Advertisement

ದೇಶಪ್ರೇಮ ಬೆಳೆಸುವ ಪ್ರಬುದ್ಧ ಸಾಹಿತ್ಯ ಅಗತ್ಯ

11:30 AM May 21, 2018 | |

ಬೆಂಗಳೂರು: ಪ್ರಮೋದ ಸಾಹಿತ್ಯಕ್ಕಿಂತ ಸ್ವಾರ್ಥವನ್ನು ತ್ಯಾಗ ಮಾಡಿ, ದೇಶ ಪ್ರೇಮ ಬೆಳೆಸುವಂತಹ ಪ್ರಬುದ್ಧ ಸಾಹಿತ್ಯದ ಅವಶ್ಯಕತೆ ಪ್ರಸ್ತುತ ದಿನಗಳಲ್ಲಿ ಹೆಚ್ಚಿದೆ ಎಂದು ಹಿರಿಯ ಸಾಹಿತಿ ಪೊ›.ಜಿ. ಅಶ್ವತ್ಥನಾರಾಯಣ ಅಭಿಪ್ರಾಯಪಟ್ಟರು.

Advertisement

ಚಾಮರಾಜಪೇಟೆ ಕಸಾಪ ಆವರಣ ಕುವೆಂಪು ಸಭಾಂಗಣದಲ್ಲಿ ಭಾನುವಾರ ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಅನಿಕೇತನ ಕನ್ನಡ ಬಳಗ ಹಾಗೂ ಪರಸ್ಪರ ಸ್ನೇಹ ಬಳಗ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್‌ ಸಂಸ್ಥಾಪನಾ ದಿನಾಚರಣೆ ಹಾಗೂ ಬಾಬು ಕೃಷ್ಣಮೂರ್ತಿ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಮನೋರಂಜನೆಯ ಸಾಹಿತ್ಯ ರಚಿಸುತ್ತಿರುವವರ ನಡುವೆ ಬಾಬು ಕೃಷ್ಣಮೂರ್ತಿ ಅವರು ತಮ್ಮ ಸಾಹಿತ್ಯ ಮೂಲಕ ದೇಶ ಮತ್ತು ನಾಡಿನ ಕುರಿತು ಅಭಿಮಾನ ಮೂಡಿಸುವ ಸಾಹಿತ್ಯವನ್ನು ರಚಿಸುತ್ತಿದ್ದಾರೆ. ಸಂಶೋಧನಾ ಸಾಹಿತ್ಯ ಕ್ಷೀಣಿಸುತ್ತಿರುವ ಸಂದರ್ಭದಲ್ಲಿ ದೇಶಭಕ್ತರ ಚರಿತ್ರೆಗಳನ್ನು ಸಂಶೋಧನೆ ಹಾಗೂ ಅನ್ವೇಷಣೆ ಮಾಡುವ ಮೂಲಕ ಸಂಶೋಧನಾ ಸಾಹಿತ್ಯದತ್ತ ಓದುಗರ ಒಲವನ್ನು ತಿರುಗಿಸಿದ ಮಹನೀಯ ಎಂದು ಹೇಳಿದರು.

ಬಾಲ್ಯದಿಂದಲೇ ಸಾಹಿತ್ಯ ಒಲವನ್ನು ಇಟ್ಟುಕೊಂಡಿದ್ದ ಬಾಬು ಕೃಷ್ಣಮೂರ್ತಿ ಸಂಶೋಧನಾ ಸಾಹಿತ್ಯದ ಜತೆಗೆ ಮಕ್ಕಳ ಸಾಹಿತ್ಯ, ಚಲನಚಿತ್ರ ಸಾಹಿತ್ಯ, ಪತ್ರಿಕೋದ್ಯಮ ಬರಹ ಮೂಲಕ ಅನೇಕರ ಬದುಕಿಗೆ ಮಾರ್ಗದರ್ಶನ ಹಾಗೂ ಪ್ರೇರಣೆಯಾಗಿದ್ದಾರೆ. ಇನ್ನು ಮುಂದಿನ ದಿನಗಳಲ್ಲಿ ತಮ್ಮ ಹೋರಾಟದ ಕತೆಯನ್ನು ತೆರೆದಿಡುವ ಆತ್ಮಕಥೆ ಬರೆಯುವ ಮೂಲಕ ದೇಶಭಕ್ತಿ ಕುರಿತು ಸಾಹಿತ್ಯ ರಚಿಸುವವರಿಗೆ ಮಾರ್ಗದರ್ಶ ಮಾಡಬೇಕು ಎಂದು ಒತ್ತಾಯಿಸಿದರು.

