ಚಿತ್ರದುರ್ಗ: ಜಿಲ್ಲೆಯಲ್ಲಿ ಸಾಕಷ್ಟು ಐತಿಹಾಸಿಕ ನೆಲೆಗಳಿವೆ. ಆದರೆ ಸಂರಕ್ಷಣೆ ಇಲ್ಲದೆ, ಮಣ್ಣುಪಾಲಾಗುತ್ತಿವೆ. ಅನೇಕ ಕಡೆ ಒತ್ತುವರಿಯಾಗಿದ್ದು, ಇದನ್ನೆಲ್ಲಾ ತಪ್ಪಿಸಿ ಮುಂದಿನ ಪೀಳಿಗೆಗೆ ಬಿಟ್ಟುಕೊಡುವ ಕೆಲಸ ಆಗಬೇಕಿದೆ ಎಂದು ಅಪರ ಜಿಲ್ಲಾ ಧಿಕಾರಿ ಬಾಲಕೃಷ್ಣ ಹೇಳಿದರು.
ಹೊಳಲ್ಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ ರಚಿಸಿರುವ “ಮೇಜರ್ ಜನರಲ್ ಆರ್.ಎಸ್. ಡಾಬ್ಸ್ ಅವರ ಚಿತ್ರದುರ್ಗ ವಿಭಾಗದ ಆಡಳಿತದ ನೆನಪುಗಳು’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು. ಗಟ್ಟಿಯಾದ ನೆಲೆಗಟ್ಟು ಹೊಂದಿರುವ ಜಿಲ್ಲೆ ಚಿತ್ರದುರ್ಗ. ಇಲ್ಲಿನ ಅನೇಕ ಕಟ್ಟಡಗಳು, ಆಡಳಿತ ವ್ಯವಸ್ಥೆ ಬ್ರಿಟಿಷ್ ವಸಾಹತುಶಾಹಿ ವ್ಯವಸ್ಥೆಯಿಂದ ಬಂದ ನೀಲನಕ್ಷೆಯಾಗಿದೆ. ಇದು ಇನ್ನಷ್ಟು ಸುಧಾರಣೆ ಕಂಡು ಉತ್ತಮ ಆಡಳಿತ ದೊರೆಯಬೇಕು ಎಂದರು.
ಯಾವುದೇ ವ್ಯಕ್ತಿ ಜೀವನದಲ್ಲಿ ಯಶಸ್ಸು ಗಳಿಸಲು, ಅವನ ನೆಲದ ಬಗ್ಗೆ ಅಭಿಮಾನ ಹೊಂದಿರಬೇಕು. ಇಲ್ಲದಿದ್ದರೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಹೋಗುತ್ತೇವೆ. ಬದಲಾಗಿ ಇತರೆ ಸಾಮಾನ್ಯ ವ್ಯಕ್ತಿಗಳಿಗೆ ಸ್ಪೂರ್ತಿ ನೀಡುವ ಕೆಲಸ ಮಾಡಬೇಕು ಎಂದು ತಿಳಿಸಿದರು. ಕೃತಿ ಕುರಿತು ಇತಿಹಾಸ ಸಂಶೋಧಕ ಡಾ| ಬಿ. ನಂಜುಂಡಸ್ವಾಮಿ ಮಾತನಾಡಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆ ವ್ಯಾಪ್ತಿಯ ಉನ್ನತಮಟ್ಟದ ಅ ಧಿಕಾರಿಯಾಗಿದ್ದ ಡಾಬ್ಸ್, ಮಿಷನರಿ ಮನೋಭಾವ ಹೊಂದಿದ್ದರೂ ಅಭಿವೃದ್ಧಿ ವಿಚಾರದಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಡಾಬ್ಸ್ ಬರೆದಿರುವಂತೆ ಈ ಎರಡೂ ಜಿಲ್ಲೆಗಳ ವ್ಯಾಪ್ತಿಯಲ್ಲಿ 6 ಸಾವಿರ ಕೆರೆಗಳ ಅಭಿವೃದ್ಧಿ, ಬೆಂಗಳೂರಿನಿಂದ ದಾವಣಗೆರೆಗೆ ರಸ್ತೆ ಮಾಡಿಸಿರುವುದನ್ನು ಉಲ್ಲೇಖೀಸಿದ್ದಾರೆ. ಇದೇ ವೇಳೆ ಮಾರಿಕಣಿವೆ ಬಳಿ ಡ್ಯಾಂ ನಿರ್ಮಾಣಕ್ಕೆ ವರ್ಷಗಟ್ಟಲೇ ಮೀಟಿಂಗ್ ನಡೆಸಿದರೂ ಕೊನೆಗೆ ಯೋಜನೆ ಕೈಗೂಡದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಇವರ ಕಾಲದಲ್ಲಿ ಕ್ರೈಸ್ತ ಧರ್ಮದ ಪ್ರಚಾರಕ್ಕೂ ಸಾಕಷ್ಟು ಒತ್ತು ನೀಡಿದ್ದಾರೆ ಎಂದು ವಿವರಿಸಿದರು.
ಡಾಬ್ಸ್ ಕಾಲದಲ್ಲಿ ಹುಲಿಗಳ ಬೇಟೆ ಜೋರಾಗಿತ್ತು. 12 ಅಡಿ ಉದ್ದದ ಹುಲಿಯನ್ನು ಬೇಟೆಯಾಡಿ ಜನ ನೀಡಿದ್ದ ಚರ್ಮವನ್ನು ಸ್ಕಾಟ್‌ಲ್ಯಾಂಡ್‌ನಲ್ಲಿರುವ ಬಂಧುಗಳ ಮನೆಗೆ ಕಳುಹಿಸಿದ್ದನ್ನು ಉಲ್ಲೇಖೀಸಿದ್ದಾರೆ. ತುಮಕೂರಿನಲ್ಲಿ ಜಿಂಕೆ ಮಾಂಸ ಮಾರಾಟ, ಹುಲಿಗಳ ಭಯದ ಕಾರಣಕ್ಕೆ ಶಿವಗಂಗೆ ಬೆಟ್ಟದ ಮೇಲೆ ಬೆಂಕಿ ಹಾಕುತ್ತಿದ್ದ ಸಣ್ಣ ಸಣ್ಣ ಮಾಹಿತಿಯನ್ನೂ ಡಾಬ್ಸ್ ದಾಖಲು ಮಾಡಿದ್ದಾರೆ. ಡಾಬ್ಸ್ ಇಲ್ಲಿದ್ದ ಕಾಲದಲ್ಲಿ ಚಿತ್ರದುರ್ಗ ಬೃಹನ್ಮಠದ ಸ್ವಾಮೀಜಿಯೊಬ್ಬರು ಲಿಂಗೈಕ್ಯರಾಗುತ್ತಾರೆ. ಅವರ ಜಾಗಕ್ಕೆ ಮತ್ತೂಬ್ಬ ಪೀಠಾ ಧಿಪತಿ ಆಯ್ಕೆ ಸಂದರ್ಭದಲ್ಲಿ ವಿವಾದ ತಲೆದೋರುತ್ತದೆ. ಈ ವೇಳೆ ಭಕ್ತರಿಂದ ಮತದಾನ ಮಾಡಲಾಗುತ್ತದೆ. ಮುರುಘಾ ಮಠಕ್ಕೆ ಡಾಬ್ಸ್ ಭೇಟಿ ನೀಡಿದ್ದ ವೇಳೆ ಗುರುಗಳು ಕುಳಿತುಕೊಳ್ಳುವ ಪೀಠದ ಮೇಲೆ ಕುಳಿತು ಸಣ್ಣತನ ಮೆರೆಯುವುದು, ಈ ಸಂದರ್ಭದಲ್ಲಿ ಗುರುಗಳು ವಿಶಾಲ ಹೃದಯ ತೋರಿಸುವುದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಎಂದು ನಂಜುಂಡಸ್ವಾಮಿ ತಿಳಿಸಿದರು.
