ನು ಸ್ಥಾಪಿಸಲು ಉತ್ತೇಜಿಸಲಾಗುತ್ತದೆ. ಈ ಕ್ರಿಯೆಯಲ್ಲಿ ಎಲ್ಲ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಯೋಜನೆ ಹೊರತರಲು ಶ್ರಮಿಸಬೇಕು ಎಂದು ಸಲಹೆ ನೀಡಿದರು.

9 ಜಿಲ್ಲೆಗಳಲ್ಲಿ ಏನೇನು: ಕಲಬುರಗಿಯಲ್ಲಿ ಸೌರ ವಿದ್ಯುತ್‌ ಸರಕುಗಳ ಉತ್ಪಾದನೆ, ಚಿತ್ರದುರ್ಗದಲ್ಲಿ ಎಲ್‌ಇಡಿ ಲೈಟ್‌ಗಳ
ಉತ್ಪಾದನೆ, ಹಾಸನದಲ್ಲಿ ಟೈಲ್ಸ್‌ ಮತ್ತು ಸ್ಯಾನಿಟರಿ ವಸ್ತುಗಳ ತಯಾರಿಕೆ, ಕೊಪ್ಪಳದಲ್ಲಿ ಯಾಂತ್ರೀಕೃತ ಆಟಿಕೆಗಳ
ಉತ್ಪಾದನೆ, ಮೈಸೂರಿನಲ್ಲಿ ಐಸಿಬಿ ಉತ್ಪಾದನಾ ಘಟಕ, ಬಳ್ಳಾರಿಯಲ್ಲಿ ಟೈಕ್ಸ್‌ ಟೈಲ್‌ ಉದ್ದಿಮೆ, ಚಿಕ್ಕಬಳ್ಳಾಪುರದಲ್ಲಿ
ಮೊಬೈಲ್‌ ಫೋನ್‌ ಬಿಡಿ ಭಾಗಗಳು, ತುಮಕೂರಿನಲ್ಲಿ ಕ್ರೀಡಾ ಮತ್ತು ಫಿಟ್ನೆಸ್‌ ಸರಕುಗಳು ಹಾಗೂ ಬೀದರ್‌ನಲ್ಲಿ ಕೃಷಿ
ಉಪಕರಣಗಳ ತಯಾರಿಕೆಗೆ ಉದ್ಯಮಿಗಳನ್ನು ಸೆಳೆಯಲು ನಿರ್ಧರಿಸಲಾಯಿತು.

ಜವಳಿ ಅಭಿವೃದ್ಧಿ ಇಲಾಖೆಯ ನಿರ್ದೇಶಕ ಆರ್‌. ಗಿರೀಶ್‌, ಟಾಯ್ಸ ವಿಷನ್‌ ಗ್ರೂಪ್‌ ಅಧ್ಯಕ್ಷ-ಸಿಇಒ‌ ಅರವಿಂದ್‌
ಮೆಲ್ಲಿಗೆರಿ, ಟೆಕ್ಸ್‌ಟೈಲ್ಸ್‌ ವಿಷನ್‌ ಗ್ರೂಪ್‌ ಅಧ್ಯಕ್ಷ ಆನಂದ ಪದ್ಮನಾಭನ್‌ ಸೇರಿದಂತೆ ಉದ್ಯಮಿಗಳು ಹಾಗೂ ಅಧಿಕಾರಿಗಳು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next