ಅಭಿನಂದನೆ ಸ್ವೀಕರಿಸಿ ಹಿರಿಯ ಸಾಹಿತಿ ಬಾಬು ಕೃಷ್ಣಮೂರ್ತಿ ಮಾತನಾಡಿ, ಸರ್‌.ಎಂ.ವಿಶ್ವೇಶ್ವರಯ್ಯ, ಎಚ್‌.ವಿ.ನಂಜುಂಡಯ್ಯ, ಡಿವಿಜಿ, ಆಲೂರು ವೆಂಕಟರಾಯರಂತಹ ಅನೇಕ ಮಹನೀಯರ ಹೋರಾಟ ಹಾಗೂ ಕಳಕಳಿಯ ಪ್ರತಿಫ‌ಲವೇ ಕಸಾಪ ಆಗಿದೆ. ಅಂದು ನಿರ್ಮಾಣ ಖರ್ಚಿಗೆ ದಾನ ದತ್ತಿಗಳು ಸಾಲದೇ ಸಾಹಿತಿಗಳು ತಮ್ಮ ಕೈಯಿಂದ ಹಣ ಹಾಕಿ ಕಟ್ಟಡ ಕಟ್ಟಿದರು. ಆ ಕಾಲಕ್ಕೆ ಕಸಾಪ ಒಂದು ಜನಜಾಗೃತಿ ಮೂಡಿಸುವ ಹಾಗೂ ನಾಡಿಗಾಗಿ ಹೋರಾಟ ನಡೆಸುವವರ ಶಕ್ತಿ ಕೇಂದ್ರವಾಗಿತ್ತು ಎಂದರು.    

Advertisement

ಬೆಂಗಳೂರು ನಗರ ಜಿಲ್ಲಾ ಕಸಾಪ ಅಧ್ಯಕ್ಷ ಮಾಯಣ್ಣ ಮಾತನಾಡಿ, ಬಾಬು ಕೃಷ್ಣಮೂರ್ತಿ ಅವರು ಮಹಾನ್‌ ದೇಶ ಭಕ್ತರಾಗಿದ್ದು ತಮ್ಮ ಸಾಹಿತ್ಯದ ಮೂಲಕ ಇಂದಿನ ಯುವಜನತೆಯಲ್ಲಿ ಸ್ವಾಭಿಮಾನ ಹಾಗೂ ರಾಷ್ಟ್ರಾಭಿಮಾನವನ್ನು ಭಿತ್ತುತ್ತಿದ್ದಾರೆ. ಇನ್ನು ಕಳೆದ 40ಕ್ಕೂ ಹೆಚ್ಚು ವರ್ಷಗಳಿಂದ ಸಾಹಿತ್ಯ ಸೇವೆ ಸಲ್ಲಿಸುತ್ತಿರುವ ಕೆ.ಎನ್‌.ಭಗವಾನ್‌ ಹಾಗೂ ಚಿತ್ರಕಲೆಯ ಮೂಲಕ ಸಾಧನೆ ಮಾಡಿದ ಡಾ.ಬಿ.ಕೆ.ಎಸ್‌.ವರ್ಮಾರಂತಹ ದಿಗ್ಗಜರನ್ನು ಗುರುತಿಸಿ ಅಭಿವಂದಿಸುವುದು ನಮ್ಮ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಲೇಖಕ ಕೆ.ಎನ್‌.ಭಗವಾನ್‌ ಮತ್ತು ಚಿತ್ರಕಲಾವಿದ ಡಾ.ಬಿ.ಕೆ.ಎಸ್‌. ವರ್ಮಾ ಅವರಿಗೆ ಕನ್ನಡ ಸೇವಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯೋದ್ಯಮ ಕನ್ನಡ ಸಂಘಗಳ ಒಕ್ಕೂಟ ಅಧ್ಯಕ್ಷ ಎಂ.ತಿಮ್ಮಯ್ಯ, ನಗರ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಬಿ.ಶೃಂಗೇಶ್ವರ ಹಾಗೂ ಅಂಜನ್‌ಕುಮಾರ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next