ಇತಿಹಾಸ ಸಂಶೋಧಕ ಡಾ| ಬಿ. ರಾಜಶೇಖರಪ್ಪ ಮಾತನಾಡಿ, ಡಾಬ್ಸ್ ಯೂರೋಪಿನ್ ದೃಷ್ಟಿಕೋನದಲ್ಲಿ ಚಿತ್ರದುರ್ಗದ ನೆನಪುಗಳನ್ನು ದಾಖಲಿಸಿದ್ದಾನೆ. ಇದನ್ನು ಸಿ.ಎಂ. ತಿಪ್ಪೇಸ್ವಾಮಿ ಅವರು ಕಥೆಯ ರೂಪದಲ್ಲಿ ಕಟ್ಟಿಕೊಟ್ಟಿರುವುದು ಶ್ಲಾಘನೀಯ ಎಂದರು. ಲೇಖಕ ಸಿ.ಎಂ. ತಿಪ್ಪೇಸ್ವಾಮಿ ಮಾತನಾಡಿ, 19ನೇ ಶತಮಾನದ ಮಧ್ಯ ಭಾಗದಲ್ಲಿ ಜನರಿಗೆ ಬ್ರಿಟಿಷರ ವಸಾಹತುಗಳು, ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಕುರಿತು ಜನರ ಅಭಿಪ್ರಾಯ ಏನಿತ್ತು ಎನ್ನುವ ಕುತೂಹಲ ಇತ್ತು. ಈ ಹಿನ್ನೆಲೆಯಲ್ಲಿ ಕೃತಿ ಹೊರಗೆ ಬಂದಿದೆ. ಅಂದು ಕಟ್ಟಿದ ಭವ್ಯವಾದ ಕಟ್ಟಡಗಳು ಬ್ರಿಟಿಷರ ಪ್ರಾಮಾಣಿಕ ಕೆಲಸ ತೋರಿಸುತ್ತವೆ. ಇದು ಸಂಶೋಧನಾ ಕೃತಿಯಲ್ಲ, ಅಂದಿನ ಸನ್ನಿವೇಶಗಳನ್ನು ಸಾಮಾನ್ಯ ಜನರಿಗೆ ಅರ್ಥವಾಗುವಂತೆ ಬರೆದ ಒಂದು ಪುಸ್ತಕ ಇದಾಗಿದೆ. ನಾವು ಇಂದು ಪಡೆದಿರುವ ಸೌಕರ್ಯಗಳ ಹಿಂದೆ ಯಾರಿದ್ದಾರೆ ಎನ್ನುವುದು ಗೊತ್ತಾಗಬೇಕು ಎನ್ನುವ ಉದ್ದೇಶದಿಂದ ಮೇಜರ್ ಜನರಲ್ ಆರ್.ಎಸ್. ಡಾಬ್ಸ್ ಅವರ ಕಾಳಜಿಯನ್ನು ವಿಶ್ಲೇಷಣೆ ಮಾಡಿದ್ದೇನೆ ಎಂದರು. ಕಾರ್ಯಕ್ರಮದಲ್ಲಿ ಹೊಸದುರ್ಗ ಬಿಇಒ ಎಲ್. ಜಯಪ್ಪ, ಜಿಲ್ಲಾ ಸಮಾಜ ವಿಜ್ಞಾನ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಟಿ. ವೀರಭದ್ರಸ್ವಾಮಿ, ಇತಿಹಾಸಕ್ತರಾದ ಮೃತ್ಯುಂಜಯಪ್ಪ ಮತ್ತಿತರರು ಇದ್ದರು.